Obituary: ಡೆನ್ನಾನ ಡೆನ್ನಾನ ಹಾಡಿನ ಖ್ಯಾತಿಯ ಹಿರಿಯ ರಂಗಕರ್ಮಿ, ಲೇಖಕ, ನಿರ್ದೇಶಕ ಸದಾನಂದ ಸುವರ್ಣ ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  Obituary: ಡೆನ್ನಾನ ಡೆನ್ನಾನ ಹಾಡಿನ ಖ್ಯಾತಿಯ ಹಿರಿಯ ರಂಗಕರ್ಮಿ, ಲೇಖಕ, ನಿರ್ದೇಶಕ ಸದಾನಂದ ಸುವರ್ಣ ನಿಧನ

Obituary: ಡೆನ್ನಾನ ಡೆನ್ನಾನ ಹಾಡಿನ ಖ್ಯಾತಿಯ ಹಿರಿಯ ರಂಗಕರ್ಮಿ, ಲೇಖಕ, ನಿರ್ದೇಶಕ ಸದಾನಂದ ಸುವರ್ಣ ನಿಧನ

Mangalore News ಹಿರಿಯ ರಂಗಕರ್ಮಿ, ವಿಶಿಷ್ಟ ಚಟುವಟಿಕೆಗಳ ಮೂಲಕವೇ ಮನೆ ಮಾತಾಗಿದ್ದ ಸದಾನಂದ ಸುವರ್ಣ( Sadananda Suvarna) ಇನ್ನು ನೆನಪು ಮಾತ್ರ

ಖ್ಯಾತ ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ
ಖ್ಯಾತ ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ

ಮಂಗಳೂರು: ದೂರದರ್ಶನದಲ್ಲಿ ಜನಪ್ರಿಯವಾಗಿದ್ದ ‘ಗುಡ್ಡದ ಭೂತ’ ಎಂಬ ಧಾರಾವಾಹಿಯನ್ನು ನಿರ್ದೇಶಿಸಿ ಡೆನ್ನಾನ ಡೆನ್ನಾನ ಎನ್ನುವ ಗೀತೆಯ ಮೂಲಕ ಜನಪ್ರಿಯವಾಗಿದ್ದ ಹಿರಿಯ ರಂಗನಟ, ನಿರ್ದೇಶಕ, ನಿರ್ಮಾಣಪ, ಲೇಖಕ ಸದಾನಂದ ಸುವರ್ಣ (92) ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 1931ರ ಡಿಸೆಂಬರ್ 24ರಂದು ರುಕ್ಮ ಕೋಟ್ಯಾನ್, ಪೂವಮ್ಮ ದಂಪತಿಗೆ ಜನಿಸಿದ್ದ ಸದಾನಂದ ಸುವರ್ಣ, ಮೂಲ್ಕಿ ಬೋರ್ಡ್ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಮುಂಬೈಗೆ ಆಗಮಿಸಿ, ರಾತ್ರಿಶಾಲೆಯಲ್ಲಿ ವ್ಯಾಸಂಗ ಮುಂದುವರಿಸಿದರು.ಈ ಸಂದರ್ಭ’ಕುರುಡನ ಸಂಗೀತ’,ವೆಂಬ ನಾಟಕವನ್ನು ದಿಗ್ದರ್ಶಿಸಿದರು. ಗುಜರಾತಿ, ಮರಾಠಿ, ಇಂಗ್ಲೀಷ್ ರಂಗಭೂಮಿಗಳ ಅಧ್ಯಯನ ನಡೆಸಿದ್ದ ಸುವರ್ಣ, ಅವುಗಳಲ್ಲಿನ ಹೊಸತನಗಳನ್ನು ಕನ್ನಡ ರಂಗಭೂಮಿಗೆ ಅಳವಡಿಸುವ ಪ್ರಯತ್ನ ನಡೆಸಿದ್ದರು.

ಇದನ್ನೂ ಓದಿರಿ:

ಥಿಯೇಟರ್ ಟ್ರೇನಿಂಗ್ ಡಿಪ್ಲೊಮೊ ಕೋರ್ಸ್ ಪಡೆದು, ಸಾಮೂಹಿಕ ಮಾಧ್ಯಮಗಳಲ್ಲಿ ಭಾಗವಹಿಸಿ, ಮುಂಬಯಿನ ಐ. ಎ. ಸೊಸೈಟಿಯ ಫೋಟೋಗ್ರಫಿಯ ವಿಶೇಷ ತರಬೇತಿ ಪಡೆದಿದ್ದಾರೆ. ಈಡಿಪಸ್, ಕದಡಿದ ನೀರು, ಪ್ರಜಾಪ್ರಭುತ್ವ-ಲೊಳಲೊಟ್ಟೆ, ಧರ್ಮ ಚಕ್ತ್ರ, ಸತ್ಯಂ ವದ-ಧರ್ಮಂ ಚರ, ಯಾರು ನನ್ನವರು? ಎಂಬ ನಾಟಕಗಳನ್ನು ದಿಗ್ದರ್ಶಿಸಿದ್ದಾರೆ. ಮೊಗವೀರ ಪತ್ರಿಕೆಯಲ್ಲಿ ಬರೆದ ’ಮನೆ ಬೆಳಕು ಕಾದಂಬರಿ’ ಧಾರಾವಾಹಿಯಾಗಿತ್ತು.

ಕನ್ನಡ ತುಳು ರಂಗ ಭೂಮಿಯಲ್ಲಿ ನೂರಾರು ಅತ್ಯುತ್ತಮ ಯಶಸ್ವೀ ನಾಟಕಗಳನ್ನು ರಚಿಸಿ ನಿರ್ದೇಶಿಸಿದ, ಘಟಶ್ರಾದ್ಧ,ಕುಬಿ ಮತ್ತು ಇಯಾಲದಂತಹ ಸದಭಿರುಚಿಯ ಸಿನೆಮಾಗಳನ್ನು, ಗುಡ್ಡೆದ ಭೂತದಂತಹ ಧಾರಾವಾಹಿ, ಶಿವರಾಮ ಕಾರಂತರ ಕುರಿತು ಆಪ್ತ ನೋಟವನ್ನು ನೀಡುವ ಸಾಕ್ಷ್ಯಚಿತ್ರ, ಧಾರಾವಾಹಿಗಳನ್ನು ಕೊಟ್ಟ ರಂಗಭೂಮಿಯ ಹಿರಿಯಜ್ಜ - ಸದಾನಂದ ಸುವರ್ಣ.

ಸ್ವತಃ ನಟ ನಾಟಕಕಾರನಾಗಿ, ಪ್ರಯೋಗಶೀಲ ನಿರ್ದೇಶಕನಾಗಿ ಮುಂಬಯಿ ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಸುವರ್ಣರು ತಮ್ಮ ಇಳಿವಯಸ್ಸಿನಲ್ಲಿ ಮಂಗಳೂರಿನ ರಂಗಭೂಮಿಗೆ ಲಗ್ಗೆಯಿಟ್ಟು ಅಲ್ಲಿಯೂ ತನ್ನ ಸೃಜನಶೀಲ ಪ್ರತಿಭೆಯ ಸುವರ್ಣ ಛಾಪನ್ನು ಒತ್ತಿದವರು. ಮಂಗಳೂರಿನ ಹವ್ಯಾಸಿ ನಟ ನಟಿಯರಿಗೆ

ಉರುಳು, ಕೋರ್ಟ್ ಮಾರ್ಷಲ್, ಮಳೆ ನಿಲ್ಲುವ ವರೆಗೆ, ಮುಂತಾದ ನಾಟಕಗಳನ್ನು ನಿರ್ದೇಶಿಸಿ ಸದಭಿರುಚಿಯ ರಂಗ ಕಾಯಕ ಹೇಗಿರಬೇಕು ಎಂದು ನಿರೂಪಿಸಿದವರು.

ತಾನೂ ಬೆಳೆಯುತ್ತ ನೂರಾರು ಹಿರಿಯ ಕಿರಿಯ ಕಲಾವಿದರನ್ನೂ ಬೆಳೆಸಿದ ಅನನ್ಯ ರಂಗ ತಪಸ್ವಿ ನಮ್ಮ ಸದಾನಂದ ಸುವರ್ಣ.

ಮುಂಬಯಿ ಮತ್ತು ಮಂಗಳೂರಿನ ಹವ್ಯಾಸಿರಂಗಭೂಮಿಗೆ ಸುವರ್ಣರ ಕೊಡುಗೆ ಅನನ್ಯವಾದುದು.

ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಬಿ.ವಿ.ಕಾರಂತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ, ಲೇಖಕಿ ದಿ.ಸೀತಾಲಕ್ಷ್ಮಿ ಕರ್ಕಿಕೋಡಿಯವರು ಸದಾನಂದ ಸುವರ್ಣರ ರಂಗ ಸಾಧನೆಯ ಕುರಿತೇ "ರಂಗ ಜಂಗಮ ಸದಾನಂದ ಸುವರ್ಣ" ಅನ್ನುವ ಸಂಶೋಧನಾ ಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪಡೆದಿದ್ದಾರೆ.

ಸದಾನಂದ ಸುವರ್ಣ ನಿರ್ಮಾಣ ಮಾಡಿದ್ದ ‘ಘಟಶ್ರಾದ್ಧ’ ಸಿನಿಮಾಕ್ಕೆ ಕೇಂದ್ರ ಸರ್ಕಾರವು ಸುವರ್ಣ ಕಮಲ ನೀಡಿತ್ತು. ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿ, ಬಾಲಿವುಡ್ನ ಖ್ಯಾತ ನಟ ನಸಿರುದ್ಧೀನ್ ಶಾ ನಟಿಸಿದ್ದ ‘ಮನೆ’ ಹಾಗೂ ಕಾಸರವಳ್ಳಿ ಅವರೇ ನಿರ್ದೇಶನ ಮಾಡಿ ಚಾರುಹಾಸನ್ ನಟಿಸಿದ್ದ ‘ತಬರನ ಕತೆ’ ಸಿನಿಮಾಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ‘ಕುಬಿ ಮತ್ತು ಇಯಾಲ’ ಸಿನಿಮಾ ನಿರ್ದೇಶನ ಮಾಡಿದ್ದರು.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

Whats_app_banner