ಕನ್ನಡ ಸುದ್ದಿ  /  ಜೀವನಶೈಲಿ  /  Love Matters: ಪ್ರೀತ್ಸೆ ಅಂತ ಹಿಂದೆ ಬೀಳೋ ಹುಡುಗನಿಗೆ ಮದುವೆಯಾಗೋಕೆ ಏಕೆ ನಿರಾಸಕ್ತಿ; ಮನಸ್ಸುಗಳ ಆಟಕ್ಕೆ ಹಾರ್ಮೋನ್‌ ಕಾರಣ -ಕಾಳಜಿ

Love Matters: ಪ್ರೀತ್ಸೆ ಅಂತ ಹಿಂದೆ ಬೀಳೋ ಹುಡುಗನಿಗೆ ಮದುವೆಯಾಗೋಕೆ ಏಕೆ ನಿರಾಸಕ್ತಿ; ಮನಸ್ಸುಗಳ ಆಟಕ್ಕೆ ಹಾರ್ಮೋನ್‌ ಕಾರಣ -ಕಾಳಜಿ

ಓ ಹುಡುಗರೇ ನೀವೇಕೆ ಹೀಗೆ: ಪ್ರೀತಿಸಲು, ಹುಡುಗಿಯನ್ನು ಓಲೈಸಲು ಇರುವಷ್ಟು ಆತುರ ಮತ್ತು ಕಾತರ ಹುಡುಗರಿಗೆ ಮದುವೆ ವಿಚಾರದಲ್ಲಿ ಇರುವುದಿಲ್ಲ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ಕೇಳುತ್ತಲೇ ಇರುತ್ತೇವೆ? ಹುಡುಗರ ಈ ವರ್ತನೆಯ ಹಿಂದಿರುವ ಮನಃಶಾಸ್ತ್ರದ ಆಯಾಮಗಳ ಮೌಲಿಕ ವಿವರಗಳನ್ನು ಈ ಲೇಖನದಲ್ಲಿ ನೀಡಿದ್ದಾರೆ ಆಪ್ತಸಮಾಲೋಚಕಿ ಮತ್ತು ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್.

ಪ್ರೀತ್ಸೆ ಅಂತ ಹಿಂದೆ ಬೀಳೋ ಹುಡುಗನಿಗೆ ಮದುವೆಯಾಗೋಕೆ ಏಕೆ ನಿರಾಸಕ್ತಿ? ಡಾ ರೂಪಾ ರಾವ್ ಬರಹ
ಪ್ರೀತ್ಸೆ ಅಂತ ಹಿಂದೆ ಬೀಳೋ ಹುಡುಗನಿಗೆ ಮದುವೆಯಾಗೋಕೆ ಏಕೆ ನಿರಾಸಕ್ತಿ? ಡಾ ರೂಪಾ ರಾವ್ ಬರಹ

ಪ್ರೀತಿ ಪ್ರೇಮ ಮತ್ತು ಹಾರ್ಮೋನು: ಹುಡುಗರು ಪ್ರೀತಿಸೋಕೆ, ಡೇಟಿಂಗ್‌ಗೆ ತೋರಿಸುವಷ್ಟು ಕಾತರ ಮತ್ತು ಆತುರ ಮದುವೆಗೆ, ನಿಶ್ಚಿತಾರ್ಥಕ್ಕೆ ತೋರಿಸುವುದಿಲ್ಲ ಏಕೆ ಎಂದು ಇತ್ತೀಚೆಗೆ ನನ್ನ ಬಳಿಗೆ ಬಂದಿದ್ದವರೊಬ್ಬರು ಕೇಳಿದ್ದರು. ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಅದನ್ನು ಅರ್ಥ ಮಾಡಿಕೊಳ್ಳಲು ಪ್ರೀತಿ-ಪ್ರೇಮದ ಬಗ್ಗೆ ಹುಡುಗ ಮತ್ತು ಹುಡುಗಿಯರ ಆಲೋಚನೆಗಳು ಹೇಗೆ ಮತ್ತು ಏಕೆ ಭಿನ್ನವಾಗಿವೆ ಎಂದು ತಿಳಿಯಬೇಕಾಗುತ್ತದೆ. ಅಂಥ ಪ್ರಯತ್ನವನ್ನೇ ಈ ಬರಹದಲ್ಲಿಯೂ ಮಾಡಿದ್ದೇನೆ. ಲೇಖನ ಪೂರ್ತಿ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ಪ್ರತಿಕ್ರಿಯೆಗಳಿಗೂ ಸ್ವಾಗತ.

ಟ್ರೆಂಡಿಂಗ್​ ಸುದ್ದಿ

ಹುಡುಗರ ವರ್ತನೆಯ ಕುರಿತಾದ ಪ್ರಶ್ನೆಗೆ ಉತ್ತರಿಸುವ ಮೊದಲು ಪ್ರೀತಿ, ಡೇಟಿಂಗ್ ಮತ್ತು ಕಮಿಟ್‌ಮೆಂಟ್‌ಗಳ ಬಗ್ಗೆ ತಿಳಿಯೋಣ. ಪ್ರೀತಿಗೆ 4 ಹಂತಗಳಿರುತ್ತವೆ. ಮೊದಲನೆಯದು ಆಕರ್ಷಣೆ, ಎರಡನೆಯದು ಒಡನಾಟ (ಡೇಟಿಂಗ್ ಅಂದುಕೊಳ್ಳಿ), ಮೂರನೆಯದು ಪ್ರೀತಿಯಲ್ಲಿ ಬೀಳುವ ಹಂತ, ನಾಲ್ಕನೆಯದು ನಿಜವಾದ ಪ್ರೀತಿ. ಈ ನಾಲ್ಕೂ‌ ಹಂತಗಳೂ ಗಂಡು ಮತ್ತು‌ ಹೆಣ್ಣು ಇಬ್ಬರಲ್ಲೂ ಬೇರೆಬೇರೆಯಾಗಿರುತ್ತವೆ. ಆ ವ್ಯತ್ಯಾಸ ಎಂದು ತಿಳಿದುಕೊಂಡರೆ ನಿಮ್ಮ ಪ್ರಶ್ನೆಗೆ ಉತ್ತರ ತಿಳಿಯುವುದು ಸುಲಭವಾಗಬಹುದು.

1) ಆಕರ್ಷಣೆ: ಈ ಮೊದಲ ಹಂತದಲ್ಲಿ 'ನೊರೆಪೈನ್‌ಫ್ರೈನ್' (Norepinephrine) ಎಂಬ ನ್ಯೂರೋ ಟ್ರಾನ್ಸ್ಮಿಟರ್ ಇಬ್ಬರಲ್ಲೂ ಬಿಡುಗಡೆ ಆಗುತ್ತದೆ. ಗಂಡಿನಲ್ಲಿ ಇದರ ಜೊತೆಗೆ ಟೆಸ್ಟಾಸ್ಟೋರನ್ ಎಂಬ ಹಾರ್ಮೋನ್ ಬಿಡುಗಡೆ ಆಗುತ್ತದೆ. ಇದು ಲೈಂಗಿಕ ಆಸಕ್ತಿಗೆ ಕಾರಣ. (ಒಂದು ಸಂಶೋಧನೆಯ ಪ್ರಕಾರ ಈ ಟೆಸ್ಟಾಸ್ಟೋರನ್ ಅನ್ನು ಬಿಯರ್ ಅಂದುಕೊಂಡರೆ ಅದು ಎರಡು ಗ್ಯಾಲನ್ ಬಿಯರ್‌ಗೆ ಸಮ).

2) ಒಡನಾಟ (ಡೇಟಿಂಗ್): ಪ್ರೀತಿಯ ಎರಡನೆಯ ಹಂತ ಡೇಟಿಂಗ್ ಅಥವಾ ಮತ್ತೆ‌ಮತ್ತೆ ಒಡನಾಟ ಬೇಕೆನ್ನಿಸುವ ಬಯಕೆ ಅಥವಾ ಸಾಮಿಪ್ಯ. ಮೊದಲ ಹಂತದ ಆಕರ್ಷಣೆಯ ನಂತರ ಈ ಎರಡನೇ ಹಂತದಲ್ಲಿ ಡೋಪಾಮೈನ್ ಬಿಡುಗಡೆಯಾಗುತ್ತದೆ. ಆಕರ್ಷಣೆಯಾದವರನ್ನು ಭೇಟಿ ಅದಾಗೆಲ್ಲಾ ಈ ಡೋಪಾಮೈನ್ ಬಿಡುಗಡೆಯಾಗುತ್ತಾ ಮತ್ತೆಮತ್ತೆ ಅವರನ್ನು ಭೇಟಿ ಆಗಿ ಅವರೊಂದಿಗೆ ಕಾಲ ಕಳೆಯಬೇಕೆನಿಸುವ ಬಯಕೆಯನ್ನು ಹುಟ್ಟು ಹಾಕುತ್ತದೆ. ಈ ಹಂತದಲ್ಲಿ ಗಂಡಿನಲ್ಲಿ 'ವಸೊಪ್ರೆಸಿನ್' (vasopressin - ಇದು ಬಾಂಧವ್ಯ ವೃದ್ಧಿಸುತ್ತದೆ) ಮತ್ತು ಟೆಸ್ಟಾಸ್ಟೀರನ್ ಮಟ್ಟ ಹೆಚ್ಚಾಗುತ್ತಾ ಹೋಗುತ್ತದೆ. ಹೆಣ್ಣಿನಲ್ಲಿ ಆಕ್ಸಿಟೋಸಿನ್ ಹಾಗೂ ಡೋಪಾಮೈನ್ ಹೆಚ್ಚಾಗುತ್ತಾ ಹೋಗುತ್ತದೆ.

3) ಪ್ರೀತಿಯಲ್ಲಿ ಬೀಳುವ ಹಂತ: ಇದು ತಾನು ಆಕರ್ಷಣೆಗೊಂಡ ವ್ಯಕ್ತಿಯೊಡನೆ ಪ್ರೀತಿಗೆ ಜಾರುವ ಸಮಯ. ಈ ಹಂತದಲ್ಲಿ ಮೆಚ್ಚಿದವಳು ಅಥವಾ ಮೆಚ್ಚಿದವನ ಜೊತೆಯಲ್ಲಿಯೇ ಇರಬೇಕನಿಸುವ, ನೋಡದೇ ಇದ್ದರೆ ಏನೋ ಆಗಿದೆ ಅನ್ನಿಸುವ, ಸಂಪೂರ್ಣ ನನ್ನವನು/ನನ್ನವಳು ಎನ್ನುವ ಪೊಸೆಸಿವ್‌ನೆಸ್ ಎಲ್ಲವೂ ಹುಟ್ಟುವ ಸಮಯ. ‌ನೆನಪಿಡಿ ಇದೂ ಸಹ ಕಡಿಮೆ ಅವಧಿಯದಾಗಬಹುದು. ಬಹಳ ಜನ ಈ ಮೂರು ಹಂತಗಳನ್ನೇ‌ ಪ್ರೀತಿ ಎಂದುಕೊಳ್ಳುತ್ತಾರೆ.

4) ನಿಜವಾದ ಪ್ರೀತಿಯ: ಇದು ‌ಆಗುವುದು ಪ್ರಿಫ್ರಂಟಲ್ ಕಾರ್ಟೆಕ್ಸ್. ಅಂದರೆ ಮಿದುಳಿನ ಮೇಲ್ಭಾಗದಲ್ಲಿ ನಿಜವಾದ ಪ್ರೀತಿ ನೆಲೆಯೂರುವ ಹಂತ. ಶಾಂತವಾದ, ಪರಸ್ಪರ ಪೋಷಣೆ , ಕಾಳಜಿ, ಮತ್ತು ಹೆಚ್ಚು ಸ್ವಯಂ-ಅರಿವು ಇರುವ ಹಂತ. ಇದೇ‌ ನಿಜವಾದ‌ ಪ್ರೇಮ. ಇಲ್ಲಿ ತನಗೇನು ಸಿಗುತ್ತೆ ಅನ್ನುವುದಕ್ಕಿಂತ ನಾನೇನು ಕೊಡಬಲ್ಲೆ ಎಂಬುದೇ ಮುಖ್ಯವಾಗುತ್ತೆ. ನಿಜವಾದ ಪ್ರೀತಿ ಹುಟ್ಟಲು ಸಾಮಾನ್ಯವಾಗಿ ಹದಿನೆಂಟು ತಿಂಗಳುಗಳಿಂದ ಮೂರು ವರ್ಷಗಳವರೆಗೆ ಸಮಯ ಬೇಕಾಗಬಹುದು.

ಲೈಂಗಿಕ ಆಕರ್ಷಣೆ ಮತ್ತು ಬದ್ಧತೆ

ಪ್ರೀತಿಯ ಮೊದಲ ಎರಡು ಹಂತದಲ್ಲಿರುವಾಗ ಗಂಡಿಗೆ ‌ಹೆಣ್ಣಿನ ಮೇಲೆ ಆಕರ್ಷಣೆ (ಲೈಂಗಿಕ) ಹಾಗೂ ಜೊತೆಗೆ ಇರಬೇಕೆಂಬ ಹಂಬಲ ಇರುತ್ತದೆಯೇ ಹೊರತು ಸಂಬಂಧಕ್ಕೆ ಬದ್ಧವಾಗಿ ಉಳಿಯಬೇಕು ಎನ್ನುವ ಅಂದರೆ ಕಮಿಟ್ ಆಗುವ ಉದ್ದೇಶ ಇರುವುದಿಲ್ಲ. ಪ್ರೀತಿಯು ‌ಮೂರನೇ ಹಂತಕ್ಕೆ ಬಂದಾಗ ಗಂಡಿನ ಕಮಿಟ್‌ಮೆಂಟ್ ಶುರುವಾಗುತ್ತದೆ. ಇವಳು ತನ್ನವಳು ಇವಳೊದಿಗೆ ಜೀವನ ಪೂರ್ತಿ ಇರಬೇಕು ಎನ್ನುವ ಹಂಬಲ ಬರುವುದು ಮೂರನೇ ಹಂತದ ನಂತರ.

ಬಹಳಷ್ಟು ಜನ ಆಕರ್ಷಣೆಯನ್ನೇ ಪ್ರೀತಿ ಎಂದುಕೊಳ್ಳುವುದರಿಂದ ದ್ವಂದ್ವಕ್ಕೆ ಸಿಲುಕುತ್ತಾರೆ. ಇವಳೊಂದಿಗೆ ಕಮಿಟ್ ಆಗಬೇಕೆ? ಆದರೆ ಅದರಿಂದ ಬರುವ ಅಪಾಯಗಳೇನು? ನಿಜಕ್ಕೂ ನಾವಿಬ್ಬರೂ ಒಳ್ಳೆಯ‌ ಜೋಡಿಗಳಾಗಬಹುದೇ? ಇವೆಲ್ಲಾ ಯೋಚನೆಗಳು ಈ ಮೊದಲ ಎರಡು ಹಂತದಲ್ಲಿದ್ದಾಗ ಬರುತ್ತದೆ‌ಯಾದ್ದರಿಂದ ಬದ್ಧ ಸಂಬಂಧಕ್ಕೆ ಅಂದರೆ ಕಮಿಟೆಡ್ ರಿಲೇಶನ್‌ಷಿಪ್‌ಗೆ ಗಂಡು ಒಪ್ಪುವುದಿಲ್ಲ.

ಮದುವೆ ಮುಂದೂಡಲು ಹಲವು ಕಾರಣಗಳು

ಕೆಲವು ಹುಡುಗರು ಪ್ರೀತಿಸಿದರೂ‌ ಮದುವೆಯನ್ನು‌ ಮುಂದೂಡಲು ಕಾರಣಗಳು ಬೇಕಾದಷ್ಟು ಇರುತ್ತವೆ. ಇಂಥ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಅವುಗಳೆಂದರೆ…

1) ಕಮಿಟ್‌ಮೆಂಟ್‌ ಭಯ: ಮದುವೆ ಎನ್ನುವುದು ಒಂದು ಬದ್ಧತೆ ಬೇಡುವ, ಕಮಿಟ್‌ಮೆಂಟ್ ಸಂಬಂಧ. ಅದನ್ನು ನಿಭಾಯಿಸಲು ತನ್ನಿಂದ ಆಗುತ್ತದೋ ಇಲ್ಲವೋ ಎಂಬ ಭಯದಿಂದ ಅವರು ಮದುವೆ ಮುಂದೂಡಬಹುದು.

2) ಸ್ವಾತಂತ್ರ್ಯ ಹೋಗುವ ಭಯ

3) ಮದುವೆಯಾದರೆ ಉಂಟಾಗುವ ಜಗಳದಿಂದ, ಈಗಿರುವ ಪ್ರೀತಿ ಕಳೆದುಹೋಗಬಹುದೇನೋ ಎಂಬ ಭಯ

4) ಇನ್ನೂ ಸೆಟ್ಲ್ ಆಗಿಲ್ಲವೆಂಬ ಯೋಚನೆ

5) ಮದುವೆಯ ನಂತರ ಸಂಸಾರದ ಖರ್ಚು ನಿಭಾಯಿಸಲು ಸಾಧ್ಯವೇ ಎನ್ನುವ ಭಯ

6) ಮದುವೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳ ಭಯ: ನಮ್ಮ ಸಮಾಜದಲ್ಲಿ ಈಗಲೂ ಗಳಿಕೆಯಲ್ಲಿ ಹೆಣ್ಣಿಗಿಂತ ಗಂಡಿನ ಮೇಲೇ ನಿರೀಕ್ಷೆ ಜಾಸ್ತಿ. ಆ ನಿರೀಕ್ಷೆಯನ್ನು ತಲುಪಲಾಗುತ್ತದೆಯಾ ಎಂಬ ಆತಂಕವೂ‌ ಮದುವೆಯನ್ನು ಮುಂದೂಡಲು ಕಾರಣವಾಗುತ್ತದೆ.

ಇಷ್ಟೆಲ್ಲಾ ಭಯ ಇದ್ದವರು ಪ್ರೀತಿ ಏಕೆ ಮಾಡಬೇಕು

ಮೊದಲೇ ಹೇಳಿದಂತೆ ಪ್ರೀತಿ ಶುರುವಾಗುವುದು ಆಕರ್ಷಣೆಯಿಂದ. ಆ ಆಕರ್ಷಣೆ ಯಾವಾಗ ಹೇಗೆ ಶುರುವಾಗುತ್ತದೆ ಅಂತಲೂ ಗೊತ್ತಿಲ್ಲ. ಟೆಸ್ಟೋಸ್ಟೋರಾನ್‌ಗೆ (ಗಂಡಿನ ಲೈಂಗಿಕ ಹಾರ್ಮೋನ್) ಕಮಿಟ್‌ಮೆಂಟ್ ಭಯವಿಲ್ಲ. ಹಾಗಾಗಿ ಆಕರ್ಷಣೆ, ಡೇಟಿಂಗ್, ಪರಸ್ಪರ ನಿಕಟರಾಗಿ, ಕೆಲವೊಮ್ಮೆ ದೈಹಿಕ ಸಂಪರ್ಕ ಆದ‌ ಮೇಲೆಯೂ ಮುಂದಿನ ಹಂತ‌ವಾದ ಕಮಿಟ್‌ಮೆಂಟ್‌ ವಿಚಾರಕ್ಕೆ ಬಂದಾಗ ಮನಸು ನಿರ್ಧಾರಕ್ಕೆ ಬರಲು ಹೊಯ್ದಾಡುತ್ತದೆ.

ಆದರೆ ಹೆಣ್ಣು ಹಾಗಲ್ಲ. ಒಮ್ಮೆ ಯಾರದ್ದಾದರೂ ಆಕರ್ಷಣೆಗೆ ಬಿದ್ದಳೆಂದರೆ ಅವಳ‌ ಮನಸು ಮದುವೆ ಮಕ್ಕಳು ಸಂಸಾರ ಎಂದೆಲ್ಲಾ ಯೋಚಿಸಲಾರಂಭಿ‌ಸುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ಅವಳು ಮಾನಸಿಕವಾಗಿ ಕಮಿಟ್ ಆಗಿಬಿಟ್ಟಿರುತ್ತಾಳೆ. ಸಿದ್ಧತೆಯನ್ನೂ ಮಾಡಿಕೊಂಡಿರುತ್ತಾಳೆ. ಆ ಮದುವೆ ಆಗುತ್ತದೆಯೋ ಇಲ್ಲವೋ ಅವಳಂತೂ ಮಾನಸಿಕವಾಗಿ ಮದುವೆಯಾಗಿರುತ್ತಾಳೆ. ಹಾಗಾಗಿ ಹೆಣ್ಣು ಪ್ರೀತಿಗೆ ಬೀಳಲು ತೆಗೆದುಕೊಳ್ಳುವಷ್ಟು‌ ಸಮಯಕ್ಕಿಂತ ಕಮಿಟ್‌ಮೆಂಟ್‌ಗೆ ಒಪ್ಪಿಕೊಳ್ಳಲು ತೆಗೆದುಕೊಳ್ಳುವ ಸಮಯ ಬಹಳ ಕಡಿಮೆ. ಗಂಡಿಗೆ ಪ್ರೀತಿಗೆ ಬೀಳುವ ಇರುವ ಆತುರ ಮದುವೆಗೆ ಒಪ್ಪಲು ಇರುವುದಿಲ್ಲ.

ಗಮನಿಸಿ: ಇವು ಹಲವು ಸಂಶೋಧನೆಗಳು, ತಜ್ಞರ ವರದಿಗಳು ಮತ್ತು ಆಪ್ತಸಮಾಚಕಿಯಾಗಿ ನನ್ನ ವೃತ್ತಿಯಲ್ಲಿ ನಾನು ಗಮನಿಸಿದ ಅಂಶಗಳನ್ನು ಒಳಗೊಂಡಿರುವ ಬರಹ. ಇದನ್ನು ಸಾಮಾನ್ಯೀಕರಿಸಿ ಅರ್ಥೈಸುವುದು, ನಿರ್ದಿಷ್ಟ ಪ್ರಕರಣಗಳಿಗೆ ತಳಕು ಹಾಕುವುದು ತಪ್ಪು. ಒಟ್ಟಾರೆಯಾಗಿ ಗಂಡು-ಹೆಣ್ಣಿನ ಮನಸ್ಸಿನ ವರ್ತನೆಯನ್ನು ಅರ್ಥೈಸಲು ಈ ಬರಹದ ಅಂಶಗಳನ್ನು ಬಳಸಿಕೊಳ್ಳಬಹುದು.

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ನಿವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ 20ಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.