Madras Chicken Curry: ಚಿಕನ್ ಸಾಂಬಾರ್ ತಿಂದು ಬೋರಾಗಿದ್ಯಾ? ಹಾಗಿದ್ರೆ ಮದ್ರಾಸ್ ಚಿಕನ್ ಕರ್ರಿ ಟ್ರೈ ಮಾಡಿ; ಇಲ್ಲಿದೆ ರೆಸಿಪಿ
Madras Chicken Curry Recipe: ಚಿಕನ್ ರೆಸಿಪಿಗಳು ಮಾಂಸಪ್ರಿಯರ ಬಾಯಲ್ಲಿ ನೀರೂರಿಸದೇ ಇರದು. ಈ ಬಾರಿ ಚಿಕನ್ನಿಂದ ಏನಾದರೂ ಹೊಸದು ಟ್ರೈ ಮಾಡಬೇಕು ಎಂದುಕೊಂಡಿದ್ದರೆ ಮದ್ರಾಸ್ ಚಿಕನ್ ಕರ್ರಿ ನಿಮ್ಮ ಆಯ್ಕೆಯಾಗಿರಲಿ. ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಲ್ಲ ಈ ಹೊಸ ಮಾದರಿಯ ಚಿಕನ್ ಕರ್ರಿ ನಿಮ್ಮ ಬಾಯಲ್ಲಿ ನೀರೂರಿಸಲಿದೆ.
ಅದೇ ಚಿಕನ್ ಸಾರು ತಿಂದು ತಿಂದು ಬೇಜಾರಿಗಿದ್ಯಾ..? ಚಿಕನ್ನಲ್ಲಿ ಹೊಸದಾಗಿ ಏನಾದರೂ ಕರ್ರಿ ತಯಾರಿಸಿ ಸವಿಯಬೇಕು ಅಂತಾ ನೀವು ಎಂದುಕೊಂಡಿದ್ದರೆ ಖಂಡಿತ ನಿಮಗೆ ಈ ಲೇಖನ ನೆರವಾಗಲಿದೆ. ಅಡುಗೆ ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಅತ್ಯಂತ ವೇಗವಾಗಿ ಹಾಗೂ ಅತ್ಯಂತ ರುಚಿಕರವಾದ ಮದ್ರಾಸ್ ಚಿಕನ್ ಕರ್ರಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಇದು ಮದ್ರಾಸ್ನ ಅತ್ಯಂತ ಫೇಮಸ್ ಚಿಕನ್ ರೆಸಿಪಿಗಳ ಪೈಕಿ ಒಂದಾಗಿದ್ದು ಇದನ್ನು ಅತ್ಯಂತ ಸುಲಭವಾಗಿ ಹೇಗೆ ತಯಾರಿಸಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ.
ಮದ್ರಾಸ್ ಚಿಕನ್ ಕರ್ರಿ ಮಾಡಲು ಬೇಕಾಗುವ ಸಾಮಗ್ರಿಗಳು :
ಎಣ್ಣೆ : 1/2 ಕಪ್
ಕತ್ತರಿಸಿದ ಈರುಳ್ಳಿ : 1 ಕಪ್
ಕೊತ್ತಂಬರಿ ಸೊಪ್ಪು : 1/2 ಕಪ್
ಬೆಳ್ಳುಳ್ಳಿ :5-6 ಎಸಳು
ತುರಿದುಟ್ಟಿಕೊಂಡ ಶುಂಠಿ : 3 ಚಮಚ
ಕತ್ತರಿಸಿ ಟೊಮೆಟೋ :1 ಕಪ್
ತೆಂಗಿನಕಾಯಿ ಹಾಲು : 1/2 ಕಪ್
ಮದ್ರಾಸ್ ಚಿಕನ್ ಕರ್ರಿ ಪೌಡರ್ : 2 ಟೇಬಲ್ ಚಮಚ
ಗರಂ ಮಸಾಲಾ : 1 ಟೇಬಲ್ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಖಾರದ ಪುಡಿ : 1/2 ಚಮಚ ( ಅಥವಾ ನಿಮ್ಮ ಖಾರಕ್ಕೆ ತಕ್ಕಂತೆ)
ಬೋನ್ಲೆಸ್ ಚಿಕನ್ : 1 ಕೆಜಿ,
ನಿಂಬೆ ರಸ : 1 ಚಮಚ
ಮದ್ರಾಸ್ ಚಿಕನ್ ಕರ್ರಿ ಮಾಡುವ ವಿಧಾನ :
ಕಡಿಮೆ ಉರಿಯಲ್ಲಿ ಪಾತ್ರೆಯನ್ನು ಇಡಿ. ಇದಕ್ಕೆ ಎಣ್ಣೆ, ಕತ್ತರಿಸಿಟ್ಟುಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಎಸಳು, ಶುಂಠಿಯನ್ನು ಹಾಕಿ ಚೆನ್ನಾಗಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. 10-12 ನಿಮಿಷಗಳು ಕಡಿಮೆ ಉರಿಯಲ್ಲಿ ಬೆಂದ ಬಳಿ ಈರುಳ್ಳಿ ಮೆತ್ತಗಾಗುತ್ತದೆ. ಚಿಕನ್ನ್ನು 1 ಇಂಚು ಪೀಸುಗಳಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಮದ್ರಾಸ್ ಕರ್ರಿ ಪೌಡರ್, ಗರಂ ಮಸಾಲಾ, ಉಪ್ಪು ಹಾಗೂ ಕಾಶ್ಮೀರಿ ಚಿಲ್ಲಿ ಪೌಡರ್ ಹಾಗೂ ಉಪ್ಪನ್ನು ಹಾಕಿ ಚಿಕನ್ನ್ನು ಮ್ಯಾರಿನೇಟ್ ಮಾಡಿಕೊಳ್ಳಿ.
ಈಗ ಕಡಿಮೆ ಉರಿಯಲ್ಲಿ ಬೇಯುತ್ತಿದ್ದ ಗ್ರೇವಿಯನ್ನು ಮಧ್ಯಮ ಉರಿಗೆ ತನ್ನಿ. ಟೊಮ್ಯಾಟೋ ಹಾಗೂ ತೆಂಗಿನ ಹಾಲನ್ನು ಇದಕ್ಕೆ ಸೇರಿಸಿ. ಇನ್ನೂ 10 ನಿಮಿಷಗಳ ಕಾಲ ಬೇಯಿಸಿ.ಇದಕ್ಕೆ ಮ್ಯಾರಿನೇಟ್ ಮಾಡಿಟ್ಟುಕೊಂಡ ಚಿಕನ್ನ್ನು ಸೇರಿಸಿ 15-20 ನಿಮಿಷಗಳ ಬೇಯಿಸಿ. ಮಧ್ಯದಲ್ಲಿ ಸೌಟಿನಿಂದ ಚಿಕನ್ ತಿರುವು ಹಾಕುತ್ತಾ ಇರಿ.
ಈಗ ಸಿಂಪಲ್ ಆದ ಹಾಗೂ ಅತ್ಯಂತ ರುಚಿಕರವಾದ ಮದ್ರಾಸ್ ಚಿಕನ್ ಕರ್ರಿ ಸವಿಯಲು ಸಿದ್ಧವಾಗಿದೆ. ಕೊನೆಯಲ್ಲಿ ಮದ್ರಾಸ್ ಚಿಕನ್ ಕರ್ರಿಗೆ ನಿಂಬು ರಸವನ್ನು ಸೇರಿಸಿ. ಅನ್ನ ಅಥವಾ ಗೀ ರೈಸ್ನೊಂದಿಗೆ ಈ ಕರ್ರಿಯನ್ನು ಸವಿಯಲು ನೀಡಿದರೆ ಸಖತ್ ಟೇಸ್ಟಿಯಾಗಿ ಇರಲಿದೆ. ಸರ್ವ್ ಮಾಡುವಾಗ ಕೊತ್ತಂಬರಿ ಸೊಪ್ಪನಿಂದ ಅಲಂಕರಿಸಿ ಮದ್ರಾಸ್ ಚಿಕನ್ ಕರ್ರಿಯನ್ನು ಸವಿಯಲು ನೀಡಿ. ಹೊಸ ಮಾದರಿಯ ಈ ಚಿಕನ್ ರೆಸಿಪಿ ಬಾಯಲ್ಲಿ ನೀರೂರಿಸುವದಂತೂ ಪಕ್ಕಾ.