ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರು ಬಿಕ್ಕಟ್ಟು; ತತ್‌ಕ್ಷಣಕ್ಕೆ, ದೀರ್ಘಾವಧಿಗೆ ತಲಾ 5 ಅಂಶಗಳ ಪರಿಹಾರ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿವರಣೆ

ಬೆಂಗಳೂರು ನೀರು ಬಿಕ್ಕಟ್ಟು; ತತ್‌ಕ್ಷಣಕ್ಕೆ, ದೀರ್ಘಾವಧಿಗೆ ತಲಾ 5 ಅಂಶಗಳ ಪರಿಹಾರ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿವರಣೆ

ಬೆಂಗಳೂರು ಜಲ ಬಿಕ್ಕಟ್ಟಿಗೆ ತಮಿಳುನಾಡು ಮೂಲದ ಸಿವಿಲ್ ಇಂಜಿನಿಯರ್ ರಾಜ್ ಭಗತ್‌ ನೀಡಿದ ಕಾರಣ ಸಹಿತ ವಿವರಣೆಯನ್ನು ಬಹಳಷ್ಟು ಜನ ಗಮನಿಸಿದ್ದಾರೆ. ಬೆಂಗಳೂರು ನೀರು ಬಿಕ್ಕಟ್ಟು ಸಂಬಂಧಿಸಿ ತತ್‌ಕ್ಷಣಕ್ಕೆ, ದೀರ್ಘಾವಧಿಗೆ ತಲಾ 5 ಅಂಶಗಳ ಪರಿಹಾರ ಒದಗಿಸುವುದು ಹೇಗೆ ಎಂಬುದರ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿವರಣೆ ನೀಡಿದ್ದಾರೆ.

ಬೆಂಗಳೂರು ನೀರು ಬಿಕ್ಕಟ್ಟು; ತತ್‌ಕ್ಷಣಕ್ಕೆ, ದೀರ್ಘಾವಧಿಗೆ ತಲಾ 5 ಅಂಶಗಳ ಪರಿಹಾರ ಒದಗಿಸುವುದು ಹೇಗೆ ಎಂಬುದರ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿವರಣೆ ನೀಡಿದ್ದಾರೆ.
ಬೆಂಗಳೂರು ನೀರು ಬಿಕ್ಕಟ್ಟು; ತತ್‌ಕ್ಷಣಕ್ಕೆ, ದೀರ್ಘಾವಧಿಗೆ ತಲಾ 5 ಅಂಶಗಳ ಪರಿಹಾರ ಒದಗಿಸುವುದು ಹೇಗೆ ಎಂಬುದರ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿವರಣೆ ನೀಡಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನೀರಿನ ಸಮಸ್ಯೆ (ಬೆಂಗಳೂರು ನೀರು ಬಿಕ್ಕಟ್ಟು) ವಿಚಾರ ಸದ್ಯ ಮನೆಮಾತು. ಎಲ್ಲೆಡೆ ಈ ಕುರಿತು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳ ನಡುವೆ ಪರಿಹಾರ ಏನು ಎಂಬುದರ ಕಡೆಗೂ ಜನ ಗಮನಹರಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಜಲ ಬಿಕ್ಕಟ್ಟಿಗೆ ತಮಿಳುನಾಡು ಮೂಲದ ಸಿವಿಲ್ ಇಂಜಿನಿಯರ್ ರಾಜ್ ಭಗತ್‌ ನೀಡಿದ ಕಾರಣ ಸಹಿತ ವಿವರಣೆಯನ್ನು ಬಹಳಷ್ಟು ಜನ ಗಮನಿಸಿದ್ದಾರೆ. ಈಗ ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿಯ ಯುವ ನಾಯಕ ತೇಜಸ್ವಿ ಸೂರ್ಯ ಸದ್ಯೋಭವಿಷ್ಯಕ್ಕೆ ಸಂಬಂಧಿಸಿದ ಹಾಗೂ ದೀರ್ಘಾವಧಿಗೆ ಸಂಬಂಧಿಸಿದ ತಲಾ 5 ಅಂಶಗಳ ಪರಿಹಾರಗಳ ಕಡೆಗೆ ಗಮನಸೆಳೆದಿದ್ದಾರೆ. ಈ ವಿಚಾರವಾಗಿ, ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವುದು ಇಷ್ಟು-

ಬೆಂಗಳೂರು ಜಲ ಬಿಕ್ಕಟ್ಟು; ಸಾರ್ವಜನಿಕರು ಮತ್ತು ಸರ್ಕಾರ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದರೆ ಇನ್ನಷ್ಟು ಸಂಕಷ್ಟ

ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಉಲ್ಬಣಗೊಂಡಿದೆ. ಸಾರ್ವಜನಿಕರು ಮತ್ತು ಸರ್ಕಾರ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದರೆ ಇದು ಇನ್ನಷ್ಟು ವ್ಯಾಪಕವಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಬರೆದುಕೊಂಡಿದ್ದಾರೆ.

ಇದಕ್ಕೆ ಹಲವು ಕಾರಣಗಳಿವೆ. ನಗರದ ಪ್ರಸ್ತುತ ಅಗತ್ಯತೆ 2050 ಪ್ರತಿದಿನಕ್ಕೆ ಮಿಲಿಯನ್ ಲೀಟರ್ ಇದೆ. ಆದರೆ, ಕಾವೇರಿ ನೀರು ಮತ್ತು ಬೋರ್‌ವೆಲ್‌ಗಳಿಂದ ಸಿಗುತ್ತಿರುವ ನೀರು ಕೇವಲ 1450 ಎಂಎಲ್‌ಡಿ. ಬೆಂಗಳೂರಿನಲ್ಲಿ 11 ಸಾವಿರ ಬೋರ್‌ವೆಲ್‌ಗಳು ಬಿಡಬ್ಲ್ಯುಎಸ್‌ಎಸ್‌ಬಿ ಅಧೀನದಲ್ಲಿ ಇವೆ. 4 5 ಲಕ್ಷ ಖಾಸಗಿ ಇವೆಯಾದರೂ ಸಧ್ಯಕ್ಕೆ ನೀರಿನ ಬತ್ತುವಿಕೆಯಿಂದ ಇವೆಲ್ಲವುಗಳು ನಿಷ್ಕ್ರಿಯ ಹಂತಕ್ಕೆ ತಲುಪಲಿವೆ.

ಬೆಂಗಳೂರು ನಗರಕ್ಕೆ ಕೆಂಪೇಗೌಡರ ಕಾಲದಿಂದಲೂ ಯಥೇಚ್ಛ ನೀರು ಪೂರೈಕೆಗೆ ಕೆರೆಗಳ ಕೊಡುಗೆ ಅಪಾರ. ಇಂದು ಕೆರೆ ಪ್ರದೇಶಗಳೆಲ್ಲವು ಅತಿಕ್ರಮಣಕ್ಕೆ ಒಳಗಾಗಿ ಆ ಪ್ರದೇಶವೇ ನಾಶವಾಗಿ ಹೋಗಿದೆ. ಇದಲ್ಲದೇ ಅವೈಜ್ಞಾನಿಕ ವೈಟ್ ಟಾಪಿಂಗ್ ನಿಂದ ಮೇಲೆ ನೀರು ಇಂಗಲು ಸ್ಥಳವೇ ಇಲ್ಲದಂತಾಗಿದೆ.

ನಗರದ ನೀರಿನ ಮೂಲ ಕಾವೇರಿ, ನದಿಯೊಂದರಿಂದ 100 ಕಿಮೀ ವರೆಗೂ ಪೈಪ್ ಮೂಲಕ ನೀರು ಸರಬರಾಜು ಆಗುತ್ತಿರುವ ಕೆಲವೇ ನಗರಗಳಲ್ಲಿ ಬೆಂಗಳೂರು ಒಂದು. ಬಿಬಿಎಂಪಿ ಯು ಎಲ್ಲ ಮನೆಗಳಿಗೂ ಮಳೆ ನೀರು ಇಂಗಲು ಇಂಗುಗುಂಡಿ ನಿರ್ಮಿಸುವಂತೆ ಹೇಳಿದರೂ ಸಾರ್ವಜನಿಕರು ಇದನ್ನು ಪರಿಗಣಿಸದೇ ಇರುವ ಕಾರಣಕ್ಕೆ ಮಳೆಯಿಂದ ಸಿಗುವ ನೀರನ್ನು ಬಳಸಲು ಸಾಧ್ಯವೇ ಆಗುತ್ತಿಲ್ಲ. ಇಂತಹ ನೀರಿನ ಸಮಸ್ಯೆಯ ಮಧ್ಯವೇ ನೀರಿನ ಟ್ಯಾಂಕರ್ ಮಾಫಿಯಾ, ಸಮಯದ ದುರುಪಯೋಗ ಪಡಿಸಿಕೊಂಡು ನೀರಿಗೆ ಹೆಚ್ಚಿನ ದರ ವಿಧಿಸುತ್ತಿರುವುದು ಆಘಾತಕಾರಿ.

ಸರ್ಕಾರ ಮತ್ತು ಸಾರ್ವಜನಿಕರು ಈ ಸಂದರ್ಭದಲ್ಲಿ ಕೆಲವೊಂದು ತುರ್ತು ಕ್ರಮಗಳನ್ನು ಕೈಗೊಳ್ಳಲೇಬೇಕಾದ ಸಂದರ್ಭ ಎದುರಾಗಿದೆ. ರಾಜಕೀಯ ಒತ್ತಾಸೆಗಳನ್ನು ಬದಿಗಿಟ್ಟು, ಯುದ್ಧದ ಮಾದರಿಯಲ್ಲಿ ಸಾರ್ವಜನಿಕರ ಸಂಕಷ್ಟ ಪರಿಹಾರಕ್ಕೆ ಕೈಜೋಡಿಸುವ ಅಗತ್ಯತೆ ಇದೆ ಎಂಬುದರ ಕಡೆಗೆ ಅವರು ಗಮನ ಸೆಳೆದಿದ್ದಾರೆ.

ಬೆಂಗಳೂರು ನೀರಿನ ಸಮಸ್ಯೆ; ತತ್‌ಕ್ಷಣಕ್ಕೆ ಅಗತ್ಯವಾದ ಪರಿಹಾರ, 5 ಅಂಶಗಳು

ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ನೀರಿನ ಸಮಸ್ಯೆ ಪರಿಹರಿಸುವ ವಿಚಾರವಾಗಿ ಸದ್ಯೋಭವಿಷ್ಯಕ್ಕೆ ಅಗತ್ಯವಾದ ಪರಿಹಾರ ಕಂಡುಕೊಳ್ಳಲು ಗಮನಿಸಬೇಕಾದ 5 ಅಂಶಗಳನ್ನು ವಿವರಿಸಿದ್ದು ಹೀಗೆ.

1) ಈಗಾಗಲೇ ಅಸ್ತಿತ್ವದಲ್ಲಿರುವ ಬೋರ್‌ವೆಲ್‌ಗಳನ್ನು ರಿಡ್ರಿಲ್/ಫ್ಲಶ್ ಮಾಡುವ ತುರ್ತು ಅಗತ್ಯವಿದೆ.

2) ಈ ತುರ್ತು ಪರಿಸ್ಥಿತಿಯನ್ನು ಪರಿಹರಿಸಲು, ನಾವು ಈಗಾಗಲೇ ದುರುಪಯೋಗಪಡಿಸಿಕೊಂಡ ಅಂತರ್ಜಲವನ್ನುಇನ್ನಷ್ಟು ಹಾಳುಗೆಡವದೇ ಆಯ್ದ ಸ್ಥಳಗಳಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಯಬೇಕಾಗುತ್ತದೆ.

3) ಪರಿಸ್ಥಿತಿಯ ಲಾಭ ಪಡೆದು ಮಿತಿಮೀರಿ ಲಾಭ ಮಾಡಿಕೊಳ್ಳುತ್ತಿರುವ ಟ್ಯಾಂಕರ್ ಮಾಫಿಯಾವನ್ನು ನಿಯಂತ್ರಿಸಬೇಕು. ಬೆಲೆಗಳ ಮೇಲೆ ಮಿತಿಯನ್ನು ಹೇರಬೇಕು. ಅದಾಗದೇ ಇದ್ದಲ್ಲಿ ಸರಕಾರ ಟ್ಯಾಂಕರ್‌ಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು.

4) ಕಾವೇರಿ 5ನೇ ಹಂತದ ಯೋಜನೆಗೆ ಕೂಡಲೇ ಚಾಲನೆ ನೀಡಬೇಕು. ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷರು, ಈ ಯೋಜನೆಯನ್ನು ಏಪ್ರಿಲ್ ಅಂತ್ಯದ ವೇಳೆಗೆ ಪೂರ್ಣವಾಗಲಿದೆ ಎಂದು ಹೇಳಿದರು. ಇದನ್ನು ತ್ವರಿತಗೊಳಿಸಬೇಕಾಗಿದೆ.

5) ಸರ್ಕಾರವು ಕಡಿಮೆ ಆದಾಯದ ಪ್ರದೇಶಗಳಿಗೆ ನೀರನ್ನು ಉಚಿತವಾಗಿ ನೀಡಬೇಕು ಮತ್ತು ಇತರ ಪ್ರದೇಶಗಳಿಗೆ ಟ್ಯಾಂಕರ್‌ಗಳ ನೀರಿಗೆ ಬೆಲೆ ನಿಗದಿ ಮಾಡಬೇಕು.

ಬೆಂಗಳೂರು ಜಲ ಕ್ಷಾಮ; ದೀರ್ಘಾವಧಿ ಪರಿಹಾರಕ್ಕೆ ಗಮನಿಸಬೇಕಾದ 5 ಅಂಶಗಳು

ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ಜಲ ಕ್ಷಾಮ ಪರಿಹರಿಸುವ ವಿಚಾರವಾಗಿದೀರ್ಘಾವಧಿ ಪರಿಹಾರಕ್ಕೆ ಗಮನಿಸಬೇಕಾದ 5 ಅಂಶಗಳ ವಿವರ ನೀಡಿರುವುದು ಹೀಗೆ.

1) ಬೆಂಗಳೂರು ಪ್ರತಿ ವರ್ಷ 3.5 ಟಿಎಂಸಿ ಮಳೆನೀರನ್ನು ಪಡೆಯುತ್ತದೆ, ಆದರೆ ನಮ್ಮ ಮಳೆನೀರು ಕೊಯ್ಲು ಕಾರ್ಯವಿಧಾನದ ವೈಫಲ್ಯದಿಂದಾಗಿ, ಅಂತರ್ಜಲ ಮರುಪೂರಣವು ಪರಿಣಾಮಕಾರಿಯಾಗಿಲ್ಲ. ಇದು ಪೌರಕಾರ್ಮಿಕರು ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ.

2) ಜಲಾಶಯಗಳ/ಕೆರೆಗಳ ಪರಿಸರ ವ್ಯವಸ್ಥೆಯ ಮತ್ತಷ್ಟು ಅತಿಕ್ರಮಿಸುವುದನ್ನು ಸಮರೋಪಾದಿಯಲ್ಲಿ ತಡೆಯಬೇಕು. ಇದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನಮ್ಮ ಕೆರೆಗಳು ನಮ್ಮ ನಗರಗಳ ಜೀವನಾಡಿ.

3) ಎಲ್ಲ ರಸ್ತೆಗಳಿಗೂ ವೈಟ್ ಟಾಪಿಂಗ್ ಮಾಡುವುದನ್ನು ನಿಲ್ಲಿಸಬೇಕು. ಒತ್ತಡದ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವತ್ತ ಗಮನಹರಿಸಬೇಕು.

4) ಕಾವೇರಿ 6ನೇ ಹಂತದಲ್ಲಿ ಹೆಚ್ಚುವರಿಯಾಗಿ 6 ​​ಟಿಎಂಸಿ ನೀರು ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಸೂಕ್ತ ರೀತಿಯಲ್ಲಿ ಮತ್ತು ತ್ವರಿತ ಗತಿಯಲ್ಲಿ ಕಾರ್ಯಗತಗೊಳಿಸಬೇಕಿದೆ.

5) ಬಿಡಬ್ಲ್ಯುಎಸ್‌ಎಸ್‌ಬಿ ಕೇವಲ ಕಾವೇರಿ ನೀರಿನ ಪೂರೈಕೆಯ ಉಸ್ತುವಾರಿ ಮತ್ತು ನಗರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಆದರೆ ಇದು ಸರೋವರ ಅಭಿವೃದ್ಧಿ ಪ್ರಾಧಿಕಾರ ಅಥವಾ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳು, ಜಲಮೂಲಗಳು ಮತ್ತು ಮಳೆನೀರು ಚರಂಡಿಗಳನ್ನು ನಿರ್ವಹಿಸುತ್ತಿಲ್ಲ. ಆದ್ದರಿಂದ, ಇಡೀ ನಗರದಲ್ಲಿ ನೀರಿನ ಎಲ್ಲ ವ್ಯವಸ್ಥೆಯನ್ನು ನಿರ್ವಹಿಸುವ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕಾದ್ದು ಅವಶ್ಯ.

ಬಿಡಬ್ಲ್ಯುಎಸ್‌ಎಸ್‌ಬಿ ಅಂದಾಜಿನ ಪ್ರಕಾರ ಬೆಂಗಳೂರಿನ ಜನಸಂಖ್ಯೆ 2030ರ ವೇಳೆಗೆ 1.5 ಕೋಟಿ. ಆದರೆ ಈಗಾಗಲೇ ನಾವು ಆ ಸಂಖ್ಯೆ ದಾಟಿದ್ದೇವೆ. ಆದ್ದರಿಂದ, ನಗರದ ನೀರಿನ ಅವಶ್ಯಕತೆಗಳನ್ನು ಕಾಪಾಡುವ ನಮ್ಮ ಪ್ರಯತ್ನಗಳು ಪ್ರಾಯೋಗಿಕ ಗುರಿಗಳೊಂದಿಗೆ ಅತ್ಯಂತ ಕ್ಷಿಪ್ರವಾಗಿ ಕೆಲಸ ಮಾಡಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point