Mangaluru News: ಕರಾವಳಿಯಲ್ಲಿ ಎನ್ಐಎ ದಾಳಿ ನಡೆಸಿದ್ದೇಕೆ; ಏನಿದು ಟೆರರ್ ಲಿಂಕ್?
NIA raid: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮತ್ತೆ ಎನ್ಐಎ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಮಂಗಳೂರು: ಎಲ್ಲಿಯ ಕರಾವಳಿ? ಎಲ್ಲಿಯ ಬಿಹಾರ? ಭೀತಿವಾದ ಚಟುವಟಿಕೆಗೂ ಕರಾವಳಿಗೂ ಎತ್ತಣಿಂದೆತ್ತ ಸಂಬಂಧ? ಹೀಗೆಂದು ಪ್ರಶ್ನಿಸುತ್ತಾ ಹೋದರೆ, ರಾಷ್ಟ್ರೀಯ ತನಿಖಾ ದಳದ ಪತ್ರಿಕಾ ಹೇಳಿಕೆಯು ಕಳೆದ ಮಾರ್ಚ್ 6ರಂದು ದಕ್ಷಿಣ ಕನ್ನಡ ಜಿಲ್ಲೆಯ ನಂದಾವರದ ಇಕ್ಬಾಲ್ ಎಂಬಾತನ ಮನೆಗೆ ಹೋದಾಗ ನಡೆದ ತನಿಖೆಯ ಅಂಶಗಳು ಇವಕ್ಕೆಲ್ಲಾ ಉತ್ತರ ನೀಡುತ್ತದೆ.
ಬುಧವಾರ ಬೆಳ್ಳಂಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಎನ್ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿಗಳು ಹಲವರ ಮನೆಯ ಕದ ತಟ್ಟಿದ್ದಕ್ಕೂ, ಬಿಹಾರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ವಿಧ್ವಂಸಕ ಕೃತ್ಯದ ಸಂಚಿಗೂ ಪರೋಕ್ಷ ಲಿಂಕ್ ಇದೆ ಎಂಬುದನ್ನು ಕಳೆದ ಬಾರಿಯ ದಾಳಿ ತಿಳಿಸಿಕೊಟ್ಟಿತ್ತು.
ಮಾರ್ಚ್ ತಿಂಗಳಲ್ಲಿ ಬಯಲಿಗೆ ಬಂದಿತ್ತು
ಮಾರ್ಚ್ 6ರಂದು ಭಾನುವಾರ ಸಂಜೆ ಎನ್ಐಎ ಅಧಿಕಾರಿಗಳ ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ದಾಳಿ ನಡೆಸಿತ್ತು. ಈ ಸಂದರ್ಭ ವಶಕ್ಕೆ ಪಡೆದುಕೊಂಡ ಮೂವರು ಸೇರಿ ಕರ್ನಾಟಕದ ನಾಲ್ವರು, ಕಾಸರಗೋಡಿನ ಒಬ್ಬ ಆರೋಪಿ ಸೇರಿ ಒಟ್ಟು ಐವರನ್ನು ಪಿಎಫ್ಐಗೆ ಹವಾಲಾ ಫಂಡಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರಿನ ಮಹಮ್ಮದ್ ಸಿನಾನ್, ಸಜಿಪಮೂಡದ ಸರ್ಫ್ರಾಜ್ ನವಾಝ್, ಜಿಲ್ಲೆಯ ಪಾಣೆಮಂಗಳೂರಿನ ಇಕ್ಬಾಲ್, ಪುತ್ತೂರು ತಾಲೂಕಿನ ಅಬ್ದುಲ್ ರಫೀಕ್ ಎಂ, ಕಾಸರಗೋಡು ಕುಂಜತ್ತೂರಿನ ಆಬಿದ್ ಕೆಎಂ ಆರೋಪಿಗಳು. ಪಾಟ್ನಾ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಇವರ ವಿಚಾರಣೆ ನಡೆಯುತ್ತಿದೆ.
ಬಿಹಾರದ ಫುಲ್ವಾರಿಶರೀಫ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನಿಷೇಧಿತ ಪಿಎಫ್ಐ ನಡೆಸುತ್ತಿದ್ದ ಹಲವು ಕೃತ್ಯಗಳಿಗೆ ಸಂಬಂಧಿಸಿದ ವಿಚಾರಕ್ಕೆ ಎನ್ಐಎ ಕಳೆದ ವರ್ಷದಿಂದಲೇ ತೀವ್ರ ವಿಚಾರಣೆ ನಡೆಸುತ್ತಿತ್ತು. ಇದರ ಮುಂದುವರೆದ ಭಾಗವಾಗಿ ಕಳೆದ ಮಾರ್ಚ್‌ನಲ್ಲಿ ದಾಳಿ ನಡೆದಿತ್ತು. ಈ ಸಂದರ್ಭ ಪಿಎಫ್ಐ ನಿಷೇಧಿಸಿದರೂ ದೊಡ್ಡ ಮಟ್ಟದ ಹವಾಲಾ ಹಣ ಸಾಗಾಟ ನಡೆಯುತ್ತಿರುವುದು ಗೊತ್ತಾಗಿತ್ತು.
ಕೇರಳ, ಕರ್ನಾಟಕ ಮತ್ತು ಬಿಹಾರ ರಾಜ್ಯಗಳು ಸೇರಿದಂತೆ ದೇಶದಾದ್ಯಂತ ಪಿಎಫ್ಐನ ಹವಾಲಾ ನೆಟ್‌ವರ್ಕ್ ಕಾರ್ಯಾಚರಿಸುತ್ತಿದ್ದು, ಎನ್ಐಎಗೆ ದೊಡ್ಡ ಬೇಟೆಯೇ ಸಿಕ್ಕಿತ್ತು. ಇದರ ಬೇರುಗಳು ಯುಎಇಯಲ್ಲಿದ್ದು, ತನಿಖೆ ಜಾಡು ಹಿಡಿದಾಗ ಐವರು ಸಿಕ್ಕಿದ್ದರು.
ಬಿಹಾರದ ಚಂಪಾರಣ್ ಜಿಲ್ಲೆ ಸೇರಿದಂತೆ ಹಲವೆಡೆ ವ್ಯವಸ್ಥಿತ ರೀತಿಯಲ್ಲಿ ನಿಷೇಧವಿದ್ದಾಗಲೂ ಸಕ್ರಿಯವಾಗಿ ಪಿಎಫ್ಐ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯನ್ನು ಎನ್ಐಎ ಹುಡುಕಿಕೊಂಡು ಹೋದಾಗ, ಕೆಲವರನ್ನು ವಿಚಾರಣೆ ನಡೆಸಲಾಯಿತು. 2023ರ ಫೆಬ್ರವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನ ಬಂಧಿಸಿದಾಗ ಈ ವಿಷಯ ಹೊರಬಿದ್ದಿದೆ.
ಮಾರ್ಚ್‌ನಲ್ಲಿ ಬಂಧಿತ ಐವರು ಆರೋಪಿಗಳು ಪಿಎಫ್ಐನ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದುಕೊಂಡು, ಹಣಕಾಸು ವರ್ಗಾವಣೆಯನ್ನು ಮಾಡುವ ಜವಾಬ್ದಾರಿ ನಿರ್ವಹಿಸುತ್ತಿರುವ ಶಂಕೆಯನ್ನು ಎನ್ಐಎ ವ್ಯಕ್ತಪಡಿಸಿತ್ತು.
ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಒಟ್ಟು 8 ಜಾಗಗಳಲ್ಲಿ ಎನ್ಐಎ ತನಿಖೆ ನಡೆಸಿತ್ತು. ಈ ಸಂದರ್ಭ ಹಲವು ಡಿಜಿಟಲ್ ಉಪಕರಣಗಳನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ವೇಳೆ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿರುವುದು ಕಂಡುಬಂದಿದೆ. ದುಬೈ, ಅಬುಧಾಬಿ ಮೂಲಗಳಿಂದ ಇಕ್ಬಾಲ್ ಮತ್ತು ಇತರ ಸಹಚರರು ಕಾನೂನುಬಾಹಿರವಾಗಿ ಹಣಕಾಸು ಸಂಗ್ರಹಿಸಿ ವಿತರಣೆಯನ್ನು ವ್ಯವಸ್ಥಿತವಾಗಿ ಮಾಡುತ್ತಿರುವುದು ಗೊತ್ತಾದ ಬಳಿಕ ಕಾರ್ಯಾಚರಣೆ ನಡೆದಿತ್ತು.
ಇಂದಿನ ಕಾರ್ಯಾಚರಣೆ
ಬಂಟ್ವಾಳ ತಾಲೂಕಿನ ಝಕಾರಿಯಾ ಗೋಳ್ತಮಜಲು, ಇಜಾಜ್ ಆಹಮ್ಮದ್ ನರಿಕೊಂಬು, ಅಬುಬಕ್ಕರ್ ಸಿದ್ದೀಕ್ ಕೊಳ್ನಾಡು, ಝಾಕೀರ್ ಸಜೀಪ ನಡು, ಅಬ್ದುಲ್ ಮುಭಾರಕ್ ಬೊಳ್ಳಾಯಿ, ಎಂಡಿ ಉಜಾಲೈಪ್ ಮಾಣಿ, ಮಹಮ್ಮದ್ ರಮೀಜ್ ನೆಹರುನಗರ, ಆಸ್ಪಕ್ ಗೋಳ್ತಮಜಲು, ಜುಬೈರ್ ನೇರಳಕಟ್ಟೆ ಅವರ ಮನೆಗೆ ಎನ್ಐಎ ಪೋಲೀಸರ ತಂಡ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿ ಮೂಡುಬಿದಿರೆ, ವೇಣೂರು ಕಡೆಗಳಲ್ಲೂ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಗೌಪ್ಯವಾಗಿ ವಿಚಾರಣೆ ನಡೆಸುತ್ತಿದ್ದು, ಈ ಸಂಬಂಧ ಹಲವು ವಿಚಾರಗಳು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಸ್ಥಳೀಯ ಪೊಲೀಸರು ಬಂದೋಬಸ್ತ್ ಅಷ್ಟೇ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ವಿಚಾರಣೆಯ ಮಾಹಿತಿಯನ್ನು ನೀಡಲು ನಿರಾಕರಿಸಿದ್ದು, ಈ ಸಂಬಂಧ ಹೆಚ್ಚಿನ ಅಧಿಕೃತ ಮಾಹಿತಿಯನ್ನು ಎನ್ಐಎ ಅಧಿಕಾರಿಗಳು ಪತ್ರಿಕಾ ಹೇಳಿಕೆ ಮೂಲಕ ನೀಡಲಿದ್ದಾರೆ ಎಂದು ತಿಳಿದುಬಂದಿದೆ.