ವೀರ ಚಂದ್ರಹಾಸ ಸಿನಿಮಾದ ಟೀಸರ್ ಬಿಡುಗಡೆ: ಕಾಂತಾರ ನೆನಪಿಸಿದ ಧೀಂಗಣ; ಬೆಳ್ಳಿತೆರೆ ಮೇಲೆ ಯಕ್ಷಗಾನದ ಗೂಸ್‌ಬಂಪ್ಸ್
Veera Chandrahasa Movie: ಹಿರಿತೆರೆಮೇಲೆ ಭೂತಾರಾಧನೆಯನ್ನು ತೋರಿಸಿದ ಕಾಂತಾರ ಸಿನಿಮಾದ ಬಳಿಕ ಯಕ್ಷಗಾನದ ವೈಭವ ಹಿರಿತೆರೆ ಮೇಲೆ ರಾರಾಜಿಸಲಿದೆ. ರವಿ ಬಸ್ರೂರು ಮತ್ತು ತಂಡದ ಹೊಸ ಪ್ರಯತ್ನ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ವೀರಚಂದ್ರಹಾಸ ಸಿನಿಮಾದ ಟೀಸರ್ ಇಲ್ಲಿದೆ ನೋಡಿ.
Veera Chandrahasa Movie: ಸ್ಯಾಂಡಲ್‌ವುಡ್ ಈಗ ಜಗತ್ತಿನ ಚಿತ್ರರಂಗದಲ್ಲಿಯೇ ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದೆ. ಕಾಂತಾರ, ಕೆಜಿಎಫ್ ಮೂಲಕ ಜಗತ್ತಿನ ಗಮನ ಸೆಳೆದ ಚಂದನವನದಲ್ಲಿ ಈಗ ಹೊಸ ಪ್ರಯೋಗವೊಂದಕ್ಕೆ ರವಿ ಬಸ್ರೂರು ಮತ್ತು ತಂಡ ಕೈಹಾಕಿದೆ. ಯಕ್ಷಗಾನವನ್ನೇ ಸಿನಿಮಾವಾಗಿಸುವ ಹೊಸ ಪ್ರಯೋಗವೊಂದಕ್ಕೆ ಚಿತ್ರತಂಡ ಕೈಹಾಕಿದೆ. ಇದೀಗ ಬಿಡುಗಡೆಯಾಗಿರುವ ವೀರ ಚಂದ್ರಹಾಸ ಸಿನಿಮಾದ ಟೀಸರ್ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಹುಟ್ಟುಹಾಕಿದೆ. ಯಕ್ಷಗಾನ ಪ್ರೇಮಿಗಳಿಗೆ ಈ ಸಿನಿಮಾ ರಸದೌತಣ ನೀಡುವ ಸೂಚನೆಯಿದೆ. ಯಕ್ಷಗಾನ ಕಲೆ ಸಂಸ್ಕೃತಿ ಕುರಿತು ಅರಿವು ಇಲ್ಲದವರಿಗೂ ವೀರಚಂದ್ರಹಾಸ ಸಿನಿಮಾ ಗೂಸ್‌ಬಂಪ್ಸ್ ನೀಡುವ ಸೂಚನೆಯನ್ನು ಟೀಸರ್ ನೀಡಿದೆ.
ವೀರ ಚಂದ್ರಹಾಸ ಸಿನಿಮಾದ ಟೀಸರ್ ಬಿಡುಗಡೆ
ರವಿ ಬಸ್ರೂರು ಮತ್ತು ತಂಡದ ವೀರ ಚಂದ್ರಹಾಸ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಇದು ಜಗತ್ತಿನ ಸಿನಿಮಾ ಇತಿಹಾಸದಲ್ಲಿಯೇ ಮೊದಲ ಪ್ರಯತ್ನ ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಕಾಂತಾರ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ಜಗತ್ತಿಗೆ ಭೂತಾರಾಧನೆಯನ್ನು ಪರಿಚಯಿಸಿದ್ದಾರೆ. ರವಿ ಬ್ರಸೂರು ಇದೀಗ ವೀರ ಚಂದ್ರಹಾಸದ ಮೂಲಕ ಯಕ್ಷಗಾನದ ವೈಭವವನ್ನು ತೋರಿಸಲು ಹೊರಟಿದ್ದಾರೆ. ಇದೀಗ ಬಿಡುಗಡೆಯಾದ ವೀರ ಚಂದ್ರಹಾಸ ಟೀಸರ್ ನೋಡೋಣ ಬನ್ನಿ.
ಟೀಸರ್‌ನ ಆರಂಭದಲ್ಲಿ ವೀರ ಚಂದ್ರಹಾಸ... ವೀರ ಚಂದ್ರಹಾಸ ಎಂದು ಸೈನಿಕರ ಬಹುಪರಾಕ್ ಇರುತ್ತದೆ. ವೀರ ರಾಜನೊಬ್ಬನ ಕಥೆ ಇರುವ ಸೂಚನೆಯಿದೆ. ಇದಾದ ಬಳಿ ಯಕ್ಷಗಾನದ ಧೀಂಗಣ, ಯುದ್ಧದ ಸೀನ್‌ಗಳು ಕಾಣಿಸುತ್ತವೆ. ಪ್ರತಿಯೊಬ್ಬ ಕಲಾವಿದರು ಯಕ್ಷಗಾನದ ವೇಷದಲ್ಲಿಯೇ ಇದ್ದು ಗಮನ ಸೆಳೆಯುತ್ತಾರೆ. ಸ್ಟೇಜ್ ಮೇಲೆ ನಡೆಯುವ ಬದಲು ನಿರ್ದಿಷ್ಟ ಸ್ಥಳವೊಂದರಲ್ಲಿ ಈ ವೀರಚಂದ್ರಹಾಸ ಸೀನ್ ನಡೆಯುತ್ತದೆ. ಈ ಟೀಸರ್‌ನಲ್ಲಿ ಯಕ್ಷಗಾನದ ನೃತ್ಯಗಳು ಧೀಂಗಣ, ದಿಗಿಣಗಳು ಗಮನ ಸೆಳೆಯುತ್ತವೆ. ಯಕ್ಷಗಾನದ ಪರಿಭಾಷೆಯಲ್ಲಿ ಧೀಂಗಣ/ದಿಗಿಣ ಎಂದರೆ ವೇಷಗಳ ಪ್ರವೇಶ ನೃತ್ಯ ಮತ್ತು ಅದರ ಬಡಿತ. ದೀಂಗಿಣ ಕುಣಿತ, ಬಡಿತ ಎಂದಾಗಿದೆ.
ಒಟ್ಟಾರೆ ನೂತನ ಟೀಸರ್ ಯಕ್ಷಗಾನ ಪ್ರೇಮಿಗಳಲ್ಲಿ ಹೊಸ ರೋಮಾಂಚನ ಉಂಟು ಮಾಡಿದೆ. ಯಕ್ಷಗಾನದ ಪರಿಚಯ ಇಲ್ಲದೆ ಇರುವವರಿಗೂ ಇದು ಗೂಸ್‌ಬಂಪ್ಸ್ ನೀಡುವ ಸೂಚನೆಯಿದೆ. ಕುದುರೆಯಲ್ಲಿ ರಾಜನೊಬ್ಬ ಹೋಗುವ ದೃಶ್ಯವೂ ಇದೆ. ಯಕ್ಷಗಾನ ವೇಷ ಮತ್ತು ಯಕ್ಷಗಾನ ವೇಷವಲ್ಲದ ದೃಶ್ಯಗಳೂ ಇದರಲ್ಲಿ ಇರುವ ಸಾಧ್ಯತೆ ಇದೆ. ಬದಲಾದ ಕಾಲಘಟ್ಟದಲ್ಲಿ ರಾತ್ರಿಯಿಂದ ಬೆಳಗ್ಗಿನ ತನಕ ಮೇಳದ ಯಕ್ಷಗಾನ ನೋಡಲು ಪುರುಷೊತ್ತು ಇಲ್ಲ ಎನ್ನುವವರಿಗೆ ರವಿ ಬಸ್ರೂರು ಹೊಸ ಬಗೆಯಲ್ಲಿ ಯಕ್ಷಗಾನದ ಸವಿಯನ್ನು ಉಣಬಡಿಸುವ ಸೂಚನೆಯನ್ನು ಈ ಟೀಸರ್ ನೀಡಿದೆ.
ರವಿ ಬಸ್ರೂರು ನಿರ್ದೇಶನದಲ್ಲಿ ವೀರ ಚಂದ್ರಹಾಸ
ರವಿ ಬಸ್ರೂರು ಕನ್ನಡ ಸಿನಿಮಾ ರಂಗದ ಪ್ರತಿಭಾನ್ವಿತ ಸಂಗೀತ ನಿರ್ದೇಶಕ. ಈಗಾಗಲೇ ಕೆಜಿಎಫ್, ಸಲಾರ್‌ನಂತಹ ಸಿನಿಮಾಗಳಲ್ಲಿ ಸಂಗೀತ ಸಂಯೋಜನೆ ಮಾಡಿ ಸೈ ಎಣಿಸಿಕೊಂಡಿದ್ದಾರೆ. ಕೆಜಿಎಫ್ ಎಂದಾಗ ತಂದಾನಿ ತಾನ ಎಂಬ ಸಂಗೀತ ಕೆಲವರಿಗೆ ನೆನಪಾಗಬಹುದು, ಇನ್ನು ಕೆಲವರಿಗೆ ತಂದಾನಿತಾನ ಎಂದಾಗ ರವಿ ಬಸ್ರೂರು ನೆನಪಾಗಬಹುದು. ಸಂಗೀತ ನಿರ್ದೇಶನದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿರುವ ರವಿ ಬಸ್ರೂರು ಇದೀಗ ಜಗತ್ತಿನ ಸಿನಿಮಾ ಇತಿಹಾಸದಲ್ಲಿಯೇ ಹೊಸ ಪ್ರಯೋಗಕ್ಕೆ ಮುಂದಡಿ ಇಟ್ಟಿದ್ದಾರೆ.
ರವಿ ಬಸ್ರೂರು ಈ ಹಿಂದೆ ಗಿರ್ಮಿಟ್ ಎಂಬ ಸಿನಿಮಾ ಮಾಡಿದ್ದರು. ಅದೇ ಮಕ್ಕಳೇ ಮೀಸೆ, ಸೀರೆಯುಟ್ಟು ದೊಡ್ಡವರಂತೆ ನಟಿಸಿದ ಸಿನಿಮಾವದು. ಆ ಸಿನಿಮಾಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಧ್ವನಿ ನೀಡಿದ್ದರು. ಇದೀಗ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಹೊಸಬಗೆಯಲ್ಲಿ ತೋರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ವೀರ ಚಂದ್ರಹಾಸ ಸಿನಿಮಾದಲ್ಲಿ ಯಕ್ಷಗಾನ ಕಲಾವಿದರು ಬಣ್ಣ ಹಚ್ಚಿರುವ ಸೂಚನೆಯಿದೆ. ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, -ನಾಗರಾಜ್ ಸರ್ವೇಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ವೀರ ಚಂದ್ರಹಾಸ ಸಿನಿಮಾ ಬಿಡುಗಡೆ ಯಾವಾಗ ಎಂಬ ಕುರಿತು ಸದ್ಯ ಹೊರಬಿದ್ದಿಲ್ಲ.
ವೀರ ಚಂದ್ರಹಾಸ ಟೀಸರ್‌ಗೆ ಪ್ರತಿಕ್ರಿಯೆ
ಈ ಸಿನಿಮಾದ ಟೀಸರ್ ನೋಡಿ ಸಾಕಷ್ಟು ಜನರು ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ. "ಕಾಂತಾರದ ಬಳಿಕ ಕುಂದಾಪುರದಿಂದ ಮುಂದಿನ ಸಿನಿಮಾ ವೀರ ಚಂದ್ರಹಾಸ" "ಜೈ ಯಕ್ಷಗಾನ ಗೆಲ್ಗೆ" "ರವಿ ಸರ್ ನಿಮ್ಮ ತಂಡಕ್ಕೆ ಶುಭ ಹಾರೈಕೆಗಳು.... ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ" "ಇದು ನಿಮ್ಮದೊಂದೇ ಕನಸಲ್ಲ ಸರ್ ನಮ್ಮೆಲ್ಲರ ಕನಸು... ಬೆಳ್ಳಿ ತೆರೆಯ ಮೇಲೆ ನಮ್ಮ ಯಕ್ಷಗಾನ ಶುಭವಾಗಲಿ ಸರ್" "ಮತ್ತೊಂದು ಕಾಂತರ ತರ ಅನ್ನಿಸುತ್ತ ಇದೆ" ಎಂದೆಲ್ಲ ಕಾಮೆಂಟ್‌ಗಳು ಬಂದಿವೆ.