ಕನ್ನಡ ಸುದ್ದಿ  /  ಕರ್ನಾಟಕ  /  Karnataka Election: ದಕ್ಷಿಣಕನ್ನಡದಲ್ಲಿ ರಂಗೇರಿದ ಚುನಾವಣಾ ಸಮರ; ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್‌ ಪುತ್ತಿಲರಿಂದ ಪ್ರಣಾಳಿಕೆ ಬಿಡುಗಡೆ

Karnataka Election: ದಕ್ಷಿಣಕನ್ನಡದಲ್ಲಿ ರಂಗೇರಿದ ಚುನಾವಣಾ ಸಮರ; ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್‌ ಪುತ್ತಿಲರಿಂದ ಪ್ರಣಾಳಿಕೆ ಬಿಡುಗಡೆ

Karnataka Election: ದಕ್ಷಿಣ ಕನ್ನಡದಲ್ಲಿ ಚುನಾವಣಾ ಸಮರ ಚುರುಕುಗೊಂಡಿದ್ದು, ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವೂ ಜೋರಾಗಿದೆ. ಈ ನಡುವೆ ಅರುಣ್‌ ಕುಮಾರ್‌ ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಅರುಣ್‌ ಕುಮಾರ್‌ ಪುತ್ತಿಲ
ನಾಮಪತ್ರ ಸಲ್ಲಿಕೆ ವೇಳೆ ಅರುಣ್‌ ಕುಮಾರ್‌ ಪುತ್ತಿಲ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಾವು ಏರತೊಡಗುತ್ತಿದ್ದಂತೆಯೇ ಮಳೆಯ ಸಿಂಚನವಾಗುತ್ತಿದೆ. ಬುಧವಾರ ಹನಿಮಳೆಯೊಂದಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಪ್ರಚಾರ ನಡೆಸಿದರೆ, ಭಾರಿ ಸಂಚಲನವನ್ನೇ ಸೃಷ್ಟಿಸಿರುವ ಪುತ್ತೂರು ಕ್ಷೇತ್ರದಲ್ಲಿ ಹಿಂದು ಸಂಘಟನೆಗಳ ಮುಖಂಡ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಜಿಲ್ಲೆಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡುತ್ತಿರುವುದು ಈ ಚುನಾವಣೆಯಲ್ಲಿ ಇದೇ ಮೊದಲಾಗಿದ್ದು, ಪ್ರಚಾರದ ದೃಷ್ಟಿಯಿಂದ ಗಮನ ಸೆಳೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದಷ್ಟೇ ಅಲ್ಲ, ನಾಮಪತ್ರ ಸಲ್ಲಿಕೆ ವೇಳೆಯೂ ಬೃಹತ್ ಮೆರವಣಿಗೆ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದರು ಪುತ್ತಿಲ್ಲ. ಮಾತ್ರವಲ್ಲ ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಇಂದು ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ನಡುವೆ ಜಿಲ್ಲೆಯಾದ್ಯಂತ ಬಿಜೆಪಿ, ಕಾಂಗ್ರೆಸ್ ಮನೆ ಮನೆ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.

ಪ್ರಣಾಳಿಕೆಯಲ್ಲಿ ಏನೇನಿದೆ?

1997ರ ಸಂದರ್ಭ ಸೌಮ್ಯಾ ಭಟ್ ಎಂಬ ವಿದ್ಯಾರ್ಥಿನಿಯ ಹತ್ಯೆ ನಡೆದ ಸಂದರ್ಭ ಇಡೀ ಪುತ್ತೂರು ಹೊತ್ತಿ ಉರಿದಿತ್ತು. ಬಿಜೆಪಿ ಮುಂಚೂಣಿಯಲ್ಲಿದ್ದುಕೊಂಡು ಹತ್ಯೆ ವಿರುದ್ಧ ಹೋರಾಟ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೌಮ್ಯಾ ಭಟ್ ಸ್ಮರಣಾರ್ಥ ಯುವತಿಯರಿಗೆ ಸ್ವ-ಉದ್ಯೋಗ ತರಬೇತಿ ಕೇಂದ್ರ, ಇತ್ತೀಚೆಗೆ ಮತಾಂಧರಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರ್ ಸ್ಮರಣಾರ್ಥ ಯುವಕರಿಗೆ ಸ್ವ-ಉದ್ಯೋಗ ತರಬೇತಿ ಕೇಂದ್ರ, ಸೈನ್ಯಕ್ಕೆ ತರಬೇತಿ, 24 ಗಂಟೆಗಳ ಸಹಾಯವಾಣಿ, ದಿ.ಕಾರ್ತಿಕ್‌ ಮಾರ್ಲ ಸ್ಮರಣಾರ್ಥ ಸರಕಾರಿ ಐಟಿಐ, ಸುಸಜ್ಜಿತ ಕ್ರೀಡಾಂಗಣ ವಿಟ್ಲವನ್ನು ತಾಲೂಕು ಮಾಡುವ ಸಂಕಲ್ಪ, ವಿಟ್ಲದಲ್ಲಿ ಶಾಸಕರ ಕಚೇರಿ, ಪುತ್ತೂರಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹೀಗೆ 31 ಅಂಶಗಳ ಪ್ರಣಾಳಿಕೆಯನ್ನು ಹೊರತಂದಿದ್ದಾರೆ ಪುತ್ತಿಲ.

ಇನ್ನು ಎಸ್‌ಡಿಪಿಐ ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸ್ಥಳೀಯ ಪ್ರಣಾಳಿಕೆಯನ್ನು ಘೋಷಿಸಿ, ಜಾತ್ಯಾತೀತ ವಾತಾವರಣ ನಿರ್ಮಾಣ ಸಹಿತ ಪಕ್ಷದ ನೀತಿ ನಿರೂಪಣೆಗಳ ಜಾರಿ ಕುರಿತು ಪ್ರಸ್ತಾಪಿಸಿತ್ತು.

ಕಾಂಗ್ರೆಸ್‌ ಪ್ರಚಾರ ಜೋರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯದಲ್ಲಿ ಪ್ರಚಾರ ಸಭೆಯನ್ನು ನಡೆಸಿದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಳ್ತಂಗಡಿಯಲ್ಲಿ ಪ್ರಚಾರ ಮುಗಿಸಿದ್ದಾರೆ. ಇನ್ನುಳಿದಂತೆ ಬಿಜೆಪಿಯ ಪ್ರಮುಖ ನಾಯಕರು ಇನ್ನಷ್ಟೇ ಬರಬೇಕಿದ್ದು, ಸ್ಥಳೀಯ ಮಟ್ಟದಲ್ಲಿ ರೋಡ್ ಶೋಗಳು ನಡೆದಿವೆ. ದೊಡ್ಡ ಮಟ್ಟಿನ ಪ್ರಚಾರ ಬಿಜೆಪಿಯಲ್ಲಿ ಇನ್ನೂ ಆಗಬೇಕಷ್ಟೇ.

ಪುತ್ತೂರು ಕ್ಷೇತ್ರ ಇಡೀ ರಾಜ್ಯದಲ್ಲೇ ಗಮನ ಸೆಳೆದಿರುವ ಕ್ಷೇತ್ರವಾಗಿದ್ದು, ಅದಕ್ಕೆ ಕಾರಣ ಹಿಂದು ಸಂಘಟನೆ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಕಣಕ್ಕಿಳಿದಿದ್ದಷ್ಟೇ ಅಲ್ಲ, ಬಿಜೆಪಿ ವರಿಷ್ಠರ ಸತತ ಮನವೊಲಿಕೆಯ ಬಳಿಕವೂ ಹಿಂತೆಗೆಯದೆ ತನ್ನ ನಿರ್ಧಾರಕ್ಕೆ ಅಚಲವಾಗಿರುವುದು. ಇದು ಬಿಜೆಪಿ ಹೈಕಮಾಂಡ್‌ಗೆ ತಲೆನೋವು ತಂದಿದೆ. ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ನಾಮಪತ್ರ ಸಲ್ಲಿಕೆ ವೇಳೆ ನಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಎಂದು ಬಿಜೆಪಿ ಹೇಳಿ ಪುತ್ತಿಲ ಲೆಕ್ಕಕ್ಕಿಲ್ಲ ಎಂಬಂತೆ ಮಾಡಿತ್ತು. ಅದೇ ರೀತಿ ಕಾಂಗ್ರೆಸ್ ಕೂಡ ತನ್ನ ಪ್ರತಿಸ್ಪರ್ಧಿ ಬಿಜೆಪಿ ಎಂದು ಗುರುತಿಸಿಕೊಂಡು ಪಕ್ಷೇತರ ಅಭ್ಯರ್ಥಿಯಿಂದ ತನಗೇನೂ ತೊಂದರೆ ಇಲ್ಲ ಎಂದು ಹೇಳಿಕೊಂಡಿತು.

ವಾಸ್ತವವಾಗಿ ಪುತ್ತೂರಿನಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿಗೆ ತನ್ನ ಮತಗಳು ಹಂಚಿಹೋಗದಂತೆ ತಡೆಯುವುದು ಸವಾಲಾಗಿರುವ ಕಾರಣ ಫೇಸ್‌ಬುಕ್, ವಾಟ್ಸಾಪ್ ಸಹಿತ ಎಲ್ಲಾ ಸಾಮಾಜಿಕ ಸಾಮಾಜಿಕ ಜಾಲತಾಣಗಳ ಜೊತೆಗೆ ಪಕ್ಷದ ಎಲ್ಲ ಕಾರ್ಯಕರ್ತರ ಮನವೊಲಿಸಿ, ಕಮಲದ ಚಿಹ್ನೆಗೇ ಮತ ಹಾಕುವಂತೆ ಹೇಳುತ್ತಿದ್ದಾರೆ. ಇತ್ತ ಪುತ್ತಿಲ ವಿವಿಧ ಸಮಾವೇಶಗಳನ್ನೂ ಮುಂದಿನ ವಾರದೊಳಗೆ ಮಾಡಲು ಯೋಜನೆ ಹಾಕಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹಾಟ್ ಫೇವರಿಟ್ ಕ್ಷೇತ್ರವಾಗಿ ಪುತ್ತೂರು ನಂಬರ್ ಒನ್ ಆದರೆ, ಇನಾಯತ್ ಆಲಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ನೀಡಿ ಮಾಜಿ ಶಾಸಕ ಮೊಯ್ದೀನ್ ಬಾವ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್‌ನಿಂದ ಸ್ಪರ್ಧೆಗಿಳಿದಿರುವ ಮಂಗಳೂರು ಉತ್ತರ ಕ್ಷೇತ್ರ ಎರಡನೇ ಫೇವರಿಟ್ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point