ಕನ್ನಡ ಸುದ್ದಿ  /  ಜೀವನಶೈಲಿ  /  ಹೆಣ್ಣುಮಕ್ಕಳಿಗೆ ಗಡ್ಡ-ಮೀಸೆಯಂತೆ ಮುಖದ ಮೇಲೆ ಕೂದಲು ಬರಲು ಕಾರಣವೇನು? ಹಾರ್ಮೋನ್‌ ವ್ಯತ್ಯಯದಿಂದಾಗುವ ಇನ್ನಿತರ ತೊಂದರೆಗಳಿವು

ಹೆಣ್ಣುಮಕ್ಕಳಿಗೆ ಗಡ್ಡ-ಮೀಸೆಯಂತೆ ಮುಖದ ಮೇಲೆ ಕೂದಲು ಬರಲು ಕಾರಣವೇನು? ಹಾರ್ಮೋನ್‌ ವ್ಯತ್ಯಯದಿಂದಾಗುವ ಇನ್ನಿತರ ತೊಂದರೆಗಳಿವು

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತರಪ್ರದೇಶ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೂ ಪ್ರಾಚಿ ನಿಗಮ್‌ ಅವರನ್ನು ಸಾಕಷ್ಟು ಟ್ರೋಲ್‌ ಮಾಡಲಾಗಿತ್ತು. ಅದಕ್ಕೆ ಕಾರಣ ಆಕೆಯ ಮುಖದ ಮೇಲೆ ಗಡ್ಡ-ಮೀಸೆಯಂತೆ ಬೆಳೆದ ಕೂದಲು. ಹಾಗಾದರೆ ಹೆಣ್ಣುಮಕ್ಕಳಿಗೆ ಮುಖದ ಮೇಲೆ ಗಡ್ಡ, ಮೀಸೆಯಂತೆ ಕೂದಲು ಬರಲು ಕಾರಣವೇನು, ಹಾರ್ಮೋನ್‌ ವ್ಯತ್ಯಯದಿಂದಾಗುವ ಇನ್ನಿತರ ಸಮಸ್ಯೆಗಳೇನು?

ಹೆಣ್ಣುಮಕ್ಕಳಿಗೆ ಗಡ್ಡ-ಮೀಸೆಯಂತೆ ಮುಖದ ಮೇಲೆ ಕೂದಲು ಬರಲು ಕಾರಣವೇನು?
ಹೆಣ್ಣುಮಕ್ಕಳಿಗೆ ಗಡ್ಡ-ಮೀಸೆಯಂತೆ ಮುಖದ ಮೇಲೆ ಕೂದಲು ಬರಲು ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಯಾರು ಯಾವ ವಿಚಾರಕ್ಕೆ ಟ್ರೋಲ್‌ ಆಗುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕ್ಷಿ ಉತ್ತರಪ್ರದೇಶದ ಪ್ರಾಚಿ ನಿಗಮ್‌. ಪ್ರಾಚಿ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಪ್ರತಿಭಾವಂತ ಹುಡುಗಿ. ಶೇ 98.5 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಆದರೆ ಆಕೆ ತನ್ನ ಸಾಧನೆಗಿಂತ ಟ್ರೋಲ್‌ ಮೂಲಕವೇ ಹೆಚ್ಚು ಸುದ್ದಿಯಾದರು. ಅದಕ್ಕೆ ಕಾರಣ ಆಕೆಯ ಮುಖದ ಮೇಲೆ ಗಡ್ಡ-ಮೀಸೆಯಂತೆ ಕೂದಲು ಬೆಳೆದಿರುವುದು. ಈ ಕಾರಣದಿಂದ ಆ ಹುಡುಗಿಯ ಫೋಟೊ ವೈರಲ್‌ ಆಗಿ, ಆಕೆ ಮಾಡಿರುವ ಸಾಧನೆ ಕೂಡ ಟ್ರೋಲ್‌ನಲ್ಲಿ ಮುಚ್ಚಿ ಹೋಗುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಆಕೆಯ ಫೋಟೊ ಆಕೆಯ ಸಾಧನೆಯನ್ನು ಜನ ಗುರುತಿಸಿದೇ ಮುಖದ ಮೇಲಿನ ಕೂದಲು ಗುರುತಿಸುವಂತೆ ಮಾಡಿದೆ.

ಆದರೆ ಪ್ರಾಚಿಯನ್ನು ಟ್ರೋಲ್‌ ಮಾಡಿರುವುದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಖಂಡನೆ ವ್ಯಕ್ತವಾಗಿದ್ದು, ಹಲವರು ಪ್ರಾಚಿಗೆ ಸಪೂರ್ಟ್‌ ಮಾಡಿದ್ದಾರೆ. ಹದಿವಯಸ್ಸಿನಲ್ಲಿ ಹೆಣ್ಣುಮಕ್ಕಳ ಮುಖದ ಮೇಲೆ ಕೂದಲು ಬರಲು ಕಾರಣ ಹಾಗೂ ಇದರಿಂದ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಜನರು ತಿಳವಳಿಕೆ ಮೂಡಿಸಲು ಯತ್ನಿಸುತ್ತಿದ್ದಾರೆ. ಜೊತೆಗೆ ಇದು ಅಪಹಾಸ್ಯದ ಸಮಯವಲ್ಲ, ಇದು ಆಕೆಯ ಸಾಧನೆಯನ್ನು ಸಂಭ್ರಮಿಸಿ ಆಕೆ ಜೊತೆಗೆ ನಿಲ್ಲುವ ಸಮಯ ಎಂದು ಖಡಕ್‌ ಉತ್ತರವನ್ನೂ ನೀಡಿದ್ದಾರೆ.

ಈ ನಡುವೆ ಹೆಣ್ಣುಮಕ್ಕಳಿಗೆ ಗಂಡಸರಂತೆ ಮುಖದ ಮೇಲೆ ಕೂದಲು ಮೂಡಲು ಕಾರಣವೇನು, ಇದರಿಂದ ಅವರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳು ಜನರಲ್ಲಿ ಮನಸ್ಸಿನಲ್ಲಿ ಮೂಡಲು ಆರಂಭವಾಗಿದೆ. ಇದಕ್ಕೆ ಉತ್ತರ ಇಲ್ಲಿದೆ. 

ಹಾರ್ಮೋನ್ ವೈಪರಿತ್ಯ ಎಂದರೇನು?

ಹೆಣ್ಣುಮಕ್ಕಳಿಗೆ ಮುಖದ ಮೇಲೆ ಗಡ್ಡ ಮೀಸೆಯಂತೆ ಕೂದಲು ಹುಟ್ಟಲು ಪ್ರಮುಖ ಕಾರಣ ಹಾರ್ಮೋನ್‌ ವ್ಯತ್ಯಯ. ಹಾರ್ಮೋನ್‌ ವ್ಯತ್ಯಯ ಉಂಟಾಗಲು ಕಾರಣಗಳು ಹಲವು. ನಮ್ಮ ಜೀವನಕ್ರಮ, ಆಹಾರ ಪದ್ಧತಿ, ಆನುವಂಶಿಕ ಕಾರಣಗಳು ಸೇರಿದಂತೆ ಹಲವು ಅಂಶಗಳು ಹೆಣ್ಣುಮಕ್ಕಳಿಗೆ ಹಾರ್ಮೋನ್‌ ವ್ಯತ್ಯಯಕ್ಕೆ ಕಾರಣವಾಗುತ್ತದೆ. ಹೆಣ್ಣುಮಕ್ಕಳಲ್ಲಿ ಪ್ರಮುಖವಾಗಿ ಪ್ರೊಜೆಸ್ಟೆರಾನ್‌, ಈಸ್ಟ್ರೋಜೆನ್‌, ಕಾರ್ಟಿಸೋಲ್‌, ಥೈರಾಯಿಡ್‌, ಟೆಸ್ಟೊಸ್ಟೆರಾನ್‌ ಹಾರ್ಮೋನ್‌ಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಅಂಡಾಶಯದಲ್ಲಿ ಪುರುಷ ಹಾರ್ಮೋನ್‌ ಎಂದೇ ಕರೆಸಿಕೊಳ್ಳುವ ಆಂಡ್ರೋಜನ್‌ ಹಾರ್ಮೋನ್‌ ಉತ್ಪತ್ತಿಯ ಪ್ರಮಾಣ ಏರಿಕೆಯಾದರೆ ಮುಖದ ಮೇಲೆ ಬೇಡದ ಕೂದಲುಗಳು ಬೆಳೆಯಲು ಆರಂಭವಾಗುತ್ತದೆ. ಹಾರ್ಮೋನ್‌ ವ್ಯತ್ಯಯದಿಂದ ಹೆಣ್ಣುಮಕ್ಕಳಿಗೆ ಪಿಸಿಓಡಿ, ಥೈರಾಯಿಡ್‌, ಪಿಸಿಓಎಸ್‌ನಂತಹ ಸಮಸ್ಯೆಗಳೂ ಎದುರಾಗಬಹುದು. ಈ ಎಲ್ಲಾ ಸಮಸ್ಯೆಗಳು ಹೆಣ್ಣುಮಕ್ಕಳ ದೇಹದಲ್ಲಿ ಬೇಡದ ಕೂದಲ ಬೆಳೆಯುವಂತೆ ಮಾಡುತ್ತದೆ.

ಹಾರ್ಮೋನ್‌ ವ್ಯತ್ಯಯದಿಂದ ಎದುರಾಗುವ ಸಮಸ್ಯೆಗಳು

ಹಾರ್ಮೋನ್‌ ವ್ಯತ್ಯಯದಿಂದ ಹೆಣ್ಣುಮಕ್ಕಳು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಪಿಸಿಓಡಿ, ಥೈರಾಯಿಡ್‌ನಂತಹ ಸಮಸ್ಯೆಗಳು ಎದುರಾದಾಗ ಮುಟ್ಟಿನ ತೊಂದರೆ, ದೇಹ ತೂಕ ಹೆಚ್ಚಳವಾಗುವುದು, ಮಾನಸಿಕ ಕಿರಿಕಿರಿ, ಮುಖ ಸೇರಿದಂತೆ ದೇಹದ ಭಾಗಗಳಲ್ಲಿ ಬೇಡದ ಕೂದಲು ಬೆಳೆಯುವುದು, ಒತ್ತಡ ಹೆಚ್ಚುವುದು, ಕಿರಿಕಿರಿ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಸಾಮಾಜಿಕವಾಗಿ ಅವರು ಟೀಕೆ, ಟ್ರೋಲ್‌ಗಳನ್ನು ಕೂಡ ಎದುರಿಸಬೇಕಾಗಬಹುದು. ಮುಖದ ಮೇಲಿನ ಬೇಡದ ಕೂದಲು ಹಾಗೂ ತೂಕ ಹೆಚ್ಚಳದ ಕಾರಣದಿಂದ ಎಲ್ಲಿಗೂ ಹೋಗದೇ ನಾಲ್ಕು ಗೋಡೆಗಳ ಮಧ್ಯೆ ಸಮಯ ಕಳೆಯುವವರೂ ಇದ್ದಾರೆ. ಹಲವರಿಗೆ ಈ ದೈಹಿಕ ಸಮಸ್ಯೆ ಮಾನಸಿಕ ಸಮಸ್ಯೆಯಾಗುವ ಸಂಭವವೂ ಹೆಚ್ಚು. ಇಂತಹ ಸಂದರ್ಭದಲ್ಲಿ ಪೋಷಕರು ಹಾಗೂ ಆತ್ಮೀಯರು ಹೆಣ್ಣುಮಕ್ಕಳಿಗೆ ಬೆಂಬಲ ಸೂಚಿಸಬೇಕು. 

ಪಿಸಿಓಡಿ (ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌)

ಪಿಸಿಓಡಿ ಸಮಸ್ಯೆಯಿಂದ ಬಳಸುತ್ತಿರುವ ಹೆಣ್ಣುಮಕ್ಕಳಲ್ಲಿ ಮುಖದ ಮೇಲೆ ಗಡ್ಡ-ಮೀಸೆಯಂತೆ ಕೂದಲು ಮೂಡುವುದು ಸಹಜ. ಪಿಸಿಓಡಿ ಸಮಸ್ಯೆ ಕಾಣಿಸಲು ಪ್ರಮುಖ ಕಾರಣ ಜೀವನಶೈಲಿ ಹಾಗೂ ಆಹಾರಕ್ರಮ. ಇದರೊಂದಿಗೆ ಕೆಲವು ಮಕ್ಕಳಿಗೆ ಅನುವಂಶಿಕ ಕಾರಣಗಳಿಂದಲೂ ಪಿಸಿಓಡಿ ಸಮಸ್ಯೆ ಎದುರಾಗಬಹುದು. ಭಾರತದಲ್ಲಿ ಹಲವು ಹೆಣ್ಣುಮಕ್ಕಳು ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದರೂ ಹಲವರು ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿಲ್ಲ. ಪೋಷಕರಿಗೆ ಈ ಬಗ್ಗೆ ಅರಿವು ಕೂಡ ಕಡಿಮೆ ಇದ್ದು, ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ.

ಹಾರ್ಮೋನ್‌ ವ್ಯತ್ಯಯಕ್ಕೆ ಚಿಕಿತ್ಸೆ

ಹೆಣ್ಣುಮಕ್ಕಳಲ್ಲಿ ಉಂಟಾಗುವ ಹಾರ್ಮೋನ್‌ ವ್ಯತ್ಯಯಕ್ಕೆ ಆಹಾರಕ್ರಮ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು, ವ್ಯಾಯಾಮ ಮಾಡುವುದು, ಪ್ರತಿದಿನ ವಾಕಿಂಗ್‌ ಮಾಡುವುದು ಇಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಸಮಸ್ಯೆ ತೀವ್ರವಾದರೆ ತಜ್ಞ ವೈದ್ಯರನ್ನು ಸಂಪರ್ಕಿಸಬಹುದು. ಈ ಸಮಸ್ಯೆಗಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ, ಬೇಗನೆ ಪರಿಹಾರ ಕಂಡುಕೊಳ್ಳಬಹುದು.