ಕನ್ನಡ ಸುದ್ದಿ  /  ಜೀವನಶೈಲಿ  /  Wspd 2022: ಪ್ರಾಣ ತ್ಯಜಿಸದಂತೆ ಸೀತೇನ ತಡೆದಿದ್ದ ಹನುಮ; ನೀವೂ ಆಗಿ ಸೂಸೈಡ್‌ ಗೇಟ್‌ ಕೀಪರ್‌..

WSPD 2022: ಪ್ರಾಣ ತ್ಯಜಿಸದಂತೆ ಸೀತೇನ ತಡೆದಿದ್ದ ಹನುಮ; ನೀವೂ ಆಗಿ ಸೂಸೈಡ್‌ ಗೇಟ್‌ ಕೀಪರ್‌..

World Suicide Prevention Day 2022 (WSPD 2022): ಇಂದು ವಿಶ್ವ ಆತ್ಮಹತ್ಯೆ ತಡೆ ದಿನ."ಕ್ರಿಯೆಯ ಮೂಲಕ ಭರವಸೆ ಮೂಡಿಸಿ" (Creating Hope Through Action) ಎಂಬುದು ಥೀಮ್‌. ಈ ಕುರಿತ ವಿಚಾರವನ್ನು HTಕನ್ನಡದ ಜತೆಗೆ ಶೇರ್‌ ಮಾಡಿದ್ದಾರೆ ಬೆಂಗಳೂರಿನ ESIC MH MC ಪಿಜಿಐಎಂಎಸ್‌ಆರ್‌ನ ಸೈಕ್ಯಾಟ್ರಿ ವಿಭಾಗದ ಸೀನಿಯರ್‌ ಸ್ಪೆಷಲಿಸ್ಟ್‌ ಡಾ.ಧನಂಜಯ ಎಸ್‌.

ಪ್ರಾಣ ತ್ಯಜಿಸದಂತೆ ಸೀತೇನ ತಡೆದಿದ್ದ ಹನುಮ; ಸುಂದರಕಾಂಡದಲ್ಲಿದೆ ಉಲ್ಲೇಖ
ಪ್ರಾಣ ತ್ಯಜಿಸದಂತೆ ಸೀತೇನ ತಡೆದಿದ್ದ ಹನುಮ; ಸುಂದರಕಾಂಡದಲ್ಲಿದೆ ಉಲ್ಲೇಖ

ಒಬ್ಬ ಸೂಸೈಡ್‌ ಮಾಡಿದ ಎಂದರೆ 20 ಜನ ಸೂಸೈಡ್‌ ಪ್ರಯತ್ನ ಮಾಡಿರುತ್ತಾರೆ ಎಂಬುದನ್ನು ಡೇಟಾ ಸೂಚಿಸುತ್ತದೆ. ಸೂಸೈಡ್‌ ಮಾಡಿಕೊಳ್ಳುವ ಸನ್ನಿವೇಶ ಅತ್ಯಂತ ಸಂಕಷ್ಟವನ್ನು, ಸಂಕಟವನ್ನು ಉಂಟುಮಾಡುವಂಥದ್ದು. ಅಂತಹ ಅತಿರೇಕದ ನಿರ್ಧಾರಗಳಿಂದ ಆ ವ್ಯಕ್ತಿಯ ಕುಟುಂಬ ಕೂಡ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.

ಆದ್ದರಿಂದ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಾಗ ಅಂತಹ ಮಾತನ್ನು ಲಘುವಾಗಿ ಪರಿಗಣಿಸಬೇಡಿ. ಆತ್ಮಹತ್ಯೆಯ ಆಲೋಚನೆಯನ್ನು ತಡೆಯಬೇಕು. ಇದಕ್ಕಾಗಿ "ಕ್ರಿಯೆಯ ಮೂಲಕ ಭರವಸೆ ಮೂಡಿಸಿ" ಎಂಬ ಥೀಮ್‌ ಅನ್ನು ಅಳವಡಿಸಿಕೊಳ್ಳಬೇಕು. ಯಾರು ಈ ಕ್ರಿಯೆಯನ್ನು ಮಾಡಬೇಕು?

ಇದನ್ನು ಸೂಸೈಡ್‌ ಗೇಟ್‌ ಕೀಪರ್ಸ್‌ ಮಾಡಬೇಕು. ಸೂಸೈಡ್‌ ಗೇಟ್‌ ಕೀಪರ್ಸ್‌ ಎಂಬ ಒಂದು ಕಾನ್ಸೆಪ್ಟ್‌ ಇದೆ. ಇವರು ಸೂಸೈಡ್‌ ಸನ್ನಿವೇಶದಲ್ಲಿ ಅಂತಹ ವ್ಯಕ್ತಿಯನ್ನು ತಡೆಯುವ ಗೇಟ್‌ನಲ್ಲಿದ್ದಾರೆ ಎಂಬ ಕಾರಣಕ್ಕೆ ಸೂಸೈಡ್‌ ಗೇಟ್‌ ಕೀಪರ್ಸ್‌ ಎನ್ನುತ್ತಾರೆ. ಶಬ್ದಶಃ ಅರ್ಥ ಹೇಳುವುದಾದರೆ ಸೂಸೈಡ್‌ ಮಾಡಲು ಹೊರಟವರನ್ನು ತಡೆಯುವವರು ಎಂದು ಅರ್ಥ.

ಇವರು ಮಾಡಬೇಕಾಗಿರುವುದು ಇಷ್ಟೆ - ಸೂಸೈಡ್‌ ಮಾನಸಿಕ ಸ್ಥಿತಿಗೆ ತಳ್ಳಲ್ಪಟ್ಟವರಿಗೆ ನೈತಿಕ ಬೆಂಬಲ ಕೊಟ್ಟರೆ ಸಾಕು. ಎಷ್ಟೋ ಸನ್ನಿವೇಶಗಳಲ್ಲಿ ಈ ಒಂದು ಮಾನಸಿಕ ಬೆಂಬಲ ಅವರನ್ನು ಮತ್ತೆ ಬದುಕಿಗೆ ಕರೆ ತಂದ ಉದಾಹರಣೆಗಳಿವೆ. ಫಿಲಾಸಾಫಿಕಲಿ ಅಥವಾ ಸ್ಪಿರಿಚ್ಯುವಲಿ ಹೇಳಬೇಕು ಎಂದರೆ ರಾಮಾಯಣದಲ್ಲಿ ಬರುವ ಸುಂದರ ಕಾಂಡದ ಸನ್ನಿವೇಶವನ್ನು ಇಲ್ಲಿ ಉಲ್ಲೇಖಿಸಬಹುದು.

ಶ್ರೀರಾಮಚಂದ್ರ ಪ್ರಭು ವನವಾಸದಲ್ಲಿದ್ದಾಗ ಸೀತಾಮಾತೆಯನ್ನು ರಾವಣ ಅಪಹರಿಸಿ ಲಂಕೆಗೆ ಕೊಂಡೊಯ್ದಿದ್ದ. ಅಲ್ಲಿ ಅಶೋಕಾ ವನದಲ್ಲಿ ಸೀತೆಯನ್ನು ಉಳಿಸಿಕೊಂಡು, ರಾಕ್ಷಸಿಯರನ್ನು ಕಾವಲಿಗಿಟ್ಟಿದ್ದ. ಬಹುದಿನಗಳ ಕಾಲ ಅವರ ನಡುವೆ ಒಂಟಿಯಾಗಿದ್ದ ಸೀತೆ ಖಿನ್ನತೆಗೆ ಜಾರಿದ್ದಳು. ಶ್ರೀರಾಮಚಂದ್ರ ಪ್ರಭು ತನ್ನನ್ನು ಕರೆದೊಯ್ಯಲು ಬರುವನೆಂಬ ನಂಬಿಕೆ ಆಕೆಗೆ ಇತ್ತು.

ರಾವಣ ಮತ್ತು ಆತನ ಭಟರು ನೀಡಿದ ಮಾನಸಿಕ ಹಿಂಸೆಗಳನ್ನೆಲ್ಲ ತಡೆದುಕೊಂಡ ಸೀತೆ, ರಾಮಧ್ಯಾನದಲ್ಲೇ ಕಾಲ ಕಳೆದಿದ್ದಳು. ತನ್ನನ್ನು ವರಿಸುವಂತೆ ರಾವಣ ಕೇಳಿದಾಗೆಲ್ಲ, ಶ್ರೀರಾಮಚಂದ್ರನನ್ನು ಕೊಂಡಾಡಿದ ಸೀತೆ, ಕ್ರಮೇಣ ಬದುಕಿನ ಮೇಲಿನ ಭರವಸೆ ಕಳೆದುಕೊಂಡಳು.

ಇದು ಸೀತಾಮಾತೆಯನ್ನು ಹುಡುಕಿಕೊಂಡು ಲಂಕೆಗೆ ಹೋದ ರಾಮ ಭಂಟ ಹನುಮನ ಜತೆಗೆ ಸೀತೆ ಮಾತುಕತೆ ನಡೆಸಿದ ವೇಳೆ ವ್ಯಕ್ತವಾಗುತ್ತದೆ. ರಾವಣ ಮತ್ತು ಕಾವಲು ಭಟರ ಕಣ್ಣು ತಪ್ಪಿಸಿ ಅಶೋಕಾ ವನ ತಲುಪಿದ ಹನುಮಂತ, ಸೀತಾಮಾತೆಯ ಬಳಿ ಬಂದು ನಿಮ್ಮ ನೆರವಿಗೆ ಬಂದಿರುವೆ ಎಂದು ಹೇಳುತ್ತಾನೆ.

ಆಗ ಸೀತಾ ಮಾತೆಯು, ಇಷ್ಟು ದೊಡ್ಡ ಶತ್ರುಗಣದ ನಡುವೆ ನಿನ್ನನ್ನು ಹೇಗೆ ನಂಬಲಿ ಎಂದು ಹೇಳುತ್ತಾಳೆ. ಆತ ಶ್ರೀರಾಮಚಂದ್ರನ ಜೀವನ ವೃತ್ತಾಂತವನ್ನು ಸೀತಾಮಾತೆಯ ಅಪಹರಣದ ಕಥೆಯನ್ನು ವಿವರಿಸಿದಾಗ ಹನುಮನ ಮೇಲೆ ಆಕೆಗೆ ನಂಬಿಕೆ ಬರುತ್ತದೆ. ಖಿನ್ನತೆಗೆ ಜಾರಿದ ಸೀತಾ ಮಾತೆಯು ಹನುಮನ ಬಳಿ, ಶ್ರೀರಾಮಚಂದ್ರ ಪ್ರಭು ನನ್ನನ್ನು ಕರೆದೊಯ್ಯಲು ಬರುವುದಿಲ್ಲವೇನೋ? ನನ್ನ ಬದುಕು ಇಲ್ಲೇ ಕೊನೆಗೊಳ್ಳುವುದೋ ಏನೋ? ನನಗಿನ್ನು ಬದುಕಿನ ಮೇಲೆ ʻಭರವಸೆʼ ಇಲ್ಲವಾಗಿದೆ. ಬಹುತೇಕ ಇದು ನನ್ನ ಬದುಕಿನ ಅಂತಿಮ ಕ್ಷಣಗಳೇ ಇರಬಹುದು ಎಂದು ಹೇಳಿದ್ದಳು. ಸೀತೆಯ ಈ ಮಾತುಗಳು ಸುಂದರಕಾಂಡ (5.34.6)ದಲ್ಲಿದೆ.

ಆಗ ಆಂಜನೇಯ ಸ್ವಾಮಿಯು ಸೀತಾಮಾತೆಯನ್ನು ಸಮಾಧಾನ ಮಾಡುತ್ತ, ಬದುಕಿನಲ್ಲಿ ಭರವಸೆ ಇರಬೇಕು. ಕಷ್ಟ ಕರಗಿ ಸುಖ ಬರುತ್ತದೆ. ದುಃಖ ಕರಗಿ ಸಂತೋಷವೂ ಬರುತ್ತದೆ. ಬದುಕು ಎಂದ ಮೇಲೆ ಸುಖ, ದುಃಖಗಳು ಇದ್ದೇ ಇರುತ್ತವೆ. ಸಂತೋಷ ಅಥವಾ ಸುಖ ಬೇಕು ಎಂದಾದರೆ ಬದುಕಿರಬೇಕು ಅಲ್ಲವೇ? ಸುಖ ಸಂತೋಷ ಬರುವುದು ತಡವಾಗಬಹುದು. ಅದು 100 ವರ್ಷವಾದರೂ ಆದೀತು. ಅದನ್ನು ಅನುಭವಿಸಬೇಕಾದರೆ ಬದುಕಿರಬೇಕಲ್ಲ. ಸಂತೋಷ ಬಂದೇ ಬರುತ್ತದೆ, ಇಂದಲ್ಲದೇ ಹೋದರೆ ನಾಳೆ ಖಂಡಿತವಾಗಿಯೂ ಬರುತ್ತದೆ ಎಂಬ ಆಶಾವಾದ ಇರಬೇಕು. ಇದು ಬದುಕಿನಲ್ಲಿ ಭರವಸೆ ಮೂಡಿಸುವಂಥದ್ದು ಎಂದು ಹೇಳಿದ.

ರಾಮಾಯಣದ ಈ ಸನ್ನಿವೇಶದಲ್ಲಿ ಖಿನ್ನತೆಗೆ ಜಾರಿದ ಸೀತಾಮಾತೆಯಲ್ಲಿ ಹನುಮ ತುಂಬಿದ್ದು ಬದುಕಿನ ಭರವಸೆಯನ್ನು. ಇಲ್ಲಿ ಹನುಮನದ್ದು ಗೇಟ್‌ ಕೀಪರ್‌ ಕೆಲಸ. ಆತನ ಮಾತುಗಳಲ್ಲಿ ವ್ಯಕ್ತವಾದದ್ದು ಭರವಸೆ ಅಥವಾ ಹೋಪ್‌. ಅದರ ಶಕ್ತಿಯೇ ಅಂಥದ್ದು. ಬದುಕಿನಲ್ಲಿ ಆಸಕ್ತಿ ಕಳೆದುಕೊಂಡವರಲ್ಲೂ ಬದುಕುವ ಆಸೆ ಚಿಗುರಿಸುವ ಶಕ್ತಿ ಅದಕ್ಕೆ ಇದೆ. ಅದರಿಂದಲೇ ಆತ್ಮಹತ್ಯೆಯನ್ನು ನಾವು ತಡೆಯಬಹುದು. ಆದ್ದರಿಂದ ಇಂತಹ ಸನ್ನಿವೇಶ ಎದುರಾದಾಗ ನಾವು ಪ್ರತಿಯೊಬ್ಬರೂ ಹನುಮರಾಗಬೇಕು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.