Karnataka Budget 2023:ಅನ್ನದಾತರಿಗೆ ಶೂನ್ಯ ಸಾಲದ ಮಿತಿ ಏರಿಕೆ: ದೀರ್ಘಾವಧಿ ಸಾಲದಲ್ಲೂ ಹೆಚ್ಚಳ, ಹಲ ಉತ್ಪನ್ನಗಳಿಗೆ ನಂದಿನಿ ಬ್ರಾಂಡಿಂಗ್
ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಸಹಿತ ಕೃಷಿ ಸಂಬಂಧಿತ ಇಲಾಖೆಗಳಿಗೆ ನೀಡಿರುವ ಯೋಜನೆ, ಅನುದಾನದ ವಿವರ ಇಲ್ಲಿದೆ.
ಬೆಂಗಳೂರು: ತಮ್ಮ ಆಯ್ಯವ್ಯಯದಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಶೂನ್ಯ ಬಡ್ಡಿದರದ ಸಾಲ ಮಿತಿಯನ್ನ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಸಿಎಂ ಸಿದ್ಧರಾಮಯ್ಯ, ರೈತರಿಗೆ ಮಧ್ಯಮಾವಧಿ, ದೀರ್ಘಾವಧಿ ಸಾಲ ಮಿತಿಯನ್ನ 10 ಲಕ್ಷದಿಂದ 15 ಲಕ್ಷಕ್ಕೆ ಏರಿಸಲಾಗಿದೆ. ಗುಡ್ಡಗಾಡು ಪ್ರದೇಶದ ರೈತರಗೆ ಪಿಕ್ ವ್ಯಾನ್ ಖರೀದಿಗೆ 7 ಲಕ್ಷದವರೆಗೆ ಸಾಲ ನೀಡಲಾಗುವುದು. ತೆಂಗು, ಅಡಕೆ, ದ್ರಾಕ್ಷಿ ದಾಳಿಂಬೆ ಬೆಳೆ ಸಂಸ್ಕರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಅದೇ ರೀತಿ 75 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ. ಅನುಗ್ರಹ ಯೋಜನೆ ಮರು ಜಾರಿ ಮಾಡಿ ‘ಕುರಿ ಮೇಕೆ ಮೃತಪಟ್ಟರೆ 5 ಸಾವಿರ ರೂ. ಪರಿಹಾರ ನೀಡಲಾಗುವುದು. ಜಾನುವಾರುಗಳ(ಹಸು, ಎಮ್ಮೆ) ಆಕಸ್ಮಿಕ ಸಾವುಗಳಿಗೆ 10 ಸಾವಿರ ಪರಿಹಾರ. ಕುರಿ, ಮೇಕೆ ಸಾವನ್ನಪ್ಪಿದರೆ 5 ಸಾವಿರ ಪರಿಹಾರ ನೀಡಲಾಗುತ್ತದೆ
ಚಿಕ್ಕಮಗಳೂರು ಕೊಡಗಿನ ಕಾಫಿ ಎಕೋ ಟೂರಿಸಂ ಉತ್ತೇಜಿಸಲು ಕರ್ನಾಟಕದ ಕಾಫಿ ಬ್ರಾಂಡಿಂಗ್ ಮಾಡಲು ಕ್ರಮ ವಹಿಸಲಾಗುವುದು. ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ, ಬ್ರಾಂಡಿಂಗ್‌ಗೆ ನೂತನ ಕಾರ್ಯಕ್ರಮ ಜಾರಿ ಮಾಡಲಾಗುವುದು.
ಹಿಂದೆ ಜಾರಿಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿಗೊಳಿಸಲಾಗುವುದು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ʻವಿದ್ಯಾರ್ಥಿಗಳಿಗಾಗಿ ತೋಟಗಾರಿಕೆʼ ಯೋಜನೆಯನ್ನು ಜಾರಿಗೊಳಿಸಲಾಗುವುದು.
ನಂದಿನಿ ಮಾದರಿ ಬ್ರಾಂಡಿಂಗ್
ನಂದಿನಿ ಮಾದರಿಯಲ್ಲೇ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೇ ರೂಪಿಸಲು 10 ಕೋಟಿ ರೂ. ಒದಗಿಸಲಾಗುವುದು.ತೋಟಗಾರಿಕೆ ಬೆಳೆಗಳ ಬ್ರಾಂಡಿಂಗ್‌ಗೂ ಒತ್ತು ನೀಡಲಾಗುವುದು =
ಕೃಷಿ ಉದ್ಯಮಿಗಳಿಗೆ ಉತ್ತೇಜನ ನೀಡಲು ನವೋದ್ಯಮ ಹೊಸ ಯೋಜನೆಯಡಿ 10 ಕೋಟಿ ರೂ. ಒದಗಿಸಲು ಕ್ರಮ. ಕೆಪೆಕ್ ಸಂಸ್ಥೆ ಮೂಲಕ ರೈತ ಉತ್ಪಾದಕ ಸಂಸ್ಥೆ, ನವೋದ್ಯಮಿಗಳಿಗೆ ಹಾಗೂ ಕಿರು ಆಹಾರ ಸಂಸ್ಕರಣೆ ಉದ್ಯಮಿದಾರರಿಗೆ 50 ಕೋಟಿ ರೂ. ನೆರವು. ಒದಗಿಸಲಾಗುವುದು.
ಕೃಷಿ ಯಂತ್ರೋಪಕರಣ
ಕೃಷಿ ಯಂತ್ರೋಪಕರಣ ಬಾಡಿಗೆ ನೀಡಲು 300 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ. ಈ ಸಾಲಿನಲ್ಲಿ 100 ಹಬ್ ಸ್ಥಾಪನೆಗೆ ಕೋಟಿ ರೂ. ರಾಜ್ಯದ ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ನೀಡುವ ತಲಾ 20 ಲಕ್ಷ ರೂ.ವರೆಗಿನ ಸಾಲಕ್ಕೆ ಶೇ. 4 ಬಡ್ಡಿ ಸಹಾಯಧನ ನೀಡಲಾಗುವುದು. ಎಂಟು ಶೀತಲಘಟಕ ಸ್ಥಾಪನೆಗೆ ಒಂದು ಕೋಟಿ ರೂ. ಮೀರದಂತೆ ಸೀಡ್ ಕ್ಯಾಪಿಟಲ್‌ಗೆ ನಿಗದಿ ಮಾಡಲು ಅನುಮತಿ ನೀಡಲಾಗುವುದು.
ರೇಷ್ಮೆಗೆ ಒತ್ತು
ರಾಮನಗರ ಜಿಲ್ಲೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಅತಿದೊಡ್ಡ ರೇಷ್ಮೆ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಲಾಗುತ್ತಿದ್ದು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುವಂತೆ ಶಿಡ್ಲಘಟ್ಟದಲ್ಲಿನ ಮಾರುಕಟ್ಟೆಯನ್ನು 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಲಾಗುವುದು.
ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯವನ್ನು ಬಲಪಡಿಸಲಾಗುವುದು. ಇದರಿಂದ ಉತ್ತಮ ಗುಣಮಟ್ಟದ ರೋಗರಹಿತವಾದ ಮೈಸೂರು ಬಿತ್ತನೆ ಗೂಡುಗಳನ್ನು ಉತ್ಪಾದಿಸಿ, ವಾಣಿಜ್ಯ ರೇಷ್ಮೆ ಬೆಳೆಗಾರರಿಗೆ ವಿತರಿಸಲು ಮತ್ತು ಉತ್ತಮ ಗುಣಮಟ್ಟದ ಮಿಶ್ರತಳಿ ಕಚ್ಚಾ ರೇಷ್ಮೆಯನ್ನು ಉತ್ಪಾದಿಸಲು ಅನುಕೂಲವಾಗಲಿದೆ.
ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಸುಲಭವಾಗಿ ದುಡಿಯುವ ಬಂಡವಾಳವನ್ನು ಒದಗಿಸಲು ಮತ್ತು ರೇಷ್ಮೆಗೂಡಿನ ಖರೀದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಐದು ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.
ಪಶುಸಂಗೋಪನೆ
ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಒಟ್ಟು 32,045 ಜಾನುವಾರುಗಳು ಮರಣ ಹೊಂದಿರುತ್ತವೆ. ಈ ಪೈಕಿ ಒಟ್ಟು 25,859 ಮರಣ ಹೊಂದಿದ ಜಾನುವಾರುಗಳಿಗೆ 53 ಕೋಟಿ ರೂ. ಪರಿಹಾರಧನವನ್ನು ವಿತರಿಸಲಾಗಿದೆ. ಬಾಕಿ ಇರುವ 5,851 ಮರಣಹೊಂದಿದ ಜಾನುವಾರುಗಳ ಮಾಲೀಕರಿಗೆ 12 ಕೋಟಿ ರೂ. ಪರಿಹಾರಧನವನ್ನು ವಿತರಿಸಲು ಕ್ರಮ ವಹಿಸಲಾಗುವುದು.
ಗ್ರಾಹಕರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಪ್ರೋಟೀನ್‌ಯುಕ್ತ ಮಾಂಸ ಮತ್ತು ಮೊಟ್ಟೆ ಪೂರೈಕೆಗೆ ಅವಕಾಶ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳು ಹಾಗೂ ಉತ್ತಮವಾದ ಮಾರುಕಟ್ಟೆ ಅಭಿವೃದ್ಧಿ ಮಾಡಲಾಗುವುದು.
ಮೀನುಗಾರಿಕೆ ಸಾಲ ಮಿತಿ
ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು 50,000 ರೂ. ಗಳಿಂದ ಮೂರು ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು.
ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್‌ನಿಂದ ಎರಡು ಲಕ್ಷ ಕಿಲೋ ಲೀಟರ್‌ಗಳವರೆಗೆ ಹೆಚ್ಚಿಸಲಾಗುವುದು.
ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್/ಡೀಸೆಲ್ ಇಂಜಿನ್‌ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 4,000 ಸೀಮೆ ಎಣ್ಣೆ ಇಂಜಿನ್‌ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗುವುದು.
ಎಪಿಎಂಸಿಗೆ ಹಳೆ ಕಾಯಿದೆ
ಕೃಷಿ ಉತ್ಪನ್ನ ಮಾರುಕಟ್ಟೆಗಳು, ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಒದಗಿಸಿ, ಅವರ ಹಿತ ಕಾಯುವ ಸಂಸ್ಥೆಗಳಾಗಬೇಕು ಎಂಬ ಆಶಯದಂತೆ ಹಿಂದಿನ ಅವಧಿಯಲ್ಲಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಬಲಪಡಿಸಿ, ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಯಿತು. ರೈತರ ಹಿತರಕ್ಷಣೆ ಮಾಡಲು ನಮ್ಮ ಸರ್ಕಾರವು ಸದರಿ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಲು ನಿರ್ಧರಿಸಿದೆ.
ʻಕಾಯಕ ನಿಧಿʼ ಯೋಜನೆಯಡಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರು ಮರಣ ಹೊಂದಿದಲ್ಲಿ ಅವರ ಶವಸಂಸ್ಕಾರಕ್ಕಾಗಿ ನೀಡುವ ಮೊತ್ತವನ್ನು 10,000 ರೂ. ಗಳಿಂದ 25,000 ರೂ. ಗಳಿಗೆ ಹೆಚ್ಚಿಸಲಾಗುವುದು.