ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭೆ ಚುನಾವಣೆ ಫಲಿತಾಂಶ ವಿಶ್ಲೇಷಣೆ: ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಎಡವಿದ್ದೆಲ್ಲಿ

ಲೋಕಸಭೆ ಚುನಾವಣೆ ಫಲಿತಾಂಶ ವಿಶ್ಲೇಷಣೆ: ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಎಡವಿದ್ದೆಲ್ಲಿ

Karnataka Politics ಉತ್ತರ ಕರ್ನಾಟಕದ ಕಿತ್ತೂರು ಭಾಗ ಬಿಜೆಪಿ ಭದ್ರಕೋಟೆ. ಈ ಬಾರಿಯೂ ಅದು ಸಾಬೀತಾಗಿದೆ. ಕಾಂಗ್ರೆಸ್‌ ಇಲ್ಲಿ ಒಂದೇ ಸ್ಥಾನ ಗೆಲ್ಲಲು ಸಾಧ್ಯವಾಗಿದೆ.ವರದಿ: ಮಾರುತಿ. ಬೆಂಗಳೂರು

ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ.
ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ.

ಬೆಂಗಳೂರು: ಇತ್ತೀಚೆಗೆ ನಡೆದ ಲೋಕಸಭ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದಲ್ಲಿ 33 ಶಾಸಕರಿದ್ದರೂ ಈ ಭಾಗದ 6 ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರನ್ನು ಓಲೈಸುವಲ್ಲಿ ವಿಫಲರಾಗಿರುವುದು ಫಲಿತಾಂಶದ ವಿಶ್ಲೇಷಣೆಯಿಂದ ಗೋಚರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 9 ಸ್ಥಾನಗಳನ್ನು ಗಳಿಸಿದ್ದರೂ ಬಹುತೇಕ ಸಚಿವರು ತಮ್ಮ ಕ್ಷೇತ್ರಗಳಲ್ಲೇ ತಮ್ಮದೇ ಪಕ್ಷದ ಅಭ್ಯರ್ಥಿಗಳಿಗೆ ಮುನ್ನಡೆ ಕೊಡಿಸುವಲ್ಲಿ ವಿಫಲರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಿತ್ತೂರು ಕರ್ನಾಟಕದ 6 ಕ್ಷೇತ್ರಗಳಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಸಂಪೂರ್ಣವಾಗಿನಿರ್ಣಾಮವಾಗುವುದನ್ನು ತಪ್ಪಿಸಿದ್ದಾರೆ. ಉಳಿದ 5 ಕ್ಷೇತ್ರಗಳಲ್ಲಿ ಇಬ್ಬರು ಸಚಿವರ ಮಕ್ಕಳು ಸೇರಿದಂತೆ ಐವರು ಕಾಂಗ್ರೆಸ್‌ ಅಭ್ಯರ್ಥಿಗಳು ಮುಗ್ಗರಿಸಿದ್ದಾರೆ.

ಕಾಂಗ್ರೆಸ್‌ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 11 ಶಾಸಕರು, ವಿಜಯಪುರ ಜಿಲ್ಲೆಯಲ್ಲಿ 6, ಬಾಗಲಕೋಟೆಯಲ್ಲಿ 5, ಧಾರವಾಡ ಜಿಲ್ಲೆಯಲ್ಲಿ 4,ಗದಗ ಜಿಲ್ಲೆಯಲ್ಲಿ 2 ಹಾವೇರಿ ಜಿಲ್ಲೆಯಲ್ಲಿ ಐವರು ಶಾಸಕರಿದ್ದಾರೆ. ಈ ಭಾಗದಲ್ಲಿ ಬಿಜೆಪಿಯಲ್ಲಿ ಒಟ್ಟು 16 ಶಾಸಕರಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 7, ವಿಜಯಪುರ ಜಿಲ್ಲೆಯಲ್ಲಿ 1, ಬಾಗಲಕೋಟೆಯಲ್ಲಿ 2, ಧಾರವಾಡ ಜಿಲ್ಲೆಯಲ್ಲಿ 3, ಗದಗ ಜಿಲ್ಲೆಯಲ್ಲಿ 2 ಹಾವೇರಿ ಜಿಲ್ಲೆಯಲ್ಲಿ ಒಬ್ಬ ಶಾಸಕರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಕನಿಷ್ಠ 3-4 ಲೋಕಸಭಾ ಕ್ಷೇತ್ರಗಳಲ್ಲಿಗೆಲ್ಲುವ ಎಲ್ಲ ಅವಕಾಶಗಳಿದ್ದವು. ಆ ಮೂಲಕ ಕಿತ್ತೂರು ಕರ್ನಾಟಕದಲ್ಲಿ ತನ್ನ ಹಿಡಿತ ಇರುವದನ್ನು ಸಾಬೀತುಪಡಿಸುವ ಸಾಧ್ಯತೆಗಳಿದ್ದರೂ ಕಾಂಗ್ರೆಸ್‌ ವಿಫಲವಾಗಿದೆ.

ಬೆಳಗಾವಿಯ ಪ್ರಭಾವಿ ನಾಯಕ ಲೋಕೋಪಯೋಗಿ ಸಚಿವರೂ ಆಗಿರುವ ಪ್ರದೇಶ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮದೇ ಶಾಸಕರು ಪಕ್ಷದ ವಿರುದ್ಧ ಪಿತೂರಿ ನಡೆಸಿ ಕಾಂಗ್ರೆಸ್‌ ಸೋಲಿಗೆ ಕಾರಣರಾಗಿದ್ದಾರೆ ಎಂಬ ಹೇಳಿಕೆಯ ಗೂಢಾರ್ಥವನ್ನು ಅರ್ಥ ಮಾಡಿಕೊಳ್ಳಬಹುದು. ಈ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಜಾರಕೊಹೊಳಿ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧವೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಹಿರಿಯ ನಾಯಕ ಎಂ.ಬಿ.ಪಾಟೀಲ್‌ ಸಹಿತ ಕಾಂಗ್ರೆಸ್‌ ನ ಆರು ಶಾಸಕರಿದ್ದರೂ ಅಲ್ಲಿ ಎರಡು ಬಾರಿ ಶಾಸಕರಾಗಿದ್ದ ಅಭ್ಯರ್ಥಿ ರಾಜು ಅಲಗೂರು ಪರಾಭವಗೊಂಡಿದ್ದಾರೆ. ಇಲ್ಲಿ ಬಿಜೆಪಿ ವಿರೋಧಧ ನಡುವೆಯೂ ಹಾಲಿ ಸಂಸದ ರಮೇಶ್‌ ಜಿಗಜಿಣಗಿ ಅವರನ್ನು ಕಣಕ್ಕಳಿಸಿತ್ತು. ಈ ಅಸಮಾಧಾನದ ಲಾಭವನ್ನು ಪಡೆದಿದ್ದರೆ ಕಾಂಗ್ರೆಸ್‌ ಸುಲಭವಾಗಿ ಜಯ ಗಳಿಸುವ ಸಾಧ್ಯೆತಗಳಿದ್ದವು.

ಬಾಗಲಕೋಟೆ ಕ್ಷೇತ್ರದಲ್ಲಿ ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ್‌ ತಮ್ಮ ಪುತ್ರಿ ಸಂಯುಕ್ತಾ ಅವರನ್ನು ಕಣಕ್ಕಿಳಿಸುವಲ್ಲಿ ಸಫಲರಾಗಿದ್ದರು. ನೆರೆಯ ವಿಜಯಪುರ ಜಿಲ್ಲೆಯವರಾದ ಇವರು ಬಾಗಲಕೋಟೆ ಜಿಲ್ಲೆಯ ಪಕ್ಷದ ಶಾಸಕರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲರಾಗಿದ್ದರು. ಸಚಿವ ಪಾಟೀಲ್‌ ಅವರು ಹೈಕಮಾಂಡ್ ಓಲೈಸುವುದರ ಜೊತೆಗೆ ಸ್ಥಳೀಯ ಶಾಸಕರು ಮತ್ತು ಮುಖಂಡರ ವಿಶ್ವಾಸ ಗಳಿಸುವ ಪ್ರಯತ್ನವನ್ನೇ ಮಾಡಲಿಲ್ಲ ಎಂದು ಅಲ್ಲಿನ ಶಾಸಕರು ಹೇಳುತ್ತಾರೆ.

ಧಾರವಾಡ ಜಿಲ್ಲೆಯ ಕಲಘಟಕಿ ಶಾಸಕ ಸಚಿವ ಸಂತೋಷ್‌ ಲಾಡ್‌ ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರದ ವಿನಯ್‌ ಕುಲಕರ್ಣಿ ಅವರೂ ತಮ್ಮ ಪಕ್ಷದ ಅಭ್ಯರ್ಥಿ ವಿನೋದ್‌ ಅಸೂಟಿ ಅವರಿಗೆ ಮುನ್ನಡೆ ಕೊಡಿಸುವಲ್ಲಿ ಸೋತಿದ್ದಾರೆ. ಬೆಳಗಾವಿ ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಅತಿಯಾದ ಆತ್ಮ ವಿಶ್ವಾಸ

ಅವರಿಗೆ ಮುಳುವಾಯಿತು ಎಂದು ಹೇಳಲಾಗುತ್ತಿದೆ. ಇಲ್ಲಿ ತಮ್ಮ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಸಫಲರಾದರಾದರೂ ಪಕ್ಷದ ಇತರ ಶಾಸಕರನ್ನು ಉದಾಸೀನ ಮಾಡಿದ್ದಕ್ಕೆ ಬೆಲೆ ತೆತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ 50,529 ಮತಗಳ ಅಂತರದಿಂದ ಮಾತ್ರ ಗೆಲುವಿನ ದಡ ಮುಟ್ಟಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಲೋಕಸಭೆಗೆ ಕಳುಹಿಸುವಲ್ಲಿ ವಿಫಲರಾಗಿರುವ ಸಚಿವರು ಮತ್ತು ತಮ್ಮ ಮಕ್ಕಳನ್ನು ಗೆಲ್ಲಿಸಿಕೊಳ್ಳಲಾಗದ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಇತರರಿಗೆ ಅವಕಾಶ ಕಲ್ಪಿಸಬೇಕೆಂದು ಶಾಸಕರು ಸಿಎಂ, ಡಿಸಿಎಂ ಮತ್ತು ವರಿಷ್ಠರ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. ಸಚಿವರ ತಲೆದಂಡ ಆಗಲಿದೆಯೇ ಎಂದು ಕಾದು ನೋಡಬೇಕಿದೆ.

(ವರದಿ: ಎಚ್.ಮಾರುತಿ,ಬೆಂಗಳೂರು)

ಟಿ20 ವರ್ಲ್ಡ್‌ಕಪ್ 2024