ಕನ್ನಡ ರಾಜ್ಯೋತ್ಸವ 2024: ಅಕ್ಕಡಿ ಬೇಸಾಯ, ಬೆರಕೆ ಸೊಪ್ಪಿನ ಜ್ಞಾನದ ಖನಿ ಚಾಮರಾಜನಗರದ ಪುಟ್ಟೀರಮ್ಮನಿಗೆ ರಾಜ್ಯೋತ್ಸವ ಪುರಸ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಅಕ್ಕಡಿ ಬೇಸಾಯ, ಬೆರಕೆ ಸೊಪ್ಪಿನ ಜ್ಞಾನದ ಖನಿ ಚಾಮರಾಜನಗರದ ಪುಟ್ಟೀರಮ್ಮನಿಗೆ ರಾಜ್ಯೋತ್ಸವ ಪುರಸ್ಕಾರ

ಕನ್ನಡ ರಾಜ್ಯೋತ್ಸವ 2024: ಅಕ್ಕಡಿ ಬೇಸಾಯ, ಬೆರಕೆ ಸೊಪ್ಪಿನ ಜ್ಞಾನದ ಖನಿ ಚಾಮರಾಜನಗರದ ಪುಟ್ಟೀರಮ್ಮನಿಗೆ ರಾಜ್ಯೋತ್ಸವ ಪುರಸ್ಕಾರ

ಕೃಷಿ ಎಂದರೆ ಖುಷಿ ಎನ್ನುವ ಮಾತಿದೆ. ಹಾಗೆ ಕೃಷಿ ಮಾಡುತ್ತಲೇ ಖುಷಿಯನ್ನು ಹಂಚುತ್ತಿರುವ, ಸೊಪ್ಪುಗಳನ್ನು ಬೆಳೆದು ಅದರ ಕುರಿತು ಜನಪದ ಗೀತೆಗಳ ಮೂಲಕ ಜನರಿಗೆ ತಲುಪಿಸುವ ಚಾಮರಾಜನಗರದ ಪುಟ್ಟೀರಮ್ಮ ಅವರ ಬದುಕು ಮಾದರಿ. ಅವರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಈ ಕುರಿತು ಲೇಖಕ ಮಲ್ಲಿಕಾರ್ಜುನ ಹೊಸ ಪಾಳ್ಯ ಬರೆದಿರುವ ಲೇಖನವಿದು.

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಚಾಮರಾಜನಗರದ ಕೃಷಿ ಮಹಿಳೆ ಪುಟ್ಟೀರಮ್ಮ.
ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಚಾಮರಾಜನಗರದ ಕೃಷಿ ಮಹಿಳೆ ಪುಟ್ಟೀರಮ್ಮ.

.ಕೃಷಿಯನ್ನು ಜನಪದದ ರೂಪದಲ್ಲೂ ಗ್ರಾಮೀಣರು ನೋಡುವ ಪರಿಪಾಠವಿದೆ. ಹೀಗೆ ಕೃಷಿಯೊಂದಿಗೆ ಜೀವನವನ್ನು ಕಂಡುಕೊಂಡು ಅದಕ್ಕೊಂದು ಅರ್ಥ ನೀಡಿ ಬದುಕು ರೂಪಿಸಿಕೊಂಡು ಚಾಮರಾಜನಗರ ಜಿಲ್ಲೆಯ ಅಪ್ಪಟ ಗ್ರಾಮೀಣ ಮಹಿಳೆಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಸಾಧಕರಿಗೆ ಪ್ರಶಸ್ತಿ ನೀಡುವ ವಾಡಿಕೆ ಮೊದಲಿನಿಂದಲೂ ಇದ್ದರೂ ಹೀಗೆ ಗ್ರಾಮೀಣ ಭಾಗದ ಕೃಷಿಕರನ್ನೇ ರಾಜ್ಯೋತ್ಸವಕ್ಕೂ ಆಯ್ಕೆ ಮಾಡುತ್ತಿರುವುದು ವಿಶೇಷ. ಅದರಲ್ಲೂ ಕೃಷಿಯನ್ನೇ ನಂಬಿ ಅದಕ್ಕೆ ಗೌರವ ತರುವಂತರವರನ್ನೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆ ಮಾಡಲಾಗಿದೆ.

ಬೆಳದಿಂಗಳ ಬೆಳಕಲ್ಲಿ ಅರ್ಜುನ ರಾಯ ಅವರೆ ಬಿತ್ತಾಕೆ ಹೋಗಿ ಅವರೆಯ ಸಾಲೆಲ್ಲ ಸರಮುತ್ತು ಕಿರುಗೆಜ್ಜೆ ಮೂಡಪ್ಪ ಬೆಳದಿಂಗಳೇ, ಬೆಳದಿಂಗಳ ಬೆಳಕಲ್ಲಿ ಅರ್ಜುನ ರಾಯ ಕಳ್ಳೆ ಬಿತ್ತಾಕೆ ಹೋಗಿ ಕಳ್ಳೆಯ ಸಾಲೆಲ್ಲ ಸರಮುತ್ತು ಕಿರುಗೆಜ್ಜೆ ಮೂಡಪ್ಪ ಬೆಳದಿಂಗಳೇ. ಇದು ಗ್ರಾಮೀಣ ಭಾಗದ ಕೃಷಿ ಹಾಡು. ಈ ಬಾರಿ ಕೃಷಿ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಚಾಮರಾಜನಗರದ ಕೃಷಿಕ ಮಹಿಳೆ ಪುಟ್ಟೀರಮ್ಮ ಅಕ್ಕಡಿ ಬೇಸಾಯದ ಕುರಿತು ಹೇಳುವ ಪದ ಇದು. ಇಂತಹ ಹತ್ತಾರು ಪದಗಳ ಕಣಜವೇ ಆಗಿದ್ದಾರೆ ಇವರು. ದಶಕಗಳಿಂದ ಕೃಷಿಯನ್ನು ಖುಷಿಯಿಂದಲೇ ಮಾಡಿಕೊಂಡು ಬಂದವರು ಪುಟ್ಟೀರಮ್ಮ.

ತಮ್ಮ ಪಣ್ಯದಹುಂಡಿಯ ಸಣ್ಣ ಜಮೀನಲ್ಲಿ ತಾನು ಮಾಡುವ ವಿಧವಿಧದ ಅಕ್ಕಡಿ ಬಿತ್ತನೆಯು ಮಹಾಭಾರತದ ಕಾಲದಲ್ಲಿ ಕುಂತಿ-ಅರ್ಜುನರು ಬೆಳದಿಂಗಳ ಬೆಳಕಿನಲ್ಲಿ ಮಾಡುತ್ತಿದ್ದ ಬಿತ್ತನೆಯ ಮುಂದುವರೆದ ಭಾಗವೇ ಎನ್ನುವಂತೆ ರಾಗವಾಗಿ ಹಾಡುತ್ತಾ ವಿವರಿಸುವ ಅವರ ನೆನಪಿನ ಶಕ್ತಿ ಅಪರೂಪ. ವಾರಗಟ್ಟಳೆ ಹೇಳಿದರೂ ಅವರ ಪದಗಳ ಖಜಾನೆ ಮತ್ತು ಅಕ್ಕಡಿ ಬೇಸಾಯದ ಮಾಹಿತಿ ಖಾಲಿಯಾಗದು.

ಸಾಮಾನ್ಯ ಕಾಯಿಲೆಗಳಿಗೆ ಸೊಪ್ಪಿನ ಸಾರಲ್ಲೇ ಮದ್ದನ್ನು ಕಂಡುಕೊಂಡಿದ್ದಾರೆ.ಅದಕ್ಕೆ ಹಾಡಿನ ರೂಪ ನೀಡಿ ಜನರಿಗೆ ಸುಲಭವಾಗಿ ತಿಳಿಸಿಕೊಡುವುದು ಪುಟ್ಟೀರಮ್ಮ ಅವರ ವಿಶೇಷ.

ನೂರಕ್ಕೂ ಹೆಚ್ಚು ಬೆರಕೆ ಸೊಪ್ಪುಗಳನ್ನು ಗುರುತಿಸುವ ಮತ್ತು ಕುಯ್ಯುವ ಅಪಾರ ಜ್ಞಾನವಂತೆ. ಬೆರಕೆ ಸೊಪ್ಪಿನ ಬಳಕೆಯೇ ನಶಿಸುತ್ತಿರುವ ಕಾಲಮಾನದಲ್ಲಿ ಅದರ ಜ್ಞಾನವನ್ನು ತಮ್ಮ ಗ್ರಾಮ ಎಳೆಯ ಹೆಣ್ಣುಮಕ್ಕಳಿಗೂ ಕಲಿಸುತ್ತಿರುವುದು ಇವರ ವಿಶೇಷ. ಒಣಭೂಮಿ ಕೃಷಿ, ಅಕ್ಕಡಿ ಬೇಸಾಯ ಹಾಗೂ ಬೆರಕೆ ಸೊಪ್ಪುಗಳು ನಮ್ಮ ಬೇಸಾಯದಿಂದ ಕಣ್ಮರೆಯಾಗುತ್ತಿರುವ ದಿನಗಳಿವು. ಇಂತಹ ಸಮಯದಲ್ಲಿ ಇವುಗಳ ಪ್ರತಿನಿಧಿಯಂತಿರುವ ಪುಟ್ಟೀರಮ್ಮನನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ. ಇಕ್ರಾ ಸಂಸ್ಥೆಯು ಇವರ ಬಗ್ಗೆ"ಪುಟ್ಟೀರಮ್ಮನ ಪುರಾಣ ಎಂಬ ಒಳ್ಳೆಯ ಪುಸ್ತಕ ಪ್ರಕಟಿಸಿದೆ.

ಶಾಲೆ ಕಲಿಯದ “ಪ್ರೊಫೆಸರ್‌ ಪುಟ್ಟೀರಮ್ಮ”ನಿಗೆ ಈಗ 86 ವರ್ಷ. ದೃಷ್ಟಿ ಮಸುಕಾಗುತ್ತಿದೆ. ಇವರಿಗೆ ಪ್ರಶಸ್ತಿ ದೊರೆತಿರುವುದು ಸುಸ್ಥಿರ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಈ ಪ್ರಶಸ್ತಿಯಿಂದ ಸಮಾಜದಲ್ಲಿ ಅಕ್ಕಡಿ ಬೇಸಾಯ ಮತ್ತು ಬೆರಕೆ ಸೊಪ್ಪುಗಳ ಬಗೆಗೆ ಹೆಚ್ಚು ಒಲವು ಮೂಡಲಿ.

- ಮಲ್ಲಿಕಾರ್ಜುನ ಹೊಸಮಾಳ್ಯ,

Whats_app_banner