ಕನ್ನಡ ಸುದ್ದಿ  /  ಕರ್ನಾಟಕ  /  Karnataka Election: ಚುನಾವಣೆ ಸಂದರ್ಭದಲ್ಲಷ್ಟೆ ನೆನಪಾಗುವ ಆಪದ್ಭಾಂಧವ ʻಕಾರ್ಯಕರ್ತʼ- ಆ ಮೇಲೆ ಅವನಾರೋ ಇವನಾರೋ..

Karnataka Election: ಚುನಾವಣೆ ಸಂದರ್ಭದಲ್ಲಷ್ಟೆ ನೆನಪಾಗುವ ಆಪದ್ಭಾಂಧವ ʻಕಾರ್ಯಕರ್ತʼ- ಆ ಮೇಲೆ ಅವನಾರೋ ಇವನಾರೋ..

Political Analysis: ಪಕ್ಷ ಯಾವುದೇ ಇರಲಿ, ಈಗ ನಾಯಕನಾದವನು, ಅಭ್ಯರ್ಥಿಯಾದವನು ಕೂಡ ʻಕಾರ್ಯಕರ್ತʼ (Party Worker) ನೇ. ಆದರೆ, ಪಕ್ಷ ಸಿದ್ಧಾಂತಗಳ ವಿಚಾರಕ್ಕೆ ಬಂದಾಗ ಅದು ಕಾರ್ಯಕರ್ತರಿಗಷ್ಟೇ ಅಲ್ಲ, ನಾಯಕನಿಗೂ ಅನ್ವಯ. ಇದನ್ನು ʻನಾಯಕʼ ಮರೆಯಬಾರದು ಎಂಬುದನ್ನು ನೆನಪಿಸುವ ವಿದ್ಯಮಾನಗಳು ಸುತ್ತಮುತ್ತ ನಡೆಯುತ್ತಿವೆ. ಅದೇ ಕಾರಣಕ್ಕೆ ಈ ಕಿರು ಅವಲೋಕನ.

ಪಕ್ಷ ಯಾವುದೇ ಇರಲಿ, ಈಗ ನಾಯಕನಾದವನು, ಅಭ್ಯರ್ಥಿಯಾದವನು ಕೂಡ ʻಕಾರ್ಯಕರ್ತʼ (Party Worker) ನೇ.
ಪಕ್ಷ ಯಾವುದೇ ಇರಲಿ, ಈಗ ನಾಯಕನಾದವನು, ಅಭ್ಯರ್ಥಿಯಾದವನು ಕೂಡ ʻಕಾರ್ಯಕರ್ತʼ (Party Worker) ನೇ.

ಪಕ್ಷ ಸಂಘಟನೆ ಆಗಬೇಕು ಎಂದರೆ ನಾಯಕರಷ್ಟೆ ಇದ್ದರೆ ಸಾಕೆ.. ತಳಮಟ್ಟದಲ್ಲಿ ಕೆಲಸ ಮಾಡುವುದಕ್ಕೆ ಕಾರ್ಯಕರ್ತರು (Party Worker) ಬೇಡವೆ? ಹೌದು ಪಕ್ಷಗಳ ಯಾವುದೇ ಕಾರ್ಯಕ್ರಮ ನಡೆದರೂ ರಕ್ತವನ್ನು ಬೆವರಾಗಿ ಬಸಿದು ಕೆಲಸ ಮಾಡುವವರು ಇವರೇ. ಈಗ ವಿಧಾನಸಭಾ ಚುನಾವಣೆ (Assembly Election) ಯ ಕಾಲಘಟ್ಟ. ಎಲ್ಲ ನಾಯಕರಿಗೂ ಪಕ್ಷದ ಕಾರ್ಯಕರ್ತರ ನೆನಪಾಗುವುದು ಇಂತಹ ಸಂದರ್ಭದಲ್ಲೇ..

ಟ್ರೆಂಡಿಂಗ್​ ಸುದ್ದಿ

ಹೌದು.. ಯಾವುದೇ ಚುನಾವಣೆ (Election) ಬಂದರೂ ಕಾರ್ಯಕರ್ತರಿಗೆ ಇನ್ನಿಲ್ಲದ ಬೇಡಿಕೆ. ಆದರೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಇವರ ಭಾವನೆಗಳಿಗೆ ನಾಯಕರು ಬೆಲೆಯನ್ನೇ ನೀಡುವುದಿಲ್ಲ ಎಂಬುದೂ ನಿರ್ವಿವಾದಿತ ವಿಚಾರ. ಎಷ್ಟೋ ಸಂದರ್ಭದಲ್ಲಿ ಪಕ್ಷದ ಸಿದ್ಧಾಂತಗಳಿಗೆ ಕಟ್ಟುಬಿದ್ದು ಈ ಕಾರ್ಯಕರ್ತರು ಮನಸ್ಸಿಲ್ಲದ ಮನಸ್ಸಿನಲ್ಲಿ ಅರ್ಹತೆ ಇಲ್ಲದ ಅಭ್ಯರ್ಥಿಗೆ ಮತ ಹಾಕಿಸಿ ಗೆಲ್ಲಿಸಿದ್ದೂ ಇದೆ. ಜನರ ಬೇಕು ಬೇಡಗಳಿಗೆ ಸ್ಪಂದಿಸುವವರು ಅಭ್ಯರ್ಥಿಗಳಾದಾಗ ಅವರನ್ನು ಖುಷಿಯಿಂದ ಗೆಲ್ಲಿಸಿದ ಉದಾಹರಣೆಯೂ ಇದೆ.

ಇಷ್ಟಾಗಿಯೂ, ಅಭ್ಯರ್ಥಿಗಳು ಗೆದ್ದು ಹೋದ ಬಳಿಕ, ಅದೇ ಕಾರ್ಯಕರ್ತರು ಅವರ ಬಳಿ ಹೋಗ ನಮ್ಮ ಏರಿಯಾದಲ್ಲಿ ರಸ್ತೆ ಸರಿ ಇಲ್ಲ, ಚರಂಡಿ ವ್ಯವಸ್ಥೆ ಹಾಳಾಗಿದೆ. ಮೂಲಸೌಕರ್ಯ ಒದಗಿಸಿ ಎಂದು ಕೇಳಿದರೆ ಅದಕ್ಕೆ ಸಿಗುವ ಉತ್ತರ ಏನು ಎಂಬುದನ್ನೂ ಕಾರ್ಯಕರ್ತರು ವಿವರಿಸುತ್ತಾರೆ. ಅಷ್ಟೇ ಅಲ್ಲ, ʻನಿಸ್ವಾರ್ಥ ಭಾವದಲ್ಲಿ ಕೆಲಸ ಮಾಡುವುದಷ್ಟೇ ನಮಗೆ ಗೊತ್ತಿರುವುದುʼ ಎಂದು ನಿಟ್ಟುಸಿರು ಬಿಡುವವರೂ ಇದ್ದಾರೆ.

ಈ ವಿಚಾರ ಈಗೇಕೆ ಎಂದು ಹುಬ್ಬೇರಿಸಬೇಡಿ. ಒಂದು ಪಕ್ಷದ ರಾಜ್ಯಾಧ್ಯಕ್ಷರೊಬ್ಬರ ಹೇಳಿಕೆಯ ವೈರಲ್‌ ವಿಡಿಯೋ ಇದಕ್ಕೆ ಕಾರಣ. “ಏ ನಿಲ್ರೀ… ನಿಲ್ರೀ.. ಗೊತ್ತಿದೆ.. ಎಲ್ಲ ನೋಡ್ಕೊಂಡು ಬಂದಿದ್ದೇನೆ.. ಗೊತ್ತಿದೆ. ಗೊತ್ತಿದೆ.. ನೋಡಿ.. ಯಾರ ಪರವಾಗಿ ಹೆಚ್ಚು ಘೋಷಣೆ ಸಿಗುತ್ತೋ ಅವರಿಗೆ ಸೀಟು ಕೊಡುವುದಿಲ್ಲ. ಇದು ರಾಜ್ಯ ಅಧ್ಯಕ್ಷ. ನಾನು ಕೊಡುವುದೇ ಇಲ್ಲ. ಸ್ಪಷ್ಟ ಇದೆ… ನಾನು ಎಲ್ಲ ನೋಡಿಯೇ ದಕ್ಷಿಣ ಕನ್ನಡದಿಂದ ಇಲ್ಲಿವರೆಗೆ ಬಂದಿದ್ದೇನೆ. 224 ಕ್ಷೇತ್ರಗಳ ದರ್ಶನವನ್ನು ಮಾಡಿದ್ದೇನೆ” ಎಂಬ ಬಹಳ ಉದ್ಧಟತನದ ಮಾತು ಆ ವಿಡಿಯೋದಲ್ಲಿದೆ. ನಾಯಕರು ಯಾರೇ ಇರಲಿ, ಅಭ್ಯರ್ಥಿಗಳು ಯಾರೇ ಇರಲಿ. ಘೋಷಣೆ ಹಾಕುವವರು ಯಾರು ʻಕಾರ್ಯಕರ್ತರುʼ.

“ಯಾರ ಪರವಾಗಿ ಹೆಚ್ಚು ಘೋಷಣೆ ಸಿಗುತ್ತೋ ಅವರಿಗೆ ಸೀಟು ಕೊಡುವುದಿಲ್ಲ” ಎಂಬ ಅವರ ಮಾತುಗಳನ್ನು ನಿಮಿತ್ತವಾಗಿಟ್ಟುಕೊಂಡು ಕಾರ್ಯಕರ್ತರ ನೋವು-ನಲಿವುಗಳ ಕುರಿತು ತಿಳಿಯಲೆತ್ನಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಭೀಷ್ಮ ಎನಿಸಿಕೊಂಡಿದ್ದ ದಿವಂಗತ ಕೆ.ರಾಮ ಭಟ್‌ ಉರಿಮಜಲು (Late K.Rama Bhat Urimajalu) ಅವರ ʻಸತ್ವರಜʼ ಪುಸ್ತಕದಲ್ಲಿನ ಸಾಲುಗಳು ಗಮನ ಸೆಳೆದವು. ಅದನ್ನು ಯಥಾವತ್‌ ಉಲ್ಲೇಖಿಸುವುದಕ್ಕೆ ಈ ಚುನಾವಣಾ ಸಂದರ್ಭಕ್ಕಿಂತ ಇನ್ನೊಂದು ಸಂದರ್ಭ ಸಿಗಲಾರದು. ಅದು ಹೀಗಿದೆ ನೋಡಿ -

"ಒಬ್ಬ ಕಾರ್ಯಕರ್ತ ಹೇಗಿರಬೇಕು? ಎಂಬುದಕ್ಕೆ ನನ್ನ ಅನುಭವಕ್ಕೆ ಬಂದ ಒಂದು ಉದಾಹರಣೆಯನ್ನು ಇಲ್ಲಿ ನೀಡುತ್ತೇನೆ. ಅವರ ಹೆಸರು ಕುಂಬ್ರ ಕೇಶವ (Kumbra Keshava). ಅವರಲ್ಲಿ ಹೆಚ್ಚು ದುಡ್ಡಿರಲಿಲ್ಲ. ಟೇಲರಿಂಗ್‌ ಮಾಡುತ್ತಿದ್ದರು. ಕೇಶವರ ತಂದೆ ಕಾಂಗ್ರೆಸ್‌ (Congress) ಪಕ್ಷದಲ್ಲಿದ್ದರು. ಜನ ಸಂಘ (Jana sangha) ದ ಕಾಲದಿಂದಲೂ ಕೇಶವರು ನಮ್ಮೊಂದಿಗಿದ್ದರು. ಅವರು ಪಕ್ಷದಿಂದ ಸ್ವಂತಕ್ಕೆ ಯಾವುದನ್ನೂ ಅಪೇಕ್ಷಿಸಲಿಲ್ಲ. ತಮ್ಮ ಕೈಯಿಂದಲೇ ಹಣವನ್ನು ಖರ್ಚು ಮಾಡಿ ಪಕ್ಷದ ಕೆಲಸವನ್ನು ಮಾಡುತ್ತಿದ್ದರು. ನಾನು ಚುನಾವಣೆಯಲ್ಲಿ ಸೋತಾಗಲೂ ಅವರು ನಮ್ಮೊಂದಿಗಿದ್ದರು.

ಅನಂತರ ಸದಾನಂದ ಗೌಡ (D V Sadananda Gowda) ರು ಮೊದಲ ಸಲ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ವಿನಯ ಕುಮಾರ್‌ ಸೊರಕೆ (Vinaya Kumar Sorake ) ಎದುರು ಸೋತರು. ಮರು ಚುನಾವಣೆಯಲ್ಲಿ ವಿನಯ ಕುಮಾರ್‌ ಸೊರಕೆ ವಿರುದ್ಧ ಸದಾನಂದ ಗೌಡರು ಚುನಾವಣೆಯಲ್ಲಿ ವಿಜೇತರಾದರು. ಸೊರಕೆಯವರು ಮತ್ತು ಕೇಶವರು ಒಂದೇ ಸಮುದಾಯಕ್ಕೆ ಸೇರಿದವರು. ಈ ಸಂದರ್ಭದಲ್ಲಿ ಸೊರಕೆಯವರು ಓಟು ಕೇಳುವುದಕ್ಕೆ ಕೇಶವರಲ್ಲಿಗೆ ಹೋಗಿದ್ದರು. ಆಗ ಕೇಶವರು ಸ್ಪಷ್ಟವಾಗಿ ಸೊರಕೆಯವರಿಗೆ ಹೇಳಿದರು - “ನಾನು ಒಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ಪಕ್ಷ ಬದಲಿಸಿ ಸಹಾಯ ಮಾಡಲು ನನ್ನಿಂದ ಸಾಧ್ಯವಿಲ್ಲ. ನಾವು ಒಂದೇ ಜಾತಿಯವರಾಗಿರಬಹುದು. ಅದು ಸಂಬಂಧಕ್ಕೆ ಮಾತ್ರ ಸೀಮಿತ. ರಾಜಕೀಯ ಸಂದರ್ಭದಲ್ಲಿ ಪಕ್ಷದ ನಿಲುವುಗಳು-ಸಿದ್ಧಾಂತಗಳು ನನಗೆ ಮುಖ್ಯವಾಗುತ್ತವೆ”

ಇಷ್ಟಾಗುವಾಗ ಅವರಲ್ಲಿ ಸೊರಕೆಯವರು ಕೇಳಿದರು - “ನಿಮಗೆ ಬಿಜೆಪಿ (BJP) ಏನು ಕೊಟ್ಟಿದೆ?”. ಆಗ ಕೇಶವರು ನೀಡಿದ ಉತ್ತರ ಗಮನಾರ್ಹ. ಅದನ್ನು ಒಂದು ಆದರ್ಶವಾಗಿ ಕಾರ್ಯಕರ್ತರು ಸ್ವೀಕರಿಸಬೇಕು. “ನನಗೆ ಬಿಜೆಪಿ ಏನೂ ಕೊಡುವುದು ಬೇಡ. ಬಿಜೆಪಿಗೆ ನಾನೇ ಕೊಡುವುದು. ನಾನು ಪಕ್ಷಕ್ಕೆ ಸಮಯವನ್ನು ಕೊಡುತ್ತೇನೆ. ಪಕ್ಷದ ಸಂಘಟನೆಗಾಗಿ ನನ್ನಿಂದಾದಷ್ಟು ಹಣವನ್ನು ಖರ್ಚು ಮಾಡುತ್ತೇನೆ. ನಾನು ಎಲ್ಲವನ್ನೂ ಕೊಟ್ಟು ಬೆಳೆಸಬೇಕಾದ ಪಾರ್ಟಿ ಅದು. ಅದರಿಂದ ನಾನು ಏನನ್ನೂ ನಿರೀಕ್ಷಿಸುವುದಿಲ್ಲ. ನಮ್ಮ ಪಕ್ಷ ಆಡಳಿತಕ್ಕೆ ಬಂದರೆ ಒಳ್ಳೆಯ ಆಡಳಿತವನ್ನು ಮಾತ್ರ ಬಯಸುತ್ತೇನೆ. ನಾನು ಗೌರವದಲ್ಲಿ ಬದುಕಬೇಕು. ಇನ್ನೊಬ್ಬರನ್ನು ಗೌರವದಲ್ಲಿ ಬದುಕಲು ಬಿಡಬೇಕು. ನಾನು ಪಕ್ಷದಿಂದ ಬಯಸುವುದು ಇಷ್ಟೆ”.

ಕೇಶವರ ಮಾತಿನ ಉಲ್ಲೇಖದ ನಂತರ ರಾಮಭಟ್‌ ಅವರ ಟಿಪ್ಪಣಿ ಹೀಗಿದೆ - "ಒಂದು ಪಕ್ಷದ ನಾಯಕನಾಗಲಿ, ಕಾರ್ಯಕರ್ತನಾಗಲಿ ಅವರಿಗೆ ಒಂದು ಸಿದ್ಧಾಂತ ಬೇಕು ಎಂಬ ಅಚಲ ನಂಬಿಕೆ ನನ್ನದು".

ಕೊನೇ ಮಾತು-

ಪಕ್ಷ ಯಾವುದೇ ಇರಲಿ, ಈಗ ನಾಯಕನಾದವನು, ಅಭ್ಯರ್ಥಿಯಾದವನು ಕೂಡ ಪಕ್ಷದ ಮಟ್ಟಿಗೆ ʻಕಾರ್ಯಕರ್ತʼನೇ. ಪಕ್ಷ ಸಂಘಟನೆಗಾಗಿ ಹೊಣೆಗಾರಿಕೆಗಳನ್ನು ಹಂಚುವಾಗ ಅವರವರ ಅರ್ಹತೆಗೆ ಅನುಗುಣವಾದ ಹೊಣೆಗಾರಿಕೆ ಸಿಗುತ್ತದೆ. ಕೆಲವರು ʻನಾಯಕʼ ಎನಿಸಿಕೊಳ್ಳುತ್ತಾರೆ. ಆದರೆ, ಪಕ್ಷದ ಸಿದ್ಧಾಂತಗಳ ವಿಚಾರಕ್ಕೆ ಬಂದಾಗ ಅದು ಕಾರ್ಯಕರ್ತರಿಗೆ ಮಾತ್ರ ಸೀಮಿತ ಅಲ್ಲ, ನಾಯಕರಿಗೂ ಅನ್ವಯ ಎಂಬುದನ್ನು ನಾಯಕರೆನಿಸಿಕೊಂಡವರು ಮರೆಯಬಾರದು ಎಂಬುದನ್ನು ನೆನಪಿಸುವ ವಿದ್ಯಮಾನಗಳು ಸುತ್ತಮುತ್ತ ನಡೆಯುತ್ತಿವೆ. ಅದೇ ಕಾರಣಕ್ಕೆ ಈ ಕಿರು ಅವಲೋಕನ.

IPL_Entry_Point