ಕನ್ನಡ ಸುದ್ದಿ  /  ಕರ್ನಾಟಕ  /  Lokayukta Raid: ಲೋಕಾಯುಕ್ತ ದಾಳಿ ವೇಳೆ ಬಹಿರಂಗವಾಯಿತು ಗ್ರಾಪಂ ಸದಸ್ಯನ 25 ಕೋಟಿ ರೂಪಾಯಿ ಆಸ್ತಿ

Lokayukta Raid: ಲೋಕಾಯುಕ್ತ ದಾಳಿ ವೇಳೆ ಬಹಿರಂಗವಾಯಿತು ಗ್ರಾಪಂ ಸದಸ್ಯನ 25 ಕೋಟಿ ರೂಪಾಯಿ ಆಸ್ತಿ

ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ರಾಜ್ಯದ 6 ಅಧಿಕಾರಿಗಳ ಮತ್ತು ಚುನಾಯಿತ ಜನಪ್ರತಿನಿಧಿಗಳ ಮನೆಗೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯನ ಬಳಿ 25 ಕೋಟಿ ರೂಪಾಯಿ ಆಸ್ತಿ ಪತ್ತೆಯಾಗಿದೆ. ಇಂಜಿನಿಯರ್‌ಗಳ ಹತ್ತಿರವೂ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. (ವರದಿ-ಎಚ್.ಮಾರುತಿ).

ಕರ್ನಾಟಕ ಲೋಕಾಯುಕ್ತ
ಕರ್ನಾಟಕ ಲೋಕಾಯುಕ್ತ

ಬೆಂಗಳೂರು: ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಇಲಾಖೆ ಭರ್ಜರಿ ಬೇಟೆಯಾಡಿ ಆರು ಭ್ರಷ್ಟ ಅಧಿಕಾರಿಗಳ ಬಳಿ ಆದಾಯ ಮೀರಿ ಗಳಿಸಿದ್ದ ಅಪಾರ ಪ್ರಮಾಣದ ಆಸ್ತಿಪಾಸ್ತಿ ಮತ್ತು ಚಿನ್ನಾಭರಣಗಳನ್ನು ಪತ್ತೆ ಮಾಡಿದೆ. ಓರ್ವ ಗ್ರಾಮ ಪಂಚಾಯ್ತಿ ಸದಸ್ಯರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಈ ಅಧಿಕಾರಿಗಳಿಗೆ ಸಂಬಂಧಿಸಿದ 30 ಕಡೆ ದಾಳಿ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಗ್ರಾ. ಪಂ. ಸದಸ್ಯ ಸುರೇಶ್ ಬಳಿ 25 ಕೋಟಿ ರೂ. ಮೌಲ್ಯದ ಆಸ್ತಿ

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಎಸ್.ಸುರೇಶ್ ಬಳಿ 25 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸುರೇಶ್ ಗೆ ಸಂಬಂಧಿಸಿದ ಆರು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಮಂಗಳವಾರ ನಡೆಸಿದ ದಾಳಿಯಲ್ಲಿ ಅತಿ ಹೆಚ್ಚು ಆಸ್ತಿಪಾಸ್ತಿ ಪತ್ತೆಯಾಗಿರುವುದು ಇವರ ಬಳಿ ಎಂದು ಲೋಕಾಯುಕ್ತ ತಿಳಿಸಿದೆ.

ಸುರೇಶ್ ಬಳಿ 16 ನಿವೇಶನ, 1 ವಾಸದ ಮನೆ, 7.6 ಎಕರೆ ಕೃಷಿ ಜಮೀನು ಸೇರಿ 21.27 ಕೋಟಿ ರೂಪಾಯಿಯಷ್ಟು ಸ್ಥಿರಾಸ್ತಿ ಪತ್ತೆಯಾಗಿದೆ. 11.97 ಲಕ್ಷ ರೂಪಾಯಿ ನಗದು, 2.11 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, 2.07 ಕೋಟಿ ರೂಪಾಯಿ ಮೌಲ್ಯದ ವಾಹನಗಳು ಸೇರಿ ಒಟ್ಟು 4.30 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಪತ್ತೆಯಾಗಿದೆ.

ಬೆಸ್ಕಾಂ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಬಳಿ 6.37 ಕೋಟಿ ರೂ. ಆಸ್ತಿ:

ಬೆಂಗಳೂರಿನ ಬೆಸ್ಕಾಂನ ಮುಖ್ಯ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಂ.ಎಲ್. ನಾಗರಾಜ್ ಬಳಿ 6.37 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ.

ಇವರಿಗೆ ಸೇರಿದ ಏಳು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ನಾಗರಾಜ್ ಬಳಿ 13 ನಿವೇಶನ, 2 ವಾಸದ ಮನೆಗಳು, ಕೃಷಿ ಜಮೀನು ಸೇರಿ ಒಟ್ಟು 5.35 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.

6.77 ಲಕ್ಷ ರೂಪಾಯಿ ನಗದು, 16.44 ಲಕ್ಷ ರೂಪಾಯಿ ಮೌಲ್ಯದ ಆಭರಣ, 13.50 ಲಕ್ಷ ರೂಪಾಯಿ ಬೆಲೆಯ ವಾಹನಗಳು, 11.19 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳ ಸಹಿತ ಒಟ್ಟು 63.66 ಲಕ್ಷ ರೂಪಾಯಿ ಬೆಲೆಯ ಚರಾಸ್ತಿ ಪತ್ತೆಯಾಗಿದೆ.

ಪಿಡಿಒ ಪದ್ಮನಾಭ್ ಬಳಿಯೂ 5.98 ಕೋಟಿ ರೂಪಾಯಿ ಕೋಟಿ ಆಸ್ತಿ:

ದೇವನಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಅಧಿಕಾರಿ ಡಿ.ಎಂ.ಪದ್ಮನಾಭ ಬಳಿ 5.98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.

ಇವರಿಗೆ ಸೇರಿದ ಒಟ್ಟು 6 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಒಂದು ಕೈಗಾರಿಕಾ ನಿವೇಶನ, 2 ವಾಸದ ಮನೆಗಳು, 8.18 ಎಕರೆ ಕೃಷಿ ಜಮೀನು, ಒಂದು ಫಾರ್ಮ್‌ ಹೌಸ್ ಸೇರಿ ಒಟ್ಟು 5.35 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪತ್ತೆ ಹಚ್ಚಲಾಗಿದೆ.

2.62 ಲಕ್ಷ ರೂಪಾಯಿ ನಗದು, ರೂ. 17.24 ಲಕ್ಷದ ಬೆಲೆಯ ಚಿನ್ನಾಭರಣ, 28.75 ಲಕ್ಷ ರೂಪಾಯಿ ಬೆಲೆಯ ವಾಹನಗಳು ಮತ್ತು 15 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ 63.66 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಕಂಡು ಬಂದಿದೆ.

ಕೆಆರ್‌ಐಡಿಎಲ್‌ ಸೈಯದ್ ಮುನೀರ್ ಬಳಿ 5.48 ಕೋಟಿ ರೂಪಾಯಿ ಆಸ್ತಿ:

ರಾಮನಗರ ಜಿಲ್ಲೆಯ ಕೆಆರ್‌ಯಡಿಎಲ್‌ ಕಚೇರಿಯ ಪ್ರಭಾರ ಕಾರ್ಯ ನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್ ಅಹಮದ್ ಬಳಿ 5.48 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ. ಇವರಿಗೆ ಸೇರಿದ 6 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.

2 ನಿವೇಶನ, ಒಟ್ಟು 7 ವಾಸದ ಮನೆಗಳು, ಕೃಷಿ ಜಮೀನು ಸೇರಿ ಒಟ್ಟು 4.10 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 8.54 ಲಕ್ಷ ರೂಪಾಯಿ ನಗದು, 73.47 ಲಕ್ಷ ರೂಪಾಯಿ ಚಿನ್ನಾಭರಣ, 21 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಹಾಗೂ 35 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 1.38 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಪತ್ತೆಯಾಗಿವೆ.

ಪಿಡಬ್ಲೂಡಿ ಎಂಜಿನಿಯರ್ ಸತೀಶ್ ಬಾಬು ಬಳಿ 4.52 ಕೋಟಿ ರೂಪಾಯಿ ಆಸ್ತಿ:

ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯ ಕಟ್ಟಡ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಎನ್.ಸತೀಶ್ ಬಾಬು ಅವರ ಬಳಿ 4.52 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬಾಬುಗೆ ಸೇರಿದ 5 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ ನಡೆಸಿತ್ತು. ಇವರ ಬಳಿ 1 ನಿವೇಶನ, 2 ವಾಸದ ಮನೆಗಳು, 15 ಎಕರೆ ಕೃಷಿ ಜಮೀನು ಸೇರಿ ಒಟ್ಟು 3.70 ರೂಪಾಯಿ ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.

9 ಲಕ್ಷ ರೂಪಾಯಿ ನಗದು, 64.62 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 8.70 ಲಕ್ಷ ರೂಪಾಯಿ ಬೆಲೆಯ ವಾಹನಗಳು ಸೇರಿ ಒಟ್ಟು 82.32 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿಯನ್ನು ಲೋಕಾಯುಕ್ತ ಪತ್ತೆ ಮಾಡಿದೆ.

ನಗರ ಯೋಜನೆ ಜಂಟಿ ನಿರ್ದೇಶಕ ಮಂಜೇಶ್ ಬಳಿ 3.18 ಕೋಟಿ ರೂ. ಆಸ್ತಿ:

ಆನೇಕಲ್ ತಾಲ್ಲೂಕಿನ ಯೋಜನಾ ಪ್ರಾಧಿಕಾರದ ನಗರ ಮತ್ತು ಯೋಜನೆ ವಿಭಾಗದ ಸದಸ್ಯ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕ ಬಿ.ಮಂಜೇಶ್ ಬಳಿ 3.18 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಂಜೇಶ್‌ಗೆ ಸೇರಿದ ಐದು ಕಡೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, 11 ನಿವೇಶನಗಳು, 1 ವಾಸದ ಮನೆ ಸೇರಿ ಒಟ್ಟು 1.20 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪತ್ತೆ ಮಾಡಿದ್ದಾರೆ.

5.07 ಲಕ್ಷ ರೂಪಾಯಿ ನಗದು, 35.97 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 7.71 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ 1.98 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ.

IPL_Entry_Point