Relationship: ಪತಿಯಂದಿರೇ, ನಿಮಗಾಗಿ ವೃತ್ತಿ ಬದುಕನ್ನು ತ್ಯಾಗ ಮಾಡಿದ ಪತ್ನಿಗೆ ನೀವು ಕೊಡುವ ಗೌರವ ಇಷ್ಟೆಯೇ..?-relationship how husband should respect his wife women sacrifices love towards family rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಪತಿಯಂದಿರೇ, ನಿಮಗಾಗಿ ವೃತ್ತಿ ಬದುಕನ್ನು ತ್ಯಾಗ ಮಾಡಿದ ಪತ್ನಿಗೆ ನೀವು ಕೊಡುವ ಗೌರವ ಇಷ್ಟೆಯೇ..?

Relationship: ಪತಿಯಂದಿರೇ, ನಿಮಗಾಗಿ ವೃತ್ತಿ ಬದುಕನ್ನು ತ್ಯಾಗ ಮಾಡಿದ ಪತ್ನಿಗೆ ನೀವು ಕೊಡುವ ಗೌರವ ಇಷ್ಟೆಯೇ..?

Relationship: ಮಗುವಾದ ಬಳಿಕ ವೃತ್ತಿ ಜೀವನಕ್ಕೆ ಅದೆಷ್ಟೋ ಮಹಿಳೆಯರು ಗುಡ್ ಬೈ ಹೇಳಿ ಬಿಡುತ್ತಾರೆ. ಆದರೆ ಇದಾದ ಬಳಿಕ ಅನೇಕ ಮಹಿಳೆಯರು ಸಾಕಷ್ಟು ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಅಂಥಹ ನೊಂದ ಮಹಿಳೆಯರ ಪರವಾಗಿ ಈ ಬರಹ.

ನಿಮ್ಮ ಕುಟುಂಬಕ್ಕಾಗಿ ನಿಮ್ಮ ಪತ್ನಿ ಮಾಡಿದ ತ್ಯಾಗಕ್ಕೆ ಬೆಲೆ ಕೊಡಿ
ನಿಮ್ಮ ಕುಟುಂಬಕ್ಕಾಗಿ ನಿಮ್ಮ ಪತ್ನಿ ಮಾಡಿದ ತ್ಯಾಗಕ್ಕೆ ಬೆಲೆ ಕೊಡಿ (PC: Pixabay)

Relationship: ಹೆಣ್ಣು ಸಂಸಾರದ ಕಣ್ಣು ಎಂದು ಹೇಳುತ್ತಾರೆ. ಇಡೀ ಕುಟುಂಬ ಸರಿಯಾಗಿ ಜೀವನ ನಡೆಸಬೇಕು ಎಂದರೆ ಮಹಿಳೆಯ ಪಾತ್ರ ಬಹಳ ಮುಖ್ಯವಾಗುತ್ತದೆ. ಮೊದಲೆಲ್ಲಾ ಗಂಡು ದುಡಿದು ಹಣ ತಂದರೆ ಹೆಣ್ಣು ಮನೆಯಲ್ಲಿದ್ದು ಅಡುಗೆ ಮಾಡುತ್ತಾ ಮಕ್ಕಳನ್ನು ಸಲಹುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಆ ರೀತಿ ಅಲ್ಲ..! ಎಲ್ಲವೂ ಬದಲಾಗಿದೆ. ಜೀವನ ದುಬಾರಿಯಾಗುತ್ತಾ ಹೋದಂತೆಲ್ಲಾ ದುಡಿಯುವ ಕೈಗಳ ಸಂಖ್ಯೆ ಹೆಚ್ಚಾಗುವುದು ಅನಿವಾರ್ಯವಾಯ್ತು. ಪತಿಯ ಜೊತೆ ಪತ್ನಿಯೂ ಸಂಸಾರದ ಬಂಡಿಯನ್ನೆಳೆಯಲು ದುಡಿಯಲೇ ಬೇಕಾಯ್ತು.

ಮೊದಲು ಕೇವಲ ಗಂಡು ಮಕ್ಕಳಿಗೆ ಮಾತ್ರ ಹೆಚ್ಚಿನ ವಿದ್ಯಾಭ್ಯಾಸ ಸಿಗುತ್ತಿತ್ತು. ಒಳ್ಳೊಳ್ಳೆ ಕೆಲಸಗಳೂ ಸಹ ಅವರ ಪಾಲಾಗುತ್ತಿದ್ದವು. ಆದರೆ ಈಗ ಹಾಗಲ್ಲ. ಮನೆಯ ಹೆಣ್ಣು ಮಕ್ಕಳೂ ಪುರುಷರಷ್ಟೇ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಒಳ್ಳೆಯ ವೃತ್ತಿ ಜೀವನವನ್ನೂ ಕಾಣುತ್ತಿದ್ದಾರೆ. ಆದರೆ ಮಹಿಳೆಯ ಜೀವನ ಇಲ್ಲಿಗೆ ಮುಗಿಯುವುದಿಲ್ಲವಲ್ಲ..? ಎಷ್ಟೇ ಓದಿದರೂ ಎಷ್ಟೊಳ್ಳೆ ಕೆಲಸದಲ್ಲಿದ್ದರೂ ಸಹ ಒಂದಲ್ಲ ಒಂದು ಸಂಸಾರವೆಂಬ ಸಾಗರದಲ್ಲಿ ಆಕೆ ಈಜಲೇಬೇಕಲ್ಲವೇ..?

ಗಂಡ, ಮನೆ, ಮಕ್ಕಳಿಗಾಗಿ ತ್ಯಾಗ ಮಾಡುವ ಹೆಣ್ಣು

ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಮನೆಗೊಂದು ಪುಟ್ಟ ಕಂದಮ್ಮನ ಆಗಮನವೂ ಆಗುತ್ತದೆ. ಮೊದಲಿದ್ದಂತೆ ಕೂಡು ಕುಟುಂಬಗಳು ಈಗ ಇರುವುದಿಲ್ಲ. ಹೀಗಾಗಿ ಮಗುವಿನ ಜವಾಬ್ದಾರಿ ಸಂಪೂರ್ಣವಾಗಿ ತಾಯಿಯ ಮೇಲೆ ಬೀಳುತ್ತದೆ. ಮನೆಗೆಲಸದವರ ಮೇಲೆ ಮಗುವಿನ ಜವಾಬ್ದಾರಿ ಹಾಕಿ ಕೆಲಸಕ್ಕೆ ಹೋಗುವ ನಿರ್ಧಾರ ಮಾಡಲು ತಾಯಿ ಕರುಳು ಒಪ್ಪುವುದಿಲ್ಲ. ಹೀಗಾಗಿ ಎಷ್ಟೋ ಮಹಿಳೆಯರು ಈ ಸಮಯದಲ್ಲಿ ತಾವು ಎಷ್ಟು ಓದಿಕೊಂಡಿದ್ದೇವೆ. ಎಷ್ಟೊಳ್ಳೆ ಕೆಲಸದಲ್ಲಿದ್ದೇವೆ. ನಾಳೆ ಕೆಲಸ ಬಿಟ್ಟ ಮೇಲೆ ಪ್ರತಿಯೊಂದಕ್ಕೂ ಗಂಡನ ಮುಂದೆ ಕೈ ಚಾಚಬೇಕು ಎಂಬುದೆಲ್ಲವನ್ನೂ ಮರೆತು ತನ್ನ ಮಗುವಿಗಾಗಿ ವೃತ್ತಿ ಜೀವನವನ್ನು ತ್ಯಾಗ ಮಾಡುತ್ತಾಳೆ.

ಆದರೆ ಈ ತ್ಯಾಗವನ್ನು ಮೆಚ್ಚುವಂತಹ ಅದನ್ನು ಬೆಂಬಲಿಸುವಂತಹ ಮನಸ್ಥಿತಿ ಬಹುತೇಕ ಪತಿಯಂದಿರಿಗೆ ಇಲ್ಲ ಎಂಬುದೇ ದುರಂತ. ಪತ್ನಿಯಾದವಳು ಸಂಸಾರವನ್ನೂ ನೋಡಬೇಕು, ತನ್ನ ಮಗುವನ್ನೂ ಸಾಕವೇಕು, ಅದರ ಜೊತೆಯಲ್ಲಿ ಮನೆಗೆ ದುಡಿದೂ ತರಬೇಕು ಎಂಬ ಸಣ್ಣ ಮನಸ್ಸಿನವರೇ ಈ ಸಮಾಜದಲ್ಲಿ ಹೆಚ್ಚಾಗಿ ಸಿಗುತ್ತಾರೆ. ಆದರೆ ಸ್ವಚ್ಛಂದವಾಗಿ ಕಚೇರಿ ಕೆಲಸ ಮಾಡಿಕೊಂಡು ಸ್ವತಂತ್ರ್ಯ ಜೀವನ ಸಾಗಿಸುತ್ತಿದ್ದ ಹೆಣ್ಣೊಬ್ಬಳು ತಮ್ಮ ಮಗುವಿನ ಪಾಲನೆಗಾಗಿ ನಾಲ್ಕು ಗೊಡೆಗಳ ಮಧ್ಯೆಯೇ ಇರಲು ಮಾಡಿದ ಆ ತ್ಯಾಗ ಕಾಣಿಸದೇ ಹೋಗುತ್ತದೆ.

ನಿಮ್ಮ ಮೇಲಿನ ಕಾಳಜಿಯನ್ನು ಅರ್ಥ ಮಾಡಿಕೊಳ್ಳಿ

ಎಲ್ಲಾ ಪತಿಯಿಂದಿರೂ ಒಂದು ವಿಚಾರವನ್ನು ಗಮನದಲ್ಲಿಡಬೇಕು. ನೀವು ಮನೆಗೊಂದು ಕೆಲಸದಾಕೆಯನ್ನಿಟ್ಟು ಮಗುವನ್ನು ನೋಡಿಕೊಳ್ಳಲು ಮತ್ತೊಬ್ಬ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದರೆ ತಿಂಗಳಿಗೆ ನಿಮಗೆ ಎಷ್ಟು ಹೆಚ್ಚುವರಿ ಖರ್ಚು ಬರುತ್ತಿತ್ತು ಎಂಬುದನ್ನು ಎಂದಾದರೂ ಲೆಕ್ಕ ಹಾಕಿದ್ದೀರೇ..? ನಿಮ್ಮ ಪತ್ನಿ ಮನೆಯಲ್ಲಿ ಸುಮ್ಮನೇ ಕುಳಿತಿದ್ದಾಳೆ ಎಂದು ನಿಮಗೆನಿಸಿದರೂ ಸಹ ಆಕೆ ಪರೋಕ್ಷವಾಗಿ ನಿಮಗೆಷ್ಟು ಉಳಿತಾಯ ಮಾಡುತ್ತಿದ್ದಾಳೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರೇ...?ಅದೆಲ್ಲ ಬಿಡಿ ಮನೆಗೆಲಸದವಳು, ಮಗುವನ್ನು ನೋಡಿಕೊಳ್ಳುವ ಸಿಬ್ಬಂದಿ ನಿಮ್ಮ ಪತ್ನಿಯಷ್ಟೇ ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ಈ ಕುಟುಂಬವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದರು ಎಂಬ ನಂಬಿಕೆಯಾದರೂ ನಿಮಗಿದೆಯೇ..? ಒಂದನ್ನು ನೆನಪಿಡಿ. ಹೆಣ್ಣಿನ ಮನಸ್ಸು ಗಾಜಿದ್ದಂತೆ. ಒಮ್ಮೆ ಒಡೆದರೆ ಅದನ್ನು ಸರಿಪಡಿಸಲಾಗದು. ಆಕೆಗೂ ಒಂದು ಮನಸ್ಸಿದೆ. ನಿಮ್ಮದೇ ಮಗುವಿಗಾಗಿ, ನಿಮ್ಮದೇ ಸಂಸಾರವನ್ನು ಕಾಪಾಡಲು ಆಕೆ ದೊಡ್ಡ ತ್ಯಾಗ ಮಾಡಿದ್ದಾಳೆ. ಎಂದೆಂದಿಗೂ ಇದಕ್ಕೆ ಗೌರವ ನೀಡುವುದನ್ನು ರೂಢಿಸಿಕೊಳ್ಳಿ.

ಹೊರಗಿನ ಸಮಾಜ ಆಕೆ ದುಡಿಯಲು ಹೊರ ಹೋದರೆ ಸಂಸಾರದ ಜವಾಬ್ದಾರಿಯಿಲ್ಲ ಎಂದು ಮಾತನಾಡಿಕೊಳ್ಳುತ್ತದೆ. ಕೆಲಸ ಬಿಟ್ಟು ಮನೆಯಲ್ಲಿ ಕುಳಿತರೆ ಆಲಸ್ಯದ ಪರಮಾವಧಿ ಎನ್ನುತ್ತದೆ. ಹೆಣ್ಣು ಏನು ಮಾಡಿದರೂ ಸಮಾಜ ಆಡಿಕೊಳ್ಳಲು ತಯಾರಿರುತ್ತದೆ. ಆದರೆ ಒಬ್ಬ ಬಾಳ ಸಂಗಾತಿಯಾಗಿ ನೀವು ಎಂದಿಗೂ ಪತ್ನಿಯ ಕೈಬಿಡಬಾರದು. ಆಕೆಯ ಮನಸ್ಥಿತಿ, ಆಕೆಯ ತ್ಯಾಗ ಇವೆಲ್ಲದಕ್ಕೂ ಬೆಲೆ ನೀಡುವುದು ಮೊದಲು ನಿಮ್ಮಿಂದ ಆರಂಭವಾದರೆ ಸಮಾಜವನ್ನು ಬದಲಿಸುವುದು ಕಷ್ಟವೇನಲ್ಲ, ಏನಂತೀರಿ..?