ಕನ್ನಡ ಸುದ್ದಿ  /  ಜೀವನಶೈಲಿ  /  ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ನಿಮಗೂ ಇದ್ಯಾ? ಇದಕ್ಕೆ ಕಾರಣವೇನು, ಇದರಿಂದಾಗುವ ತೊಂದರೆಗಳೇನು; ಇಲ್ಲಿದೆ ತಜ್ಞರ ಉತ್ತರ

ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ನಿಮಗೂ ಇದ್ಯಾ? ಇದಕ್ಕೆ ಕಾರಣವೇನು, ಇದರಿಂದಾಗುವ ತೊಂದರೆಗಳೇನು; ಇಲ್ಲಿದೆ ತಜ್ಞರ ಉತ್ತರ

ಕೆಲವರಿಗೆ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸವಿರುತ್ತದೆ. ಇನ್ನೂ ಕೆಲವರು ಗಾಢ ನಿದ್ದೆಯಲ್ಲಿದ್ದಾಗ ಬಾಯಿಂದ ವಿಚಿತ್ರ ಶಬ್ದ ಹೊರಡಿಸುತ್ತಾರೆ. ಇದಕ್ಕೆ ಕಾರಣವೇನು, ನಿದ್ದೆಯಲ್ಲಿ ಮಾತನಾಡುವುದು, ಶಬ್ದ ಮಾಡುವುದು ಅಪಾಯದ ಮುನ್ಸೂಚನೆಯೇ, ಈ ಬಗ್ಗೆ ವೈದ್ಯರು ಏನಂತಾರೆ ನೋಡಿ.

ನಿದ್ದೆಯಲ್ಲಿ ಮಾತನಾಡಲು ಕಾರಣವೇನು?
ನಿದ್ದೆಯಲ್ಲಿ ಮಾತನಾಡಲು ಕಾರಣವೇನು?

ನಮ್ಮಲ್ಲಿ ಹಲವರಿಗೆ ನಿದ್ದೆಯಲ್ಲಿ ನಡೆದಾಡುವ, ಮಾತನಾಡುವ ಅಭ್ಯಾಸವಿದೆ. ಗಾಢ ನಿದ್ದೆಯಲ್ಲಿ ಇದ್ದಾಗ ಇದ್ದಕ್ಕಿದ್ದಂತೆ ಮಾತನಾಡಲು ಆರಂಭಿಸುತ್ತಾರೆ. ತಾನೇನು ಮಾತನಾಡಿದೆ, ಯಾಕೆ ಮಾತನಾಡುತ್ತಿದ್ದೇನೆ ಎಂಬುದರ ಅರಿವು ಅವರಿಗೆ ಇರುವುದಿಲ್ಲ. ಆದರೂ ಮಾತನಾಡುತ್ತಾರೆ. ಇದನ್ನು ಸ್ಲೀಪ್‌ ಟಾಕಿಂಗ್‌ ಎಂದು ಕರೆಯುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಕೆಲವರು ಗೊಣಗುತ್ತಾರೆ, ಇನ್ನು ಕೆಲವರು ಸ್ಪಷ್ಟವಾಗಿ ಮಾತನಾಡುತ್ತಾರೆ. ಆದರೆ ಇದಕ್ಕೆ ಕಾರಣ ಏನು ಎಂಬುದು ಮಾತ್ರ ಅವರಿಗೂ, ಉಳಿದವರಿಗೂ ಹೋಗಲಿ ನಿಮಗೂ ಕೂಡ ತಿಳಿದಿಲ್ಲ. ಮನುಷ್ಯರು ನಿದ್ದೆಯಲ್ಲಿ ಮಾತನಾಡುವುದೇಕೆ, ಇದಕ್ಕೆ ಕಾರಣ ಏನು ಎಂಬುದನ್ನು ವೈದ್ಯರು ವಿವರಿಸುವುದು ಹೀಗೆ.

ಏನಿದು ಪ್ಯಾರಾಸೋಮ್ನಿಯಾ?

ನಿದ್ರೆ ಮಾತನಾಡುವುದನ್ನು ವೈದ್ಯಕೀಯ ಭಾಷೆಯಲ್ಲಿ ಪ್ಯಾರಾಸೋಮ್ನಿಯಾ ಎಂದು ಕರೆಯಲಾಗುತ್ತದೆ. ಇದು ನಿದ್ರೆಯ ಸಮಯದಲ್ಲಿ ಮಾತ್ರ ಸಂಭವಿಸುವ ನಡವಳಿಕೆಯಾಗಿದೆ. ನಿದ್ದೆಯಲ್ಲಿ ಮಾತನಾಡುವವರು ಯಾರಿಗೂ ಹಾನಿ ಮಾಡುವುದಿಲ್ಲ. ಇದನ್ನು ವೈದ್ಯಕೀಯ ಸಮಸ್ಯೆ ಅಥವಾ ಯಾವುದೇ ರೀತಿಯ ಮಾನಸಿಕ ಸಮಸ್ಯೆ ಕೂಡ ಅಲ್ಲ ಎಂದು ತಜ್ಞರು ಹೇಳುತ್ತಾರೆ. ನಿದ್ದೆಯಲ್ಲಿ ಮಾತನಾಡುವವರು ಮಾತ್ರವಲ್ಲ, ಗಲಾಟೆ ಮಾಡುವವರು, ಭಾಷಣ ಮಾಡುವವರು ಕೂಡ ಇದ್ದಾರೆ. ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಎಂಬುದು ವೈದ್ಯರ ಅಭಿಪ್ರಾಯ.

ಮೂರರಿಂದ ಹತ್ತು ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ನಿದ್ದೆಯಲ್ಲಿ ಮಾತನಾಡುತ್ತಾರೆ. ಮಧ್ಯರಾತ್ರಿ ವೇಳೆ ಅವರು ಬೆಳಿಗ್ಗೆ ಮಾಡಿದ ವಿಷಯಗಳ ಬಗ್ಗೆ ಮಾತನಾಡುವ ಸಾಧ್ಯತೆಯಿದೆ. ದೊಡ್ಡವರ ವಿಚಾರಕ್ಕೆ ಬಂದರೆ ನಿದ್ದೆಯಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆ. ಕೇವಲ ಐದು ಪ್ರತಿಶತ ಜನರು ಮಾತನಾಡುತ್ತಾರೆ. ಇದನ್ನು ಆನುವಂಶಿಕ ಸಮಸ್ಯೆ ಎಂದೂ ಪರಿಗಣಿಸಬಹುದು. ಕುಟುಂಬದಲ್ಲಿ ಯಾರಾದರೂ ನಿದ್ರೆಯಲ್ಲಿ ಮಾತನಾಡುವ ಅಭ್ಯಾಸವನ್ನು ಹೊಂದಿದ್ದರೆ, ಅದು ತಲೆಮಾರುಗಳ ಮೂಲಕ ಹರಡಬಹುದು.

ನಿದ್ದೆಯಲ್ಲಿ ಮಾತನಾಡಲು ಕಾರಣವೇನು?

ನಿದ್ರೆಯ ಮಾತುಗಳಿಗೆ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಕನಸು ಕಾಣುವುದಕ್ಕೂ ಅದಕ್ಕೂ ಏನಾದರೂ ಸಂಬಂಧವಿರಬಹುದು ಎಂದು ಹೇಳಲಾಗುತ್ತದೆ. ಭಾವನೆಗಳು, ಒತ್ತಡ, ಕೆಲವು ವಿಧದ ಔಷಧಿಗಳು, ಜ್ವರ ಮತ್ತು ಮಾನಸಿಕ ಆರೋಗ್ಯದ ಅಸ್ವಸ್ಥತೆಗಳು ಸಹ ನಿದ್ರೆ ಮಾತನಾಡಲು ಕಾರಣವಾಗಬಹುದು.

ನಿದ್ದೆಯಲ್ಲಿ ಕೆಲವು ಸೆಕೆಂಡುಗಳ ಕಾಲ ಮಾತನಾಡುವುದು ದೊಡ್ಡ ಸಮಸ್ಯೆಯಲ್ಲ, ಆದರೆ ನೀವು ದೀರ್ಘಕಾಲದವರೆಗೆ ಮಾತನಾಡುತ್ತಲೇ ಇದ್ದರೆ, ಅದರಿಂದ ನಿಮ್ಮ ಸುತ್ತಮುತ್ತಲಿನ ಜನರ ನಿದ್ದೆ ಕೆಡುವ ಸಾಧ್ಯತೆಯಿದೆ. ನೀವು ನಿದ್ದೆಯಲ್ಲಿ ಬಹಳಷ್ಟು ಹೊತ್ತು ಮಾತನಾಡುವವರಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ನಿದ್ದೆಯಲ್ಲಿ ಮಾತನಾಡುವುದನ್ನು ಕಡಿಮೆ ಮಾಡುವುದು ಹೇಗೆ?

ನಿದ್ರೆಯಲ್ಲಿ ಮಾತನಾಡುವುದನ್ನು ಕಡಿಮೆ ಮಾಡಲು ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸಬೇಕು. ಇದು ನಿದ್ರೆಯಲ್ಲಿ ಮಾತನಾಡುವ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿದ್ರೆ ನಿರ್ವಹಣೆ ತಂತ್ರಗಳನ್ನು ಸಹ ಕಲಿಯಬೇಕು. ಇದಕ್ಕಾಗಿ ವೈದ್ಯರ ಸಲಹೆ ಪಡೆಯಬೇಕು. ನಿದ್ದೆಯಲ್ಲಿ ಮಾತನಾಡುವುದು ದೊಡ್ಡ ಸಮಸ್ಯೆಯಲ್ಲ. ಹಾಗಾಗಿ ಅದರ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ ಎಂದು ತಜ್ಞರು ಭರವಸೆ ನೀಡುತ್ತಾರೆ.

ವಿಭಾಗ