ಕನ್ನಡ ಸುದ್ದಿ  /  ಜೀವನಶೈಲಿ  /  ಭೂಕಂಪ ಉಂಟಾಗಲು, ಅನಾಹುತದ ತೀವ್ರತೆ ಹೆಚ್ಚಾಗಲು ಮನುಷ್ಯ ಎಷ್ಟರಮಟ್ಟಿಗೆ ಕಾರಣ; ಪ್ರಾಕೃತಿಕ ವೈಪರಿತ್ಯದ ಬಗ್ಗೆ ತಿಳಿಯೋಣ -ಜ್ಞಾನ ವಿಜ್ಞಾನ

ಭೂಕಂಪ ಉಂಟಾಗಲು, ಅನಾಹುತದ ತೀವ್ರತೆ ಹೆಚ್ಚಾಗಲು ಮನುಷ್ಯ ಎಷ್ಟರಮಟ್ಟಿಗೆ ಕಾರಣ; ಪ್ರಾಕೃತಿಕ ವೈಪರಿತ್ಯದ ಬಗ್ಗೆ ತಿಳಿಯೋಣ -ಜ್ಞಾನ ವಿಜ್ಞಾನ

ಎಚ್‌ ಎ ಪುರುಷೋತ್ತಮ ರಾವ್: ಪ್ರಾಕೃತಿಕ ವೈಪರಿತ್ಯಗಳ ಪೈಕಿ ಪದೇಪದೆ ಸುದ್ದಿಯಾಗುವುದು, ಗಮನ ಸೆಳೆಯುವುದು ಭೂಕಂಪ ಉಂಟು ಮಾಡುವ ಅನಾಹುತಗಳು. ಭೂಕಂಪಕ್ಕೆ ಏನು ಕಾರಣ? ಮುನ್ಸೂಚನೆ ನೀಡಲು ಸಾಧ್ಯವಿಲ್ಲವೇ? ಮನುಷ್ಯನ ದುರಾಸೆಯಿಂದ ಭೂಕಂಪದ ಅಪಾಯ ಹೆಚ್ಚಾಗುತ್ತಿದೆಯೇ? ಈ ಲೇಖನದಲ್ಲಿದೆ ವಿವರ. ಇದು ರಾಷ್ಟ್ರೀಯ ವಿಜ್ಞಾನ ದಿನದ ವಿಶೇಷ.

ಜಪಾನ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದ ನಂತರ ರಸ್ತೆಗಳು ಬಿರುಕು ಬಿಟ್ಟಿತ್ತು, ಭೂಮಿ ಕುಸಿದಿತ್ತು.
ಜಪಾನ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದ ನಂತರ ರಸ್ತೆಗಳು ಬಿರುಕು ಬಿಟ್ಟಿತ್ತು, ಭೂಮಿ ಕುಸಿದಿತ್ತು.

ಭೂಕಂಪ: ಪ್ರತಿಬಾರಿ ಭೂಕಂಪವಾದಾಗಲೂ ನಮ್ಮ ಎದೆಗಳಲ್ಲೂ ಸಾಕಷ್ಟು ಭಯದ ಕಂಪನಗಳು ಮೂಡುತ್ತವೆ. ಈ ಪ್ರಾಕೃತಿಕ ವೈಪರಿತ್ಯಕ್ಕೆ ಯಾರು ಹೊಣೆ? ಪ್ರಕೃತಿಯೇ? ಮಾನವನೇ? ಆಪತ್ತು ಬಂದಾಗ ಆ ಬಗ್ಗೆ ಚಿಂತಿಸಿ ನಂತರ ಮರೆತು ಪ್ರಕೃತಿಯೊಂದಿಗೆ ಚೆಲ್ಲಾಟವಾಡುವ ಮಾನವನ “ಸ್ಮಶಾನ ವೈರಾಗ್ಯ”ವೂ ಸಹ ಇಲ್ಲಿ ಪ್ರಮುಖ ಅಂಶವೇ ಆಗಿದೆ. ನಿರಂತರ ನಿಸರ್ಗ ಶೋಷಣೆ ಪ್ರಾಕೃತಿಕ ಸಮತೋಲನದಲ್ಲಿ ಏರುಪೇರು ಮಾಡಿರುವುದು ಸಹ ಈ ವೈಪರಿತ್ಯಗಳಿಗೆ ಇಂಬು ಕೊಟ್ಟಂತಾಗಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ನೀರಿನ ಅವೈಜ್ಞಾನಿಕ ಬಳಕೆ, ಅಣುಸ್ಪೋಟ, ಕೈಗಾರಿಕೀಕರಣ, ಅರಣ್ಯನಾಶ ಹೀಗೆ ಹತ್ತು ಹಲವು ಕಾರಣಗಳು ಭೂಉಷ್ಣತೆಯನ್ನು ಹೆಚ್ಚಿಸಿವೆ. ಭೂಕಂಪದ ಕುರಿತು ಚಿಂತಿಸಲು ಇಂದು (ಫೆ 28) ರಾಷ್ಟ್ರೀಯ ವಿಜ್ಞಾನ ದಿನ ಎನ್ನುವುದು ಸಹ ಒಂದು ನೆಪ ಆಗಬಲ್ಲದು.

ಧ್ರುವ ಪ್ರದೇಶಗಳಲ್ಲಿನ ಹಿಮ ಪರ್ವತಗಳು ಕರಗಿ ಸಮುದ್ರದ ನೀರಿನ ಮಟ್ಟ ಏರುತ್ತಿದೆ. ಈ ಅಗಾಧ ಜಲರಾಶಿ ಭೂ ಅಂಚುಗಳ ಮೇಲೆ ಆಕ್ರಮಣ ಮಾಡುತ್ತಿದೆ. ಭೂಮಿಯೊಳಗಿನ ಉಷ್ಣತೆ ಉಷ್ಣನಯನ ಕ್ರಿಯೆಗೆ (ಎಂದರೆ ಅಣುಗಳೂ ಸ್ವತಃ ಚಲಿಸಿ ಉಷ್ಣವನ್ನು ಮಾಧ್ಯಮದಲ್ಲಿ ಹರಡುವ ವಿಧಾನ) ಕಾರಣವಾದರೆ ಭೂಮಿಯ ಮೇಲೆ ಹೆಚ್ಚುತ್ತಿರುವ ವಾತಾವರಣದ ಉಷ್ಣತೆಗೆ ಮಾನವನ ಚಟುವಟಿಕೆಗಳೇ ಕಾರಣವಾಗಿವೆ. ಒಟ್ಟಾರೆ ಈ ರೀತಿಯ ಭೂ ವೈಪರಿತ್ಯಗಳಿಗೆ ಒತ್ತು ಕೊಡುತ್ತಿವೆ ಎಂದರೆ ಉತ್ಪ್ರೇಕ್ಷೆಯಲ್ಲ.

ಹಿಂದೆ ಭೂವಿಜ್ಞಾನಿಗಳು ದಕ್ಷಿಣ ಭಾರತದಲ್ಲಿ ಭೂಕಂಪಗಳೇ ಆಗುವುದಿಲ್ಲವೆಂಬ ನಿಲುವು ತಳೆದಿದ್ದರು. ಭಾರತದ ಭೂಕಂಪನ ಮಾಪನಾ ವಿಭಾಗದ ವಿಜ್ಞಾನಿಗಳು ಭಾರತದಲ್ಲಿ ಭೂಕಂಪನ ವಾಗಬಹುದಾದಂತಹ ಸಂಭವನೀಯ ವಲಯಗಳನ್ನು ತೋರಿಸುವ ನಕ್ಷೆಯೊಂದನ್ನು ತಯಾರಿಸಿದೆ. ಈ ನಕ್ಷೆಯ ಪ್ರಕಾರ ದಕ್ಷಿಣ ಭಾರತದ ಪ್ರದೇಶವೆಲ್ಲವೂ ಕರ್ನಾಟಕವೂ ಸೇರಿದಂತೆ ವಿರಳ ಭೂಕಂಪವಾಗಬಹುದಾದ 1ನೇ ವಲಯದಲ್ಲಿ ಸೇರಿದೆ. ಆದರೆ 1967ರಲ್ಲಿ ನಡೆದ ಕೊಯ್ನಾ ಭೂಕಂಪ, 1993ರಲ್ಲಿ ಮಹಾರಾಷ್ಟ್ರದಲ್ಲಿ ಉಂಟಾದ ಭೂಕಂಪ, ಇತ್ತಿಚಿನ ಭೂಕಂಪಗಳೆಲ್ಲಾ ನಕ್ಷೆಯ ಸಾಧ್ಯತೆಯ ಬಗ್ಗೆ ಒಂದಿಷ್ಟು ಅನುಮಾನಗಳನ್ನು ಮೂಡಿಸುವುದೂ ಸಹಜವಾಗಿದೆ.

ಟ್ರೆಂಡಿಂಗ್​ ಸುದ್ದಿ

ಭೂವಿಜ್ಞಾನಿಗಳು ಭೂಫಲಕ ರಚನೆ ಎಂಬ ಸಿದ್ದಾಂತವನ್ನು ಭೂಕಂಪನಗಳಿಗೆ ಕಾರಣಗಳಾಗಿ ಮುಂದಿಡುತ್ತಿದ್ದಾರೆ. ಈ ಸಿದ್ದಾಂತದ ಪ್ರಕಾರ ನಾವು ಭೂಮಿಯ ಹೊರ ಚಿಪ್ಪಿನ ಮೇಲೆ ಒಂದೆಡೆಯಿಂದ ಮತ್ತೊಂದೆಡೆಗೆ ನಿರಂತರವಾಗಿ ಚಲಿಸುತ್ತಿದ್ದೇವೆ, ಭೂಖಂಡಗಳು ಮತ್ತು ಸಾಗರ ತಳಗಳನ್ನು ಒಳಗೊಂಡ ಈ ಗಡಸು ಫಲಕಗಳು ಸಾವಧಾನವಾಗಿ ಚಲಿಸುತ್ತಾ ಭೂಮಿಯನ್ನು ರೂಪಾಂತರ ಗೊಳಿಸುತ್ತಿವೆ. ಈ ಜರುಗುವಿಕೆಯಿಂದ ಭೂಫಲಕಗಳು ಒಂದಕ್ಕೊಂದು ಉಜ್ಜುತ್ತಾ ಘರ್ಷಣೆಗಳೇರ್ಪಟ್ಟು ಭೂಕಂಪನ ಹಾಗೂ ಜ್ವಾಲಾಮುಖಿಗಳುಂಟಾಗುತ್ತವೆ ಎಂಬ ಅಭಿಪ್ರಾಯವಿದೆ. ಒಂದೆಡೆ ಭೂಪ್ರದೇಶ ನಾಶವಾದರೆ ಮತ್ತೊಂದೆಡೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಈ ದೃಷ್ಟಿಯಲ್ಲಿ ಡಿವಿಜಿ ಅವರ 'ಮಂಕುತಿಮ್ಮನ ಕಗ್ಗ'ದಲ್ಲಿನ ಒಂದು ಪದ್ಯ ಅರ್ಥಪೂರ್ಣವಾಗಿದೆ.

"ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ
ಕಡಲೊಳೆತ್ತಲೋ ಹೊಸ ದ್ವೀಪವೇಳುವುದು
ಕಳೆಯುತೊಂದಿರಲಿಲ್ಲಿ ಬೆಳೆವು ದಿನ್ನೊಂದೆಲ್ಲೋ
ಅಳಿವಿಲ್ಲ ವಿಶ್ವಕ್ಕೆ – ಮಂಕುತಿಮ್ಮ"

ಎಚ್‌.ಎ.ಪುರುಷೋತ್ತಮ ರಾವ್ ಅವರ ಜ್ಞಾನ ವಿಜ್ಞಾನ ಅಂಕಣ
ಎಚ್‌.ಎ.ಪುರುಷೋತ್ತಮ ರಾವ್ ಅವರ ಜ್ಞಾನ ವಿಜ್ಞಾನ ಅಂಕಣ

ಶಿಲಾಸ್ತರಗಳ ಚಲನೆ, ಸ್ಟೋಟದಿಂದ ಅಪಾರ ಶಕ್ತಿ ಬಿಡುಗಡೆ

ಸಾಮಾನ್ಯವಾಗಿ ಭೂಮಿಯಲ್ಲಿನ ಉಷ್ಣನಯನ ಕ್ರಿಯೆಯಿಂದಾಗಿ ಭೂಖಂಡದ ಶಿಲಾಸ್ತರಗಳು ಬೇರೆ ಬೇರೆ ಕಾಲದಲ್ಲಿ ವಿವಿಧ ಪ್ರಮಾಣದ ಚಲನೆಗೊಳಪಡುತ್ತವೆ. ಆಗ ಹೊಂದಿಕೊಂಡ ಶಿಲೆಗಳು ಬಿಗಿತಗೊಳ್ಳುತ್ತವೆ. ಅವು ತಮ್ಮ ಸ್ಥಿತಿಸ್ಥಾಪಕತ್ವವನ್ನು ಮೀರಿದೊಡನೆಯೇ ಹಠಾತ್ತಾಗಿ ಸ್ಫೋಟಗೊಂಡು ಪರಮಾಣು ಬಾಂಬುಗಳ ಸ್ಫೋಟನೆಗೆ ಸಮನಾದ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಹೀಗೆ ಬಿಡುಗಡೆಯಾದ ಅತೀವ ಶಕ್ತಿಯ ಅಲೆಗಳು ಭೂಮಿಯ ವಿವಿಧ ಸ್ತರಗಳ ಮೂಲಕ ಹೊರದೂಡಲ್ಪಟ್ಟ ಶಕ್ತಿಗೆ ಸಮನಾಗಿ ಚಲಿಸಲಾರಂಬಿಸುತ್ತದೆ. ಆಳವನ್ನು ಅನುಸರಿಸಿ ಹಲವು ಕ್ರಮೇಣ ನಿಂತು ಹೋಗುತ್ತವೆ. ಆದರೆ ಭೂ ಚಿಪ್ಪಿನ ಮೇಲ್ಬಾಗದಲ್ಲಿ ಸಾಗುವ ಅಲೆಗಳು ತನ್ನದಾರಿಗೆ ಅಡ್ಡಬರುವ ಪರಿಸರದ ಎಲ್ಲ ರಚನೆಗಳನ್ನು ಕೆಡವಿ ಧ್ವಂಸ ಮಾಡುತ್ತವೆ. ಈ ಭೂಚಲನೆಗಳೇ ಭೂಕಂಪಗಳೆನಿಸಿಕೊಂಡಿವೆ. ಸಣ್ಣಪುಟ್ಟ ಘಟನೆಗಳೂ ಸೇರಿದಂತೆ ಇಂತಹ ಲಕ್ಷಾಂತರ ಕಂಪನಗಳು ಭೂಮಿಯಲ್ಲಿ ಘಟಿಸುತ್ತಲೇ ಇರುತ್ತವೆ.

ಹೆಚ್ಚಿನ ಭೂಕಂಪ ಪೀಡಿತ ಪ್ರದೇಶಗಳ ನೆಲದಲ್ಲಿ ಸಾಕಷ್ಟು ಅಂತರ್ಜಲವಿರುವುದು ಕಂಡುಬಂದಿದೆ. ನೆಲದಾಳದಲ್ಲಿ ನೀರು ಸೇರಿದಾಗ್ಯೂ ಅದು ಹಠಾತ್ತಾಗಿ ಶಿಲೆಗಳನ್ನು ಬಿರುಕುಗೊಳಿಸಬಲ್ಲುದು ಎಂಬುದೂ ಅಧ್ಯಯನಗಳಿಂದ ತಿಳಿದುಬಂದಿದೆ. ಹಲವು ಪ್ರದೇಶಗಳಲ್ಲಿ ನೀರನ್ನು ಭೂ ಆಳಕ್ಕೆ ಪಂಪ್ ಮಾಡಿ ಸೇರಿಸಿದಾಗಲೂ ಭೂಕಂಪನಗಳು ಉಂಟಾದ ಬಗ್ಗೆ ಉಲ್ಲೇಖಗಳಿವೆ. ಭೂಮಿಯ ಆಳದಲ್ಲಿ ಅಣು ಸ್ಫೋಟಗಳು ಸಹ ಭೂಸ್ತರ ಕುಸಿತಕ್ಕೆ ಕಾರಣವಾಗಬಹುದೆಂಬ ಅಭಿಪ್ರಾಯವಿದೆ. ಹೀಗಾಗಿ ಜಲಾಶಯಗಳನ್ನು ಕಟ್ಟುವಾಗಲೂ ಭೂಸರ್ವೇಕ್ಷಣ ನಡೆಸಿ ಕಂಪನ ಸ್ಥಿತಿಯ ಅರಿವು ಪಡೆದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

ಭೂಕಂಪನಗಳಬಗ್ಗೆ ಮುನ್ಸೂಚನೆ ನೀಡುವಲ್ಲಿ ಜಪಾನಿನವರು ಅನೇಕ ದೃಷ್ಟಾಂತಗಳಲ್ಲಿ ಯಶಸ್ವಿಯಾಗಿದ್ದಾರೆ . ಚೀನಾದಲ್ಲೂ ಸಹ 1975ರಲ್ಲಿ ನೀಡಲ್ಪಟ್ಟ ಮುನ್ಸೂಚನೆಯಿಂದಾಗಿ ಹತ್ತು ಸಾವಿರ ಪ್ರಾಣಹಾನಿಯನ್ನು ತಡೆಯಲಾಯಿತು. ಭೂಕಂಪನಗಳ ಘಟನೆಯ ಅಂತರ, ಚಕ್ರೀಯ ಚಲನೆಗಳನ್ನು ಸರಿಸಿ ಮುನ್ಸೂಚನೆ ನೀಡುವ ಬಗ್ಗೆ ಪ್ರಯತ್ನಗಳು ನಡೆದಿವೆ. ಆದಾಗ್ಯೂ ಭೂಕಂಪನವನ್ನು ಎದುರಿಸುವ ಮನೋಸ್ಥೈರ್ಯ ಅತಿಮುಖ್ಯ.

ಭೂಮಿಯು ಕಂಪಿಸಿದಾಗ ಬಯಲಿನಲ್ಲಿ, ರಸ್ತೆಗಳಲ್ಲಿರುವ ಯಾರೂ ಹೆದರಬೇಕಾಗಿಲ್ಲ. ಕಟ್ಟಡಗಳನ್ನು ನಿರ್ಮಿಸುವಾಗಲೂ ಭೂಕಂಪನದ ಪರಿಣಾಮವನ್ನು ಸಾಧ್ಯವಾದಷ್ಟೂ ತಡೆಯಬಲ್ಲ ರಚನೆಗಳ ಬಗ್ಗೆ ಗಮನ ಹರಿಸಬೇಕು. ಭೂಮಿಯ ಮೇಲಿನ ಪರಿಸರ ನಾಶವನ್ನು ತಡೆಗಟ್ಟಿ ನಮ್ಮೆಲ್ಲರ ಪೊರೆಯುವ ಭೂ ತಾಯಿಯ ಒಡಲ ತಾಪವನ್ನು ಸಾಧ್ಯವಾದಷ್ಟೂ ಶಮನಗೊಳಿಸುವಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಕೈಗೊಳ್ಳಬೇಕು.

---

ಎಚ್‌ಎ ಪುರುಷೋತ್ತಮ ರಾವ್ ಪರಿಚಯ

ಅರಣ್ಯ ಇಲಾಖೆಯಲ್ಲಿ ಆಡಳಿತ ವಿಭಾಗದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಕೋಲಾರದ ಎಚ್‌.ಎ.ಪುರುಷೋತ್ತಮ ರಾವ್ ವಿಜ್ಞಾನ ಬರಹಗಾರರಾಗಿ ಪ್ರಸಿದ್ಧರು. ಕಿವುಡನ ಮಾಡಯ್ಯ ತಂದೆ (ವಿಜ್ಞಾನ ವಿದ್ಯಮಾನಗಳು), ಭೂರಮೆಗೆ ಸ್ಪೆಥೋಸ್ಕೋಪ್ (ವಿಜ್ಞಾನ ಲೇಖನಗಳು), ಕಾಡು ಪ್ರತಿಭೆ ಮಾರಪ್ಪ (ಅರಣ್ಯಾಧಿಕಾರಿಯ ಬದುಕು-ಸಾಧನೆ), ಗಾಳಿಬೇರುಗಳು (ವಿಜ್ಞಾನ ಮತ್ತು ಪರಿಸರ ಲೇಖನಗಳು), ಅರಣ್ಯ ತಜ್ಞ ಅಜ್ಜಂಪುರ ಕೃಷ್ಣಸ್ವಾಮಿ (ವ್ಯಕ್ತಿ ಚಿತ್ರ) ಇವರ ಪ್ರಕಟಿತ ಕೃತಿಗಳು. ಕೋಲಾರ ಪತ್ರಿಕೆ, ಪ್ರಜಾವಾಣಿ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಸಂಪರ್ಕ ಸಂಖ್ಯೆ: 99723 39974