ಕನ್ನಡ ಸುದ್ದಿ  /  ಕರ್ನಾಟಕ  /  Opinion: ಕಾಂಗ್ರೆಸ್ ಬಿಟ್ಟ ಅಸ್ತ್ರವನ್ನೇ ತಿರುಗುಬಾಣವಾಗಿಸಿದ ಬಿಜೆಪಿ: ಅಸ್ಮಿತೆಯ ಅವಕಾಶ ಬಳಸಿಕೊಳ್ಳುವಲ್ಲಿ ಬೀಳಲಿಲ್ಲ ಹಿಂದೆ

Opinion: ಕಾಂಗ್ರೆಸ್ ಬಿಟ್ಟ ಅಸ್ತ್ರವನ್ನೇ ತಿರುಗುಬಾಣವಾಗಿಸಿದ ಬಿಜೆಪಿ: ಅಸ್ಮಿತೆಯ ಅವಕಾಶ ಬಳಸಿಕೊಳ್ಳುವಲ್ಲಿ ಬೀಳಲಿಲ್ಲ ಹಿಂದೆ

Political Opinion: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ಗಂಟೆ ಬಾಕಿ ಇದೆ. ಬಹಿರಂಗ ಪ್ರಚಾರ ಅಭಿಯಾನ ಮುಗಿದಿದೆ. ಮನೆ ಮನೆ ಅಭಿಯಾನ ಸದ್ದಿಲ್ಲದೆ ನಡೆಯುತ್ತಿದೆ. ಲೇಟ್‌ ಆಗಿ ಆರಂಭವಾದ ಬಿಜೆಪಿಯ ಪ್ರಚಾರ ಅಭಿಯಾನಕ್ಕೆ ವೇಗ ಸಿಕ್ಕಿದ್ದು ʻಬಜರಂಗಿʼ ಸ್ಪರ್ಶದಿಂದ. ಈ ಅಭಿಯಾನದ ಒಂದು ಅವಲೋಕನ ಇಲ್ಲಿದೆ.

ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಸಿಎಂ ಬೊಮ್ಮಾಯಿ ಸ್ವಾಗತಿಸಿದ ಸಂದರ್ಭ. (ಕಡತ ಚಿತ್ರ)
ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಸಿಎಂ ಬೊಮ್ಮಾಯಿ ಸ್ವಾಗತಿಸಿದ ಸಂದರ್ಭ. (ಕಡತ ಚಿತ್ರ) (Basavaraj S Bommai Twitter)

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಯ ಪ್ರಚಾರ ಮುಗಿದು ಅಂತಿಮ ಘಟ್ಟದ ಸಮೀಪ ಇದ್ದೇವೆ. ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಂತದಲ್ಲಿ ಬಿಜೆಪಿ (BJP)ಯ ಪ್ರಚಾರ ಅಭಿಯಾನದ ವೈಖರಿಯ ಕಡೆಗೊಂದು ಇಣುಕುನೋಟಕ್ಕೆ ಈ ಹೊತ್ತು ಒಂದು ನಿಮಿತ್ತ.

ಆಡಳಿತ ವಿರೋಧಿ ಅಲೆಯಿಂದಾಗಿ ಕಂಗೆಟ್ಟಿದ್ದ ಬಿಜೆಪಿಯ ಪ್ರಚಾರ ಅಭಿಯಾನ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಪ್ರಣಾಳಿಕೆ ಬಿಡುಗಡೆ ಎಲ್ಲವೂ ಸ್ವಲ್ಪ ತಡವಾಯಿತು. ಪಕ್ಷದೊಳಗಿನ ಭಿನ್ನಮತ, ಬಂಡಾಯವೂ ಅದಕ್ಕೆ ಕಾರಣ. ಕಾಂಗ್ರೆಸ್‌ ಪಕ್ಷ ಆರಂಭಿಸಿದ ಆಡಳಿತ ವಿರೋಧಿ ಭಾವ ಬಲಪಡಿಸುವ ಅಭಿಯಾನಕ್ಕೆ ಎದುರಾಗಿ ಬಿಜೆಪಿಯ ಪ್ರಚಾರ ಅಭಿಯಾನಕ್ಕೆ ಬಲ ಇರಲಿಲ್ಲ.

ಪೇಸಿಎಂ ಅಭಿಯಾನಕ್ಕೆ ತಕ್ಕ ಉತ್ತರ ನೀಡುವ ಪ್ರಯತ್ನವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪಿಎಫ್‌ಐ ಭಾಗ್ಯ ಪೋಸ್ಟರ್‌ ಅಭಿಯಾನವನ್ನು ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ಮಾಡಿದ್ದು ಸಫಲತೆ ನೀಡಲಿಲ್ಲ. ಡ್ಯಾಮೇಜ್ ಕಂಟ್ರೋಲ್‌ ಪ್ರಯತ್ನದಲ್ಲಿರುವಾಗಲೇ ಮಾಡಾಳ್‌ ಲಂಚ ಪ್ರಕರಣ ಗಮನಸೆಳೆಯಿತು. ಪ್ರಶಾಂತ್‌ ಮಾಡಾಳ್‌ ಅವರನ್ನು ಪಕ್ಷದಿಂದ 6 ವರ್ಷಕ್ಕೆ ಉಚ್ಚಾಟನೆ ಮಾಡಿದರೂ, ಕಳಂಕ ತೊಳೆದು ಹೋಗಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಚುನಾವಣೆ ಘೋಷಣೆ ಪ್ರಚಾರ ಅಭಿಯಾನ ಶುರುವಾದ ಬಳಿಕ ಅದಕ್ಕೆ ಒಂದು ವೇಗ ಸಿಕ್ಕಿದ್ದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದ ಬಳಿಕ. ಪ್ರಧಾನಿ ಮೋದಿಯವರನ್ನೇ ಚುನಾವಣೆಯ ಫೇಸ್‌ ಆಗಿ ಬಳಸಿಕೊಂಡಿತು ಬಿಜೆಪಿ.

ಬೀದರ್‌ನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಈ ಬಾರಿಯ ನಿರ್ಧಾರ ಪೂರ್ಣ ಬಹುಮತದ ಬಿಜೆಪಿ ಸರ್ಕಾರ' ಎಂಬ ಘೋಷವಾಕ್ಯವನ್ನು ಚಾಲ್ತಿಗೆ ತಂದರು. ಇದಕ್ಕೆ ಒಂದು ಕಾರಣವಿದೆ. ಬಹುತೇಕ ಎಲ್ಲ ಸಮೀಕ್ಷೆಗಳು ಅತಂತ್ರ ಜನಾದೇಶ ಎಂಬುದನ್ನು ತೋರಿಸಿತ್ತು. ಇದನ್ನು ಗಮನಿಸಿಯೇ, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೆ ಪಕ್ಷ ಎಂದಿಗೂ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿಲ್ಲ. ಆದ್ದರಿಂದ “ಈ ಬಾರಿಯ ನಿರ್ಧಾರ ಪೂರ್ಣ ಬಹುಮತದ ಬಿಜೆಪಿ ಸರ್ಕಾರ” ಎಂಬುದನ್ನು ಮನಸ್ಸಿನಲ್ಲಿ ಗಟ್ಟಿ ಮಾಡಿಕೊಳ್ಳಿ ಎಂದು ಮತದಾರರಲ್ಲಿ ಅವರ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ, “ಡಬಲ್‌ ಎಂಜಿನ್‌ ಸರ್ಕಾರ ಕರ್ನಾಟಕದ ಅಭಿವೃದ್ಧಿಯ ಸಾಕಾರ” ಎಂಬ ಘೋಷ ವಾಕ್ಯ ಮುನ್ನೆಲೆಗೆ ಬಂತು. ಗುಜರಾತ್‌ ಸೇರಿ ಇತರೆ ರಾಜ್ಯಗಳಲ್ಲಿ ಬಳಕೆಯಾದ ಈ ಘೋಷವಾಕ್ಯವನ್ನು ಕರ್ನಾಟಕದಲ್ಲಿ ಚಾಲ್ತಿಗೆ ತರುವ ಪ್ರಯತ್ನ ನಡೆಯಿತು. "ಬೇಡ ಡೌಟು, ಬಿಜೆಪಿಗೇ ನನ್ ವೋಟು" ಎಂಬ ಮತ್ತೊಂದು ಘೋಷವಾಕ್ಯವನ್ನೂ ಚಲಾವಣೆಗೆ ತಂದರು.

ಆದರೆ, ಇದಕ್ಕೆ ಕಾಂಗ್ರೆಸ್‌ ನಾಯಕರು ಟ್ರಬಲ್‌ ಎಂಜಿನ್‌ ಸರ್ಕಾರ, ಕಮಿಷನ್‌ ಸರ್ಕಾರ ಎಂಬಿತ್ಯಾದಿ ಟೀಕೆ ಮಾಡಿದ ಕೂಡಲೇ ಅದನ್ನು ನಿಧಾನವಾಗಿ ಕೈಬಿಟ್ಟರು. ಅದೇ ಹೊತ್ತಿಗೆ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಆಯಿತು. ಅದರಲ್ಲಿ ಈಗಾಗಲೇ ಘೋಷಿತ ಕಾಂಗ್ರೆಸ್‌ ಪಕ್ಷದ ಐದು ಗ್ಯಾರೆಂಟಿಗಳನ್ನು ಸೇರಿಸಲಾಗಿತ್ತು. ಆ ಐದು ಗ್ಯಾರೆಂಟಿಗಳನ್ನು ಲೇವಡಿ ಮಾಡಿದ ಬಿಜೆಪಿಯವರು ʻಕಾಂಗ್ರೆಸ್‌ ಗ್ಯಾರೆಂಟಿ ಪಕ್ಕಾ 420 ಮತ್ತು ವಾರೆಂಟಿ ಇಲ್ಲದ ಕಾಂಗ್ರೆಸ್‌ ಗ್ಯಾರೆಂಟಿ" ಎಂಬಿತ್ಯಾದಿ ಘೋಷವಾಕ್ಯ ಚಲಾವಣೆಗೆ ತಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣವೂ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತ ಸಾಗಿದ್ದು ವಿಶೇಷ. ಪರಿಷ್ಕರಣೆಯಾಗುತ್ತ ಹೋದ ಭಾಷಣದಲ್ಲಿ ಪ್ರಾದೇಶಿಕತೆಗೆ ಮಾನ್ಯತೆ ಸಿಕ್ಕಿದ್ದು ಕಂಡುಬಂತು. ಬಿಜೆಪಿ ಸರ್ಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಕಾಯಿದೆ, ಮೀಸಲಾತಿ ನಿಯಮ ಪರಿಷ್ಕರಣೆ ಮುಂತಾದ ಎಲ್ಲ ಕ್ರಮಗಳನ್ನು ಕಾಂಗ್ರೆಸ್‌ ಹಿಂಪಡೆಯುವುದಾಗಿ ಹೇಳಿದನ್ನು ಟೀಕಿಸುತ್ತ, “ಡಬಲ್‌ ಎಂಜಿನ್‌ vs ರಿವರ್ಸ್‌ಗೇರ್‌” ಘೋಷ ವಾಕ್ಯ ಚಲಾವಣೆ ಬಂತು.

ಬಿಜೆಪಿಗೆ ಮತ ಹಾಕದೇ ಇದ್ದರೆ ಗಲಭೆ ಸೃಷ್ಟಿಯಾಗಲಿದೆ ಎಂದು ಅಮಿತ್‌ ಶಾ ಹೇಳಿದರೆ, ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನ ಕೈ ತಪ್ಪಲಿದೆ, ಮೋದಿ ಆಶೀರ್ವಾದ ಬೇಕು ಎಂದಾದರೆ ಬಿಜೆಪಿಗೆ ಮತಹಾಕಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದು ವಿವಾದ ಸೃಷ್ಟಿಸಿತು. ಈ ಕುರಿತು ಚುನಾವಣಾ ಆಯೋಗಕ್ಕೂ ದೂರು ಹೋಯಿತು.

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ ಆದ ಕೂಡಲೇ, ಅದರಲ್ಲಿ ಬಜರಂಗ ದಳ ಮತ್ತು ಇತರೆ ಹಿಂದು ಸಂಘಟನೆಗಳನ್ನು ನಿಷೇಧಿಸುವ ಘೋಷಣೆಯನ್ನೇ ಹೆಕ್ಕಿಕೊಂಡ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಅದನ್ನು ಪ್ರತ್ಯಸ್ತ್ರವಾಗಿ ಬಳಿಸಿದರು. ಇದು ಬಿಜೆಪಿಯ ಪ್ರಚಾರಕ್ಕೆ ಬಲ ತುಂಬಿತು. “ನಾನೊಬ್ಬ ಕನ್ನಡಿಗ, ನನ್ನ ನಾಡು ಹನುಮ ಜನಿಸಿದ ನಾಡು, ನಾನೊಬ್ಬ ಬಜರಂಗಿ” ಎಂಬ ಘೋಷ ವಾಕ್ಯ ಚಲಾವಣೆಗೆ ಬಂತು.

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸೇರಿ ಬಿಜೆಪಿಯ ಸ್ಟಾರ್‌ ಪ್ರಚಾರಕರು, ನಾಯಕರು ಜೈ ಜೈ ಬಜರಂಗ ಬಲಿ ಎನ್ನತೊಡಗಿದರು. ಕನ್ನಡದಲ್ಲಿ ಭಾಷಣ ಆರಂಭಿಸುತ್ತ, ಹನುಮ ಹುಟ್ಟಿದ ನಾಡಿನ ಜನರೇ ಎಂದು ಹೇಳಲಾರಂಭಿಸಿದರು. ಅಯೋಧ್ಯೆಗೂ, ಕರ್ನಾಟಕಕ್ಕೂ, ಶ್ರೀರಾಮನಿಗೂ, ಹನುಮನಿಗೂ, ಬಜರಂಗ ದಳಕ್ಕೂ ಸಂಬಂಧ ಕಲ್ಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನ ಪ್ರಚಾರದಲ್ಲಿ ಮಾತನಾಡುತ್ತ, ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕವಿತೆಯಲ್ಲಿ ಹನುಮನನ್ನು ಸ್ತುತಿಸಿದ ನಾಡಿನಲ್ಲಿಂದು ಜೈ ಬಜರಂಗಬಲಿ ಎಂದು ಹೇಳಿದರೆ ಕಾಂಗ್ರೆಸ್‌ನವರಿಗೆ ಸಂಕಟವಾಗುತ್ತದೆ ಎಂದು ಹೇಳಿದರು. ಈ ರೀತಿಯಾಗಿ ಕನ್ನಡ ಅಸ್ಮಿತೆಯ ಚೌಕಟ್ಟಿನೊಳಗೆ ಪ್ರಚಾರವನ್ನು ತಂದರು.

ಅದೇ ರೀತಿ, ಮಲ್ಲಿಕಾರ್ಜುನ ಖರ್ಗೆ ಅವರ ವಿಷದ ಹಾವಿನ ಹೇಳಿಕೆಗೆ ಕೆಲವು ಬಿಜೆಪಿ ನಾಯಕರು ʻವಿಷ ಕನ್ಯೆʼ ಎಂಬಿತ್ಯಾದಿ ಪ್ರತಿಟೀಕೆ ಮಾಡಿದರು. ಆದಾಗ್ಯೂ, ಖರ್ಗೆ ಹೇಳಿಕೆಯನ್ನು ಟೀಕಿಸಿದ ಪ್ರಧಾನಿ ಮೋದಿ, ನಿಮ್ಮ ಮಾತುಗಳು ಕರ್ನಾಟಕದ, ಕನ್ನಡದ ನೆಲದ ಸಂಸ್ಕೃತಿಗೆ ತಕ್ಕುದಾದುಲ್ಲ ಎಂಬರ್ಥದಲ್ಲಿ ಸೌಮ್ಯವಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ನಾಯಕರ ಪ್ರಚಾರ ಉತ್ತರ ಭಾರತದ ಅಥವಾ ಅನ್ಯ ರಾಜ್ಯಗಳ ಪ್ರಚಾರ ವರಸೆಯಲ್ಲಿದ್ದುದು, ಬರುತ್ತ ಬರುತ್ತಾ ಬದಲಾಗಿ ಕರ್ನಾಟಕದ, ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಸಾಗಿತ್ತು ಎಂಬುದನ್ನು ಅವರ ಭಾಷಣಗಳನ್ನು ಆಲಿಸಿದರೆ ಗಮನಿಸಬಹುದು.

ಬಿಜೆಪಿಯ ಘೋಷ ವಾಕ್ಯಗಳು

ಡಬಲ್‌ ಎಂಜಿನ್‌ ಸರ್ಕಾರ ಕರ್ನಾಟಕದ ಅಭಿವೃದ್ಧಿಯ ಸಾಕಾರ, ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ, ಬೇಡ ಡೌಟು. ಬಿಜೆಪಿಗೇ ನನ್ ವೋಟು, ನನ್ನ ವೋಟು ಮೋದಿಗೆ-ಬಿಜೆಪಿಯೇ ಭರವಸೆ, ಕಾಂಗ್ರೆಸ್‌ ಗ್ಯಾರೆಂಟಿ ಪಕ್ಕಾ 420-ವಾರೆಂಟಿ ಇಲ್ಲದ ಕಾಂಗ್ರೆಸ್‌ ಗ್ಯಾರೆಂಟಿ, ಡಬಲ್‌ ಎಂಜಿನ್‌ vs ರಿವರ್ಸ್‌ಗೇರ್‌ - ಇತ್ಯಾದಿ ಘೋಷ ವಾಕ್ಯಗಳನ್ನು ಬಿಜೆಪಿ ಬಳಕೆ ಮಾಡಿತು.