Ganga Vilas Cruise: ಗಂಗಾ ವಿಲಾಸ್ ಕ್ರೂಸ್ ಹಡಗು ಬಿಹಾರದ ನದಿಯಲ್ಲಿ ಸಿಲುಕಿಕೊಂಡಿತ್ತೇ? ಐಡಬ್ಲ್ಯುಎಐ ಮುಖ್ಯಸ್ಥರು ನೀಡಿದ ಸ್ಪಷ್ಟನೆಯೇನು?
ಗಂಗಾ ವಿಲಾಸ್ ಕ್ರೂಸ್ ಬಿಹಾರದ ಛಪ್ರಾದಲ್ಲಿ ನದಿಯಲ್ಲಿ ಸಿಲುಕಿಕೊಂಡಿರುವ ಸುದ್ದಿಯು ಸತ್ಯಕ್ಕೆ ದೂರವಾದದ್ದು ಎಂದು ಇನ್‌ಲ್ಯಾಂಡ್ ವಾಟರ್‌ವೇಸ್ ಅಥಾರಿಟಿ ಆಫ್ ಇಂಡಿಯಾ (ಐಡಬ್ಲ್ಯುಎಐ ) ಸ್ಪಷ್ಟನೆ ನೀಡಿದೆ.
ಬಿಹಾರ: ವಿಶ್ವದ ಅತಿ ಉದ್ದದ ನದಿ ಪ್ರಯಾಣದ ಹಡಗೆಂದು ಖ್ಯಾತಿ ಪಡೆದು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಗಂಗಾ ವಿಲಾಸ್ ಕ್ರೂಸ್ ಬಿಹಾರದ ಛಪ್ರಾದಲ್ಲಿ ನದಿಯಲ್ಲಿ ಸಿಲುಕಿಕೊಂಡಿರುವ ಸುದ್ದಿಯು ಸತ್ಯಕ್ಕೆ ದೂರವಾದದ್ದು ಎಂದು ಇನ್‌ಲ್ಯಾಂಡ್ ವಾಟರ್‌ವೇಸ್ ಅಥಾರಿಟಿ ಆಫ್ ಇಂಡಿಯಾ (ಐಡಬ್ಲ್ಯುಎಐ ) ಸ್ಪಷ್ಟನೆ ನೀಡಿದೆ. ಈ ಹಡಗು ಎಲ್ಲೂ ಸಿಲುಕಿಕೊಂಡಿಲ್ಲ, ನಿಗದಿಯಂತೆ ಪಟನಾ ತಲುಪಿದೆ ಎಂದು ಐಡಬ್ಲ್ಯುಎಐ ತಿಳಿಸಿದೆ.
"ನಿಗದಿಯಂತೆ ಎಂವಿ ಗಂಗಾ ವಿಲಾಸ್ ಪ್ರಯಾಣ ಬೆಳೆಸಲಿದೆʼʼ ಎಂದು ಐಡಬ್ಲ್ಯುಎಐ ಚೇರ್ಮನ್ ಸಂಜಯ್ ಬಂಡೋಪಾಧ್ಯಾಯ ಹೇಳಿದ್ದಾರೆ. "ನಿಗದಿಯಂತೆ ಗಂಗಾ ವಿಲಾಸ್ ಪಟನಾ ತಲುಪಿದೆ. ಛಪ್ರಾದಲ್ಲಿ ಗಂಗಾ ವಿಲಾಸ್ ಸಿಲುಕಿಕೊಂಡಿದೆ ಎನ್ನುವ ಸುದ್ದಿಗಳು ಸತ್ಯಕ್ಕೆ ದೂರವಾದದ್ದುʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ನನ್ನ ಹೇಳಿಕೆಯನ್ನೂ ತಪ್ಪಾಗಿ ಗ್ರಹಿಸಲಾಗಿದೆʼʼ ಎಂದು ಛಪ್ರಾದ ಸರ್ಕಲ್ ಆಫಿಸರ್ ಸತ್ಯೇಂದ್ರ ಸಿಂಗ್ ಹೇಳಿದ್ದಾರೆ. "ಸ್ಥಳೀಯ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿವೆ. ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆವಹಿಸುವ ಸಲುವಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ದೋಣಿಗಳು ಸ್ಥಳದಲ್ಲಿವೆ ಎಂದು ಹೇಳಿದ್ದೆ. ಅದನ್ನು ಮಾಧ್ಯಮಗಳು ಗಂಗಾ ವಿಲಾಸ್ ನದಿಯಲ್ಲಿ ಸಿಲುಕಿಕೊಂಡಿದೆ ಎಂದು ಬರೆದಿದ್ದವುʼʼ ಎಂದು ಸತ್ಯೇಂದ್ರ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
"ತಾಂತ್ರಿಕವಾಗಿ ಈ ಹಡಗನ್ನು ಇಲ್ಲಿ ದಡಕ್ಕೆ ತರಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲಿ ನದಿ ಆಳವಾಗಿಲ್ಲ. ಇದರಿಂದಾಗಿ ಪ್ರಯಾಣಿಕರು ಇಳಿಯಲು ಸಾಧ್ಯವಿಲ್ಲ. ಗಂಗಾ ವಿಲಾಸದ ಉದ್ದೇಶವೇ ವಿವಿಧ ತಾಣಗಳನ್ನು ವೀಕ್ಷಿಸುವುದು. ಪ್ರವಾಸಿಗರಿಗೆ ಆ ಪ್ರದೇಶವನ್ನು ತೋರಿಸುವ ಸಲುವಾಗಿ ಛಪ್ರಾದಲ್ಲಿ ಕ್ರೂಸ್ ಹಡಗು ನಿಲುಗಡೆ ಮಾಡಲಾಗಿತ್ತುʼʼ ಎಂದು ಎಕ್ಸೊಟಿಕ್ ಹೆರಿಟೇಜ್ ಗ್ರೂಪ್ ಅಧ್ಯಕ್ಷರಾದ ರಾಜ್ ಸಿಂಗ್ ಹೇಳಿಕೆಯನ್ನು ಸುದ್ದಿಸಂಸ್ಥೆ ಎಎನ್‌ಐ ಪ್ರಕಟಿಸಿದೆ.
ಕೆಲವು ದಿನಗಳ ಹಿಂದೆ ಅಂದರೆ ಜನವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಪ್ರಯಾಣದ ಹಡಗು ಎಂವಿ ಗಂಗಾ ವಿಲಾಸ್‌ಗೆ ಚಾಲನೆ ನೀಡಿದ್ದರು. ಶ್ವದ ದೀರ್ಘ ನದಿ ಪ್ರಯಾಣ ಕ್ರೂಸ್ ಹಡಗೆಂದು ಖ್ಯಾತಿ ಪಡೆದಿರುವ ಗಂಗಾ ವಿಲಾಸ್‌ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆಗಳಲ್ಲಿ ಸುಮಾರು 3,200 ಕಿ.ಮೀ. ಪ್ರಯಾಣ ಬೆಳೆಸುವ ಎಂವಿ ಗಂಗಾ ವಿಲಾಸ್ ದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜತೆಗೆ ಹೊಸ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಒಟ್ಟು 32 ಸ್ವಿಡ್ಜರ್‌ಲೆಂಡ್‌ನ ಪ್ರಯಾಣಿಕರು ಈ ಕ್ರೂಸ್ ಹಡಗಿನಲ್ಲಿ ಯಾನ ಬೆಳೆಸಿದ್ದಾರೆ. ಈ ಕ್ರೂಸ್ ಹಡಗು ಸುದೀರ್ಘವಾದ 50 ದಿನಗಳ ಪ್ರಯಾಣ ಕೈಗೊಳ್ಳಲಿದೆ. ಯಾನದ ಸಂದರ್ಭದಲ್ಲಿ ಈ ಕ್ರೂಸ್ ಹಲವು ಹೆರಿಟೇಜ್ ತಾಣಗಳಲ್ಲಿ ನಿಂತು ಪ್ರಯಾಣ ಮುಂದುವರೆಸಲಿದೆ.
ವಾರಣಾಸಿಯಿಂದ ತನ್ನ ಪ್ರಯಾಣ ಆರಂಭಿಸಲಿದೆ. ಘಾಜಿಪುರ, ಬುಕ್ಸಾರ್ ಮತ್ತು ಪಾಟ್ನಾ ಮೂಲಕ ಕೋಲ್ಕತ್ತಾಕ್ಕೆ ಪ್ರಯಾಣ ಬೆಳೆಸಲಿದೆ. ಒಂದು ರಾತ್ರಿ ಬಾಂಗ್ಲಾದೇಶದ ನದಿಯಲ್ಲಿ ಉಳಿದು ಬಳಿಕ ಗುವಾಹಟಿ ಮೂಲಕ ದಿಬ್ರುಗಡ ತಲುಪಲಿದೆ.
ಸುಂದರ್ ಬನ, ಕಾಝಿರಂಗ ನ್ಯಾಷನಲ್ ಪಾರ್ಕ್ ಮುಂತಾದ ಕಡೆ ನಿಂತು ಪ್ರಯಾಣ ಬೆಳೆಸಲಿದೆ. ಹಡಗು ಜನಪ್ರಿಯ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಸುಂದರಬನ್ಸ್ ಡೆಲ್ಟಾ ಸೇರಿದಂತೆ ಇನ್ನು ಅನೇಕ ರಾಷ್ಟ್ರೀಯ ಉದ್ಯಾನವನಗಳು ಮತ್ತು ಶ್ರೀಮಂತ ಜೀವ ವೈವಿಧ್ಯತೆಗಳನ್ನು ಒಳಗೊಂಡ ಅಭಯಾರಣ್ಯಗಳ ಮೂಲಕ ಹಾದು ಹೋಗುತ್ತದೆ.
ವಿಭಾಗ