Siddaramaiah Profile: ವಜೂಬಾಯಿ ವಾಲಾ ದಾಖಲೆ ಸರಿಗಟ್ಟಲಿರುವ ಸಿದ್ದರಾಮಯ್ಯ; 14ನೇ ಬಜೆಟ್ ಮಂಡಿಸಲಿರುವ ಗ್ರಾಮೀಣ ಸೊಗಡಿನ ಅರ್ಥಶಾಸ್ತ್ರಜ್ಞ
Siddaramaiah Budget: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಜು.7) ಬಜೆಟ್ ಮಂಡಿಸಲಿದ್ದು, ವಾಜುಬಾಯ್ ವಾಲಾ ಅವರ ದಾಖಲೆ ಸರಿಗಟ್ಟಲಿದ್ದಾರೆ. ದಾಖಲೆಯ 14ನೇ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರ ಕಿರುಪರಿಚಯ ಹೀಗಿದೆ.
ಸಿದ್ದರಾಮಯ್ಯ ಎಂದರೆ ಅಹಿಂದ ನಾಯಕ ಮತ್ತು ಭಾಗ್ಯಗಳ ಸರದಾರ ಎಂದು ಸ್ವಾಭಾವಿಕವಾಗಿ ಬಣ್ಣಿಸುವುದು ಸುಲಭ. ಆದರೆ ಅವರೊಳಗೊಬ್ಬ ವಿತ್ತ ತಜ್ಞ ಇದ್ದಾನೆ ಎನ್ನುವುದು ತಿಳಿಯದ ವಿಷಯ. ಹದಿನಾಲ್ಕನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಗ್ರಾಮೀಣ ಸೊಗಡಿನ ಅರ್ಥ ಶಾಸ್ತ್ರಜ್ಞ ಎಂದು ಧಾರಾಳವಾಗಿ ಹೇಳಬಹುದು.
ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಯಶಸ್ವಿ ಮುಖ್ಯಮಂತ್ರಿ. ದೇವರಾಜ ಅರಸು ನಂತರ ಐದು ವರ್ಷ ಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿಯೂ ಇವರಿಗಿದೆ. ಅರಸು ಅವರೊಂದಿಗೆ ಇವರ ಸಮೀಕರಣ ಸಹಜವಾಗಿಯೇ ಮೂಡುತ್ತದೆ. ಇಬ್ಬರ ನಡುವೆ ಬಹಳ ಸಾಮ್ಯತೆಗಳಿವೆ. ಇಬ್ಬರೂ ದಲಿತರ ನೆರಳು ಎಂದರೆ ಅತಿಶಯೋಕ್ತಿ ಏನಲ್ಲ.
ನೇರ ಮತ್ತು ನಿಷ್ಠುರವಾದಿಯಾಗಿರುವ ಸಿದ್ದರಾಮಯ್ಯ ಅವರು ಪಳಗಿದ ಶಾಲೆ ಸಣ್ಣದೇನಲ್ಲ. ರಾಮಕೃಷ್ಣ ಹೆಗಡೆಯ ಚಾಣಕ್ಷತೆ, ದೇವೇಗೌಡರ ತಂತ್ರಗಾರಿಕೆ, ಜೆ.ಎಚ್. ಪಟೇಲರ ನೈಪುಣ್ಯತೆಯನ್ನು ಮೈಗೂಡಿಸಿಕೊಂಡಿರುವ ನಿಪುಣ ರಾಜಕಾರಣಿ.
ಶಿಕ್ಷಣ ಮತ್ತು ರಾಜಕೀಯ ಪ್ರವೇಶ ಹೀಗಾಯಿತು
ಮೈಸೂರಿನಲ್ಲಿ ಕಾನೂನು ಪದವಿ ಮುಗಿಸಿ ಕೋರ್ಟ್ ಅಂಗಳಕ್ಕೆ ಇಳಿದ ಸಿದ್ದರಾಮಯ್ಯಗೆ ರಾಜಕೀಯ ತಿರುವು ನೀಡಿದ್ದೇ ಜೆ.ಪಿ. ಚಳುವಳಿ.
ಲೋಹಿಯಾವಾದ ಬೆನ್ನುಹತ್ತಿದ ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಸಂಪರ್ಕದಿಂದ ಜಯಪ್ರಕಾಶ್ ನಾರಾಯಣರ ಪ್ರಭಾವಕ್ಕೆ ಒಳಗಾಗುತ್ತಾರೆ.
1983ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವತಂತ್ರವಾಗಿ ವಿಧಾನಸಭೆಗೆ ಆಯ್ಕೆಯಾಗಿ ರಾಜಕೀಯ ಪಾದಾರ್ಪಣೆ ಮಾಡಿದ ಇವರು ಹಿಂದುಳಿದ ವರ್ಗಗಳ ಆಶಾಕಿರಣವಾಗಿ ಉಳಿದಿದ್ದಾರೆ.
1983ರಿಂದ 2005ರವರೆಗೆ ಜನತಾ ಪರಿವಾರದಲ್ಲಿದ್ದ ಇವರು, 1989, 1999ರಲ್ಲಿ ಎರಡು ಬಾರಿ ಪರಾಭವ ಹೊಂದಿದ್ದನ್ನು ಹೊರತುಪಡಿಸಿದರೆ, 12 ವರ್ಷ ಜನತಾ ಪರಿವಾರದಲ್ಲಿ ಅಧಿಕಾರ ಅನುಭವಿಸಿದ್ದಾರೆ.
ಮೊಟ್ಟ ಮೊದಲಿಗೆ ದೊರೆತಿದ್ದು ಕನ್ನಡ ಕಾವಲು ಸಮಿತಿ ಅಧ್ಯಕ್ಷ ಸ್ಥಾನ. ಅನಂತರ, ರೇಷ್ಮೆ, ಪಶುಸಂಗೋಪನೆ ಮತ್ತು ಸಾರಿಗೆಯಂತಹ ಮಹತ್ವದ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ.
ಸಚಿವರಾದ ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆ
1984ರಲ್ಲಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ತಮ್ಮ ಸಂಪುಟದಲ್ಲಿ ಹಣಕಾಸು ಮತ್ತು ಯೋಜನಾ ಖಾತೆ ಸಚಿವರಾಗಿ ಆಯ್ಕೆ ಮಾಡಿದಾಗ ಇಡೀ ರಾಜ್ಯ ಬೆರಗಾಗುತ್ತದೆ.
ಸಿದ್ದರಾಮಯ್ಯ 2006 ರಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಗೊಳ್ಳುತ್ತಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಾರೆ. ಆಗ ನಡೆದ ಉಪಚುನಾವಣೆಯಲ್ಲಿ ರೋಚಕ ಜಯ ಸಾಧಿಸುತ್ತಾರೆ. ಆಗ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿ. ಈ ಜೋಡಿಯ ಅಲೆಯಲ್ಲೂ ಗೆಲುವಿನ ನಗೆ ಬೀರುತ್ತಾರೆ.
ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದು ಇಡೀ ಪಕ್ಷವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡವರು ಸಿದ್ದರಾಮಯ್ಯ. ಮೂಲ ಕಾಂಗ್ರೆಸ್ಸಿಗರನ್ನು ಓವರ್‌ಟೇಕ್ ಮಾಡಿ ಪಕ್ಷದ ಅಧಿಪತ್ಯ ಸಾಧಿಸಿದ ಚಾಣಕ್ಯ ಎಂದರೆ ಅತಿಶಯೋಕ್ತಿ ಆಗಲಾರದು. ಐದು ವರ್ಷ ಪ್ರತಿಪಕ್ಷ ನಾಯಕ ಮತ್ತೈದು ವರ್ಷ ಮುಖ್ಯಮಂತ್ರಿ. ಇದೀಗ ಮತ್ತೆ ಸಿಎಂ ಪಟ್ಟ. ಕಾಂಗ್ರೆಸ್ ಇತಿಹಾಸದಲ್ಲಿ ವಲಸೆ ಬಂದವರೊಬ್ಬರು ಇಷ್ಟೊಂದು ಸುಧೀರ್ಘ ಅವಧಿಗೆ ಅಧಿಕಾರ ಅನುಭವಿಸಿದ ಮತ್ತೊಬ್ಬ ರಾಜಕಾರಣಿ ಇರಲಿಕ್ಕಿಲ್ಲ.
ಸಿದ್ದರಾಮಯ್ಯ ಮೊದಲ ಸಲ ಮುಖ್ಯಮಂತ್ರಿ ಆದ ನಂತರದಲ್ಲಿ..
ರಾಜ್ಯದಲ್ಲಿ 2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದಾಗ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆ.
ಅವರು ನೀಡಿದ ಹತ್ತು ಹಲವು ಭಾಗ್ಯಗಳ ಕಾರಣದಿಂದಾಗಿ ಕೋಟಿ ಕೋಟಿ ಕುಟುಂಬಗಳ ಬದುಕು ಹಸನಾಗಿದೆ.
ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನ ಕರಾರುವಕ್ಕಾಗಿ ಲೆಕ್ಕಾಚಾರ ಮಾಡಿ, ಬಡಜನರ ಮತ್ತು ರೈತಪರ ಬಜೆಟ್‌ಗಳನ್ನು ಮಂಡಿಸುವುದು ಇವರ ಕಾರ್ಯ ವೈಖರಿ. 13 ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ ನಾಯಕ. ಮಂಡಿಸಿದ ಬಜೆಟ್‌ಗಳೆಲ್ಲಾ ಯಶಸ್ವಿ ಮತ್ತು ಜನಪರ ಬಜೆಟ್‌ಗಳು ಎಂಬ ಹೆಗ್ಗಳಿಕೆ ಇವರದ್ದು.
ಮೈಸೂರು, ಚಾಮರಾಜ ನಗರ, ಮಂಡ್ಯ ಸೇರಿದಂತೆ ಅವಿಭಜಿತ ಮೈಸೂರು ಜಿಲ್ಲೆ ನಾಲ್ವರು ಹಣಕಾಸು ಸಚಿವರನ್ನು ನೀಡಿದ್ದು ಇವರೆಲ್ಲಾ 31 ಬಜೆಟ್ ಗಳನ್ನು ಮಂಡಿಸಿದ್ದಾರೆ.
ಸಿದ್ದರಾಮಯ್ಯ 2013 ರಿಂದ 2018 ರವರೆಗೆ ಸತತವಾಗಿ ಆರು ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ 2018-19 ರ ಬಜೆಟ್ ಅನ್ನು 16, ಫೆಬ್ರವರಿ 2018 ರಲ್ಲಿ ಮಂಡಿಸಿದ್ದು ಅದು ಪೂರ್ಣ ಪ್ರಮಾಣದ ಬಜೆಟ್ ಆಗಿರುವುದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ತಿಂಗಳಿಗೆ ಮಾತ್ರ ಲೇಖಾನುದಾನ ಪಡೆದುಕೊಳ್ಳಲಾಗಿರುತ್ತದೆ.
ಬಜೆಟ್ ಮಂಡನೆಯಲ್ಲಿ ಸಿದ್ದರಾಮಯ್ಯ ದಾಖಲೆ ಹೀಗಾಗುತ್ತಿದೆ
ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ 7 ಬಜೆಟ್ ಮಂಡಿಸಿದ್ದರು. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ 2005-2007 ರವರೆಗೆ, ಅದಕ್ಕೂ ಮುನ್ನ 1995-2000ದವರೆಗೆ ಬಜೆಟ್ ಮಂಡಿಸಿದ್ದಾರೆ. ಇವರು ಮೂವರು ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರದಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ. ಎರಡು ಬಾರಿ ಹೆಚ್. ಡಿ. ದೇವೇಗೌಡ ಅವರು ಸಿಎಂ ಆಗಿದ್ದಾಗ, ಮೂರು ಬಾರಿ ಜೆ. ಹೆಚ್. ಪಟೇಲ್ ಮತ್ತು ಎರಡು ಬಾರಿ ಧರ್ಮ ಸಿಂಗ್ ಸರ್ಕಾರದಲ್ಲಿ ಬಜೆಟ್ ಮಂಡಿಸಿದ್ದರು.
ಉಳಿದಂತೆ ಬಜೆಟ್ ಮಂಡನೆ ಮಾಡಿದ ಈ ಭಾಗದ ಅರ್ಥ ಸಚಿವರೆಂದರೆ, ಬಿ.ಎಸ್. ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಟಿ.ಮರಿಯಪ್ಪ ಮತ್ತು ಎಚ್. ಡಿ. ಕುಮಾರಸ್ವಾಮಿ.
ಮಂಡ್ಯ ಜಿಲ್ಲೆ ಬೂಕನಕೆರೆಯ ಯಡಿಯೂರಪ್ಪ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ 8 ಬಜೆಟ್ ಮಂಡಿಸಿದ್ದರೆ, ಕುಮಾರಸ್ವಾಮಿ ಎರಡು ಬಾರಿ ಆಯವ್ಯಯ ಪತ್ರ ಮಂಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ 5 ಬಜೆಟ್ ಮಂಡನೆ ಮಾಡಿದ್ದಾರೆ. ಟಿ.ಮರಿಯಪ್ಪ ಅವರು ನಿಜಲಿಂಗಪ್ಪ ಮತ್ತು ಬಿ.ಡಿ. ಜತ್ತಿ ಸಂಪುಟದಲ್ಲಿ ಹಣಕಾಸು ಸಚಿವರಾಗಿ 5 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.
ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಗುಜರಾತ್ ರಾಜ್ಯದ ಹಣಕಾಸು ಸಚಿವ ವಾಜೂ ಬಾಯಿ ವಾಲಾ ಅವರದ್ದು. ಇವರು ರಾಜ್ಯದ ರಾಜ್ಯಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಇವರು 18 ಬಾರಿ ಮಂಡಿಸಿದ್ದಾರೆ.
ಒಂದು ವೇಳೆ ಸಿದ್ದರಾಮಯ್ಯ ಐದೂ ವರ್ಷ ಮುಖ್ಯಮಂತ್ರಿಯಾಗಿ ಉಳಿದುಕೊಂಡು 2027 ರಲ್ಲಿ ಬಜೆಟ್ ಮಂಡನೆ ಮಾಡಿ ಲೇಖಾನುದಾನ ಪಡೆದುಕೊಂಡರೆ ವಾಲಾ ಅವರ ದಾಖಲೆಯನ್ನು ಮುರಿಯಬಹುದು.
ರಾಜ್ಯದ ಮೊದಲ ಬಜೆಟ್ ಗಾತ್ರ ಕೇವಲ 21.03 ಕೋಟಿ ಮಾತ್ರ ಎಂದರೆ ಅಚ್ಚರಿಯಾಗಬಹುದು. ಶುಕ್ರವಾರ ಮಂಡನೆ ಮಾಡಲಿರುವ ಬಜೆಟ್ 3 ಲಕ್ಷ 35 ಸಾವಿರ ಕೋಟಿ ರೂಪಾಯಿಗಳ ಬಜೆಟ್ ಮಂಡನೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಎಂದೆಂದಿಗೂ ಖಡಕ್, ನೇರ ನಿಷ್ಠುರ, ರಾಜಕಾರಣಿ. ಇಂದಿಗೂ ಹಿಂದುಳಿದ ವರ್ಗಗಳ ಅಗ್ರ ನಾಯಕರಾಗಿ ತಮ್ಮ ವರ್ಚಸ್ಸನ್ನು ಉಳಿಸಿಕೊಂಡೇ ಬಂದಿದ್ದಾರೆ. ಅವರ ಶಕ್ತಿಯೇ ಅಹಿಂದ ವರ್ಗ. ಈ ವರ್ಗ ಮತ್ತು ಸಿದ್ದರಾಮಯ್ಯ ಪರಸ್ಪರ ಕೈ ಬಿಟ್ಟ ಉದಾಹರಣೆ ಇಲ್ಲ.
ಲೇಖನ ಎಚ್. ಮಾರುತಿ, ಬೆಂಗಳೂರು
ವಿಭಾಗ