‘ಬಂಗಾರದ ಮನುಷ್ಯ’ ಬರೀ ಹತ್ತು ಹನ್ನೆರಡು ವಾರವಷ್ಟೇ ಓಡೋ ಸಿನಿಮಾ ಎಂದು ಷರಾ ಬರೆದಿದ್ದ ಖ್ಯಾತ ನಿರ್ದೇಶಕ! ಮುಂದಾಗಿದ್ದು ಮಾತ್ರ ಇತಿಹಾಸ
ಡಾ. ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ಬಗ್ಗೆ ಆಗಿನ ಕಾಲದಲ್ಲಿಯೇ ಕಟು ಟೀಕೆ ಟಿಪ್ಪಣಿಗಳು ತೇಲಿ ಬಂದಿದ್ದವು. ಖ್ಯಾತ ನಾಮ ನಿರ್ದೇಶಕರು, ಸಾಹಿತಿಗಳು ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದರು. ಆದರೆ, ಸಿನಿಮಾ ಮಾತ್ರ ಅದ್ಯಾವುದಕ್ಕೂ ಬಗ್ಗದೆ, ಸುದೀರ್ಘ 2 ವರ್ಷಗಳ ಕಾಲ ಓಡಿ ದಾಖಲೆ ಬರೆಯಿತು.
Dr Rajkumar Movies: ಕನ್ನಡ ಚಿತ್ರೋದ್ಯಮದಲ್ಲಿ 70ರ ದಶಕದಲ್ಲಿ ಡಾ. ರಾಜ್‌ಕುಮಾರ್ ಮತ್ತು ನಿರ್ದೇಶಕ ಸಿದ್ದಲಿಂಗಯ್ಯ ಜೋಡಿಯ ಬಂಗಾರದ ಮನುಷ್ಯ ಸಿನಿಮಾ ದೊಡ್ಡ ದಾಖಲೆ ಬರೆದಿತ್ತು. ಚಿತ್ರಮಂದಿರಲ್ಲಿ ಬರೋಬ್ಬರಿ 24 ತಿಂಗಳ ಮೇಲೆ ಪ್ರದರ್ಶನ ಕಂಡಿತ್ತು. ಆಗಿನ ಕಾಲದಲ್ಲಿಯೇ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಬಂಗಾರದ ಬೆಳೆಯನ್ನೇ ತೆಗೆದಿತ್ತು. ಅಣ್ಣಾವ್ರ ಸಿನಿಮಾ ವೃತ್ತಿ ಜೀವನದಲ್ಲಿ ದೊಡ್ಡ ಮೈಲಿಗಲ್ಲಾಗಿ ನಿಂತಿತ್ತು ಬಂಗಾರದ ಮನುಷ್ಯ ಸಿನಿಮಾ. ಆದರೆ, ಇದೇ ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರರಂಗದ ಒಳಗಿನವರೇ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು. ಆ ಪೈಕಿ ಒಬ್ಬ ನಿರ್ದೇಶಕರು, ಇದು 10-12 ವಾರವಷ್ಟೇ ಓಡೋ ಸಿನಿಮಾ ಎಂದಿದ್ದರು. ಆದರೆ, ಮುಂದಾಗಿದ್ದು ಮಾತ್ರ ಇತಿಹಾಸ!
ಹತ್ತು ಹಲವು ದಾಖಲೆಗಳು ಸೃಷ್ಟಿ
ಬಂಗಾರದ ಮನುಷ್ಯ ಸಿನಿಮಾ ಶುರುವಿಗೂ ಮೊದಲೇ ಕಥೆಯ ಚರ್ಚೆ ನಡೆದಿತ್ತು. ಕೆಲ ಘಟನಾಘಟಿ ನಿರ್ದೇಶಕರಿಗೂ ಕಥೆಯನ್ನು ಹೇಳಲಾಗಿತ್ತು. ಆ ಪೈಕಿ ಕೆಲವರು ಇದು ಸಿನಿಮಾ ಆಗಲು ಲಾಯಕ್ಕಲ್ಲದ ಕಥೆ, ಇದರಲ್ಲಿ ಏನೂ ಇಲ್ಲ ಎಂದಿದ್ದರು. ಆದರೆ, 1972ರ ಮಾರ್ಚ್ 31ರಂದು ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆ ಆಗುತ್ತದೆ. ದಾಖಲೆ ಮೇಲೆ ದಾಖಲೆಗಳು ನಿರ್ಮಾಣವಾಗುತ್ತವೆ. ಸಿದ್ದಲಿಂಗಯ್ಯನವರ ನಿರ್ದೇಶನಕ್ಕೆ ಮೆಚ್ಚುಗೆ ಸಿಗುತ್ತದೆ. ಬೆಂಗಳೂರಿನ ಆಗಿನ ಸ್ಟೇಟ್ ಥಿಯೇಟರ್‌ನಲ್ಲಿ (ಈಗಿನ ಭೂಮಿಕಾ ಚಿತ್ರಮಂದಿರ) 104 ವಾರಗಳ ಪ್ರದರ್ಶನ ಕಾಣುತ್ತದೆ ಬಂಗಾರದ ಮನುಷ್ಯ. ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 60 ವಾರ ಪ್ರದರ್ಶನ ಕಾಣುತ್ತದೆ. ಆಗಿನ ಕಾಲದಲ್ಲಿ ಈ ಸಿನಿಮಾ 2.5 ಕೋಟಿ ಗಳಿಕೆ ಮಾಡಿತ್ತು. ಅಂದಿನ ಕಲೆಕ್ಷನ್ ಅನ್ನು ಈಗಿನ ಲೆಕ್ಕದಲ್ಲಿ ಲೆಕ್ಕ ಹಾಕಿದರೆ 88 ಕೋಟಿಯಾಗುತ್ತದೆ.
10-12 ವಾರ ಓಡೋ ಸಿನಿಮಾ ಎಂದಿದ್ದ ಖ್ಯಾತ ನಿರ್ದೇಶಕ
ಆಗಿನ ಕಾಲದಲ್ಲಿ ಒಂದು ಸಿನಿಮಾ ನಿರ್ಮಾಣವಾಗಿದೆ ಎಂದರೆ, ಅದನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಕ್ಕೂ ಮುನ್ನ, ಒಂದಷ್ಟು ಹಂಚಿಕೆದಾರರಿಗೆ ತೋರಿಸಲಾಗುತ್ತಿತ್ತು. ಸಿನಿಮಾ ಆಪ್ತರು, ನಿರ್ದೇಶಕರಿಗೂ ಸಿನಿಮಾ ತೋರಿಸುವುದು ವಾಡಿಕೆ. ಹೀಗಿರುವಾಗ, ಬಂಗಾರದ ಮನುಷ್ಯ ಸಿನಿಮಾವನ್ನೂ ಒಂದಷ್ಟು ಜನರಿಗೆ ತೋರಿಸಲಾಗಿತ್ತು. ಆ ಪೈಕಿ ಖ್ಯಾತ ನಿದೇಶಕ ಪುಟ್ಟಣ್ಣ ಕಣಗಾಲ್ ಸಹ ಸಿನಿಮಾ ವೀಕ್ಷಣೆ ಮಾಡಿದ್ದರು. ಸಿನಿಮಾ ನೋಡಿ ತಮ್ಮದೇ ಶೈಲಿಯಲ್ಲಿ ಸಿನಿಮಾ ಬಗ್ಗೆ ಹೇಳಿಕೊಂಡಿದ್ದರು.
ನನ್ನ ಲೆಕ್ಕಾಚಾರ ತಪ್ಪಾಯ್ತು..
"ಬಂಗಾರದ ಮನುಷ್ಯ ಸಿನಿಮಾ ಒಂದು 10ರಿಂದ 12 ವಾರ ಓಡುವ ಸಿನಿಮಾ" ಎಂದು ಷರಾ ಬರೀತಾರೆ. ಅದಾಗಿ ಇದೇ ಸಿನಿಮಾ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡ ಇದೇ ಸಿನಿಮಾದ ಬಗ್ಗೆ ಮತ್ತೆ ಮಾತನಾಡುವ ಪುಟ್ಟಣ್ಣ ಕಣಗಾಲ್, “ ಇದು ನಾನು ಇನ್ನೊಬ್ಬರ ಮೇಲೆ ಹೊಟ್ಟೆ ಕಿಚ್ಚಿಟ್ಟುಕೊಂಡು ಹೇಳಿದ ಮಾತಲ್ಲ. ಆದರೆ, ಆ ಸಿನಿಮಾ ನೋಡಿದಾಗ ಆ ರೀತಿ ನನಗೆ ಅನಿಸಿತು. ಹಾಗಾಗಿ ಹತ್ತು ಹನ್ನೆರಡು ವಾರ, ಒಂದು ಐವತ್ತು ದಿನ ಓಡುವ ಸಿನಿಮಾ ಎಂದು ಹೇಳಿದ್ದೆನೇಯೇ ಹೊರತು, ಯಾವುದೇ ದ್ವೇಷ ಭಾವನೆಯಿಂದ ಹೇಳಿಲ್ಲ. ನನ್ನ ಲೆಕ್ಕಾಚಾರ ತಪ್ಪಾಯ್ತು. ನಾನು ಕನ್ನಡದ ಒಬ್ಬ ನಿರ್ದೇಶಕ. ಯಾವುದೇ ಕನ್ನಡ ಸಿನಿಮಾ 100 ದಿನ, 25 ವಾರ, 50 ವಾರ ಓಡಿದ್ರೆ ಆ ಎಲ್ಲ ಸಿನಿಮಾಗಳು ನನ್ನವೇ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
ಖ್ಯಾತ ಬರಹಗಾರ, ಲೇಖಕ ಕೃಷ್ಣ ಆಲನಹಳ್ಳಿ ಸಹ ಬಂಗಾರದ ಮನುಷ್ಯ ಸಿನಿಮಾ ಬಗ್ಗೆ ಟೀಕೆ ಟಿಪ್ಪಣಿ ಮಾಡಿದ್ದರು. ಚಿತ್ರದಲ್ಲಿ ಕಥಾನಾಯಕ ರಾಜೀವಪ್ಪ, ಇಂಟ್ರಡಕ್ಷನ್ ಸೀನ್‌ನಲ್ಲಿ ಮೊದಲಿಗೆ ಅವರ ಕಾಲನ್ನು ತೋರಿಸಲಾಗಿತ್ತು. ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದ ಆಲನಹಳ್ಳಿ ಕೃಷ್ಣ, "ಇದು ವ್ಯಕ್ತಿ ಪೂಜೆಯನ್ನು ಸಮರ್ಥಿಸುವಂಥ ನಡೆ. ಈ ರೀತಿಯ ನಿರೂಪಣೆ ಬೇಡವಾಗಿತ್ತು" ಎಂದು ಟೋಟಲ್ ಕನ್ನಡ ಯೂಟ್ಯೂಬ್‌ನಲ್ಲಿ ಈ ಘಟನೆಯನ್ನು ನಿರೂಪಕರು ಮೆಲುಕು ಹಾಕಿದ್ದಾರೆ.