DK Shivakumar: ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ... 'ರೇ..ಸಾಮ್ರಾಜ್ಯ'ದ ಪ್ರಶ್ನೆಗೆ ಡಿಕೆಶಿ ಉತ್ತರವಿದು..!
ಕನ್ನಡ ಸುದ್ದಿ  /  ಕರ್ನಾಟಕ  /  Dk Shivakumar: ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ... 'ರೇ..ಸಾಮ್ರಾಜ್ಯ'ದ ಪ್ರಶ್ನೆಗೆ ಡಿಕೆಶಿ ಉತ್ತರವಿದು..!

DK Shivakumar: ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ... 'ರೇ..ಸಾಮ್ರಾಜ್ಯ'ದ ಪ್ರಶ್ನೆಗೆ ಡಿಕೆಶಿ ಉತ್ತರವಿದು..!

ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ನಾಯಕರು, ಅವರೇ ನನ್ನ ಅಧ್ಯಕ್ಷರು. ಖರ್ಗೆ ಅವರು ನನಗಿಂತ 20 ವರ್ಷ ಹಿರಿಯರು. ಅವರ ಹಿರಿತನ, ತ್ಯಾಗಕ್ಕೆ ನಾವು ಗೌರವ ನೀಡಬೇಕು. ಒಂದು ವೇಳೆ ಅವರು ಮುಖ್ಯಮಂತ್ರಿಯಾದರೆ, ಅವರ ಜೊತೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ..’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿರುವುದು ಗಮನ ಸೆಳೆದಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (ANI)

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲೀಗ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಚರ್ಚೆಯೇ ಜೋರಾಗಿ ನಡೆಯುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನಡುವೆ ಸಿಎಂ ಕುರ್ಚಿಗಾಗಿ ಸ್ಪರ್ಧೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರಾ ಎಂಬ ಮಿಲಿಯನ ಡಾಲರ್‌ ಪ್ರಶ್ನೆ ಎದುರಾಗಿದೆ..

ಇದಕ್ಕೆ ಮಾರ್ಮಿಕವಾಗಿ ಉತ್ತರ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ‘ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ನಾಯಕರು, ಅವರೇ ನನ್ನ ಅಧ್ಯಕ್ಷರು. ಖರ್ಗೆ ಅವರು ನನಗಿಂತ 20 ವರ್ಷ ಹಿರಿಯರು. ಅವರ ಹಿರಿತನ, ತ್ಯಾಗಕ್ಕೆ ನಾವು ಗೌರವ ನೀಡಬೇಕು. ಒಂದು ವೇಳೆ ಅವರು ಮುಖ್ಯಮಂತ್ರಿಯಾದರೆ, ಅವರ ಜೊತೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ..’ ಎಂದು ಡಿಕೆಶಿ ಹೇಳಿರುವುದು ಗಮನ ಸೆಳೆದಿದೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಜ್ಯ ಹಾಗೂ ದೇಶಕ್ಕೆ ಆಸ್ತಿ. ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ನಾನು ಅದಕ್ಕೆ ಬದ್ಧವಾಗಿರುತ್ತೇನೆ. ಅವರು ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ್ದಾರೆ. ಮಧ್ಯರಾತ್ರಿ ತಮ್ಮ ಶಾಸಕಾಂಗ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಾಕ್ ಅಧ್ಯಕ್ಷರು ಇಂದು ಎಐಸಿಸಿ ಅಧ್ಯಕ್ಷರಾಗಿದ್ದು ಇದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ಖರ್ಗೆ ಅವರು ಮುಖ್ಯಮಂತ್ರಿಯಾದರೆ ಅವರ ಜತೆ ಸಂತೋಷದಿಂದ ಕೆಲಸ ಮಾಡುತ್ತೇನೆ..’ ಹೇಳಿದರು.

ರಾಹುಲ್ ಗಾಂಧಿ ಅವರು ಬೆಳಗಾವಿಗೆ ಬಂದು ನಮ್ಮ ಯುವನಿಧಿ ಯೋಜನೆ ಪ್ರಕಟಿಸಿ ಯುವ ಸಮುದಾಯಕ್ಕೆ ಸಂದೇಶ ರವಾನಿಸಿದ್ದರು. ರಾಹುಲ್ ಗಾಂಧಿ ಅವರಿಗೆ ಹೆದರಿ ಬಿಜೆಪಿಯವರು ಅವರ ಸಂಸತ್ ಸದಸ್ಯತ್ವವನ್ನು‌ ರದ್ದುಗೊಳಿಸಿದ್ದಾರೆ. ಒಂದು ಭಾಷಣದ ವಿಚಾರವಾಗಿ ಇದೇ ಮೊದಲ ಬಾರಿಗೆ ರಾಜಕೀಯ ನಾಯಕರೊಬ್ಬರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ತೀರ್ಪು ಬಂದ 24 ಗಂಟೆಗಳಲ್ಲಿ ಅವರನ್ನು ಅನರ್ಹ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್‌ ತೀವ್ರ ಅಸಮಾಧಾನ ಹೊರಹಾಕಿದರು.

ಯಾವುದೇ ಅರ್ಜಿ ಹಾಕದೇ, ನೋಟೀಸ್ ನೀಡದೇ, ಲೋಕಸಭೆ ಸ್ಪೀಕರ್ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು 7 ಲಕ್ಷಗಳ ಮತಗಳ ಅಂತರದಲ್ಲಿ ಗೆದ್ದ ನಾಯಕನ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಮಾನ. ರಾಜಕಾರಣ ನಿಂತ ನೀರಲ್ಲ. ಎಲ್ಲವೂ ಪುನರಾವರ್ತನೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಇದೇ ವೇಳೆ ಎಚ್ಚರಿಸಿದರು.

ರಾಹುಲ್ ಗಾಂಧಿ ಅವರು ಎಲ್ಲಿ ಭಾಷಣ ಮಾಡಿದ್ದರೋ ಅಲ್ಲಿಯೇ ಭಾಷಣ ಮಾಡಬೇಕು ಎಂದು ಹೇಳಿದಾಗ ನಾವು ಕೋಲಾರದಲ್ಲಿ ಜೈ ಭಾರತ ಸತ್ಯಾಗ್ರಹ ಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಒಂದು ವಾರಗಳ ಕಾಲ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದು, ಅದಕ್ಕೆ ರಾಹುಲ್ ಗಾಂಧಿ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಜೈ ಭಾರತ ಸತ್ಯಾಗ್ರಹ ಯಾತ್ರೆಯನ್ನು ಏ.16ರಂದು ಆಯೋಜಿಸಲು ತೀರ್ಮಾನಿಸಿದ್ದೇವೆ. ಅದೇ ದಿನ ಕೆಪಿಸಿಸಿ ನೂತನ ಕಟ್ಟಡ ಉದ್ಘಾಟನೆ ಮಾಡಲಾಗುವುದು ಎಂದು ಡಿಕೆ ಶಿವಕುಮಾರ್‌ ಮಾಹಿತಿ ನೀಡಿದರು.

ನಮ್ಮ ಆತ್ಮೀಯ ಮಿತ್ರ ಸುಧಾಮ್ ದಾಸ್ ಅವರು ಇಡಿ ಜಂಟಿ ಅಧಿಕಾರಿಯಾಗಿದ್ದರು. ಅವರು ಸಮಾಜದ ರಕ್ಷಣೆಗೆ ದೊಡ್ಡ ಬಳಗ ಕಟ್ಟಿಕೊಂಡು ಸಮುದಾಯ ರಕ್ಷಣೆ ಮಾಡುತ್ತಿದ್ದರು. ಇವರನ್ನು ಪಕ್ಷದಲ್ಲಿ ಬಳಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಸಹ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದೆ. ಎಂ.ಬಿ ಪಾಟೀಲ್ ಅವರು ಅಧ್ಯಕ್ಷರಾಗಿದ್ದೂ, ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಒತ್ತಡ ಹಾಕಬಾರದು ಎಂದು ಸುಧಾಮ್ ದಾಸ್ ಅವರನ್ನು ನೇಮಕ ಮಾಡಲಾಗುತ್ತಿದೆ. ಸುಧಾಮ್ ದಾಸ್ ಅವರಿಗೆ ಆತ್ಮೀಯವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಯುವಕರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ತೀರ್ಮಾನ ಮಾಡಿದೆ ಎಂದು ಡಿಕೆಶಿ ತಿಳಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪರವಾಗಿ ನಮ್ಮ ಬದ್ಧತೆ ಅಚಲವಾಗಿದೆ. ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ವಿಚಾರವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳುತ್ತಿದೆ. ಆದರೆ ಸಂಸತ್ತಿನಲ್ಲಿ ಅವರು ಅದನ್ನು ತರಲಿಲ್ಲ. ಕೇಂದ್ರ ಸಚಿವರು ನಮ್ಮ ಮುಂದೆ ಈ ವಿಚಾರವಾಗಿ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಅವರು ಈ ವಿಚಾರ ಪ್ರಸ್ತಾಪಿಸಿರುವುದೇಕೆ? ನಾವು ಈ ಸಮುದಾಯಗಳ ಜೊತೆ ನಿಲ್ಲಬೇಕು ಎಂದು ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಅಲ್ಲದೇ ಈ ಸಮುದಾಯಗಳ ನಾಯಕರನ್ನು ಬೆಳೆಸಲು ಆದ್ಯತೆ ನೀಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್‌ ಹೇಲಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಬೇಕು ಎಂದು ಎಲ್ಲರೂ ಕಾಯುತ್ತಿದ್ದಾರೆ. ಹೀಗಾಗಿ ಎಲ್ಲ ಅಧಿಕಾರಿ ವರ್ಗದವರು ನಮ್ಮ ಸಾಮಾಜಿಕ ಬದ್ಧತೆ ಗಮನದಲ್ಲಿಟ್ಟುಕೊಂಡು ನಮಗೆ ಬೆಂಬಲ ನೀಡಬೇಕು ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರು ಮನವಿ ಮಾಡಿದರು.

Whats_app_banner