ಕನ್ನಡ ಸುದ್ದಿ  /  ಜೀವನಶೈಲಿ  /  Women Health: ಗರ್ಭ ಧರಿಸಿದ ಬಳಿಕವೂ ಕಡಿಮೆ ತೂಕ ಹೊಂದಿದ್ದೀರಾ? ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಜಾಗ್ರತೆ

Women Health: ಗರ್ಭ ಧರಿಸಿದ ಬಳಿಕವೂ ಕಡಿಮೆ ತೂಕ ಹೊಂದಿದ್ದೀರಾ? ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಜಾಗ್ರತೆ

Women Health: ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರು ಕಡಿಮೆ ತೂಕವನ್ನು ಹೊಂದಿದ್ದರೆ ಅದು ಮಗುವಿನ ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ದುಷ್ಪರಿಣಾಮ ಬೀರಬಹುದು..? ತೂಕ ಏರಿಕೆ ಮಾಡಿಕೊಳ್ಳಲು ಮಹಿಳೆಯರು ಯಾವೆಲ್ಲ ಆಹಾರ ಸೇವಿಸಬೇಕು..? ಇಲ್ಲಿದೆ ಮಾಹಿತಿ.

ತೂಕದ ವಿಚಾರದಲ್ಲಿ ಗರ್ಭಿಣಿಯರಿಗೆ ಮುನ್ನೆಚರಿಕೆ ಬಹಳ ಅಗತ್ಯ
ತೂಕದ ವಿಚಾರದಲ್ಲಿ ಗರ್ಭಿಣಿಯರಿಗೆ ಮುನ್ನೆಚರಿಕೆ ಬಹಳ ಅಗತ್ಯ

Women Health: ನೀವು ಗರ್ಭಿಣಿಯಾಗಿರಲಿ ಅಥವಾ ಇಲ್ಲದೇ ಇರಲಿ, ಆರೋಗ್ಯಕ ತೂಕವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ನೀವು ಕಡಿಮೆ ತೂಕವನ್ನೂ ಹೊಂದಿರಬಾರದು ಅದರ ಜೊತೆಯಲ್ಲಿ ತೂಕ ಹೆಚ್ಚೂ ಇರಬಾರದು. ನೀವು ಕಡಿಮೆ ತೂಕ ಹೊಂದಿದ್ದು ಗರ್ಭಿಣಿಯಾಗಲು ಯೋಚಿಸುತ್ತಿದ್ದರೆ ಮೊದಲು ನಿಮ್ಮ ತೂಕ ಹೆಚ್ಚಿಸಿಕೊಳ್ಳಬೇಕು. ಮಹಿಳೆಯರ ಕಡಿಮೆ ತೂಕವು ಅವರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ.

ಟ್ರೆಂಡಿಂಗ್​ ಸುದ್ದಿ

ಮಹಿಳೆಯರು ಗರ್ಭಿಣಿಯಾಗಿದ್ದರೆ ಕಡಿಮೆ ತೂಕ ಹೊಂದಿರಬಾರದು. ನಿಮ್ಮ ಕಡಿಮೆ ತೂಕವು ಮಗುವಿನ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಗರ್ಭಾವಸ್ಥೆಯಲ್ಲಿ ಮಹಿಳೆಯ ಕಡಿಮೆ ತೂಕವು ಮಗುವಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ನೀವು ಗರ್ಭಿಣಿಯಾಗಬೇಕು ಎಂದುಕೊಂಡಿದ್ದಾಗ ಮಹಿಳೆಯ ತೂಕವು ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ತೂಕವು ಫಲವತ್ತತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ವಿವರ ಇಲ್ಲಿದೆ ನೋಡಿ.

ಋತುಚಕ್ರದಲ್ಲಿ ಏರುಪೇರು

ಋತುಚಕ್ರದ ದಿನಾಂಕದಲ್ಲಿ ಏರುಪೇರು ಉಂಟಾಗುತ್ತಿದ್ದರೆ ಮಹಿಳೆಯಲ್ಲಿ ಅಂಡಾಣು ಉತ್ಪತ್ತಿಯ ದಿನವನ್ನು ನಿರ್ಧರಿಸುವುದು ಕಷ್ಟವಾಗುತ್ತದೆ. ಗರ್ಭ ಧರಿಸಲು ಮಹಿಳೆಯ ಅಂಡಾಣು ಉತ್ಪತ್ತಿಯ ದಿನದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ನಿಯಮಿತವಾಗಿ ಅಂಡಾಣು ಉತ್ಪತ್ತಿ ಆಗದೇ ಇದ್ದರೆ ಗರ್ಭವತಿಯಾಗುವ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಹಾರ್ಮೋನ್ ಅಸಮತೋಲನ

ಮಹಿಳೆ ದೇಹದ ತೂಕ ಕಡಿಮೆಯಾದಂತೆಲ್ಲ ಆಕೆಯಲ್ಲಿ ಈಸ್ಟ್ರೋಜೆನ್ ಮಟ್ಟ ಕೂಡಾ ಕಡಿಮೆಯಾಗುತ್ತದೆ. ಇದು ಪ್ರೌಢ ಅಂಡಾಣುಗಳ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಕೂಡಾ ಗರ್ಭವತಿಯಾಗಲು ಸಂಕಷ್ಟ ಎದುರಾಗುತ್ತದೆ.

ಗರ್ಭಾವಸ್ಥೆಯಲ್ಲಿ ತೊಡಕು

ಒಂದು ವೇಳೆ ಗರ್ಭಧಾರಣೆ ಆದರೂ ಸಹ ಗರ್ಭಾವಸ್ಥೆಯ ಸಂದರ್ಭದಲ್ಲಿ ಕಡಿಮೆ ತೂಕವು ಅವಧಿಪೂರ್ವ ಮಗುವಿನ ಜನನಕ್ಕೆ ಕಾರಣವಾಗಬಹುದು.

ಪೌಷ್ಠಿಕಾಂಶದ ಕೊರತೆ

ಕಡಿಮೆ ತೂಕವು ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಅಗತ್ಯವಾದ ಜೀವಸತ್ವಗಳು ಹಾಗೂ ಖನಿಜಗಳನ್ನು ಒದಗಿಸುವುದಿಲ್ಲ. ಪೌಷ್ಠಿಕಾಂಶದ ಕೊರತೆಯು ಹಾರ್ಮೋನ್ ಉತ್ಪಾದನೆ ಹಾಗೂ ಅಂಡಾಣುಗಳ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಕಡಿಮೆ ತೂಕವು ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಭಾರತದಲ್ಲಿ 42.5 ಪ್ರತಿಶತದಷ್ಟು ಮಹಿಳೆಯರು ಗರ್ಭಧಾರಣೆಯ ಸಂದರ್ಭದಲ್ಲಿ ಕಡಿಮೆ ತೂಕವನ್ನು ಹೊಂದಿದ್ದರು ಎನ್ನಲಾಗಿದೆ. ಗರ್ಭಾವಸ್ಥೆಯಲ್ಲಿ ಕಡಿಮೆ ತೂಕ ಒಳ್ಳೆಯದಲ್ಲ, ಏಕೆಂದರೆ ಇದು ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರಬಹುದು.

ಕಡಿಮೆ ತೂಕದ ಮಗು ಜನನ : ಕಡಿಮೆ ತೂಕವನ್ನು ಹೊಂದಿರುವ ತಾಯಂದಿರಿಗೆ ಜನಿಸಿದ ಶಿಶುಗಳು ಕೂಡ ಕಡಿಮೆ ತೂಕವನ್ನು ಹೊಂದಿರುವ ಅಪಾಯ ಹೆಚ್ಚಿರುತ್ತದೆ. ಇದರಿಂದ ವಿವಿಧ ಆರೋಗ್ಯ ತೊಡಕುಗಳು ಉಂಟಾಗುತ್ತದೆ. ಕಡಿಮೆ ಜನನ ತೂಕದ ಶಿಶುಗಳು ಜೀವ ನಿರೋಧಕ ಶಕ್ತಿ ಹಾಗೂ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಅಪಾಯವನ್ನು ಎದುರಿಸಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಇಂತಹ ಮಕ್ಕಳನ್ನು ಕಾಡುತ್ತಿರುತ್ತದೆ.

ಅವಧಿಪೂರ್ವ ಮಗು ಜನನ

ಕಡಿಮೆ ತೂಕದ ಗರ್ಭಿಣಿಯರು 37 ವಾರಗಳ ಗರ್ಭಾವಸ್ಥೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇವರು ಅವಧಿಗೂ ಪೂರ್ವವೇ ಹೆರಿಗೆಗೆ ಒಳಗಾಗುತ್ತಾರೆ. ಅವಧಿಪೂರ್ವವಾಗಿ ಜನಿಸಿದ ಮಗುವಿನಲ್ಲಿ ಉಸಿರಾಟದ ತೊಂದರೆ, ಕಾಮಾಲೆಯಂತಹ ವಿವಿಧ ಸೋಂಕುಗಳು ಹೆಚ್ಚಾಗಿ ಕಾಣಿಸುತ್ತದೆ.

ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ

ಕಡಿಮೆ ತೂಕದ ಗರ್ಭಿಣಿಯರಲ್ಲಿ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಇರುತ್ತದೆ. ಇದು ಮಕ್ಕಳ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಕಡಿಮೆ ತೂಕದ ತಾಯಂದಿರಿಗೆ ಜನಿಸಿದ ಕಂದಮ್ಮಗಳು ಕೂಡ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತವೆ.

ಪೌಷ್ಟಿಕಾಂಶದ ಕೊರತೆ

ಗರ್ಭಾವಸ್ಥೆಯಲ್ಲಿ ತಾಯಿಯ ಅಪೌಷ್ಟಿಕತೆಯು ಬೆಳೆಯುತ್ತಿರುವ ಭ್ರೂಣಕ್ಕೆ ಅಸಮರ್ಪಕ ಪೌಷ್ಟಿಕಾಂಶದ ಪೂರೈಕೆಗೆ ಕಾರಣವಾಗಬಹುದು. ಗರ್ಭಾಶಯದಲ್ಲಿನ ಪೌಷ್ಟಿಕಾಂಶದ ಕೊರತೆಯು ಮಗುವಿನ ಒಟ್ಟಾರೆ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ರಕ್ತಹೀನತೆ, ಕಳಪೆ ಮೂಳೆ ಬೆಳವಣಿಗೆಗಳಿಗೆ ಕಾರಣವಾಗುತ್ತದೆ.

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗಲು ಮಹಿಳೆಯರು ಏನು ಮಾಡಬೇಕು?

ಗರ್ಭಾವಸ್ಥೆಗೆ ತಯಾರಿ ನಡೆಸುವ ಸಂದರ್ಭದಲ್ಲಿ ಮಹಿಳೆಯರು ಪೋಷಕಾಂಶಯುಕ್ತ ಆಹಾರ ಸೇವಿಸಬೇಕು. ವಿವಿಧ ಧಾನ್ಯಗಳು, ಮೊಳಕೆ ಕಾಳುಗಳು, ಡ್ರೈಫ್ರೂಟ್ಸ್, ಹಸಿರು ತರಕಾರಿಗಳು, ಹಣ್ಣುಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಭ್ರೂಣದ ಬೆಳವಣಿಗೆಗೆ ಬೇಕಾದ ಜೀವಸತ್ವಗಳು. ಖನಿಜಾಂಶಗಳು ಹಾಗೂ ಅಗತ್ಯವಾದ ಕೊಬ್ಬಿನಾಮ್ಲಗಳು ನಿಮ್ಮ ನಿತ್ಯದ ಆಹಾರದಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಗರ್ಭಾವಸ್ಥೆಯ ಮೊದಲು ತೂಕವನ್ನು ಹೆಚ್ಚಿಸುವುದರಿಂದ ಕಡಿಮೆ ತೂಕವಿರುವ ಮಹಿಳೆಯರು ಆರೋಗ್ಯಕರ ತೂಕವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ, ಗರ್ಭಧಾರಣೆಯ ಸಾಧ್ಯತೆಗಳನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಗರ್ಭಧಾರಣೆಗೆ ಸಹಕಾರಿಯಾಗಿದೆ.