Karnataka Police: ಪೊಲೀಸರ ವರ್ತನೆ ಬಗ್ಗೆ ವ್ಯಾಪಕ ಆಕ್ಷೇಪ, ಅಸಮಾಧಾನ; ಸಿಎಂ ತರಾಟೆ?
ಕರ್ನಾಟಕ ಪೊಲೀಸರ (Karnataka Police) ವರ್ತನೆ ಈಗ ವ್ಯಾಪಕ ಆಕ್ಷೇಪಕ್ಕೆ ಒಳಗಾಗಿದೆ. ಆಯುಧ ಹಿಡಿದವರ ಎದುರು ತೆಪ್ಪಗೆ ನಿಲ್ಲುವ ಪೊಲೀಸರು, ನಿರಾಯುಧರ ಮೇಲೆ ಲಾಠಿ ಪ್ರಹಾರವೆಸಗುತ್ತಾರೆ ಎಂದು ಸಾರ್ವಜನಿಕ ಟೀಕೆ ವ್ಯಕ್ತವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಕಾರ್ಯವೈಖರಿ ಸಂಬಂಧ ಪೊಲೀಸ್ ವರಿಷ್ಠರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಬೆಂಗಳೂರು: ಕಳೆದ ಎರಡು ಮೂರು ದಿನಗಳಿಂದ ಕರ್ನಾಟಕ ಪೊಲೀಸರ (Karnataka Police) ಕಾರ್ಯವೈಖರಿ ಮತ್ತು ವರ್ತನೆ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗತೊಡಗಿವೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಶನಿವಾರ ಪೊಲೀಸ್ ವರಿಷ್ಠರನ್ನು ಕರೆಯಿಸಿಕೊಂಡು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದು ನಾಲ್ಕು ದಿನಗಳಾಗಿವೆ. ಈ ಸಂದರ್ಭದಲ್ಲಿ ಪೊಲೀಸರು ತೋರಿಸಿದ ವರ್ತನೆ ಕೂಡ ಟೀಕೆಗೆ ಒಳಗಾಗಿದೆ. ಪ್ರವೀಣ್ ನೆಟ್ಟಾರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಬಂದ ಕಾಸರಗೋಡಿನ ಆರ್‌ಎಸ್‌ಎಸ್ ಸ್ವಯಂಸೇವಕರೊಬ್ಬರ ಮೇಲೆ ವಿನಾಕಾರಣ ಪೊಲೀಸರು ಮುಗಿಬಿದ್ದು ಲಾಠಿ ಪ್ರಹಾರ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೇ ವಿಚಾರ ಇಟ್ಟುಕೊಂಡು ರಾಜ್ಯದ ಪ್ರಮುಖ ಟಿವಿ ಮಾಧ್ಯಮಗಳು ಕೂಡ ಪೊಲೀಸರ ವರ್ತನೆಯನ್ನು ಪ್ರಸಾರ ಮಾಡಿದ್ದವು. ಚರ್ಚೆಗಳು ಕೂಡ ನಡೆದಿವೆ.
ಹತ್ಯೆ ನಡೆದು ನಾಲ್ಕು ದಿನವಾದರೂ ತನಿಖೆಯಲ್ಲಿ ಪ್ರಗತಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಗುಪ್ತಚರ ವಿಭಾಗದ ಎಡಿಜಿಪಿ ಬಿ.ದಯಾನಂದ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ತೀವ್ರ ತರಾಟೆಗೆ ತೆಗೆದುಕೊಂಡರು.
ಕಾನೂನು ಸುವ್ಯವಸ್ಥೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಪೊಲೀಸ್ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರ ವರ್ತನೆಯಿಂದ ಸರ್ಕಾರ ತಲೆತಗ್ಗಿಸುವಂತಾಗಿದೆ. ಎಲ್ಲೇ ಹೋದರೂ ಅಲ್ಲಿ ನನ್ನನ್ನೂ ಸೇರಿ, ಗೃಹ ಸಚಿವರು, ಇತರೆ ಸಚಿವರು ಮತ್ತು ನಾಯಕರಿಗೆ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ನಾಲ್ಕು ದಿನವಾದರೂ ಆರೋಪಿಗಳನ್ನು ಯಾಕೆ ಬಂಧಿಸಿಲ್ಲ ಎಂದರೆ ನಾನು ಜನತೆಗೆ ಏನು ಉತ್ತರ ಕೊಡಲಿ ಎಂದು ಕೇಳಿದ್ದಾಗಿ ಈ ಸಂಜೆ ವರದಿ ಮಾಡಿದೆ.
ಎಬಿವಿಪಿ ಪ್ರತಿಭಟನೆ ವಿಚಾರ
ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದು, ಪ್ರತಿಭಟನೆಯ ಕಾವು ರಾಜ್ಯವ್ಯಾಪಿ ಹಬ್ಬದಂತೆ ತಡೆಯಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷವಾಗಿ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಬಿಜೆಪಿ ಪ್ರಾಬಲ್ಯವಿರುವ ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶ ಗುರುತಿಸಿ ಅಗತು ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಎಬಿವಿಪಿ ಕಾರ್ಯಕರ್ತರು ಶನಿವಾರ ಬೆಳಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು. ಮನವಿ ನೀಡಲು ಅವಕಾಶ ನೀಡದ ಕಾರಣ, ಒಳಗೆ ನುಗ್ಗಲು ಪ್ರಯತ್ನಿಸಿದ್ದು ಅವರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದರು.
ಪೊಲೀಸರ ವರ್ತನೆ ಬಗ್ಗೆ ಟ್ವಿಟರ್‌ನಲ್ಲಿ ವ್ಯಾಪಕ ಆಕ್ರೋಶ
ಪ್ರವೀಣ್ ನೆಟ್ಟಾರು ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಆರೆಸ್ಸೆಸ್ ಕಾರ್ಯಕರ್ತನ ಜತೆಗೆ ಪೊಲೀಸರು ತೋರಿಸಿದ ವರ್ತನೆ ಬಗ್ಗೆ ವ್ಯಾಪಕ ಟೀಕೆ, ಆಕ್ಷೇಪ, ಆಕ್ರೋಶಗಳು ವ್ಯಕ್ತವಾಗಿದೆ. ರಾಜ್ಯಾದ್ಯಂತ ಯುವ ನಾಯಕರಾಗಿ, ಸಾಮಾಜಿಕ ಕಳಕಳಿಯುಳ್ಳವರಾಗಿ ಜನಪ್ರಿಯರಾಗಿರುವ ಚಕ್ರವರ್ತಿ ಸೂಲಿಬೆಲೆ ಅವರು ಕೂಡ ಪೊಲೀಸರ ವರ್ತನೆಯನ್ನು ಖಂಡಿಸಿ ನಿನ್ನೆ ಮಾಡಿದ ಟ್ವೀಟ್ ಇದು.
ಅವರ ಈ ಟ್ವೀಟ್‌ಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಆಯಾ ರಾಜ್ಯಗಳ ಪರಿಸ್ಥಿತಿಯ ತುಣುಕುಗಳನ್ನು ಜೋಡಿಸಿದ್ದಾರೆ. ಈ ಎಲ್ಲ ವಿಚಾರಗಳು ಕೂಡ ಕರ್ನಾಟಕ ಪೊಲೀಸರ ಮೇಲೆ ಒತ್ತಡ ತರುವುದು ಖಚಿತ.