ಕನ್ನಡ ಸುದ್ದಿ  /  ಕರ್ನಾಟಕ  /  Congress: ಮೊದಲ ಅಧಿವೇಶನ ದಿನವೇ ವಿಧಾನಸೌಧ ಮುಂದೆ ಗೋಮೂತ್ರ ಸಿಂಪಡಿಸಿ, ವಿಶೇಷ ಪೂಜೆ ಮಾಡಿದ ಕಾಂಗ್ರೆಸ್‌ ಕಾರ್ಯಕರ್ತರು

Congress: ಮೊದಲ ಅಧಿವೇಶನ ದಿನವೇ ವಿಧಾನಸೌಧ ಮುಂದೆ ಗೋಮೂತ್ರ ಸಿಂಪಡಿಸಿ, ವಿಶೇಷ ಪೂಜೆ ಮಾಡಿದ ಕಾಂಗ್ರೆಸ್‌ ಕಾರ್ಯಕರ್ತರು

ಇಂದಿನ ವಿಧಾನಸಭೆ ಅಧಿವೇಶನ ಆರಂಭಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಮುಂಭಾಗದಲ್ಲಿ ಗೋಮೂತ್ರ ಸಿಂಪಡಿಸಿ, ವಿಶೇಷ ಪೂಜೆ ನೆರವೇರಿಸಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರು ವಿಧಾನಸೌಧ ಮುಂಭಾಗದಲ್ಲಿ ಗೋಮೂತ್ರ ಸಿಂಪಡಣೆ ಮಾಡುತ್ತಿರುವುದು
ಕಾಂಗ್ರೆಸ್‌ ಕಾರ್ಯಕರ್ತರು ವಿಧಾನಸೌಧ ಮುಂಭಾಗದಲ್ಲಿ ಗೋಮೂತ್ರ ಸಿಂಪಡಣೆ ಮಾಡುತ್ತಿರುವುದು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದ ನೂತನ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ (ಮೇ 22, ಸೋಮವಾರ) ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಇವತ್ತು ಅಧಿವೇಶನ ಆರಂಭಕ್ಕೂ ಮುನ್ನವೇ ಕಾಂಗ್ರೆಸ್‌ ಕಾರ್ಯಕರ್ತರು (Congress Workers) ವಿಧಾನಸೌಧದ (Vidhana Soudha) ಮುಂಭಾಗದಲ್ಲಿ ಗೋಮೂತ್ರ ಸಿಪಂಡಿಸಿ ಅರ್ಚಕರ ಮೂಲಕ ವಿಶೇಷ ಪೂಜೆ ಮಾಡಿಸಿದ್ದಾರೆ.

ಹೊಸದಾಗಿ ಚುನಾಯಿತವಾಗಿರುವ ಕಾಂಗ್ರೆಸ್ ಸರ್ಕಾರವು ತನ್ನ ಮೊದಲ ಅಧಿವೇಶನ ನಡೆಸಲು ಮುನ್ನ ವಿಧಾನಸೌಧವನ್ನು ಶುದ್ದೀಕರಿಸುತ್ತಿದ್ದೇವೆ ಎಂದು ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.

ಇಂದಿನಿಂದ ಆರಂಭವಾಗಿರುವ ವಿಧಾನಸಭೆಯ ಅಧಿವೇಶನವು ಬುಧವಾರ ಕೊನೆಗೊಳ್ಳಲಿದೆ. ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, ಹಿರಿಯ ಕಾಂಗ್ರೆಸ್‌ ಶಾಸಕ ಆರ್‌ ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸೋಮವಾರ, ಮಂಗಳವಾರ ಹಾಗೂ ಬುಧವಾರ ಮೂರು ದಿನಗಳ ಕಾಲ ವಿಧಾನಸಭೆ ಅಧಿವೇಶವನ್ನು ಕರೆಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮೊನ್ನೆ ಘೋಷಣೆ ಮಾಡಿದ್ದರು.

ಮೇ 24ರ ಮೊದಲು ಹೊಸ ವಿಧಾನಸಭೆ ರಚನೆಯಾಗಬೇಕು. ಹಿರಿಯ ಶಾಸಕ ಆರ್‌ ವಿ ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದ್ದು, ಶಾಸಕರಿಗೆ ಪ್ರಮಾಣ ವಚನ ಬೋಧಿಸಲು ಮನವಿ ಮಾಡಲಾಗಿದೆ ಎಂದಿದ್ದರು.

ಕಂಠೀರವ ಕ್ರೀಡಾಂಗಣದಲ್ಲಿ ಮೇ 20 ರಂದು (ಶನಿವಾರ) ನಡೆದಿದ್ದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಸಿಎಂ, ಡಿಸಿಎಂ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ, ಡಾ ಜಿ ಪರಮೇಶ್ವರ್, ಎಂಬಿ ಪಾಟೀಲ್, ಕೆಜೆ ಜಾರ್ಜ್, ಕೆಎಚ್‌ ಮುನಿಯಪ್ಪ, ಸತೀಶ್‌ ಜಾರಕಿಹೊಳಿ, ಜಮೀರ್ ಅಹ್ಮದ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮುಖ್ಯಮಂತ್ರಿ, ಡಿಸಿಎಂ ಹಾಗೂ ಸಚಿವರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇದೇ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ರಾಜ್ಯದ 224 ಕ್ಷೇತ್ರಗಳ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆದಿತ್ತು. ಮೇ 13 ರಂದು ಪ್ರಕಟವಾಗಿದ್ದ ಫಲಿತಾಂಶದಲ್ಲಿ ಕಾಂಗ್ರೆಸ್‌ 135 ಸ್ಥಾನಗಳ ಸ್ಪಷ್ಟ ಬಹುಮತದ ಭರ್ಜರಿ ಗೆಲುವು ಸಾಧಿಸಿತ್ತು. ಬಿಜೆಪಿ 66 ಸ್ಥಾನ ಹಾಗೂ ಜೆಡಿಎಸ್ 19 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದವು.

IPL_Entry_Point