CM Siddaramaiah: ಜೀರೋ ಟ್ರಾಫಿಕ್ ಸೌಲಭ್ಯ ಬೇಡವೆಂದ ಸಿಎಂ ಸಿದ್ದರಾಮಯ್ಯ; ಹಾರತುರಾಯಿ, ಶಾಲು ಸ್ವೀಕರಿಸಲ್ಲ; ಕಾಣಿಕೆಯಾಗಿ ಪುಸ್ತಕ ಕೊಡಬಹುದು
ಗಣ್ಯರ ಸುಗಮ ಸಂಚಾರಕ್ಕೆ ನಗರದಲ್ಲಿ ಟ್ರಾಫಿಕ್ ಪೊಲೀಸರು ಸಾರ್ವಜನಿಕರ ಸಂಚಾರವನ್ನು ಕೆಲವು ನಿಮಿಷಗಳು ಮಟ್ಟಿಗೆ ತಡೆ ಹಿಡಿಯುತ್ತಾರೆ. ಇದರಿಂದ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗುತ್ತದೆ. ಇದೀಗ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅಧಿಕಾರ ಸ್ವೀಕರಿಸಿದ ಮರುದಿನವೇ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಇದರಿಂದಾಗಿ ನಗರದಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಸಂಚಾರ ದಟ್ಟಣೆಯ ಕಿರಿಕಿರಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ.
ಸಿಎಂ ಸಿದ್ದರಾಮಯ್ಯ ಅವರು ತಮಗೆ ನೀಡಿರುವ ಜೀರೋ ಟ್ರಾಫಿಕ್ (Zero Traffic) ಸೌಲಭ್ಯ ಬೇಡ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಜೀರೊ ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡ ಈ ಹಿಂದೆ ಜೀರೋ ಟ್ರಾಫಿಕ್ ಪ್ರೋಟೋಕಾಲ್ ಅನ್ನು ನಿರಾಕರಿಸಿದ್ದರು. ಇದೀಗ ಸಿದ್ದರಾಮಯ್ಯ ಅವರು ಜೀರೋ ಟ್ರಾಫಿಕ್ ಬೇಡ ಎನ್ನುತ್ತಿದ್ದಾರೆ.
ಹಾರ ತುರಾಯಿ ಬೇಡ ಕಾಣಿಯಾಗಿ ಪುಸ್ತಕ ಕೊಟ್ರೆ ಸಾಕು
ಜೀರೋ ಟ್ರಾಫಿಕ್ ಸೌಲಭ್ಯ ಬೇಡ ಎಂದಿರವ ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕರು ತಮಗೆ ಗೌರವ ಹಾಗೂ ಸನ್ಮಾನದ ರೂಪದಲ್ಲಿ ಹಾರ ತುರಾಯಿ ಶಾಲು ಶಲ್ಯಗಳನ್ನು ನೀಡಬಾರದು ಅಂತ ಹೇಳಿದ್ದಾರೆ. ಒಂದು ವೇಳೆ ಪ್ರೀತಿ-ಗೌರವವಾಗಿ ಕಾಣಿಯಾಗಿ ನೀಡಬೇಕೆನಿಸಿದರೆ ಪುಸ್ತಕಗಳನ್ನು ನೀಡಿ ಅಂತ ಹೇಳಿದ್ದಾರೆ.
ಈ ಬಗ್ಗೆಯೂ ಟ್ವೀಟ್ ಮಾಡಿರುವ ಸಿಎಂ, ನಾಳೆಯಿಂದ (ಮೇ 22, ಸೋಮವಾರ) ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ. ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯ.
ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು. ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ ಎಂದು ಹೇಳಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ನಿನ್ನೆ (ಮೇ 20, ಶನಿವಾರ) ನಡೆದಿದ್ದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಸಿಎಂ, ಡಿಸಿಎಂ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಡಾ ಜಿ ಪರಮೇಶ್ವರ್, ಎಂಬಿ ಪಾಟೀಲ್, ಕೆಜೆ ಜಾರ್ಜ್, ಕೆಎಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.