ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಂಪಾದಕೀಯ: ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು

ಸಂಪಾದಕೀಯ: ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು

ಮತದಾರರ ಓಲೈಕೆ, ಬೆಲೆ ಏರಿಕೆಯಿಂದ ಗ್ರಾಹಕರ ರಕ್ಷಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ಎಷ್ಟೋ ಬಾರಿ ರೈತರ ಹಿತಾಸಕ್ತಿಗೆ ಧಕ್ಕೆ ತರುತ್ತವೆ. ರೈತರು ಒಂದು ಸಮುದಾಯವಾಗಿ ಒಟ್ಟಾಗದ ಹೊರತು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಆಗುವುದಿಲ್ಲ.

ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು
ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು

ಈರುಳ್ಳಿ ರಫ್ತಿನ ಮೇಲೆ ಕಳೆದ ಆರು ತಿಂಗಳಿನಿಂದ ಇದ್ದ ಕನಿಷ್ಠ ಬೆಲೆಯ ನಿರ್ಬಂಧವನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ತೆಗೆದುಹಾಕಿದೆ. ಮಹಾರಾಷ್ಟ್ರದ ಈರುಳ್ಳಿ ಉತ್ಪಾದಿಸುವ ಪ್ರದೇಶಗಳಲ್ಲಿ ಮತದಾನ ನಡೆಯುವ ಕೆಲ ದಿನಗಳಿಗೆ ಮೊದಲು ಈ ನಿರ್ಧಾರ ಪ್ರಕಟವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಕೇವಲ ಆರ್ಥಿಕ ವಿದ್ಯಮಾನವಾಗಿಯಷ್ಟೇ ನೋಡದೇ, ರಾಜಕೀಯ ಆಯಾಮದಿಂದಲೂ ನೋಡಲು ಹಲವು ಕಾರಣಗಳನ್ನು ಒದಗಿಸಿದೆ.

ಟ್ರೆಂಡಿಂಗ್​ ಸುದ್ದಿ

ಕೇವಲ ಈರುಳ್ಳಿಗೆ ಮಾತ್ರವಲ್ಲ ಇತರ ಆಹಾರ ಪದಾರ್ಥಗಳ ಮೇಲಿದ್ದ ರಫ್ತು ನಿರ್ಬಂಧವನ್ನೂ ಇದೇ ಸಂದರ್ಭದಲ್ಲಿ ಹಿಂಪಡೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಕಂಡಿದೆ. ಹಣದುಬ್ಬರ ವಿಚಾರದಲ್ಲಿ ಆರ್‌ಬಿಐನ ಉದ್ದೇಶಿತ ಗುರಿ ತಲುಪಲು ಸಾಧ್ಯವಾಗದಿರಲು ಆಹಾರ ಪದಾರ್ಥಗಳ ಬೆಲೆ ಏರಿಕೆಯೂ ಒಂದು ಕಾರಣ ಎನಿಸಿದೆ. ಭಾರತದ ಆಹಾರದ ಬೆಲೆಗಳನ್ನು ಬೇಡಿಕೆ ಮತ್ತು ಪೂರೈಕೆ ಸೂತ್ರಗಳು ಮಾತ್ರವೇ ನಿಯಂತ್ರಿಸುವುದಿಲ್ಲ. ಹವಾಮಾನವೂ ಈ ವಿಚಾರದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಹಣದುಬ್ಬರದ ಒತ್ತಡವನ್ನು ನಿರ್ವಹಿಸಲು ಸರ್ಕಾರವು ಆಗಾಗ ಆಹಾರ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುತ್ತದೆ.

ಕೃಷಿ ಉತ್ಪನ್ನಗಳ ರಫ್ತು ನಿರ್ಬಂಧಿಸುವುದು, ರಫ್ತು ಮಾಡುವ ಆಹಾರ ಪದಾರ್ಥಗಳಿಗೆ ಕನಿಷ್ಠ ಬೆಲೆ ನಿಗದಿಪಡಿಸುವುದು, ರಫ್ತು ನಿರ್ಬಂಧ ಹಿಂಪಡೆಯುವುದು, ನಿರ್ದಿಷ್ಟ ದೇಶಗಳಿಗೆ ಮಾತ್ರವೇ ರಫ್ತು ಮಾಡಲು ಅವಕಾಶ ಕೊಡುವುದು ಸೇರಿದಂತೆ ಹಲವು ರೀತಿಯಲ್ಲಿ ಸರ್ಕಾರವು ಕೃಷಿ ಉತ್ಪನ್ನಗಳ ಬೆಲೆ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತಿರುತ್ತದೆ.

ಆಹಾರ ಮಾರುಕಟ್ಟೆಗಳಲ್ಲಿ ಸರ್ಕಾರದ ಮಧ್ಯಪ್ರವೇಶವು ವಿವೇಕಯುತ ತಂತ್ರ ಎನಿಸುವುದೇ ಎನ್ನುವ ಪ್ರಶ್ನೆಗೆ ಹಲವು ಆಯಾಮಗಳ ಉತ್ತರವಿದೆ. ಮುಕ್ತ ಮಾರುಕಟ್ಟೆ ಇರಬೇಕು ಎನ್ನುವವರು ಸರ್ಕಾರದ ಮಧ್ಯಪ್ರವೇಶವನ್ನು ಟೀಕಿಸುತ್ತಾರೆ. ಆದರೆ ಯಾವುದೇ ಪ್ರಾಯೋಗಿಕ ಸರ್ಕಾರವು ದೇಶೀಯ ಆರ್ಥಿಕತೆಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಇರುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ. ಬಹುಪಾಲು ಭಾರತೀಯರು ಆಹಾರ ಪದಾರ್ಥಗಳನ್ನು ಖರೀದಿಸಿಯೇ ತಿನ್ನುವವರು. ಬೆಳೆಗಾರರು ಮತ್ತು ಮಾರಾಟಗಾರರಿಗಿಂತಲೂ ಖರೀದಿಸುವವರ ಸಂಖ್ಯೆ ಹೆಚ್ಚು.

ಸರ್ಕಾರ ಮತ್ತು ಮಾರುಕಟ್ಟೆಯ ಈ ಅಡಕತ್ತರಿಯಲ್ಲಿ ಸಿಲುಕಿರುವವರು ರೈತರು. ಅವರನ್ನು ಸರ್ಕಾರ ಒಂದು ತುದಿಯಲ್ಲಿ ಎಳೆದರೆ, ಗ್ರಾಹಕರು ಮತ್ತೊಂದು ತುದಿಯಲ್ಲಿ ಎಳೆಯುತ್ತಾರೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ, ಸರ್ಕಾರವು ಅವರ ರಕ್ಷಣೆಗೆ ಬರುವುದಿಲ್ಲ. ಬೆಲೆ ಹೆಚ್ಚಾದಾಗ ಸಾರ್ವಜನಿಕರ ಒತ್ತಡಕ್ಕೆ ಮಣಿಯುವ ಅಥವಾ ಜನಾಭಿಪ್ರಾಯಕ್ಕೆ ಹೆದರುವ ಸರ್ಕಾರವು ನಿರ್ಬಂಧದ ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾಗುತ್ತದೆ. ಆಗಲೂ ಅವರಿಗೆ ಮಾರುಕಟ್ಟೆಯ ಲಾಭ ಸಿಗುವುದಿಲ್ಲ. ಮಾರುಕಟ್ಟೆಯ ಶಕ್ತಿ, ಸರ್ಕಾರದ ಭೀತಿಯ ಜೊತೆಗೆ ಇದೀಗ ಹವಾಮಾನ ವೈಪರೀತ್ಯವೂ ರೈತರನ್ನು ಕಾಡುತ್ತಿದೆ. ಈ ಮೂರೂ ಪ್ರಬಲ ಅಂಶಗಳು ರೈತರ ಹಿತಾಸಕ್ತಿಗೆ ವ್ಯತಿರಿಕ್ತವಾಗಿಯೇ ಇವೆ.

ರೈತರ ಹಿತಕ್ಕೆ ಮಾರಕವಾಗಿರುವ ಈ ಮೂರೂ ಅಂಶಗಳನ್ನು ಬದಲಿಸಲು ಸಾಧ್ಯವಿಲ್ಲವೇ? ಈ ಪ್ರಶ್ನೆಗೆ ಉತ್ತರ ಸಿಗಲು ರೈತರು ಒಂದು ಸಮುದಾಯವಾಗಿ ಒಗ್ಗೂಡಬಲ್ಲರೇ ಎನ್ನುವ ಮತ್ತೊಂದು ಪೂರಕ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ವಿವಿಧ ಜಾತಿ, ಸಿದ್ಧಾಂತಗಳಲ್ಲಿ ಹಂಚಿಹೋಗಿರುವ ರೈತರು ತಮಗೇನು ಹಿತ ಎನ್ನುವುದನ್ನು ಕಂಡುಕೊಳ್ಳಲು, ಅದನ್ನು ಸಾಧಿಸಿಕೊಳ್ಳಲು ಒಂದು ವರ್ಗವಾಗಿ ಒಗ್ಗೂಡಬೇಕು.

ಬೆಳೆ ಪದ್ಧತಿಗಳು, ಬೆಳೆ ಪ್ರದೇಶಗಳನ್ನು ಸಮರ್ಪಕವಾಗಿ ಗುರುತಿಸಬೇಕು. ಸುಧಾರಣೆಗೆ ಮುಕ್ತವಾಗಿ ತೆರದುಕೊಳ್ಳಬೇಕು. ಸರ್ಕಾರಗಳು ನ್ಯಾಯಯುತವಾಗಿ ವರ್ತಿಸುವ ಮೂಲಕ ಆಹಾರ ಬಳಕೆದಾರರು ಅಂದರೆ ಗ್ರಾಹಕರ ಹಿತಾಸಕ್ತಿಯ ಜೊತೆಗೆ ಆಹಾರ ಉತ್ಪಾದಕರು ರೈತರ ಹಿತಾಸಕ್ತಿಯ ಬಗ್ಗೆಯೂ ಯೋಚಿಸುವಂತೆ ಒತ್ತಡ ಹೇರಬೇಕು. ಸರ್ಕಾರಗಳು ಏಕೆ ರೈತರ ಅಗತ್ಯಗಳನ್ನು ನಿರ್ಲಕ್ಷಿಸುತ್ತಿವೆ ಎನ್ನುವ ಪ್ರಶ್ನೆಯನ್ನು ಮೊದಲು ರೈತ ಸಂಘಟನೆಗಳು ಕೇಳಿಕೊಳ್ಳಬೇಕು.

ಯಾವುದೇ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ರೈತರ ಹಿತವನ್ನು ಸಸಾರ ದೃಷ್ಟಿಯಿಂದ ಕಾಣುತ್ತಿವೆ ಎಂದರೆ ಒಂದು ಸಮುದಾಯವಾಗಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ ಎಂದೇ ಅರ್ಥ. ರೈತರ ಹಿತ ಕಾಪಾಡುವ ದೃಷ್ಟಿಯಿಂದ, ರೈತರಿಗೆ ಮಾರುಕಟ್ಟೆಯ ಲಾಭ ವರ್ಗಾಯಿಸುವ ಉದ್ದೇಶದಿಂದ ಒಂದಿಷ್ಟು ಆಹಾರ ಹಣದುಬ್ಬರವನ್ನು ಸಹಿಸಿಕೊಳ್ಳಲು ಸರ್ಕಾರಗಳು ಸಿದ್ಧವಾಗಿವೆಯೇ? ಈ ಚುನಾವಣೆಯಲ್ಲಿ ಪ್ರಸ್ತಾಪವಾಗಬೇಕಿದ್ದ ಪ್ರಶ್ನೆ ಇದು. ಆದರೆ ಕೇಳಲು ಅಹಿತಕರ, ಕಟು ಎನಿಸುವ ಈ ಪ್ರಶ್ನೆಗೆ ಮುಖಾಮುಖಿಯಾಗಲು ಯಾವ ರಾಜಕೀಯ ಪಕ್ಷವೂ ಮನಸ್ಸು ಮಾಡಲಿಲ್ಲ.

IPL_Entry_Point