ಲೋಕಸಭಾ ಚುನಾವಣೆ; 26ಕ್ಕೆ ಮತದಾನ, ಬೇಸಿಗೆ ಪ್ರಯಾಣಿಕ ದಟ್ಟಣೆ ನಿರ್ವಹಿಸಲು ಬೆಂಗಳೂರು ಮಂಗಳೂರು, ಯಶವಂತಪುರ ಕುಂದಾಪುರ ವಿಶೇಷ ರೈಲು
ಬೇಸಿಗೆ ರಜೆ, ವಾರಾಂತ್ಯದ ರಜೆ, ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಹೀಗೆ ಪ್ರಯಾಣಿಕ ದಟ್ಟಣೆ ಹೆಚ್ಚಾಗುತ್ತಿರುವ ಕಾರಣ ಬೆಂಗಳೂರು- ಮಂಗಳೂರು, ಯಶವಂತಪುರ ಕುಂದಾಪುರ, ಬೆಂಗಳೂರು ಕೊಚುವೇಲಿಗಳ ನಡುವೆ ವಿಶೇಷ ರೈಲು ಸಂಚಾರ ನಡೆಸುವುದಾಗಿ ನೈಋತ್ಯ ರೈಲ್ವೆ ಪ್ರಕಟಿಸಿದೆ. ವಿವರ ಹೀಗಿದೆ.
ಬೆಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯುತ್ತಿದೆ. ಹೀಗಾಗಿ ಕೇರಳ, ತಮಿಳುನಾಡಿನವರೂ ಸೇರಿ ಬೆಂಗಳೂರಲ್ಲಿರುವ ಅನೇಕರು ತಮ್ಮ ಊರುಗಳಿಗೆ ಮತದಾನ ಮಾಡಲು ತೆರಳುವ ಸಂದರ್ಭ ಇದು. ಅಷ್ಟೇ ಅಲ್ಲ, ಬೇಸಿಗೆ ರಜೆ, ವಾರಾಂತ್ಯದ ಕಾರಣ ಉಂಟಾಗಿರುವ ಪ್ರಯಾಣಿಕ ದಟ್ಟಣೆಯನ್ನು ನಿರ್ವಹಿಸುವುದಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ.
ಇದರಂತೆ, ಬೆಂಗಳೂರು- ಮಂಗಳೂರು- ಬೆಂಗಳೂರು, ಬೆಂಗಳೂರು-ಕೊಚುವೇಲಿ- ಬೆಂಗಳೂರು, ಯಶವಂತಪುರ- ಕುಂದಾಪುರ ಮತ್ತು ಕುಂದಾಪುರ- ಯಶವಂತಪುರ ನಡುವೆ ಒಂದು ಟ್ರಿಪ್ ರೈಲು ಸಂಚಾರವನ್ನು ಭಾರತೀಯ ರೈಲ್ವೆ ಪ್ರಕಟಿಸಿದೆ. ಈ ರೈಲುಗಳು ಏಪ್ರಿಲ್ 25 ಮತ್ತು ಏಪ್ರಿಲ್ 26 ರಂದು ಸಂಚರಿಸಲಿವೆ. ಈ ರೈಲುಗಳ ವಿವರ ಹೀಗಿದೆ.
1) ಬೆಂಗಳೂರು-ಮಂಗಳೂರು ಸೆಂಟ್ರಲ್-ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್
ರೈಲು ಸಂಖ್ಯೆ 06553/06554. ಎಸ್‌ಎಂವಿಟಿ ಬೆಂಗಳೂರು-ಮಂಗಳೂರು ಸೆಂಟ್ರಲ್- ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್ (1 ಟ್ರಿಪ್).
ಏಪ್ರಿಲ್ 25 ರಂದು ಸಂಜೆ 6 ಗಂಟೆಗೆ ರೈಲು ಸಂಖ್ಯೆ 06553 ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮಾರನೇ ದಿನ ಬೆಳಗ್ಗೆ 10 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಇದೇ ರೀತಿ, ರೈಲು ಸಂಖ್ಯೆ 06554 ಏಪ್ರಿಲ್ 26 ರಂದು ಮಧ್ಯಾಹ್ನ 12 ಗಂಟೆಗೆ ಹೊರಟು ಮಾರನೇ ದಿನ (ಏಪ್ರಿಲ್ 27) ನಸುಕಿನ 3 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ಈ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ಶೋರ್ನೂರ್, ತಿರೂರ್, ತಿರೂರ್, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು, ಕಾಸರಗೋಡು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ.
ಈ ರೈಲುಗಳಲ್ಲಿ ಒಟ್ಟು 19 ಬೋಗಿಗಳಿದ್ದು, 1 ಎಸಿ 2 ಟೈರ್, 4 ಎಸಿ 3 ಟೈರ್, 8 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳಿವೆ.
2) ಬೆಂಗಳೂರು - ಕೊಚುವೇಲಿ- ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್
ರೈಲು ಸಂಖ್ಯೆ 06549/06550. ಎಸ್‌ಎಂವಿಟಿ ಬೆಂಗಳೂರು- ಕೊಚುವೇಲಿ- ಎಸ್‌ಎಂವಿಟಿ ಬೆಂಗಳೂರು (1 ಟ್ರಿಪ್)
ಏಪ್ರಿಲ್ 25 ರಂದು ಮಧ್ಯಾಹ್ನ ನಂತರ 3.50ಕ್ಕೆ ರೈಲು ಸಂಖ್ಯೆ 06549 ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮಾರನೇ ದಿನ (ಏಪ್ರಿಲ್ 26) ಬೆಳಗ್ಗೆ 7 ಗಂಟೆಗೆ ಕೊಚುವೇಲಿ ತಲುಪಲಿದೆ. ಇದೇ ರೀತಿ, ರೈಲು ಸಂಖ್ಯೆ 06550 ಕೊಚುವೇಲಿಯಿಂದ ಏಪ್ರಿಲ್ 26 ರಂದು ಬೆಳಗ್ಗೆ 8 ಗಂಟೆಗೆ ಹೊರಟು, ಅದೇ ದಿನ ರಾತ್ರಿ 11.50ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶ್ಶೂರ್, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲ, ಚೆಂಗನ್ನೂರ್, ಕೊಲ್ಲಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ. ಈ ರೈಲುಗಳಲ್ಲಿ ಒಟ್ಟು 20 ಬೋಗಿಗಳಿದ್ದು, 4 ಎಸಿ 3 ಟೈರ್, ಎಸಿ 3 ಟೈರ್ ಎಕಾನಮಿ, 2 ಬ್ರೇಕ್ ಮತ್ತು ಲಗೇಜ್ ಕಮ್ ಜನರೇಟರ್ ಬೋಗಿಗಳು ಇವೆ.
3) ಯಶವಂತಪುರ- ಕುಂದಾಪುರ- ಯಶವಂತಪುರ ವನ್‌ವೇ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 06547/06548 ಯಶವಂತಪುರ- ಕುಂದಾಪುರ- ಯಶವಂತಪುರ ವನ್‌ವೇ ಎಕ್ಸ್‌ಪ್ರೆಸ್ (1 ಟ್ರಿಪ್)
ರೈಲು ಸಂಖ್ಯೆ 06547 ಯಶವಂತಪುರ - ಕುಂದಾಪುರ ವನ್‌ವೇ ಎಕ್ಸ್‌ಪ್ರೆಸ್ ಏಪ್ರಿಲ್ 25 ರಂದು ತಡರಾತ್ರಿ 11.20ಕ್ಕೆ ಯಶವಂತಪುರದಿಂದ ಹೊರಟು ಮಾರನೇ ದಿನ (ಏಪ್ರಿಲ್ 26) ಬೆಳಗ್ಗೆ 10.45ಕ್ಕೆ ಕುಂದಾಪುರ ತಲುಪಲಿದೆ. ಈ ರೈಲು ನೆಲಮಂಗಲ, ಕುಣಿಗಲ್, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಇದೇ ರೀತಿ ರೈಲು ಸಂಖ್ಯೆ 06548 ಕುಂದಾಪುರ - ಯಶವಂತಪುರ ಎಕ್ಸ್‌ಪ್ರೆಸ್, ಕುಂದಾಪುರದಿಂದ ಏಪ್ರಿಲ್ 26ರ ಬೆಳಗ್ಗೆ 11.20ಕ್ಕೆ ಹೊರಟು ಯಶವಂತಪುರಕ್ಕೆ ಅದೇ ದಿನ ರಾತ್ರಿ 21.50ಕ್ಕೆ ತಲುಪಲಿದೆ. ಈ ರೈಲು ಬಾರಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಕುಣಿಗಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಈ ರೈಲುಗಳಲ್ಲಿ 22 ಬೋಗಿಗಳಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.