Opinion: ಕರ್ನಾಟಕ, ಕನ್ನಡ ವಿರೋಧಿ ಬಿಜೆಪಿ ಎಂಬ ಭಾವ ಮೂಡಿಸಲೆತ್ನಿಸಿದ ಕಾಂಗ್ರೆಸ್‌-political opinion congress tried to create a feeling that bjp is anti kannada and karnataka assembly election 2023 uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Opinion: ಕರ್ನಾಟಕ, ಕನ್ನಡ ವಿರೋಧಿ ಬಿಜೆಪಿ ಎಂಬ ಭಾವ ಮೂಡಿಸಲೆತ್ನಿಸಿದ ಕಾಂಗ್ರೆಸ್‌

Opinion: ಕರ್ನಾಟಕ, ಕನ್ನಡ ವಿರೋಧಿ ಬಿಜೆಪಿ ಎಂಬ ಭಾವ ಮೂಡಿಸಲೆತ್ನಿಸಿದ ಕಾಂಗ್ರೆಸ್‌

Opinion: ಕರ್ನಾಟಕ ವಿಧಾನಸಭಾ ಚುನಾವಣೆ 2023 (Karnataka Assembly Election 2023)ರ ಮತದಾನ ದಿನಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಚಾರದ ಅಬ್ಬರ ಕೊನೆಗೊಂಡಿದೆ. ಈ ಸಲದ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಿಪಕ್ಷ ಕಾಂಗ್ರೆಸ್‌ನ ಪ್ರಚಾರ ಅಭಿಯಾನದಿಂದಲೇ ಅವಲೋಕನವನ್ನು ಆರಂಭಿಸೋಣ.

ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)
ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ) (HT_PRINT)

ಕರ್ನಾಟಕ (Karnataka)ದಲ್ಲಿ ಆಡಳಿತಾರೂಢ ಬಿಜೆಪಿ (Ruling Party BJP) ಗೆ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್‌ (Congress) ಹೆಚ್ಚು ಕಡಿಮೆ ಒಂದೂವರೆ ವರ್ಷ ಹಿಂದೆಯೇ ಶುರುಮಾಡಿತ್ತು. ಮತದಾರನ ಮನಸ್ಸಿನಲ್ಲಿ ಆಡಳಿತ ವಿರೋಧಿ ಭಾವನೆ ಹುಟ್ಟಿಸುವಲ್ಲಿ ಸಫಲವೂ ಆಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರು ತೆಲಂಗಾಣಕ್ಕೆ ಬಿಜೆಪಿಯ ಸಭೆಗೆ ಹೋದಾಗ ಹೈದರಾಬಾದ್‌ನಲ್ಲಿ ಮೊದಲ ಬಾರಿಗೆ ʻ40% CMmissionʼ ಎಂಬ ದೊಡ್ಡ ಹೋರ್ಡಿಂಗ್‌ ಗಮನಸೆಳೆದಿತ್ತು. ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಪೇಸಿಎಂ ಕ್ಯೂಆರ್‌ ಕೋಡ್‌ ಅಭಿಯಾನ ಜೋರಾಗಿಯೇ ನಡೆಯಿತು. ಇದು ಬಹಳ ಪರಿಣಾಮ ಬೀರಿತು. ಮುಂದುವರಿದ ಭಾಗವಾಗಿ ಕ್ರೈಪಿಎಂ ಅಭಿಯಾನವನ್ನೂ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಣತಂತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪೇಚಿಗೆ ಸಿಲುಕಿಸಿತು.

ಈ ಅಭಿಯಾನದ ಜತೆಗೆ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಒಂದು ಅಭಿಪ್ರಾಯ ರೂಪಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಿತು. ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಬಿಜೆಪಿ ಸೇರಿದ್ದ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಪ್ರಶಾಂತನನ್ನು 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತ್ತು. ಇದು ಕಾಂಗ್ರೆಸ್‌ ಅಭಿಯಾನಕ್ಕೆ ಬಲ ತುಂಬಿತು.

ಚುನಾವಣೆ ಘೋಷಣೆ ಆದ ಬಳಿಕ ಏಪ್ರಿಲ್‌ನಲ್ಲಿ ಬಿಜೆಪಿಯನ್ನು ಕರ್ನಾಟಕ ವಿರೋಧಿ, ಕನ್ನಡ ವಿರೋಧಿ ಎಂದು ಬಿಂಬಿಸುವುದಕ್ಕಾಗಿ ಅಭಿಯಾನ ಶುರುಮಾಡಿತು. ಸೋಷಿಯಲ್‌ ಮೀಡಿಯಾ ಪೋಸ್ಟರ್‌ಗಳಲ್ಲಿ ಗಡಿವಿವಾದವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರೆಲ್ಲ ಕರ್ನಾಟಕದ ಹಿತ ಮತ್ತು ಕನ್ನಡಿಗರ ಹಿತವನ್ನು ಕಡೆಗಣಿಸುತ್ತಿದ್ದಾರೆ ಎಂಬುದನ್ನು ಬಿಂಬಿಸಿದರು.

ರಾಜ್ಯ ಚುನಾವಣಾ ಪ್ರಚಾರ ಕಣಕ್ಕೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ 29ರಂದು ಕಾಲಿಟ್ಟ ಬೆನ್ನಿಗೆ ಕಾಂಗ್ರೆಸ್‌ ಪಕ್ಷ “ಮೋದಿಯವರ ಭಾಷಣ, ನೂರು ಸುಳ್ಳನ್ನು ಪೋಣಿಸಿದ ಒಂದು ಸುಳ್ಳಿನ ಕಂತೆ! ನಿಮ್ಮ 40% ಸರ್ಕಾರದ ಕಮಿಷನ್ ಬಗ್ಗೆ ಮಾತನಾಡಿ ಅಭಿವೃದ್ಧಿಯ ಚರ್ಚೆಗೆ ಬನ್ನಿ. ಬೆಲೆಯೇರಿಕೆಯ ಬಗ್ಗೆ ಮಾತನಾಡಿ, ನಿರುದ್ಯೋಗದ ಬಗ್ಗೆ ಮಾತನಾಡಿ” ಎಂದು ಬಿಜೆಪಿಯ ಬೆನ್ನುಬಿದ್ದಿತ್ತು.

ಇದರ ಜತೆಗೆ ಬಿಜೆಪಿಯ ಬೆದರಿಕೆ, ಕಾಂಗ್ರೆಸ್‌ನ ಭರವಸೆ ಎನ್ನುತ್ತ ಒಂದು ಮತ ಕೈಗೆ ಐದು ಹಿತ ನಿಮಗೆ ಎಂದು ಐದು ಭರವಸೆಗಳ ಪಟ್ಟಿಯನ್ನೇ ಮುಂದಿಟ್ಟು ಅಭಿಯಾನ ನಡೆಸಿತು. ಕೊನೆಗೆ ಬಿಜೆಪಿ ತೊಲಗಿಸಿ, ಕರ್ನಾಟಕ ಉಳಿಸಿ ಎಂದೂ ಅಭಿಯಾನ ಮಾಡಿತು. ಈ ನಡುವೆ ಪ್ರಚಾರ ಭಾಷಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಹಾವು ಎಂದು ಹೇಳಿ ಬಣ್ಣಿಸಿದರು. ಬಳಿಕ ತಪ್ಪಿನ ಅರಿವಾಗಿ ಬಿಜೆಪಿ ವಿಷದ ಹಾವು ಎಂದು ಹೇಳಿದ್ದಾಗಿ ಸಮಜಾಯಿಷಿ ನೀಡಿದ್ದರು.

ಕಾಂಗ್ರೆಸ್‌ ಪಕ್ಷ ಬಳಸಿದ ಘೋಷ ವಾಕ್ಯಗಳನ್ನು ಒಮ್ಮೆ ಅವಲೋಕಿಸೋಣ. "ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ, ಒಂದು ಮತ ಕೈಗೆ ಐದು ಹಿತ ನಿಮಗೆ, 40% ಸರ್ಕಾರ ಬೇಡ 5 ಗ್ಯಾರೆಂಟೀಸ್ ಬೇಕು‌, ಸುಳ್ಳು ಹೇಳುವುದನ್ನು ಬಿಡಿ, ಅಭಿವೃದ್ಧಿಯ ಚರ್ಚೆಗೆ ಬನ್ನಿ, ಬಿಜೆಪಿಯ ಬೆದರಿಕೆ ಕಾಂಗ್ರೆಸ್‌ನ ಭರವಸೆ, ಬಿಜೆಪಿ ತೊಲಗಿಸಿ ಕರ್ನಾಟಕ ಉಳಿಸಿ, ಕನ್ನಡ ದ್ರೋಹಿ, ಕರ್ನಾಟಕ ದ್ರೋಹಿ ಬಿಜೆಪಿ" ಎನ್ನುವುದು ಕಾಂಗ್ರೆಸ್ ಬಳಸಿದ ಘೋಷವಾಕ್ಯಗಳು.

ಇಷ್ಟೆಲ್ಲ ಆಗಿ, ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ ಆದಾಗ ಅದರಲ್ಲಿ 5 ಗ್ಯಾರೆಂಟಿಗಳ ವಿವರ, ಪ್ರತಿ ಮನೆಗೆ 200 ಯುನಿಟ್‌ ಕರೆಂಟ್‌ ಫ್ರೀ, ಕೆಲವು ಭತ್ಯೆಗಳು ಗಮನಸೆಳೆದವು. ಒಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಹೊರಗಿನವರ ಪಕ್ಷ ಎಂದು ಬಿಂಬಿಸುವುದರ ಜತೆಗೆ, ಭ್ರಷ್ಟ ಆಡಳಿತ ನೀಡುವಂತಹ ಪಕ್ಷ ಎಂದು ಚಿತ್ರಿಸುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿ ಆಡಳಿತ ಜಾರಿಗೆ ತಂದ ಗೋಹತ್ಯೆ ನಿಷೇಧ, ಲಿಂಗಾಯತ ಮೀಸಲಾತಿ ಮುಂತಾದ ಕ್ರಮಗಳನ್ನು ಹಿಂಪಡೆಯುವುದಾಗಿ ಕಾಂಗ್ರೆಸ್‌ ನಾಯಕರು ಘೋಷಿಸಿದ್ದಾರೆ.

ಈ ನಡುವೆ, ಎಸ್‌ಡಿಪಿಐ ಮತ್ತು ಎಐಎಂಐಎಂ ಮುಂತಾದ ಪಕ್ಷಗಳ ನೇರ ಸ್ಪರ್ಧೆಯಿಂದ ಮುಸ್ಲಿಂ ಮತಬ್ಯಾಂಕ್‌ ಒಡೆದು ಹೋಗುವ ಹೆದರಿಕೆಯ ಕಾರಣ ಪ್ರಣಾಳಿಕೆಯಲ್ಲಿ ಬಜರಂಗದಳ ಸೇರಿ ಕೋಮು ಶಾಂತಿ ಕದಡುವ ಸಂಘಟನೆಗಳ ನಿಷೇಧ ಪ್ರಸ್ತಾಪ ಮಾಡಿತ್ತು. ಇದು ಉಳಿದೆಲ್ಲದಕ್ಕಿಂತ ಹೆಚ್ಚು ಗಮನಸೆಳೆಯಿತು. ಕೊನೆಯದಾಗಿ ಬೈ ಬೈ ಬಿಜೆಪಿ ಅಭಿಯಾನ ನಡೆಸಿತು.

ಕಷ್ಟಪಟ್ಟು ಆಡಳಿತ ವಿರೋಧಿ ಅಲೆ ಎಬ್ಬಿಸಿದ ಕಾಂಗ್ರೆಸ್‌ ಕೊನೇಘಳಿಗೆಯಲ್ಲಿ ಹಿಂದುತ್ವಕ್ಕೆ ಸಂಬಂಧಿಸಿ ವಿಚಾರ ಎತ್ತಿ ಮತ ಧ್ರುವೀಕರಣಕ್ಕೆ ಅವಕಾಶ ಮಾಡಿಕೊಟ್ಟದ್ದು ವಾಸ್ತವ. ಇನ್ನೇನಿದ್ದರೂ ಮತದಾರನಿಗೆ ಬಿಟ್ಟ ವಿಚಾರ. ಮೇ 10ಕ್ಕೆ ಕಾಂಗ್ರೆಸ್‌ ಪ್ರಯತ್ನದ ಫಲ ಮತಪೆಟ್ಟಿಗೆ ಸೇರಲಿದೆ. ಮೇ 13ಕ್ಕೆ ಫಲಿತಾಂಶ ಪ್ರಕಟವಾಲಿದೆ.

mysore-dasara_Entry_Point