ಕನ್ನಡ ಸುದ್ದಿ  /  ಜೀವನಶೈಲಿ  /  ಮಾವಿನಹಣ್ಣನ್ನು ಚಪ್ಪರಿಸಿ ತಿನ್ನುವ ಮೊದಲು ಇರಲಿ ಎಚ್ಚರ: ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಟ್ಟರೆ ಇಷ್ಟೆಲ್ಲಾ ಉಪಯೋಗವಿದೆ ನೋಡಿ

ಮಾವಿನಹಣ್ಣನ್ನು ಚಪ್ಪರಿಸಿ ತಿನ್ನುವ ಮೊದಲು ಇರಲಿ ಎಚ್ಚರ: ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಟ್ಟರೆ ಇಷ್ಟೆಲ್ಲಾ ಉಪಯೋಗವಿದೆ ನೋಡಿ

ಬೇಸಿಗೆ ಅಂದಾಕ್ಷಣ ನೆನಪಾಗುವುದು ಮಾವಿನ ಹಣ್ಣು. ಹಣ್ಣುಗಳ ರಾಜನೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೂ ಚಪ್ಪರಿಸಿಕೊಂಡು ತಿನ್ನುವ ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿದೆ. ಆದರೆ, ಹಣ್ಣನ್ನು ತಿನ್ನುವ ಮುನ್ನ ನೀರಿನಲ್ಲಿ ನೆನೆಸಿಡುವುದು ಮುಖ್ಯ. ಏಕೆ ಆ ರೀತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ತಿನ್ನುವ ಮುನ್ನ ಮಾವಿನ ಹಣ್ಣನ್ನು ನೆನೆಸಿದರೆ ಬಹಳ ಪ್ರಯೋಜನಗಳಿವೆ
ತಿನ್ನುವ ಮುನ್ನ ಮಾವಿನ ಹಣ್ಣನ್ನು ನೆನೆಸಿದರೆ ಬಹಳ ಪ್ರಯೋಜನಗಳಿವೆ (PC: Pixaby)

Summer Food: ಬೇಸಿಗೆ ಅಂದಾಕ್ಷಣ ಎಲ್ಲರಿಗೂ, ಅಯ್ಯೋ ಯಾಕಾದ್ರೂ ಬಂತಪ್ಪಾ ಅನ್ನೋ ಹಾಗಾಗೋದು ಸಾಮಾನ್ಯ. ಯಾಕಂದ್ರೆ, ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುತ್ತದೆ. ಈಗಂತೂ ಕಾಡುಗಳನ್ನು ನಾಶ ಮಾಡಿದುದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ಈ ಸಂಕಟದ ನಡುವೆಯೂ ನಮಗೆ ದೊರೆಯುವ ಮಾವಿನ ಹಣ್ಣನ್ನು ತಿನ್ನುವ ಖುಷಿ ಬೇಸಿಗೆಯ ಬೇಸರವನ್ನು ಮರೆಸುತ್ತದೆ. ಅದೇನೇ ಇರಲಿ, ಬೇಸಿಗೆ ಅಂದರೆ ಎಲ್ಲೆಲ್ಲೂ ಹಣ್ಣುಗಳ ರಾಜ ಮಾವಿನದ್ದೇ ಕಾರುಬಾರು. ಮಾವಿನಹಣ್ಣು ಇಷ್ಟವಿಲ್ಲದಿದ್ದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಬೇಸಿಗೆ ಋತುವಿನಲ್ಲಿ ಮಾವಿನ ಹಣ್ಣುಗಳು ಹೇರಳವಾಗಿ ಲಭ್ಯವಿರುತ್ತದೆ.

ಟ್ರೆಂಡಿಂಗ್​ ಸುದ್ದಿ

ವಿಶೇಷವಾಗಿ ಭಾರತೀಯರಿಗಂತೂ ಮಾವಿನ ಹಣ್ಣಿನ ಮೇಲಿರುವ ಪ್ರೀತಿ ಪದಗಳಿಗೆ ಮೀರಿದ್ದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಬಗೆ-ಬಗೆಯ ಮಾವಿನ ಹಣ್ಣುಗಳನ್ನು ಸವಿಯುತ್ತಾ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಂಭ್ರಮಿಸುತ್ತಾರೆ. ಮಾವಿನ ಹಣ್ಣನ್ನು ತಿನ್ನುವುದು ಮಾತ್ರವಲ್ಲದೆ ಇದರಿಂದ ವಿವಿಧ ಖಾದ್ಯಗಳನ್ನು ಸಹ ತಯಾರಿಸಿ ಸವಿಯುತ್ತಾರೆ.

ಮಾವಿನ ಹಣ್ಣಿನಲ್ಲಿದೆ ಅಗಾಧ ಪೋಷಕಾಂಶ

ಮಾವಿನಹಣ್ಣುಗಳು ವಿಟಮಿನ್ ಎ ಮತ್ತು ಸಿ ಯಂತಹ ಅಗತ್ಯವಾದ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿ, ದೃಷ್ಟಿ, ಆರೋಗ್ಯ ಮತ್ತು ಚರ್ಮದ ಸಮಗ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಇದರಲ್ಲಿ ಫೈಬರ್ ಅಂಶ ಸಹ ಹೆಚ್ಚಿದೆ. ಜೀರ್ಣಕ್ರಿಯೆ ಹಾಗೂ ತೂಕ ನಿರ್ವಹಣೆಗೂ ಸಹಕಾರಿಯಾಗಿದೆ. ಮಾವಿನಹಣ್ಣುಗಳು ಬೀಟಾ-ಕ್ಯಾರೋಟಿನ್ ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ಮಾವಿನಹಣ್ಣುಗಳು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಕೆ ಪೋಷಕಾಂಶಗಳನ್ನು ಹೊಂದಿದೆ. ಹೃದಯದ ಆರೋಗ್ಯ, ಮೂಳೆ ಬಲಗೊಳ್ಳಲು ಮುಂತಾದವುಗಳಿಗೆ ಸಹಕಾರಿ. ಮಾವಿನಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುವುದಲ್ಲದೆ, ಮಲಬದ್ಧತೆ ಮತ್ತು ಜೀರ್ಣಕಾರಿ ಅಸ್ವಸ್ಥತೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಇಷ್ಟೆಲ್ಲಾ ಆರೋಗ್ಯ ಪ್ರಯೋಜನವಿರುವ ಮಾವಿನಹಣ್ಣು ಸೇವನೆಗೂ ಮುನ್ನ ಕೆಲವೊಂದು ಕಾಳಜಿ ವಹಿಸಬೇಕಾದುದು ಅತ್ಯಗತ್ಯ. ಮಾವನ್ನು ಸೇವಿಸುವ ಮುನ್ನ ನೀರಿನಲ್ಲಿ ನೆನೆಸಬೇಕು. ಹಾಗಿದ್ದರೆ, ಮಾವಿನ ಹಣ್ಣನ್ನು ತಿನ್ನುವ ಸರಿಯಾದ ವಿಧಾನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದುದು ಏನೇನು? ಇಲ್ಲಿದೆ ಮಾಹಿತಿ.

ಮಾವಿನಹಣ್ಣನ್ನು ಏಕೆ ನೆನೆಸಬೇಕು?

ಮಾವಿನಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡುವುದು ಆರೋಗ್ಯಕ್ಕೆ ಒಳ್ಳೆಯದು. ಮಾವಿನಹಣ್ಣಿನಲ್ಲಿರುವ ಫೈಟಿಕ್ ಆಮ್ಲದಿಂದಾಗಿ, ಇದು ದೇಹದಲ್ಲಿನ ಸತು, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳನ್ನು ಹೀರಿಕೊಳ್ಳುವ ನೈಸರ್ಗಿಕ ಪ್ರಕ್ರಿಯೆಯನ್ನು ತಡೆಯುತ್ತದೆ. ಮಲಬದ್ಧತೆ, ತಲೆನೋವು ಮುಂತಾದ ಸಮಸ್ಯೆಗಳಿಗೂ ಕಾರಣವಾಗಬಹುದು.

ನೀವು ತಿನ್ನುವ ಮೊದಲು ಮಾವಿನಹಣ್ಣನ್ನು ನೆನೆಸಿಡಲು ಇನ್ನೂ ಕೆಲವು ಕಾರಣಗಳಿವೆ ಬನ್ನಿ ಇಲ್ಲಿ ತಿಳಿಯಿರಿ

ಶುಚಿಗೊಳಿಸುವುದು ಅಗತ್ಯ

ಮಾವನ್ನು ನೀರಿನಲ್ಲಿ ನೆನೆಸುವುದರಿಂದ ಹಣ್ಣಿನ ಮೇಲೆ ಇರುವ ಯಾವುದೇ ಮೇಲ್ಮೈ ಕೊಳಕು ಅಥವಾ ಕೀಟನಾಶಕಗಳ ಅವಶೇಷಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಾವಿನಹಣ್ಣುಗಳ ಸಂಗ್ರಹಣೆ ಅಥವಾ ಸಾಗಣೆಯ ಸಮಯದಲ್ಲಿ ಮಾಲಿನ್ಯಕಾರಕಗಳು ಸೇರಿಕೊಂಡಿರಬಹುದು. ಹೀಗಾಗಿ ಮಾವಿನ ಹಣ್ಣುಗಳನ್ನು ನೀರಿನಲ್ಲಿ ನೆನೆಸಿಟ್ಟು ಉಜ್ಜಿ ತೊಳೆದು ಬಳಿಕ ತಿನ್ನುವುದು ಉತ್ತಮ.

ಮೃದುವಾಗಿಸುವುದು

ಮಾವಿನಹಣ್ಣನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡುವುದರಿಂದ ಹಣ್ಣಿನ ಸಿಪ್ಪೆಯು ಮೃದುಗೊಳ್ಳುತ್ತದೆ. ಇದರಿಂದ ಮಾವಿನಹಣ್ಣಿನ ಸಿಪ್ಪೆ ತೆಗೆಯಲು ಅಥವಾ ಕತ್ತರಿಸಲು ಸುಲಭವಾಗುತ್ತದೆ. ನಿಮಗೆ ಮಾವಿನ ಸಿಪ್ಪೆ ತೆಗೆಯುವುದು ಕಠಿಣ ಎನಿಸಿದರೆ ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿ ನೋಡಿ.

ಒಟ್ಟಾರೆಯಾಗಿ, ತಿನ್ನುವ ಮುನ್ನ ಮಾವಿನಹಣ್ಣುಗಳನ್ನು ನೀರಿನಲ್ಲಿ ನೆನೆಸುವುದು ಹೆಚ್ಚಿನ ಸಂದರ್ಭಗಳಲ್ಲಿ ಅಗತ್ಯವಿಲ್ಲ. ಯಾಕೆಂದರೆ ಕೆಲವರ ಮನೆಗಳಲ್ಲಿ ಮಾವಿನಹಣ್ಣಿನ ಮರಗಳಿರುತ್ತವೆ. ಇದಕ್ಕೆ ಯಾವುದೇ ರಾಸಾಯನಿಕ ಸಿಂಪಡಿಸಿರುವುದಿಲ್ಲ. ಹೀಗಾಗಿ ಇವುಗಳನ್ನು ನೀರಿನಲ್ಲಿ ನೆನೆಸಿಡಬೇಕೆಂದಿಲ್ಲ. ಆದರೆ, ಕೀಟನಾಶಕ ಸಿಂಪಡಿಸಿರುವ ಅದರಲ್ಲೂ ನೀವು ಮಾರ್ಕೆಟ್‌ನಲ್ಲಿ ಖರೀದಿ ಮಾಡಿ ತಂದ ಮಾವನ್ನು ತೊಳೆಯುವುದು ಬಹಳ ಮುಖ್ಯ. ನೀವು ಶುಚಿತ್ವದ ಬಗ್ಗೆ ಬಹಳ ಕಾಳಜಿ ಹೊಂದಿದ್ದರೆ, ಹಣ್ಣುಗಳನ್ನು ಸ್ವಚ್ಛಗೊಳಿಸಲು ಈ ಹಂತ ಸಹಾಯಕವಾಗಿದೆ.