ಸಾವಿರ ವರ್ಷ ಉಳಿಯುವ ಕಾಗದ, ವಿಷ ಲೋಹ ನಿವಾರಕ ಕಾಫಿ, ವಿಟಮಿನ್ ಸಿ ಅಪಾಯಗಳು; ಬನ್ನಿ ಸಂಶೋಧನೆಗಳ ವಿವರ ತಿಳಿಯೋಣ -ಜ್ಞಾನ ವಿಜ್ಞಾನ ಅಂಕಣ-science news new paper from japan that will last for thousand years dangers of vitamin c benefits of coffee dmg ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಾವಿರ ವರ್ಷ ಉಳಿಯುವ ಕಾಗದ, ವಿಷ ಲೋಹ ನಿವಾರಕ ಕಾಫಿ, ವಿಟಮಿನ್ ಸಿ ಅಪಾಯಗಳು; ಬನ್ನಿ ಸಂಶೋಧನೆಗಳ ವಿವರ ತಿಳಿಯೋಣ -ಜ್ಞಾನ ವಿಜ್ಞಾನ ಅಂಕಣ

ಸಾವಿರ ವರ್ಷ ಉಳಿಯುವ ಕಾಗದ, ವಿಷ ಲೋಹ ನಿವಾರಕ ಕಾಫಿ, ವಿಟಮಿನ್ ಸಿ ಅಪಾಯಗಳು; ಬನ್ನಿ ಸಂಶೋಧನೆಗಳ ವಿವರ ತಿಳಿಯೋಣ -ಜ್ಞಾನ ವಿಜ್ಞಾನ ಅಂಕಣ

ಎಚ್‌ಎ ಪುರುಷೋತ್ತಮ ರಾವ್: ಸಂಕೀರ್ಣ ವೈಜ್ಞಾನಿಕ ವಿಚಾರಗಳಲ್ಲಿ ತಿಳಿಗನ್ನಡದಲ್ಲಿ ವಿವರಿಸುವ ಪ್ರಯತ್ನ ಇಲ್ಲಿದೆ. ಎಲ್ಲರೂ ಬಳಸುವ ಕಾಗದದಲ್ಲಿ ಏನಿರುತ್ತೆ? ಬಾಹ್ಯಾಕಾಶಕ್ಕೆ ಹೋಗುವವರ ಉಡುಗೆಯ ವೈಶಿಷ್ಟ್ಯವೇನು? ಈ ಬರಹದಲ್ಲಿದೆ ಉತ್ತರ. ನೀವೂ ಓದಿ, ಮಕ್ಕಳಿಗೂ ವಿವರಿಸಿ, ಅವರಿಂದಲೂ ಓದಿಸಿ. ನಿಮ್ಮ ಪರಿಚಯದ ವಿದ್ಯಾರ್ಥಿಗಳೊಂದಿಗೆ ಈ ಬರಹದ ಲಿಂಕ್ ಹಂಚಿಕೊಳ್ಳಿ.

ಎಚ್‌.ಎ.ಪುರುಷೋತ್ತಮ ರಾವ್ ಅವರ ಜ್ಞಾನ ವಿಜ್ಞಾನ ಅಂಕಣ
ಎಚ್‌.ಎ.ಪುರುಷೋತ್ತಮ ರಾವ್ ಅವರ ಜ್ಞಾನ ವಿಜ್ಞಾನ ಅಂಕಣ

ಜ್ಞಾನ ವಿಜ್ಞಾನ ಅಂಕಣ: ವಿಜ್ಞಾನದ ಸಂಕೀರ್ಣ ವಿಚಾರಗಳನ್ನು ಸರಳ ಕನ್ನಡದಲ್ಲಿ ವಿವರಿಸುವವರ ಸಂಖ್ಯೆ ಬಹಳ ಕಡಿಮೆ. ಕಲಿಯುವ, ತಿಳಿಯುವ ಆಸಕ್ತಿಯಿದ್ದರೂ ಭಾಷೆಯ ತೊಡಕಿನಿಂದಾಗಿ ಹಲವರಿಗೆ ವೈಜ್ಞಾನಿಕ ಸಂಶೋಧನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ವಿಜ್ಞಾನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳೂ ಇಂಥದ್ದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಳ ಕನ್ನಡದಲ್ಲಿ ವಿಜ್ಞಾನವನ್ನು ಆಕರ್ಷಕವಾಗಿ ವಿವರಿಸುವ ಅಪರೂಪದ ಶೈಲಿಯನ್ನು ಒಲಿಸಿಕೊಂಡಿದ್ದಾರೆ ಕೋಲಾರದ ಬರಹಗಾರ ಎಚ್‌.ಎ.ಪುರುಷೋತ್ತಮ ರಾವ್. 'ಜ್ಞಾನ-ವಿಜ್ಞಾನ' ಅಂಕಣದ ಮೂಲಕ ಅವರು ಇನ್ನು ಮುಂದೆ ಪ್ರತಿ ಬುಧವಾರ 'ಎಚ್‌ಟಿ ಕನ್ನಡ' ಓದುಗರಿಗೆ ವಿಜ್ಞಾನ ಲೋಕವನ್ನು ಅನಾವರಣಗೊಳಿಸಲಿದ್ದಾರೆ. ಇದು ಈ ಅಂಕಣದ ಮೊದಲ ಬರಹ ನೀವು ಪೂರ್ತಿ ಓದಿ, ನಿಮ್ಮ ಆಪ್ತರು, ಮುಖ್ಯವಾಗಿ ವಿದ್ಯಾರ್ಥಿಗಳೊಂದಿಗೆ ಶೇರ್ ಮಾಡಿ. ಮೌಲಿಕ ಬರಹಗಳು ಹೆಚ್ಚು ಜನರನ್ನು ತಲುಪಲು ನೆರವಾಗಿ.

ಸಾವಿರ ವರ್ಷ ಉಳಿಯುವ ಕಾಗದ

ಕಾಗದ ಹಲವು ವರ್ಷಗಳ ನಂತರ ಹಾಳಾಗುತ್ತವೆ. ಇದರಿಂದಾಗಿ ದಾಖಲೆಗಳನ್ನು ಹೆಚ್ಚು ಕಾಲ ರಕ್ಷಿಸಿಡುವುದು ಸಾದ್ಯವಾಗಿಲ್ಲ. ಕಾಗದದಲ್ಲಿ ಅಲ್ಪ ಪ್ರಮಾಣದಲ್ಲಿ ಲಿಗ್ನಿನ್, ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಸಹಿತ ಸಂಕಿರ್ಣ ಸಾವಯವ ವಸ್ತುಗಳು, ಸೆಲ್ಯುಲೋಸ್ ಇವೆಲ್ಲಾ ಇವೆ. ಇವುಗಳಲ್ಲಿ ಲಿಗ್ನಿನ್ ಪ್ರಮುಖವಾಗಿ ಕಾಗದದ ಬಣ್ಣವನ್ನೇ ಬದಲಿಸಿ ಹಾಳು ಮಾಡುವುದಲ್ಲದೆ ಅದರ ಮೇಲೆ ಮುದ್ರಿಸಲೂ ಸಾದ್ಯವಾಗದ ಸ್ಥಿತಿಗೆ ತರುತ್ತದೆ. ಈ ಸಮಸ್ಯೆಯನ್ನು ನೀಗಲು ಇತ್ತೀಚಿನ ಸಂಶೋಧನೆಯೊಂದು ಪ್ರಯತ್ನಿಸಿದೆ. “ನ್ಯೂಸೈಂಟಿಸ್ಟ್” ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ಜಪಾನಿನ ಕಂಪನಿಯೊಂದು ತಯಾರಿಸಿದ ಕಾಗದ 1000 ವರ್ಷದವರೆಗೂ ಹಾಳಾಗದೆ ಉಳಿಯುವುದು. ಲಿಗ್ನಿನ್ ಪ್ರಮಾಣವನ್ನು ವಿಶಿಷ್ಟ ರೀತಿಯಲ್ಲಿ ಕಡಿಮೆ ಮಾಡಿ ಈ ಬಗೆಯ ಕಾಗದವನ್ನು ತಯಾರಿಸಲಾಗಿದೆ. ಅಂದರೆ 21ನೇ ಶತಮಾನದಲ್ಲಿ ದಾಖಲಿಸಲಾದ ಮಾಹಿತಿಯನ್ನು 30 ನೇ ಶತಮಾನದವರೆಗೂ ಸಂರಕ್ಷಿಡಬಹುದಾಗಿದೆ.

ಅಧಿಕ ವಿಟಮಿನ್ ಸಿ ಅಪಾಯಕಾರಿ

ಖ್ಯಾತ ರಾಸಾಯನ ಶಾಸ್ತ್ರಜ್ಞ ಲೀನಸ್ ಪೌಲಿಂಗ್ ಶೀತಕ್ಕೆ ಪರಿಣಾಮಕಾರಿ ಔಷಧಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಸೇವನೆ ಎಂದು ಘೋಷಿಸಿದಾಗ ವೈದ್ಯಕೀಯ ಹಾಗೂ ಆರೋಗ್ಯ ತಜ್ಞರಲ್ಲಿ ಉತ್ಸಾಹ ಮೂಡಿತ್ತು. ಪರಿಣಾಮವಾಗಿ ಎಲ್ಲೆಡೆ ವಿಟಮಿನ್ ಸಿ ಬಳಕೆ ವ್ಯಾಪಕವಾಯಿತು. ಇದರ ಬಳಕೆಗೆ ಕ್ರಮೇಣ ದಾಸರೇ ಆಗಿಬಿಟ್ಟಿರುವ ಬಹಳಷ್ಟು ಮಂದಿಗೆ ದಿಗ್ಬ್ರಮೆ ಹುಟ್ಟಿಸುವ ವರದಿಯೊಂದು ಹೊರಬಂದಿದೆ. ಅದೇನೆಂದರೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ದೇಹ ಸೇರಿದಂತೆ ಅದು ರಕ್ತನಾಳಗಳಲ್ಲಿ ರಕ್ತ ಪ್ರವಾಹಕ್ಕೆ ಅಡಚಣೆಯನ್ನುಂಟು ಮಾಡುತ್ತದೆಂಬ ವಿಚಾರ. ಸಾನ್ ಡೀಗೋದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಈ ಬಗ್ಗೆ 573 ಮಂದಿಯ ಮೇಲೆ ಸಂಶೋಧನಾ ಪರೀಕ್ಷೆಗಳನ್ನು ನಡೆಸಿತು. ದಿನಕ್ಕೆ 500 ಮಿಲಿಗ್ರಾಂಗಳಂತೆ ವಿಟಮಿನ್ ಸಿ ಸೇವಿಸುತ್ತಿದ್ದವರಲ್ಲಿ ಬಳಕೆ ಮಾಡದಿರುವವರಿಗಿಂತ 2.5 ಪಟ್ಟು ಹೆಚ್ಚು ರಕ್ತನಾಳಗಳು ದಪ್ಪವಾಗಿದ್ದುದು ಕಂಡು ಬಂದಿತು. ಹೀಗಾಗಿ ಹಲವು ವಿಜ್ಞಾನಿಗಳಲ್ಲಿ ಹೆಚ್ಚಿನ ವಿಟಮಿನ್ ಸಿ ಸೇವನೆ ಅಪಾಯಕಾರಿ ಎಂಬ ಅಭಿಪ್ರಾಯವಿದೆ.

ವಿಷ ಲೋಹ ನಿವಾರಕ ಕಾಫಿ

ಬಹಳಷ್ಟು ಪ್ರದೇಶಗಳಲ್ಲಿ ದೊರೆಯುವ ನೀರಿನಲ್ಲಿ ಹಲವಾರು ವಿಷಕಾರಿ ಲೋಹ ಸಂಯುಕ್ತಗಳು ಬೆರೆತಿರುತ್ತದೆ. ತಾಮ್ರ, ಸೀಸ, ಮುಂತಾದ ಲೋಹಗಳಿರುವ ನೀರು ಪೈಪುಗಳಲ್ಲಿ ಹರಿಯುವಾಗ, ಟ್ಯಾಂಕುಗಳಲ್ಲಿ ಶೇಖರಣೆಗೊಂಡಾಗ ಸೇರುತ್ತವೆ. ಈ ನೀರು ದೇಹ ಸೇರಿದಾಗ ಅಪಾಯಕಾರಿ ಪರಿಣಾಮಗಳುಂಟಾಗುವ ಸಾದ್ಯತೆಗಳಿವೆ. ಈ ವಿಷಕಾರಿ ಲೋಹಗಳನ್ನು ನಿವಾರಿಸುವ ಔಷಧಿ ಯಾವುದು ಗೊತ್ತೇ? -ಅದು ಕಾಫಿ

“ನ್ಯೂಸೈಂಟಿಸ್ಟ್” ನಿಯತಕಾಲಿಕೆಯು ವಿಶಿಷ್ಟ ವಿಚಾರವನ್ನು ಪ್ರಕಟಿಸಿದೆ. ವರದಿಯ ಪ್ರಕಾರ ಪುಡಿಮಾಡಿದ ಕಾಫಿಯು ದೇಹದಲ್ಲಿನ ವಿಷಕಾರಿ ಅನಿಲಗಳ ಪ್ರಮಾಣವನ್ನು ಕಡಿಮೆ ಮಾಡುವುದೆಂದು ಆಸ್ಷ್ಟೇಲಿಯಾದ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಕರಗಿದ ಭಾರವಾದ ಲೋಹದ ಐಯಾನುಗಳು ಧನ (+) ಆವೇಶಪೂರಿತವಾಗಿದ್ದರೆ ಕಾಫಿಯಲ್ಲಿ ಆವೇಶ ರಹಿತ ಇಲ್ಲವೆ ಋಣ (-) ಆವೇಶಪೂರಿತ ಐಯಾನುಗಳಿರುತ್ತವೆ. ಹೀಗೆಂದು ಹೆಚ್ಚು ಕಾಫಿ ಕುಡಿಯುವುದೂ ಅಪಾಯಕಾರಿಯೇ. ಏಕೆಂದರೆ ಅದು ಇನ್ನಿತರ ಪಾರ್ಶ್ವ ಪರಿಣಾಮಗಳಿಗೆ ದಾರಿ ಮಾಡಿಕೊಡಬಹುದು. ಹೀಗಾಗಿ ಹಿತವಾದ ಆರೋಗ್ಯಕ್ಕೆ ಮಿತ ಕಾಫಿ ಲೇಸು.

ವ್ಯೋಮ ಯಾತ್ರಿಯ ವಿಶಿಷ್ಟ ಉಡುಪು

ವ್ಯೋಮ ಯಾತ್ರಿಗಳು ನೌಕೆಯನ್ನು ಬಿಟ್ಟು ಹೊರ ಬಂದಾಗ ವ್ಯೋಮ ಉಡುಪನ್ನು ಹೊಂದಿರಲೇಬೇಕು. ಈ ಉಡುಪಿನ ವೈಶಿಷ್ಟ್ಯ ಸ್ವಾರಸ್ಯಕರವಾಗಿದೆ. ಅಧಿಕ ವಾಹಕ ಚಾಲಕ ಘಟಕ (ಎಕ್ಟ್ರಾ ವೆಹಿಕ್ಯುಲರ್ ಮೊಬಿಲಿಟಿ ಯೂನಿಟ್) ಎಂದು ಕರೆಯಲ್ಪಡುವ ಈ ಉಡುಪಿನ ಹೊರ ಪದರ ಹಾಗೂ ತಲೆಯ ಪ್ಲಾಸ್ಟಿಕ್ ಶಿರಸ್ತ್ರಾಣ ಅಪಾಯಕಾರಿ ವಿಕಿರಣಗಳನ್ನು ತಡೆಯುತ್ತದೆ ಹಾಗೂ ಬುಲೆಟ್ ವೇಗ ಹೊಂದಿದ ವ್ಯೋಮ ಧೂಳಿನಿಂದ ದೇಹವನ್ನು ರಕ್ಷಿಸುತ್ತದೆ. ಹೆಲ್ಮೆಟ್‌ನಲ್ಲಿ ಆಮ್ಲಜನಕ ಸುತ್ತಲೂ ಪ್ರವಹಿಸಲು ವ್ಯವಸ್ಥೆಯಿದೆ. ಉಡುಪಿನ ಮದ್ಯಭಾಗದ ಪದರವು ಒತ್ತಡದಿಂದಾಗಿ ಬೆಲೂನಿನಂತೆ ಉಬ್ಬಿಕೊಂಡಿರುತ್ತದೆ.

ಈ ಒತ್ತಡವು ವ್ಯೋಮಯಾತ್ರಿಯ ದೇಹಕ್ಕೆ ಅತ್ಯಗತ್ಯ. ಇದು ಲಭ್ಯವಾಗದಿದ್ದರೆ ವ್ಯೋಮಯಾತ್ರಿಯ ದೇಹದ ರಕ್ತ ಕುದಿಯಬಹುದು. ಉಡುಪಿನ ಅತ್ಯಂತ ಒಳ ಪದರವು ತುಂಬಾ ನಯ ಹಾಗೂ ಮೃದುವಾಗಿದ್ದು ಇದರಲ್ಲಿ ಸಣ್ಣದಾದ ಕೊಳವೆಗಳ ಮೂಲಕ ನೀರು ಹರಿಯುವ ವ್ಯವಸ್ಥೆಯಿದೆ. ಇದರಿಂದಾಗಿ ದೇಹದ ಉಷ್ಣತೆಯನ್ನು ಏರಿಸಲು ಅಥವಾ ತಗ್ಗಿಸಲು ಸಾಧ್ಯವಿದೆ. ಹಿಂದಿನ ಬ್ಯಾಗ್‌ಗಳಲ್ಲಿ ಆಮ್ಲಜನಕ ದಾಸ್ತಾನಿದ್ದು ಪ್ರತಿಯೊಂದು ಸಿಲಿಂಡರ್ ಸುಮಾರು 7 ಘಂಟೆಗಳವರೆಗೂ ಆಮ್ಲಜನಕವನ್ನು ಪೂರೈಸಬಲ್ಲುದು. ಕೈಗೆ ಹಾಕಿಕೊಳ್ಳುವ ಗ್ಲೌಸ್‌ಗಳು , ಸಿಲಿಕಾನ್ ರಬ್ಬರ್‌ಗಳಿಂದ ತಯಾರಿಸಲಾಗಿದೆ. ಇದು ವ್ಯೋಮ ಯಾತ್ರಿಗೆ ಒಂದು ಬಗೆಯ ಸ್ಪರ್ಶ ಜ್ಞಾನವನ್ನುಂಟು ಮಾಡುತ್ತದೆ. ಇತರ ಡಬ್ಬಗಳು ಪ್ರತ್ಯೇಕವಾಗಿ ಕುಡಿಯುವ ನೀರಿಗೆ ಹಾಗೂ ಮೂತ್ರ ಸಂಗ್ರಹಕ್ಕೆ ವ್ಯವಸ್ಥಿತವಾಗಿವೆ. ಈ ಪ್ರತಿ ಉಡುಪಿನ ಬೆಲೆ ಸುಮಾರು 1.1 ಕೋಟಿ ಅಮೆರಿಕನ್ ಡಾಲರ್‌ಗಳಷ್ಟಾಗುತ್ತವೆ. ಅದರ ಶೇ. 70 ರಷ್ಟು ಖರ್ಚು ಉಡುಪಿನ ಹಿಂಬದಿಯ ಭಾಗಗಳಿಗೇ ವ್ಯಯವಾಗುತ್ತದೆ.

ಸಕ್ಕರೆ ಪ್ರಮಾಣಕ್ಕೆ ಕಡಿವಾಣ

ದೇಹದ ಉದರ ಭಾಗದಲ್ಲಿರುವ ಮೇದೋಜೀರಕ (ಪಾಂಕ್ರಿಯಾಸ್) ಗ್ರಂಥಿಯಲ್ಲಿನ ಲ್ಯಾಂಗರ್ ಹಾನ್ಸ್ ಕಿರು ದ್ವೀಪಗಳು ಇನ್ಸುಲಿನ್ ಮತ್ತು ಗ್ಲುಕನಾನ್ ಎಂಬ ಎರಡು ಹಾರ್ಮೋನುಗಳನ್ನು ಸ್ರವಿಸುತ್ತದೆ. ಇವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಈ ಹಾರ್ಮೋನಿನ ಕೊರತೆಯುಂಟಾದಾಗ ರಕ್ತದಲ್ಲಿ ಸಕ್ಕರೆ (ಗ್ಲೂಕೋಸ್) ಪ್ರಮಾಣ ಹೆಚ್ಚಾಗಿ ಸಕ್ಕರೆ ಕಾಯಿಲೆ ಉಂಟಾಗುತ್ತದೆ. ಅಗತ್ಯ ಪ್ರಮಾಣದಲ್ಲಿ ಇನ್ಸುಲಿನ್ ನೀಡಿ ಇದನ್ನು ಹತೋಟಿಯಲ್ಲಿ ಇಡಬಹುದು.

ಸುಮಾತ್ರದಲ್ಲಿದೆ ಅತಿದೊಡ್ಡ ಹಲ್ಲಿ

ಸುಮಾತ್ರಾದಲ್ಲಿ ಕೊಮೋಡೋ ಡ್ರಾಗನ್ ಎಂಬುದು 135 ಕೆಜಿ ತೂಗುವ ಅತಿದೊಡ್ಡ ಹಲ್ಲಿ ಇದೆ. ಇದು ಜಿಂಕೆ, ಹಂದಿಗಳನ್ನು ಹಿಡಿದು ಇಡಿಯಾಗಿ ನುಂಗಿ ಬಿಡಬಲ್ಲುದು.

ಚುಟುಕು ಮಾಹಿತಿ: ಗುಜರಾತಿನ ಗಿರ್ ಅರಣ್ಯಧಾಮವು ಸಿಂಹಗಳಿಗೆ ಹೆಸರುವಾಸಿ.

ಎಚ್‌ಎ ಪುರುಷೋತ್ತಮ ರಾವ್ ಪರಿಚಯ: ಅರಣ್ಯ ಇಲಾಖೆಯಲ್ಲಿ ಆಡಳಿತ ವಿಭಾಗದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಕೋಲಾರದ ಎಚ್‌.ಎ.ಪುರುಷೋತ್ತಮ ರಾವ್ ವಿಜ್ಞಾನ ಬರಹಗಾರರಾಗಿ ಪ್ರಸಿದ್ಧರು. ಕಿವುಡನ ಮಾಡಯ್ಯ ತಂದೆ (ವಿಜ್ಞಾನ ವಿದ್ಯಮಾನಗಳು), ಭೂರಮೆಗೆ ಸ್ಪೆಥೋಸ್ಕೋಪ್ (ವಿಜ್ಞಾನ ಲೇಖನಗಳು), ಕಾಡು ಪ್ರತಿಭೆ ಮಾರಪ್ಪ (ಅರಣ್ಯಾಧಿಕಾರಿಯ ಬದುಕು-ಸಾಧನೆ), ಗಾಳಿಬೇರುಗಳು (ವಿಜ್ಞಾನ ಮತ್ತು ಪರಿಸರ ಲೇಖನಗಳು), ಅರಣ್ಯ ತಜ್ಞ ಅಜ್ಜಂಪುರ ಕೃಷ್ಣಸ್ವಾಮಿ (ವ್ಯಕ್ತಿ ಚಿತ್ರ) ಇವರ ಪ್ರಕಟಿತ ಕೃತಿಗಳು. ಕೋಲಾರ ಪತ್ರಿಕೆ, ಪ್ರಜಾವಾಣಿ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಸಂಪರ್ಕ ಸಂಖ್ಯೆ: 99723 39974