Crime News: ಪ್ರೆಜರ್ ಕುಕ್ಕರ್‌ನಲ್ಲಿ ಡ್ರಗ್ ತಯಾರು ಮಾಡುತ್ತಿದ್ದ ಆರೋಪಿ ಬಂಧನ; 10 ಕೋಟಿ ರೂ ಮೌಲ್ಯದ ಎಂಡಿಎಂಎ ವಶ
Bengaluru Crime News: ಅಡುಗೆ ಮಾಡುವ ಪ್ರೆಜರ್ ಕುಕ್ಕರ್‌ನಲ್ಲಿ ಸಿಂಥೆಟಿಕ್ ಡ್ರಗ್ ತಯಾರು ಮಾಡಿ ದೇಶ-ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಆರೋಪಿಯ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಮತ್ತು 14 ಫಾರೀನರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು: ಅಡುಗೆ ಮಾಡುವ ಪ್ರೆಜರ್ ಕುಕ್ಕರ್‌ನಲ್ಲಿ ಸಿಂಥೆಟಿಕ್ ಡ್ರಗ್ ತಯಾರು ಮಾಡಿ ದೇಶ-ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಸುಮಾರು 10 ಕೋಟಿ ರುಪಾಯಿ ಮೌಲ್ಯದ ಎಂಡಿಎಂಎ ಹಾಗೂ ಅದರ ತಯಾರಿಗೆ ಬಳಸುತ್ತಿದ್ದ ರಾಸಾಯನಿಕ ಮತ್ತು ರಾಸಾಯನಿಕ ಆಮ್ಲ (ಕೆಮಿಕಲ್‌ಗಳು) ಮತ್ತು ಇತರೆ ಉಪಕರಣಗಳನ್ನು ವಶ ಪಡಿಸಿಕೊಳ್ಳುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಿದೇಶಿ ಮೂಲದ ವ್ಯಕ್ತಿಯೊಬ್ಬ ನಿಷೇದಿತ ಮಾದಕ ಮತ್ತು ಮನೋಪರಿಣಾಮಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್ ತಯಾರು ಮಾಡಿ ಈ ನಿಷೇಧಿತ ಮಾದಕ ವಸ್ತುಗಳನ್ನು ಬೆಂಗಳೂರು ಸೇರಿದಂತೆ ವಿವಿಧ ರಾಜ್ಯ ಹಾಗೂ ದೇಶ ವಿದೇಶಗಳಲ್ಲಿ ಇರುವ ಗಿರಾಕಿಗಳಿಗೆ ಹಾಗೂ ಸಬ್ ಪೆಡ್ಲರ್‌ಗಳಿಗೆ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ.
ಈ ಅಕ್ರಮ ದಂಧೆಯ ಜಾಡು ಹಿಡಿದ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ (ಸಿ.ಸಿ.ಬಿ) ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮಾದಕವಸ್ತುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಮೇರೆಗೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆತನ ಮನೆಯಲ್ಲಿದ್ದ ಸುಮಾರು ರೂ. 10 ಕೋಟಿ ಮೌಲ್ಯದ 5 ಕೆಜಿ ಎಂ.ಡಿ.ಎಂ.ಎ ಮಾದಕವಸ್ತು ಮತ್ತು ಅದನ್ನು. ತಯಾರು ಮಾಡಲು ಬೇಕಾದ ಕಚ್ಚಾ ಪದಾರ್ಥಗಳಾದ 12. ಕೆಜಿ Methylsulfonylmethane (MSM), 5 ಕೆಜಿ Sodium Hydroxide Crystals, 5 ಲೀಟರ್ Hydrocloric acid, 2.5 ಲೀಟರ್ Acetone ಎಂ.ಡಿ.ಎಂ.ಎ ತಯಾರಿಸಲು ಬಳಸುತ್ತಿದ್ದ 5 ಲೀಟರ್ ಕುಕ್ಕರ್, ಒಂದು ಸ್ಟೌವ್, ಒಂದು ಗ್ಯಾಸ್ ಸಿಲಿಂಡರ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮೊಬೈಲ್ ಫೋನು ಸೇರಿದಂತೆ 2 ಡಿಜಿಟಲ್ ತೂಕದ ಯಂತ್ರ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಆರೋಪಿಯ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಮತ್ತು 14 ಫಾರೀನರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ದಿ. 9-II-2023 ರಂದು ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ದಿ.20-II-2023ರ ವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮಾಡಲಾಗುತ್ತಿದೆ.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರ ಎನ್. ಸತೀಶ್ ಕುಮಾರ್, ಮತ್ತು ಅಪರಾಧ-2 ಉಪ ಪೊಲೀಸ್ ಆಯುಕ್ತ ಶ್ರೀನಿವಾಸ್ ಗೌಡ ರವರ ಮಾರ್ಗದರ್ಶನದಲ್ಲಿ ಬೆಂಗಳೂರು ನಗರದ ಸಿಸಿಬಿ ಘಟಕದ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ಕೈಗೊಂಡಿರುತ್ತದೆ.
ವರದಿ: ಎಚ್. ಮಾರುತಿ, ಬೆಂಗಳೂರು