ಕನ್ನಡ ಸುದ್ದಿ  /  Karnataka  /  Bommai S Cabinet Expansion Why Basvaraja Bommai S Cabinet Expansion Never Happened

Bommai's cabinet expansion: ಚುನಾವಣೆ ಎದುರಾಗಿದೆ; ಬೊಮ್ಮಾಯಿ ಸಂಪುಟ ವಿಸ್ತರಣೆ ಆಗಲೇ ಇಲ್ಲ...

Bommai's cabinet expansion Explainer: ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಸುದ್ದಿ ಅನೇಕ ಬಾರಿ ಪ್ರಕಟವಾಗಿದೆ. ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹುಟ್ಟಿಸುತ್ತ ಸಾಗಿದ, ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಎಂಬ ʻಮಹತ್ಕಾರ್ಯʼ ಈಡೇರಲೇ ಇಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ANI)

ಬಹುಶಃ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ (Bommai's cabinet expansion) ಸುದ್ದಿಯಾದಷ್ಟು ಬೇರಾವ ವಿಚಾರವೂ ಸುದ್ದಿ ಆಗಿರಲಿಕ್ಕಿಲ್ಲ! ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಸುದ್ದಿ ಅನೇಕ ಬಾರಿ ಪ್ರಕಟವಾಗಿದೆ. ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹುಟ್ಟಿಸುತ್ತ ಸಾಗಿದ, ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಎಂಬ ʻಮಹತ್ಕಾರ್ಯʼ ಈಡೇರಲೇ ಇಲ್ಲ.

ಸಚಿವ ಸಂಪುಟ ಸೇರಬಯಸುವ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೆಚ್ಚಾದಾಗೆಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶೀಘ್ರದಲ್ಲೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಖಾಲಿ ಸ್ಥಾನಗಳನ್ನು ಭರ್ತಿ ಮಾಡಿ ಆಡಳಿತಕ್ಕೆ ಚುರುಕು ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳುತ್ತಲೇ ಬಂದರು. ಆದರೆ, ಅದು ಈಡೇರಲೇ ಇಲ್ಲ.

ಈಗ ವಿಧಾನ ಸಭೆ ಚುನಾವಣೆ ಹೊಸ್ತಿಲಲ್ಲಿ ಇದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಆಡಳಿತಾರೂಢ ಬಿಜೆಪಿಯು ಪಕ್ಷದ ಒಂದು ವರ್ಗದ ನಾಯಕರ ಅಸಮಾಧಾನವನ್ನು ಯಶಸ್ವಿಯಾಗಿ ಮಟ್ಟಹಾಕಿರುವುದು ಗಮನಾರ್ಹ. ಆದರೆ, ಈಗ ಚುನಾವಣೆ ಎದುರಾಗಿದೆ. ಅಧಿಕಾರ ಚುಕ್ಕಾಣಿ ಉಳಿಸಬೇಕಾದ ಅನಿವಾರ್ಯತೆ. ಬೇರೆ ಬೇರೆ ರೀತಿಯಲ್ಲಿ ಅಸಮಾಧಾನ, ಭಿನ್ನಮತಗಳು ಒಳಗೊಳಗಿನ ಒಳಬೇಗುದಿಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಈ ಸನ್ನಿವೇಶದಲ್ಲಿ ಈಡೇರದ ಸಚಿವ ಸಂಪುಟ ವಿಸ್ತರಣೆ ಕಡೆಗೊಂದು ವಾರೆನೋಟ ಇಲ್ಲಿದೆ.

ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಒಂದು ವಾರದ ಬಳಿಕ 2021ರ ಆಗಸ್ಟ್‌ 3ರಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರ ಸಚಿವ ಸಂಪುಟಕ್ಕೆ 29 ಸಚಿವರು ಸೇರ್ಪಡೆಯಾದರು. ಮಂಜೂರಾಗಿದ್ದ 34 ಸಚಿವ ಸ್ಥಾನದ ಪೈಕಿ ಮುಖ್ಯಮಂತ್ರಿ ಸೇರಿ 30 ಸದಸ್ಯರ ಸಂಪುಟ ಸಿದ್ಧವಾಗಿತ್ತು.

ಆದರೆ, ಗುತ್ತಿಗೆದಾರರೊಬ್ಬರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಇದಾಗಿ ಸಚಿವ ಉಮೇಶ್ ಕತ್ತಿ ಅವರ ಸಾವಿನ ಕಾರಣ ಮತ್ತೊಂದು ಸಚಿವ ಸ್ಥಾನ ಖಾಲಿ ಆಯಿತು. ಅಲ್ಲಿಗೆ ಸಚಿವ ಸಂಪುಟ ಸದಸ್ಯ ಬಲ 28ಕ್ಕೆ ಇಳಿಯಿತು.

ಸಚಿವ ಸಂಪುಟ ವಿಸ್ತರಣೆ ಅಡ್ಡಿ ಆದ ಮೂಲ ಬಿಜೆಪಿಗರು ವರ್ಸಸ್‌ ವಲಸಿಗರು

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿರುವಾಗ ʻಮೂಲ ಬಿಜೆಪಿಗರುʼ ಅಥವಾ ʻನಿಷ್ಠರುʼ ಮತ್ತು ʻವಲಸಿಗರುʼ ಬಣ ಜಗಳ ಬಹಿರಂಗವಾಗಿ ವ್ಯಕ್ತವಾಗಿರಲಿಲ್ಲ. ಯಾವಾಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರೋ ಈ ಬಣಗಳ ತಿಕ್ಕಾಟ ಸ್ಪಷ್ಟರೂಪು ಪಡೆಯಿತು. ಸಚಿವ ಸಂಪುಟದಲ್ಲಿ ಹೊರಗಿನಿಂದ ಬಂದವರ ಸಂಖ್ಯೆ ಹೆಚ್ಚಿದೆ. ಮೂಲ ಬಿಜೆಪಿಯವರ ಸಂಖ್ಯೆ ಕಡಿಮೆ ಇದೆ ಎಂಬುದು ಗಮನಸೆಳೆಯಿತು. ಅಸಮಾಧಾನದ ಹೊಗೆ ಹೊರಗೆ ಕಾಣಿಸಿತು.

ಖಾಲಿ ಇರುವ ಆರು ಸಚಿವ ಸ್ಥಾನ ಭರ್ತಿ ಮಾಡುವುದಕ್ಕೆ ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂಬ ವಿಚಾರ ಬಹಿರಂಗವಾಯಿತು. ಕೂಡಲೇ ಆಕಾಂಕ್ಷಿಗಳ ಒತ್ತಡದ ತೀವ್ರತೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವರಿಕೆ ಆಯಿತು. ಪಕ್ಷದ ವರಿಷ್ಠರಿಗೂ ಇದರ ಅರಿವು ಸ್ಪಷ್ಟವಾಗಿತ್ತು. ಅಂದಿನಿಂದ ಸಚಿವ ಸಂಪುಟ ವಿಸ್ತರಣೆಯನ್ನು ಇಂದಿನವರೆಗೂ ಮುಖ್ಯಮಂತ್ರಿ ಬೊಮ್ಮಾಯಿ ನಿರಾಕರಿಸಿದ್ದೇ ಇಲ್ಲ!

ಕೇಂದ್ರದಲ್ಲಿರುವ ವರಿಷ್ಠರು ಒಪ್ಪಿಗೆ ನೀಡಿದರೆ ಕೂಡಲೇ ಸಚಿವ ಸಂಪುಟ ವಿಸ್ತರಣೆ ಎಂಬ ಹೇಳಿಕೆಯನ್ನು ಪದೇಪದೆ ಹೇಳುತ್ತಲೇ ಬಂದರು. ಇದೇ ವೇಳೆ, ಪಕ್ಷದ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೇರಿ ಹೈಕಮಾಂಡ್ ಪ್ರತಿನಿಧಿಗಳು ಸಚಿವ ಸಂಪುಟ ವಿಸ್ತರಣೆ ಏನಿದ್ದರೂ ʻಮುಖ್ಯಮಂತ್ರಿಯ ವಿಶೇಷ ಹಕ್ಕುʼ ಮತ್ತು ನಾಯಕತ್ವದೊಂದಿಗೆ ಸಮಾಲೋಚಿಸಿ ಅದನ್ನು ನಿರ್ಧರಿಸುತ್ತಾರೆ ಎಂದು ಹೇಳುತ್ತಲೇ ಬಂದರು. ಅಲ್ಲಿಗೆ ಸಚಿವ ಸಂಪುಟ ವಿಸ್ತರಣೆಯ ಚೆಂಡು ಒಮ್ಮೆ ಮುಖ್ಯಮಂತ್ರಿ ಕೋರ್ಟ್‌ಗೆ ಮತ್ತೊಮ್ಮೆ ಪಕ್ಷದ ಕೋರ್ಟಿಗೆ ಹೋಗುತ್ತಲೇ ಇತ್ತು! ಒಂದು ನಿರ್ಧಾರ ಆಗಲೇ ಇಲ್ಲ!

ಸಚಿವ ಸಂಪುಟ ವಿಸ್ತರಣೆಯ ವಿಚಾರ ಪ್ರಸ್ತಾಪ ಆದಾಗೆಲ್ಲ ಅಂದರೆ ಆ ಒತ್ತಡ ಹೆಚ್ಚಿದಾಗ ಎಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻದೆಹಲಿ ಯಾನʼ ವಾಡಿಕೆಯಾಗಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ದೆಹಲಿ ಹೋಗುತ್ತಾರೆ ಎಂದಾಗೆಲ್ಲ ಕೆಲವು ಆಕಾಂಕ್ಷಿಗಳ ದೆಹಲಿ ಪ್ರವಾಸ ಕೂಡ ರೂಢಿಯಾಗಿ ಹೋಗಿತ್ತು. ಅದು ಲಾಬಿಗಾಗಿಯೇ ಹೊರತು ಬೇರಾವ ಉದ್ದೇಶವೂ ಅಲ್ಲಿರಲಿಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅ‍ಧ್ಯಕ್ಷ ಜೆ.ಪಿ.ನಡ್ಡಾ ಅಥವಾ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜತೆಗೆ ಚರ್ಚಿಸಿ ಹಿಂದಿರುಗುತ್ತಿದ್ದರೇ ಹೊರತು, ಪಾಸಿಟಿವ್‌ ನ್ಯೂಸ್‌ ಎಂದಿಗೂ ಹೇಳಲೇ ಇಲ್ಲ!

ಬೊಮ್ಮಾಯಿ ಕೆಪಾಸಿಟಿಗೆ ಸವಾಲಾಗಿತ್ತು ಸನ್ನಿವೇಶ

ಉತ್ತರಾಖಂಡ ಮತ್ತು ಗುಜರಾತ್‌ ವಿಧಾನಸಭೆ ಚುನಾವಣೆಗೆ ಮುನ್ನ ಅಲ್ಲಿ ನಡೆದ ರಾಜಕೀಯ ಸನ್ನಿವೇಶಗಳನ್ನು, ವಿದ್ಯಮಾನಗಳನ್ನು ಗಮನಿಸುತ್ತಿದ್ದ ರಾಜ್ಯ ಬಿಜೆಪಿ ನಾಯಕರು, ಚುನಾವಣೆಗೆ ಮುನ್ನ ರಾಜ್ಯದಲ್ಲೂ ಸಚಿವ ಸಂಪುಟ ವಿಸ್ತರಣೆ ಆಗುವುದೆಂಬ ಭಾರಿ ಭರವಸೆಯನ್ನು ಹೊಂದಿದ್ದರು. ಬಿಜೆಪಿ ವಲಯದಲ್ಲಿ ಇದು ಭಾರಿ ಸದ್ದನ್ನೂ ಉಂಟುಮಾಡಿತ್ತು.

ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆ ಆಗಲಿದೆ. ಹಳಬರನ್ನು ಕೈಬಿಟ್ಟು ಹೊಸಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ವಿಚಾರ ಚರ್ಚೆಗಳಲ್ಲಿ ಮುನ್ನೆಲೆಗೆ ಬಂದಿತ್ತು. ಸಚಿವ ಸ್ಥಾನ ಆಕಾಂಕ್ಷಿಗಳು ಕೂಡ ಬಹಳ ಆಶಾವಾದಿಗಳಾಗಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಎಲ್ಲವೂ ಮರೆಯಾದವು. ಆಸೆ ಇಟ್ಟುಕೊಂಡಿದ್ದವರ ಮುಖದಲ್ಲಿ ನಿರಾಸೆ ಕಾಣಿಸಿತ್ತು. ಕ್ರಮೇಣ ಚುನಾವಣೆಯ ರಂಗು ಏರಿತೇ ವಿನಾ ಸಚಿವ ಸಂಪುಟ ವಿಸ್ತರಣೆಯ ಲಕ್ಷಣ ಗೋಚರಿಸಲಿಲ್ಲ!

ಪಕ್ಷದ ಒಳವಲಯ ಮತ್ತು ಚುನಾವಣಾ ವೀಕ್ಷಕರ ಪ್ರಕಾರ, ಸಚಿವ ಸಂಪುಟ ವಿಸ್ತರಣೆ ಪಕ್ಷದ ಹಿತಕ್ಕೆ ಮಾರಕ ಎಂಬ ಅಭಿಪ್ರಾಯ ಮೇಲ್ಮಟ್ಟದಲ್ಲಿ ರೂಪುಗೊಂಡಿತ್ತು. ತಳಮಟ್ಟದ ಕಾರ್ಯಕರ್ತರ ಅಂತರಂಗ ಪಕ್ಷದ ವರಿಷ್ಠರ ಬಳಿ ಅನಾವರಣಗೊಂಡಿತ್ತು. ಬೊಮ್ಮಾಯಿ (ಜನತಾ ಪರಿವಾರ) ಹೊರಗಿನವರು ಎಂಬ ಭಾವನೆ ಬಲವಾಗುತ್ತ ಹೋಗಿರುವುದು ಸ್ಪಷ್ಟವಾಗಿತ್ತು. ಆಕಾಂಕ್ಷಿಗಳ ಪೈಕಿ ಒಬ್ಬರನ್ನು ಸಚಿವ ಸಂಪುಟಕ್ಕೆ ಸೇರಿಸಿದರೂ, ಪಕ್ಷದೊಳಗಿನ ಸಮತೋಲನ ಕಾಯುವುದು ಕಷ್ಟವಾದೀತು. ಬೊಮ್ಮಾಯಿ ಅವರಿಗೆ ಬಂಡಾಯ ಎದುರಿಸುವ ವಿಚಾರದಲ್ಲಿ, ಪಕ್ಷದ ವರಿಷ್ಠರಿಗೂ ಬೊಮ್ಮಾಯಿ ನಾಯಕತ್ವ ಸರ್ಕಾರದ ಸಮತೋಲನ ನಿಭಾಯಿಸುವ ವಿಚಾರದಲ್ಲಿ ʻವಿಶ್ವಾಸʼ ಸಾಕಾಗಲಿಲ್ಲ.

ಶಾಸಕಾಂಗ ಪಕ್ಷದೊಳಗಿನ ಸಮತೋಲನ ಮತ್ತು ಸಚಿವ ಸಂಪುಟ

ಕೆ.ಎಸ್‌. ಈಶ್ವರಪ್ಪ, ರಮೇಶ್‌ ಜಾರಕಿಹೊಳೆ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ. ಅವರ ಆಕ್ರೋಶ, ಅಸಮಾಧಾನ ಬಹಿರಂಗವಾಗಿ ವ್ಯಕ್ತವಾಗಿತ್ತು. ಕೆ.ಎಸ್.‌ ಈಶ್ವರಪ್ಪ ಬಿಜೆಪಿಯ ಹಿರಿಯ ನಾಯಕರು. ಅವರ ಅಸಮಾಧಾನದ ಪರಿ ಅಧಿವೇಶನಕ್ಕೆ ಬರುವುದಿಲ್ಲ ಎನ್ನುವ ಮಟ್ಟಕ್ಕೆ ಹೋಗಿತ್ತು. ಇನ್ನೊಂದೆಡೆ, ರಮೇಶ್‌ ಜಾರಕಿಹೊಳಿ ಅವರದ್ದು. ಅವರು ಬಿಜೆಪಿ ಸರ್ಕಾರ ರಚನೆಗಾಗಿ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿ ಕಾಂಗ್ರೆಸ್‌ ಪಕ್ಷ ಬಿಟ್ಟು ಬಂದವರು. ದೆಹಲಿಗೂ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದರು ರಮೇಶ್‌ ಜಾರಕಿಹೊಳಿ. ಆದರೆ ಸಚಿವ ಸಂಪುಟ ಸೇರುವ ಇಬ್ಬರ ಕನಸು ನನಸಾಗಲೇ ಇಲ್ಲ!

ಪ್ರಸಕ್ತ ಬೊಮ್ಮಾಯಿ ಸಂಪುಟದಲ್ಲಿ ಬಿಜೆಪಿ ಸರ್ಕಾರ ರಚನೆಗಾಗಿ ಹೊರಗಿನಿಂದ ಬಂದವರ ಬಹುತೇಕ ಕಾಂಗ್ರೆಸ್‌- ಜೆಡಿಎಸ್‌ನಿಂದ ಬಂದವರ ಸಂಖ್ಯೆಯೇ ಹೆಚ್ಚಿದೆ. ಬಿಎಸ್‌ವೈ ಅವರ ಅತ್ಯಾಪ್ತರಾಗಿರುವ ಕಾರಣ, ಅವರ ಶಿಫಾರಸಿನಂತೆಯೇ ಮುಖ್ಯಮಂತ್ರಿ ಸ್ಥಾನ ಬೊಮ್ಮಾಯಿ ಅವರ ಪಾಲಿಗೆ ಒಲಿದಿದೆ.

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಹೇಳಿಕೆಯೊಂದು ಇತ್ತೀಚೆಗೆ ಗಮನಸೆಳೆದಿತ್ತು. ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಸಂಪುಟ ಸೇರುವುದನ್ನು ತಡೆಯಲು ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆ ಮಾಡ್ತಾ ಇಲ್ಲ. ಅದಕ್ಕಾಗಿಯೇ ಅವರು ಆರು ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿದ್ದಾರೆ ಎಂದು ಹೇಳಿದ್ದರು.

ನಾಲ್ಕನೇ ಒಂದಂಶ ಖಾತೆಗಳನ್ನು ಸ್ವತಃ ಬೊಮ್ಮಾಯಿಯೇ ನಿಭಾಯಿಸುತ್ತಿದ್ಧಾರೆ. ಅರ್ಥಾತ್‌ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಬೆಂಗಳೂರು ನಗರ ಅಭಿವೃದ್ಧಿ, ಹಣಕಾಸು ಖಾತೆ ಸೇರಿ 8 ಖಾತೆಗಳು ಮುಖ್ಯಮಂತ್ರಿಯ ಬಳಿಯೇ ಇದೆ. ಹಾಗೆ, ಸಂಕಷ್ಟಮಯ ಸನ್ನಿವೇಶದಲ್ಲೂ ನಿರ್ಧಾರ ತೆಗೆದುಕೊಳ್ಳದೆ, ಕೆಪಾಸಿಟಿಗೆ ಸವಾಲಾಗಿ ಬಂದ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತ ಚುನಾವಣೆ ತನಕ ಬಂದ ಬೊಮ್ಮಾಯಿ ಕ್ರಮ ಯಶಸ್ವಿ ಎಂದು ಹೇಳುವುದೋ? ಅಥವಾ ಪಕ್ಷದ ಅಪೇಕ್ಷೆಯಂತೆ ʻಶಾಸಕಾಂಗ ಪಕ್ಷದೊಳಗಿನ ಸಮತೋಲನ ಕಾಪಾಡಿದ್ದಾರೆʼ ಎಂದು ಹೇಳುವುದೋ?. ಯಾವುದೇ ಇರಲಿ ಚುನಾವಣೆ ಎದುರಾಗಿದೆ. ಜನಾದೇಶ ಪಡೆಯಲು ಈಗ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಸಜ್ಜಾಗಿರುವುದು ವಾಸ್ತವ.