Tumakuru News: ಕಡಿಮೆ ಬಂಡವಾಳ ಕೈತುಂಬಾ ಆದಾಯ; ನಾಟಿ ಕೋಳಿ ಸಾಕಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಗ್ರಾಪಂ ಮಾಜಿ ಉಪಾಧ್ಯಕ್ಷ
ಕನ್ನಡ ಸುದ್ದಿ  /  ಕರ್ನಾಟಕ  /  Tumakuru News: ಕಡಿಮೆ ಬಂಡವಾಳ ಕೈತುಂಬಾ ಆದಾಯ; ನಾಟಿ ಕೋಳಿ ಸಾಕಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಗ್ರಾಪಂ ಮಾಜಿ ಉಪಾಧ್ಯಕ್ಷ

Tumakuru News: ಕಡಿಮೆ ಬಂಡವಾಳ ಕೈತುಂಬಾ ಆದಾಯ; ನಾಟಿ ಕೋಳಿ ಸಾಕಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಗ್ರಾಪಂ ಮಾಜಿ ಉಪಾಧ್ಯಕ್ಷ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಸಮೀಪದ ತೊರೆಸೂರಗೊಂಡನ ಹಳ್ಳಿಯ ಗ್ರಾಪಂ ಮಾಜಿ ಉಪಾಧ್ಯಕ್ಷ ಮೋಹನ್ ನಾಟಿಕೋಳಿ ಸಾಕಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ನೂರಾರು ನಾಟಿ ಕೋಳಿಗಳನ್ನು ಸಾಕಿರುವ ಗ್ರಾಮ ಪಂಚಾಯಿತಿ  ಮಾಜಿ ಉಪಾಧ್ಯಕ್ಷ
ನೂರಾರು ನಾಟಿ ಕೋಳಿಗಳನ್ನು ಸಾಕಿರುವ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ

ತುಮಕೂರು: ನಾಟಿ ಕೋಳಿಗೆ ಫುಲ್ ಡಿಮ್ಯಾಂಡ್ ಇದೆ. ಆದರೂ ನಾಟಿ ಕೋಳಿ ಸಾಕುವರ ಸಂಖ್ಯೆ ವಿರಳವಾಗಿದೆ. ಮಾರುಕಟ್ಟೆಯ ಬೇಡಿಕೆ ಅರಿತ ಕೆಲ ಮಂದಿ ಮಾತ್ರ ನಾಟಿ ಕೋಳಿ ಸಾಕಿ ಕೈ ತುಂಬ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇಂತಹವರ ಪಟ್ಟಿಯಲ್ಲಿ ಹುಳಿಯಾರು ಹೋಬಳಿಯ ತೊರೆಸೂರಗೊಂಡನ ಹಳ್ಳಿಯ ಮೋಹನ್ ಸಹ ಸೇರಿಕೊಂಡಿದ್ದಾರೆ.

ರುಚಿ ಮತ್ತು ಔಷಧಿಯ ಗುಣದಲ್ಲಿ ನಾಟಿ ಕೋಳಿ ಮಾಂಸ ಮತ್ತು ಮೊಟ್ಟೆ ಮೀರಿಸುವ ಮತ್ತೊಂದು ಮಾಂಸಹಾರವಿಲ್ಲ. ಹರಕೆ ತೀರಿಸಲು, ದೇವರ ಜಾತ್ರೆಗೆ ಬಲಿ ಕೊಡಲು ನಾಟಿ ಕೋಳಿಯೇ ಶ್ರೇಷ್ಠ ಎನ್ನುವ ನಂಬಿಕೆ ಇದೆ. ಹಾಗಾಗಿಯೇ ಹಿಂದೆ ಹಳ್ಳಿಗಳಲ್ಲಿ ಮನೆ ಮನೆಗೂ ನಾಟಿ ಕೋಳಿ ಸಾಕುತ್ತಿದ್ದರು.

ಮಾರಾಟಕ್ಕಲ್ಲದಿದ್ದರೂ ತಾವೇ ತಿನ್ನಲೋ, ನೆಂಟರಿಷ್ಟರು ಬಂದಾಗ ಮಾಂಸಾಹಾರಕ್ಕೆ, ದೇವರಿಗೆ ಬಲಿ ಕೊಡಲೋ ಮನೆ ಮುಂದೆ ನಾಟಿ ಕೋಳಿ ಇರುತ್ತಿದ್ದವು. ಈ ಫಾರಂ ಕೋಳಿ ದೈತ್ಯ ಮಾರುಕಟ್ಟೆ ಜಾಲ ನಾಟಿ ಕೋಳಿ ಸಾಕಾಣಿಕೆಯನ್ನು ನುಂಗಿ ನೀರು ಕುಡಿದಿದೆ. ಮೆಡಿಸನ್‌ನಿಂದಲೇ ಮೂವತ್ತು ನಲವತ್ತು ದಿನಗಳಲ್ಲಿ ತಿನ್ನಲು ಸಿದ್ಧವಾಗುವ ಫಾರಂ ಕೋಳಿಗಳ ಅಬ್ಬರಕ್ಕೆ ವರ್ಷವೀಡಿ ಹುಳ, ಉಪಟೆ, ಗೆದ್ದಲು ತಿಂದು ಆರೋಗ್ಯ ವರ್ಧಕವಾಗಿ ಬೆಳೆಯುವ ನಾಟಿ ಕೋಳಿಗಳು ಕಣ್ಮರೆಯಾಗಿವೆ. ಪಟ್ಟಣದಲ್ಲಿರಲಿ ಹಳ್ಳಿಗರ ಮನೆ ಮುಂದೆಯೂ ನಾಟಿ ಕೋಳಿಗಳು ಕಾಣಸಿಗದಾಗಿವೆ. ನಾಟಿ ಕೋಳಿ ಮಹತ್ವ ಅರಿತಿರುವ ಮಂದಿ ಈಗಲೂ ಪಾರಂ ಕೋಳಿಗಿಂತ ದುಪ್ಪಟ್ಟು ಬೆಲೆ ಹೆಚ್ಚಾಗಿದ್ದರೂ ಸಹ ಕೇಜಿಗೆ 300 ರೂ. ಆದರೂ ತಿನ್ನಲು ಇಷ್ಟಪಡುತ್ತಾರೆ.

ಕಡಿಮೆ ಬಂಡವಾಳ ಕೈತುಂಬಾ ಆದಾಯ

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಸಮೀಪದ ತೊರೆಸೂರಗೊಂಡನ ಹಳ್ಳಿಯ ಗ್ರಾಪಂ ಮಾಜಿ ಉಪಾಧ್ಯಕ್ಷ ಮೋಹನ್ ನಾಟಿಕೋಳಿ ಬೇಡಿಕೆ ಅರಿತು ಕೇವಲ ಐದಾರು ಗುಂಟೆ ಜಾಗದಲ್ಲಿ ಕೋಳಿಗಳನ್ನು ಸಾಕಿ ಕೈ ತುಂಬ ಆದಾಯ ಗಳಿಸುತ್ತಿದ್ದಾರೆ. ಸರ್ಕಾರದ ಯಾವುದೇ ಸಾಲ ಸೌಲಭ್ಯ ಪಡೆಯದೆ ಕೇವಲ 50 ಕೋಳಿಯಿಂದ ಆರಂಭಿಸಿ ಇಂದು ಬರೋಬ್ಬರಿ ಸಾವಿರಕ್ಕೂ ಹೆಚ್ಚು ನಾಟಿ ಕೋಳಿ ಸಾಕುತ್ತಿದ್ದಾರೆ. ಇದರಿಂದ ಆರ್ಥಿಕ ಆದಾಯದ ಜೊತೆಗೆ ತಮ್ಮ ಅಡಿಕೆ ತೆಂಗಿನ ಬೆಳೆಗೂ ಪುಕ್ಕಟ್ಟೆ ಗೊಬ್ಬರ ಪಡೆಯುತ್ತಿದ್ದಾರೆ.

ನಾಟಿ ಕೋಳಿಗಳು ಆರು ತಿಂಗಳ ವಯಸ್ಸಿನ ನಂತರ ಮೊಟ್ಟೆ ಇಡಲು ಆರಂಭಿಸುತ್ತವೆ. ಕೋಳಿಯೊಂದು ವರ್ಷಕ್ಕೆ ಸುಮಾರು 60-80 ಮೊಟ್ಟೆ ಇಡುತ್ತದೆ, ಈ ಮೊಟ್ಟೆಗಳಲ್ಲಿ ಒಂದಿಷ್ಟು ಮಾರಾಟ ಮಾಡಿ ಮತ್ತೊಂದಿಷ್ಟು ಮೊಟ್ಟೆಯನ್ನು ಕಾವಿಗೆ ಹಾಕಿ ಮರಿ ಮಾಡಿಕೊಳ್ಳುತ್ತಾರೆ. 22 ದಿನಗಳ ಕಾಲ ಮರಿ ಮಾಡಿ ನಂತರ ಒಂದೆರಡು ತಿಂಗಳು ಮರಿಗಳನ್ನು ಆಡಿಸಿ ಬೆಳೆಸಿ ಮತ್ತೆ ಮೊಟ್ಟೆ ಇಡಲು ಕೋಳಿ ಆರಂಭಿಸುತ್ತವೆ. ಈ ನಾಟಿ ಕೋಳಿಯ ರೊಟಿನ್‌ನಲ್ಲಿ ಕಡಿಮೆ ಖರ್ಚಿನಲ್ಲಿ ನಿತ್ಯ ಕೈ ತುಂಬ ಆದಾಯ ಪಡೆಯುವ ಜೊತೆಗೆ ಖರ್ಚಿಲ್ಲದೆ ವಂಶ ವೃದ್ಧಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

ಕೋಳಿ ಮತ್ತು ಮೊಟ್ಟೆ ರಿಯಾಯಿತಿ ದರದಲ್ಲಿ ಮಾರಾಟ

ಚೆನ್ನಾಗಿ ಮೊಟ್ಟೆ ಇಡುವ ಕೋಳಿ ಹಾಗೂ ಒಳ್ಳೆ ತಳಿಯ ಹುಂಜಗಳನ್ನು ಮಾತ್ರ ಇಟ್ಟುಕೊಂಡು ಉಳಿದ ಕೋಳಿಗಳನ್ನು ಮಾಂಸಕ್ಕೆ ಮಾರಾಟ ಮಾಡುತ್ತಾರೆ. ಒಂದು ಕೋಳಿ ಒಂದುವರೆಯಿಂದ ಮೂರು ಕೆಜಿ ತೂಗುತ್ತದೆ. ಕೆಜಿ ಮಾಂಸಕ್ಕೆ ಸರಾಸರಿ 300 ರೂ. ಬೆಲೆ ಇದೆ. ನಾಟಿ ಮೊಟ್ಟೆ 15 ರೂ. ಬೆಲೆಯಿದ್ದು ಪಾರಂಗೆ ಬಂದು ಕೊಳ್ಳುವರಿಗೆ ಮೋಹನ್ ಕೋಳಿ ಮತ್ತು ಮೊಟ್ಟೆಯನ್ನ ರಿಯಾಯಿತಿ ದರದಲ್ಲಿ ಕೊಡುತ್ತಾರೆ, ಉಳಿದಂತೆ ಮೊಟ್ಟೆಗೆ ನಿಗದಿತ ಗ್ರಾಹಕರಿದ್ದು ಅವರ ಮನೆಗೆ ತೆರಳಿ ಮೊಟ್ಟೆ ಕೊಡುವುದು ನಿತ್ಯ ಕಾಯಕವಾಗಿದೆ.

ನಾಟಿ ಕೋಳಿ ಸಾಕಾಣಿಕೆಗೆ ಹೆಚ್ಚಿನ ಬಂಡವಾಳವೇನೂ ಬೇಕಾಗುವುದಿಲ್ಲ, ಅಲ್ಲದೆ ಹೆಚ್ಚಿನ ಖರ್ಚು ಇಲ್ಲ, ಕಾಳು, ಕಡಿ, ತರಕಾರಿ ಸೇರಿದಂತೆ ಇತರೆ ವೇಸ್ಟೇಜ್ ಇಷ್ಟಿದ್ದರೆ ಸಾಕು, ನಾಟಿ ಕೋಳಿಗಳನ್ನು ಜಮೀನಿನಲ್ಲಿ ಓಡಾಡಲು ಬಿಡುವುದರಿಂದ ಅವು ಕಾಳು, ಕಡಿ ಜೊತೆಗೆ ಹುಳ, ಹುಪ್ಪಟೆ ಹೆಕ್ಕಿ ತಿನ್ನುತ್ತವೆ, ಒಂದರ್ಥದಲ್ಲಿ ಉಳುಮೆ ಮಾಡಿ ಬೆಳೆಗೆ ಪೂರಕವಾದ ಗೊಬ್ಬರ ಕೊಡುತ್ತವೆ ಎನ್ನುತ್ತಾರೆ ಮೋಹನ್.

ನಾಟಿ ಕೋಳಿ ಎಲ್ಲ ಹವಾಮಾನಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತೆ

ನಾಟಿ ಕೋಳಿ ಸಾಕಾಣಿಕೆಗೆ ಹೆಚ್ಚು ಹಣದ ಅಗತ್ಯವಿಲ್ಲ, ಇವು ಗಟ್ಟಿಮುಟ್ಟಾಗಿದ್ದು, ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ, ಎಲ್ಲ ಹವಾಮಾನಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ, ಬೆಳಗ್ಗೆ ಆಹಾರ ತಿಂದು ಹೊರಗೆ ಅಡ್ಡಾಡಲು ಹೋದರೆ ಮತ್ತೆ ಬರುವುದು ಸಾಯಂಕಾಲ ಆದಾಗಲೇ, ಹಗಲೆಲ್ಲ ಬಯಲಿನಲ್ಲಿ ಓಡಾಡಿಕೊಂಡು ಹುಳು- ಹುಪ್ಪಟೆ, ಕಾಳುಕಡ್ಡಿ, ಎಲೆ, ಕ್ರಿಮಿ- ಕೀಟಗಳನ್ನು ತಿನ್ನುತ್ತವೆ, ರಾತ್ರಿ ಹೊತ್ತು ಗೂಡಿನಲ್ಲಿ, ಮನೆಯ ಮಾಡಿನಲ್ಲಿ ಇಲ್ಲವೇ ಮರದಲ್ಲಿ ರಕ್ಷಣೆ ಪಡೆಯುತ್ತವೆ, ಹಾಗಾಗಿ ಇವುಗಳ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುವ ಅಗತ್ಯವೂ ಇರದು, ಮತ್ತೊಬ್ಬರ ಕೈ ಕೆಳಗೆ ಹತ್ತದಿನೈದು ಸಾವಿರಕ್ಕೆ ಆಳಾಗಿ ದುಡಿಯುವ ಬದಲು ಕೋಳಿ ಸಾಕಿ ಮಾಲೀಕನಾಗಿ ನೆಮ್ಮದಿಯ ಜೀವನ ನಡೆಸಬಹುದು ಎಂಬುದು ನಾಟಿಕೋಳಿ ಸಾಕಾಣಿಕೆದಾರ ಮೋಹನ್ ಕುಮಾರ್ ಅಭಿಪ್ರಾಯ. ನಾಟಿ ಕೋಳಿ ಮತ್ತು ಮೊಟ್ಟೆ ಬೇಕಿರುವವರು 9845810310 ಕರೆ ಮಾಡಬಹುದಾಗಿದೆ.

Whats_app_banner