ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರಾಚಿ ನಿಗಮ್: ಬಾಡಿ ಶೇಮಿಂಗ್ ಮಾಡುವವರಿಗೆ ಈ ಸಾಧಕಿಯ ಛಲ ಕಾಣಿಸಲೇ ಇಲ್ಲ, ಹೆದರದಿರುವ ಪ್ರಾಚಿ

ಪ್ರಾಚಿ ನಿಗಮ್: ಬಾಡಿ ಶೇಮಿಂಗ್ ಮಾಡುವವರಿಗೆ ಈ ಸಾಧಕಿಯ ಛಲ ಕಾಣಿಸಲೇ ಇಲ್ಲ, ಹೆದರದಿರುವ ಪ್ರಾಚಿ

ಸುಂದರವಾಗಿ ಕಾಣಬೇಕು ಎಂಬ ಬಯಕೆ ಪ್ರತಿಯೊಬ್ಬರಲ್ಲೂ ಇರುವುದು ಸಹಜ. ಆದರೆ ಸೌಂದರ್ಯವೇ ಅಂತಿಮವಲ್ಲ. ಸೌಂದರ್ಯಕ್ಕಿಂತಲೂ ಮಿಗಿಲಾದದ್ದು ಟ್ಯಾಲೆಂಟ್‌. ಪ್ರತಿಭೆಗಿಂತ ಸುಂದರವಾದದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಪ್ರತಿಭೆಯನ್ನು ಸೌಂದರ್ಯದಿಂದ ಅಳೆಯಬಾರದು ಎಂಬುದಕ್ಕೆ ಉತ್ತರಪ್ರದೇಶದ ಪ್ರಾಚಿ ನಿಗಮ್‌ ಉತ್ತಮ ಉದಾಹರಣೆ.

ಪ್ರಾಚಿ ನಿಗಮ್‌
ಪ್ರಾಚಿ ನಿಗಮ್‌ (PC: Starsunfolded )

ಹಿಂದಿನ ಕಾಲದಿಂದಲೂ ಹೆಣ್ಣನ್ನು ಸೌಂದರ್ಯದಿಂದ ಅಳೆಯಲಾಗುತ್ತಿತ್ತು. ಹೆಣ್ಣು ಎಂದರೆ ಸೌಂದರ್ಯ ಎಂಬ ಭಾವನೆ ಇತ್ತು. ಆದರೆ ಸೌಂದರ್ಯವೇ ಅಂತಿಮವಲ್ಲ, ಸೌಂದರ್ಯಕ್ಕಿಂತಲೂ ಮಿಗಿಲಾದದ್ದು ಪ್ರತಿಭೆ. ಹೆಣ್ಣುಮಕ್ಕಳನ್ನು ಸೌಂದರ್ಯದಿಂದ ಅಳೆಯುವುದನ್ನು ನಿಲ್ಲಿಸಿ, ಅವರ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನೂ ಗುರುತಿಸಬೇಕು. ಅದೆಷ್ಟೋ ಹೆಣ್ಣುಮಕ್ಕಳಲ್ಲಿ ಅಪಾರ ಬುದ್ಧಿವಂತಿಕೆ ಇರುತ್ತದೆ. ಆದರೆ ಅವರು ಅಂದವಾಗಿಲ್ಲ ಎಂಬ ಕಾರಣಕ್ಕೆ ಅವರಲ್ಲಿರುವ ಪ್ರತಿಭೆಯನ್ನು ಅಲ್ಲಗೆಳೆಯಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಆದರೆ ನಾವೆಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಒಂದು ವಿಚಾರ ಎಂದರೆ ಸೌಂದರ್ಯಕ್ಕೆ ವಾಲಿಡಿಟಿ ಇದೆ, ಅದು ಒಂದಿಷ್ಟು ದಿನಗಳ ನಂತರ ಬಾಡುತ್ತದೆ. ಆದರೆ ಪ್ರತಿಭೆ ಹಾಗಲ್ಲ. ಪ್ರತಿಭೆ ಮತ್ತು ಬುದ್ಧಿವಂತಿಕೆಗೆ ವಾಲಿಡಿಟಿ ಇಲ್ಲ, ಇದು ವಯಸ್ಸಾದಂತೆ ಪ್ರಬುದ್ಧತೆ ಸಾಧಿಸುತ್ತದೆ. 

40 ವರ್ಷದ ವರ್ಷದ ನಂತರ, ಮನುಷ್ಯನ ಮುಖದಲ್ಲಿ ಸುಕ್ಕು ಮೂಡಲು ಆರಂಭಿಸುತ್ತದೆ. ಇದನ್ನು ತಡೆಯುವುದು ಅಸಾಧ್ಯ, ಕೆಲವರಿಗೆ ಒಂದೆರಡು ವರ್ಷ ತಡವಾಗಬಹುದು. ಆದರೆ ಪ್ರತಿಭೆ ಹಾಗಲ್ಲ. ಪ್ರತಿಭೆ ವಯಸ್ಸು ಹಾಗೂ ಅನುಭವದೊಂದಿಗೆ ಪಕ್ವವಾಗುತ್ತದೆ. ಸೌಂದರ್ಯ ಶ್ರೇಷ್ಠವೇ? ಪ್ರತಿಭೆ ಶ್ರೇಷ್ಠವೇ? ಎಂದು ಕೇಳಿದರೆ... ಪ್ರತಿಭೆ ದೊಡ್ಡದು ಎಂದು ಬುದ್ಧಿವಂತರು ಒಪ್ಪಿಕೊಳ್ಳುತ್ತಾರೆ, ಆದರೆ ದಡ್ಡರ ಕಥೆ ಏನು ಹೇಳೋಣ.

ಪ್ರತಿಭೆ ಮತ್ತು ಬುದ್ಧಿವಂತಿಕೆಯು ಪ್ರಪಂಚದ ಹಲವು ವಸ್ತುಗಳನ್ನು ಕಂಡುಹಿಡಿದಿದೆ. ಅವುಗಳನ್ನು ಕಂಡುಹಿಡಿದ ಯಾವ ವಿಜ್ಞಾನಿಯೂ ಸುಂದರವಾಗಿರಲಿಲ್ಲ. ವರ್ಷಗಟ್ಟಲೆ ಒಂದೇ ರೂಮಿನಲ್ಲಿ ಹೊಸತನಕ್ಕೆ ಮುಡಿಪಾಗಿ ಕೂದಲು, ಗಡ್ಡ, ಮೀಸೆ ಬೆಳೆದು ತಮ್ಮ ಮುಖವನ್ನೇ ನೋಡಿಕೊಳ್ಳಲಾಗದಷ್ಟು ಬದಲಾಗಿದ್ದಾರೆ. ನಾವೀನ್ಯತೆ ಯಶಸ್ವಿಯಾದ ನಂತರವೇ ಅವರು ತಮ್ಮ ವೈಯಕ್ತಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸಿದ್ದರು. ಅವರು ಸೌಂದರ್ಯವನ್ನು ಗೌರವಿಸುತ್ತಿದ್ದರೆ ನಾವು ಈಗ ಬಳಸುವ ಹೆಚ್ಚಿನ ಸುಧಾರಿತ ಸೌಲಭ್ಯಗಳನ್ನು ಹೊಂದಲು ಸಾಧ್ಯವೇ ಆಗುತ್ತಿರಲಿಲ್ಲ. 

ಈಗ ಸೌಂದರ್ಯ ಹಾಗೂ ಪ್ರತಿಭೆಯ ಬಗ್ಗೆ ಇಷ್ಟೆಲ್ಲಾ ಮಾತು ಯಾಕೆ ಅಂತ ನಿಮಗೂ ಅನ್ನಿಸಬಹುದು. ಹೌದು ನಾವೀಗ ಹೇಳಹೊರಟಿರುವುದು ಪ್ರಾಚಿ ನಿಗಮ್‌ ಎಂಬ 16 ವರ್ಷ ಹುಡುಗಿಯ ಬಗ್ಗೆ. ಕಳೆದೊಂದು ವಾರದಿಂದ ಎಲ್ಲಿ ನೋಡಿದರೂ ಆಕೆಯದ್ದೇ ಹೆಸರು. ಆಕೆ ವಿಷಯದಲ್ಲೂ ಆಕೆಯ ಪ್ರತಿಭೆಯನ್ನು ಗುರುತಿಸಿದವರಿಗಿಂತ ಆಕೆಯ ಮುಖದ ಮೇಲೆ ಗಡ್ಡ-ಮೀಸೆಯಂತೆ ಕೂದಲು ಬಂದಿದೆ ಎಂಬುದನ್ನು ಗುರುತಿಸಿದವರೇ ಹೆಚ್ಚು. ಇದೇ ಕಾರಣಕ್ಕೆ ಆಕೆ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಾಳೆ ಕೂಡ.

ಪ್ರಾಚಿ ನಿಗಮ್ ಮಾಡಿದ ತಪ್ಪೇನು?

ನಿಮ್ಮ ಮುಂದೆ ಬುದ್ಧಿವಂತ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿದ್ದರೆ, ಅವರನ್ನು ಸೌಂದರ್ಯದಿಂದ ಅಳೆಯಬೇಡಿ. ಅವರ ಪ್ರತಿಭೆಯನ್ನು ಗುರುತಿಸಿ. ಪ್ರಾಚಿ ನಿಗಮ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ಪ್ರಾಚಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. 600 ಅಂಕಗಳಿಗೆ 591 ಅಂಕಗಳನ್ನು ಗಳಿಸಿದ್ದಾರೆ. ಎಲ್ಲಾ ಪತ್ರಿಕೆಗಳಲ್ಲಿ ಅವಳ ಫೋಟೊಗಳು ಇದ್ದವು. ಆದರೆ ಯಾರೂ ಆಕೆಯ ಪ್ರತಿಭೆಯ ಗುರುತಿಸಲಿಲ್ಲ, ಬದಲಾಗಿ ಅವಳ ನೋಟವನ್ನು ಮಾತ್ರ ನೋಡಿದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವಳನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.

ಅವಳು ಹುಡುಗನಂತೆ ಕಾಣುತ್ತಾಳೆ, ಗಡ್ಡ ಮತ್ತು ಮೀಸೆ ಹೊಂದಿದ್ದಾಳೆ ಎಂದು ಹಲವರು ಕಾಮೆಂಟ್ ಮಾಡುತ್ತಾರೆ. ಹಾಗೆ ಕಾಮೆಂಟ್ ಮಾಡುವ ಯಾರಾದರೂ ಅವಳಂತೆ ಓದಬಹುದೇ? ನಾವು ಈ ಮನ್ನಣೆಯನ್ನು ಸಾಧಿಸಬಹುದೇ? ಎಂದು ಯೋಚಿಸಲಿಲ್ಲ. ಅವರು ಅವಳ ಮುಖದ ಬಣ್ಣ ಮತ್ತು ರೂಪವನ್ನು ಮಾತ್ರ ಗುರುತಿಸಿದರು. ಆದರೆ ಆಕೆಯ ಪ್ರತಿಭೆಯನ್ನು ಗುರುತಿಸಲಿಲ್ಲ. ಇದು ಕಾಮೆಂಟ್‌ ಹಾಗೂ ಟ್ರೋಲ್‌ ಮಾಡುವವರ ಸಂಕುಚಿತ ಮನೋಭಾವವನ್ನು ಸೂಚಿಸುತ್ತದೆ. 

ಟ್ರೋಲ್‌ ಮಾಡುವ ಹಕ್ಕು ನೀಡಿದ್ಯಾರು?

ಪ್ರಾಚಿ ನಿಗಮ್‌ಗಳನ್ನು ಟ್ರೋಲ್ ಮಾಡುವವರು ಯಾರು, ಆಕೆಯನ್ನು ಟ್ರೋಲ್ ಮಾಡುವ ಹಕ್ಕು ಇವರಿಗೆ ನೀಡಿದ್ದು ಯಾರು ಎಂಬ ಬಗ್ಗೆ ಯಾರೂ ಯೋಚಿಸಿಲ್ಲ. ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಹುಡುಗಿಯನ್ನು ಟ್ರೋಲ್ ಮಾಡಬೇಕೆಂದರೆ ಟ್ರೋಲ್‌ ಮಾಡುವವರಿಗೂ ಅದಕ್ಕೆ ತಕ್ಕ ಹಾಗೆ ಅರ್ಹತೆ ಇರಬೇಕು. ಇನ್ನೊಬ್ಬರ ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಹ ಕಾಮೆಂಟ್‌ಗಳನ್ನು ಮಾಡುವುದು ಸುಲಭ, ಆದರೆ ಕಾಮೆಂಟ್‌ ಮಾಡಲು ಇರುವಷ್ಟು ಪ್ರತಿಭೆ ಓದಿನಲ್ಲಿ ನಮಗಿದ್ಯಾ ಎಂದು ಟ್ರೋಲ್‌ ಮಾಡುವವರು ಯೋಚಿಸಬೇಕಿತ್ತು. ಆ ಹುಡುಗಿಗೆ ಯಾಕೆ ಆ ಸಮಸ್ಯೆ ಬಂತು ಎಂದು ಎಂದು ಕೂತು ಆಲೋಚನೆ ಮಾಡಬೇಕಿತ್ತು.  ನಿಮ್ಮ ಮನೆಯ ಹುಡುಗಿಗೆ ಇಂತಹ ಸಮಸ್ಯೆ ಬಂದರೆ ಈ ರೀತಿ ಟ್ರೋಲ್ ಮಾಡ್ತೀವಾ ಎಂದು ನಿಮಗೆ ನೀವೆ ಪ್ರಶ್ನೆ ಕೇಳಿಕೊಳ್ಳಬೇಕಿತ್ತು. 

ಹಾರ್ಮೋನುಗಳ ಅಸಮತೋಲನದಿಂದಾಗಿ ಹುಡುಗಿಯರಲ್ಲಿ ಮೀಸೆ ಮತ್ತು ಗಡ್ಡ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಯಾರಿಗೆ ಯಾವಾಗ ಬೇಕಾದರೂ ಬರಬಹುದು. ಹೆಣ್ಣುಮಕ್ಕಳಲ್ಲಿ ಪಿಸಿಓಎಸ್‌ ಸಮಸ್ಯೆ ಕಾಣಿಸಿದಾಗ ಮುಖದ ಮೇಲೆ ಬೇಡದ ಕೂದಲುಗಳು ಬೆಳೆಯಲು ಆರಂಭವಾಗುತ್ತದೆ. ಇದೇ ಸಮಸ್ಯೆ ಪ್ರಾಚಿ ನಿಗಮ್‌ಳನ್ನು ಕಾಡಿತ್ತು.

10ನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಪ್ರಾಚಿ ಶೀಘ್ರದಲ್ಲಿ ಜಗತ್ತನ್ನೇ ಗೆಲ್ಲುವ ಯುವತಿಯಾಗಿ ಬೆಳೆಯಬೇಕು. ಅವಳು ಯೋಜಿಸಿದಂತೆ ಎಂಜಿನಿಯರಿಂಗ್ ಪದವಿ ಪಡೆಯಬೇಕು. ಅದರಲ್ಲಿಯೂ ನಮ್ಮ ದೇಶದ ಗೌರವವನ್ನು ಹೆಚ್ಚಿಸುವ ಆವಿಷ್ಕಾರಗಳನ್ನು ಮಾಡಬೇಕು. ಸೌಂದರ್ಯವು ಆಕೆಯ ಪ್ರತಿಭೆಗೆ ಅಡ್ಡಿಪಡಿಸಲಿಲ್ಲ. ಅವಳು ಯಶಸ್ಸಿನಿಂದ ಹಿಂಜರಿಯಲಿಲ್ಲ. ಎಲ್ಲಾ ಟ್ರೋಲರ್‌ಗಳು ತಮ್ಮ ಫೋನ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಮಯ ಕಳೆಯುತ್ತಾರೆ. ಆದರೆ ಪ್ರಾಚಿ ಒಂದೊಂದೇ ಮೆಟ್ಟಿಲು ಏರುವ ಮೂಲಕ ತನ್ನ ಗುರಿಯನ್ನು ಸಾಧಿಸಿದ್ದಾಳೆ, ಮುಂದೆಯೂ ಸಾಧಿಸುತ್ತಾಳೆ. 

ನೀವು ಯಾರನ್ನಾದರೂ ಬಾಡಿ-ಶೇಮಿಂಗ್‌ ಮಾಡುವ ಮೊದಲು, ನೀವು ಅವರ ಸ್ಥಾನದಲ್ಲಿದ್ದರೆ ಹೇಗಿರುತ್ತದೆ ಎಂದು ಊಹಿಸಿ. ನಾವು ಯಾರನ್ನು ಟೀಕಿಸುತ್ತಿದ್ದೇವೆ? ನಾವೇಕೆ ಟೀಕಿಸುತ್ತಿದ್ದೇವೆ? ಪ್ರತಿಯೊಬ್ಬರಿಗೂ ಆ ಕನಿಷ್ಠ ಕಲ್ಪನೆ ಇರಬೇಕು. ಇತರರ ವಿಶ್ವಾಸಕ್ಕೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ. ಸಾಧ್ಯವಾದರೆ ಅವರ ಜೊತೆ ಇರಿ. ಇಲ್ಲದಿದ್ದರೆ ಬಾಯಿ ಮುಚ್ಚಿಕೊಂಡು ನಿಮ್ಮ ಕೆಲಸ ಮಾಡಿ. ನೀವು ಒಂದು ಬೆರಳನ್ನು ಇನ್ನೊಬ್ಬ ವ್ಯಕ್ತಿಯತ್ತ ತೋರಿಸುತ್ತಿದ್ದರೆ, ಉಳಿದ ನಾಲ್ಕು ಬೆರಳುಗಳು ನಿಮ್ಮತ್ತ ತೋರಿಸುತ್ತವೆ, ಇದನ್ನು ನೆನಪಿಡಿ. ಯಾರನ್ನೇ ಆಗಲಿ ಸೌಂದರ್ಯದಿಂದ ಅಳೆಯುವ ಮುನ್ನ ನಿಮ್ಮಲ್ಲಿ ಏನಿದೆ ಎಂಬುದನ್ನು ನೋಡಲು ಮರೆಯಬೇಡಿ. 

ವಿಭಾಗ