ಕನ್ನಡ ಸುದ್ದಿ  /  ಕರ್ನಾಟಕ  /  Coastal News: ಅಳಿವಿನಂಚಿನ ಆಲಿವ್ ರಿಡ್ಲಿ ಕಡಲಾಮೆ; ಮಂಗಳೂರಲ್ಲಿ ಮೊಟ್ಟೆಗಳ ಸಂರಕ್ಷಣೆ , ಕಾರವಾರದಲ್ಲಿ ಸುರಕ್ಷಿತ ಕಡಲು ಸೇರಿದ ಮರಿಗಳು

Coastal News: ಅಳಿವಿನಂಚಿನ ಆಲಿವ್ ರಿಡ್ಲಿ ಕಡಲಾಮೆ; ಮಂಗಳೂರಲ್ಲಿ ಮೊಟ್ಟೆಗಳ ಸಂರಕ್ಷಣೆ , ಕಾರವಾರದಲ್ಲಿ ಸುರಕ್ಷಿತ ಕಡಲು ಸೇರಿದ ಮರಿಗಳು

ಕರಾವಳಿಯಲ್ಲಿ ಕಡಲಾಮೆಗಳ ಸಂತಾನ ಸಂಭ್ರಮದ ಕ್ಷಣ.ಮಂಗಳೂರಿನಲ್ಲಿ ಅರಣ್ಯ ಇಲಾಖೆಯವರು ಕಡಲಾಮೆಗಳ ಮೊಟ್ಟೆಗಳನ್ನು ರಕ್ಷಿಸಿದರೆ, ಕಾರವಾರದಲ್ಲೂ ಕಡಲಾಮೆಗಳು ಮರಿಯೊಂದಿಗೆ ಕಡಲು ಸೇರಿವೆ.ವಿಶೇಷ ವರದಿ: ಹರೀಶ್‌ ಮಾಂಬಾಡಿ, ಮಂಗಳೂರು

ಮಂಗಳೂರು ಹಾಗೂ ಕಾರವಾರದಲ್ಲಿ ಕಡಲಾಮೆಗಳ ಸಂತಾನ ಸಂಭ್ರಮ,
ಮಂಗಳೂರು ಹಾಗೂ ಕಾರವಾರದಲ್ಲಿ ಕಡಲಾಮೆಗಳ ಸಂತಾನ ಸಂಭ್ರಮ,

ಮಂಗಳೂರು: ಮಂಗಳೂರು ತಣ್ಣೀರುಬಾವಿ ಬೀಚ್ ನಲ್ಲಿ ಆಲಿವ್ ರಿಡ್ಲಿ ಕಡಲಾಮೆ ಮೊಟ್ಟೆ ಇಟ್ಟಿದ್ದು, ಅದರ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಮಂಗಳವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳೂರು ಪ್ರವಾಸದಲ್ಲಿದ್ದ ವೇಳೆ ತಣ್ಣೀರುಬಾವಿಗೆ ಭೇಟಿ ನೀಡಿದ ಸಂದರ್ಭ ಇದನ್ನು ಗುರುತಿಸಿ, ಇಲಾಖೆಗೆ ನೀಡಿದ ಸಸಿಹಿತ್ಲು ಗ್ರಾಮದ ಮೀನುಗಾರರಾದ ಆನಂದ ಕೋಟ್ಯಾನ್ ಮತ್ತು ವಾಸು ಕೋಟ್ಯಾನ್ ಅವರಿಗೆ 5 ಸಾವಿರ ರೂಪಾಯಿಗಳ ಬಹುಮಾನ ಮತ್ತು ಪ್ರಶಂಸಾ ಪತ್ರ ಪ್ರದಾನ ಮಾಡಿ, ಸಂರಕ್ಷಿಸಿದ್ದಕ್ಕಾಗಿ ಶ್ಲಾಘಿಸಿದರು. ದೂರದ ಕಾರವಾರ ಕಡಲ ತೀರದಲ್ಲೂ ಕಡಲಾಮೆ ಮರಿಗಳ ಜನನವಾಗಿದ್ದು, ಸುಮಾರು 47 ಮರಿಗಳನ್ನು ಕಡಲಿಗೆ ಬಿಡುವ ಕಾರ್ಯವೂ ನಡೆಯಿತು.

ಟ್ರೆಂಡಿಂಗ್​ ಸುದ್ದಿ

ಕಡಲಾಮೆ ಈಗ ಅಳಿವಿನಂಚಿನಲ್ಲಿರುವ ಹಿನ್ನೆಲೆಯಲ್ಲಿ ಇದಕ್ಕೆ ಮಹತ್ವವಿದೆ. ಆಲಿವ್ ರಿಡ್ಲಿಗಳಿಗೆ ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಭಾರಿ ಬೇಡಿಕೆ. ಈ ಆಮೆ ಮೊಟ್ಟೆಗಳನ್ನು ತಿನ್ನುವವರೂ ಇದ್ದಾರೆ. ಹೀಗಾಗಿ ಅಂಥವರಿಂದ ಈ ಆಮೆಗಳನ್ನು ಸಂರಕ್ಷಿಸುವುದಕ್ಕಾಗಿ, ಅಳಿವಿನಂಚಿನಲ್ಲಿರುವ ಈ ಪ್ರಭೇದದ ಉಳಿವಿಗಾಗಿ ಅರಣ್ಯ ಇಲಾಖೆ ಶ್ರಮಿಸುತ್ತಿದೆ. ಮೀನುಗಾರರ ಸಹಕಾರದೊಂದಿಗೆ ಮೊಟ್ಟೆಗಳನ್ನು ಸಂರಕ್ಷಿಸಿ, ದಿನವಿಡೀ ಕಾಯುವ ಕಾರ್ಯ ನಡೆಸುತ್ತಿದೆ. ಅಳಿವಿನಂಚಿನಲ್ಲಿರುವ ಇವುಗಳ ಸಂರಕ್ಷಣೆಗೆ, ಮೊಟ್ಟೆಗಳನ್ನು ಸುರಕ್ಷಿತವಾಗಿ ಪತ್ತೆ ಮಾಡಿಕೊಡುವವರಿಗೆ ನಗದು ಬಹುಮಾನ ನೀಡುತ್ತಿದೆ.

ನಾಲ್ಕು ದಶಕಗಳ ಬಳಿಕ ಮಂಗಳೂರಿನಲ್ಲಿ

ಮಂಗಳೂರಿನ ತಣ್ಣೀರುಬಾವಿ ಬೀಚ್ ನಲ್ಲಿ ಅಪರೂಪದ ಆಲೀವ್ ರೆಡ್ ಲೇ ಆಮೆ 1985ರ ಬಳಿಕ ಇದೇ ಮೊದಲ ಬಾರಿಗೆ ಸಾವಿರಾರು ಮೊಟ್ಟೆ ಇಟ್ಟಿದೆ, ಈಗ ಇದನ್ನು ಸಂರಕ್ಷಿಸಿಡಲಾಗಿದೆ. ಈ ಅಪರೂಪದ ಆಮೆಗಳ ಮೊಟ್ಟೆ ನಾಯಿ ಮತ್ತು ಪಕ್ಷಿಗಳ ಪಾಲಾಗದಂತೆ ಸುತ್ತಲೂ ಕಟ್ಟೆ ಕಟ್ಟಿ ಅರಣ್ಯ ಸಿಬ್ಬಂದಿ ಸಂರಕ್ಷಿಸಿ ಇಟ್ಟಿದ್ದಾರೆ.

ಅಳಿವಿನ ಅಂಚಿನಲ್ಲಿರುವ 'ಆಲಿವ್ ರಿಡ್ಲೆ' ಆಮೆಗಳು ಸುರಕ್ಷಿತವಾದ ಜಾಗಗಳನ್ನು ಆಯ್ದುಕೊಂಡು ಸಂತಾನೋತ್ಪತ್ತಿ ಮಾಡುತ್ತವೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಹಾಗೂ ವಿರಳವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಡಲತೀರವನ್ನು ಅವು ಆಯ್ದುಕೊಳ್ಳುತ್ತವೆ. ಸಾಮಾನ್ಯವಾಗಿ ಕಾರವಾರದ ದೇವಭಾಗ, ಅಂಕೋಲಾದ ಕೇಣಿ, ಹೊನ್ನಾವರದ ಕಾಸರಕೋಡು, ಟೊಂಕಾ ಹೀಗೆ ಹಲವು ಭಾಗಗಳಲ್ಲಿ ಆಮೆ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಆದರೆ ಕಡಲತೀರ ಭಾಗದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿ, ಬಂದರು ವಿಸ್ತರಣೆ, ರಸ್ತೆ ಕಾಮಗಾರಿಳು ನಡೆಯುವ ಸಂದರ್ಭ, ಆಮೆಗಳು ಅಲ್ಲಿ ಸುರಕ್ಷಿತವಲ್ಲ ಎಂಬುದನ್ನು ಮನಗಂಡು ಸ್ಥಳ ಬದಲಾಯಿಸುತ್ತವೆ. ಆಮೆಗಳು ಸಂತಾನೋತ್ಪತ್ತಿ ಮಾಡುವ ಸ್ಥಳದಲ್ಲಿ ಅಭಿವೃದ್ಧಿ ಮಾಡದೇ, ನೈಸರ್ಗಿಕವಾಗಿ ಬಿಡಬೇಕು ಎಂಬುದು ಸಾಗರ ತಜ್ಞರ ಅಭಿಪ್ರಾಯ.

ಮಂಗಳೂರಿನಲ್ಲಂತೂ ಆಲಿವ್ ರಿಡ್ಲಿ ಕಡಲಾಮೆ ಸಂರಕ್ಷಣಾ ಕ್ರಮಗಳು ಫಲ ನೀಡಿವೆ. ಸಸಿಹಿತ್ಲು ಮತ್ತು ಇಡ್ಯ ನಡುವಿನ 3-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆರು ಗೂಡುಗಳು ಪತ್ತೆಯಾಗಿದ್ದವು. ಆರು ಗೂಡುಗಳ ಪೈಕಿ ನಾಲ್ಕು ಗೂಡುಗಳು ಹೆಚ್ಚಿನ ಉಬ್ಬರವಿಳಿತದ ನೀರಿನ ಮಿತಿಯಲ್ಲಿದ್ದ ಕಾರಣ ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಯಿತು. ಅರಣ್ಯ ಇಲಾಖೆಯು ಗೂಡುಗಳನ್ನು ಜಾಲರಿ ಬಲೆಯಿಂದ ರಕ್ಷಿಸಿತು.ಸಾಮಾನ್ಯವಾಗಿ ಮೊಟ್ಟೆಗಳು ಹೊರಬರಲು 48-52 ದಿನಗಳನ್ನು ತೆಗೆದುಕೊಳ್ಳುತ್ತವೆ.

ಕಾರವಾರದಲ್ಲಿ ಕಡಲು ಸೇರಿದ ಮರಿಗಳು

ಕಾರವಾರದಲ್ಲಿ ಮಂಗಳವಾರ ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ ಕಡಲಿಗೆ ಬಿಡುವ ಕಾರ್ಯ ನಡೆಯಿತು. ದೇವಭಾಗ ಕಡಲ ಕಿನಾರೆಯಲ್ಲಿ ಸಂರಕ್ಷಿಸಿಡಲಾಗಿದ್ದ ಕಡಲಾಮೆ ಮೊಟ್ಟೆಗಳಿಂದ 47 ಮರಿಗಳ ಜನನವಾಗಿದ್ದು, ಅವುಗಳನ್ನು ಕಡಲಿಗೆ ಬಿಡಲಾಯಿತು. ಈ ವರ್ಷಾರಂಭದ ಮೊದಲ ಸಂತಾನೋತ್ಪತ್ತಿ ಇದು. ಕಳೆದ ವರ್ಷ ಕಡಲಾಮೆಗಳು ಬಂದು ಮೊಟ್ಟೆ ಇಟ್ಟಿದ್ದವು.ಸತತವಾಗಿ ಅರಣ್ಯ ಇಲಾಖೆ ಸಿಬಂದಿ ಸಂರಕ್ಷಣೆ ಮಾಡಿದ್ದರು. ಕೊನೆಗೂ ಕಡಲಾಮೆ ಮರಿ ಸಂರಕ್ಷಿಸಿದ ನಿರುಮ್ಮಳತೆ ಕರ್ನಾಟಕ ಅರಣ್ಯ ಇಲಾಖೆಯದ್ದು.

(ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

IPL_Entry_Point

ವಿಭಾಗ