Modi US Tour: ಅಮೆರಿಕಾದಲ್ಲಿ ಮೋದಿ ಹವಾ: ಭಾರತೀಯರೊಂದಿಗೆ ಜೂನ್‌ 23ರಂದು ವಾಷಿಂಗ್ಟನ್‌ನಲ್ಲಿ ಸಮಾವೇಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi Us Tour: ಅಮೆರಿಕಾದಲ್ಲಿ ಮೋದಿ ಹವಾ: ಭಾರತೀಯರೊಂದಿಗೆ ಜೂನ್‌ 23ರಂದು ವಾಷಿಂಗ್ಟನ್‌ನಲ್ಲಿ ಸಮಾವೇಶ

Modi US Tour: ಅಮೆರಿಕಾದಲ್ಲಿ ಮೋದಿ ಹವಾ: ಭಾರತೀಯರೊಂದಿಗೆ ಜೂನ್‌ 23ರಂದು ವಾಷಿಂಗ್ಟನ್‌ನಲ್ಲಿ ಸಮಾವೇಶ

ಅಮೆರಿಕಾದ ಪ್ರಮುಖ ನಗರಗಳೂ ಸೇರಿದಂತೆ ಇಡೀ ಉಪಖಂಡದಲ್ಲಿಒಟ್ಟು 4.5 ಮಿಲಿಯನ್‌ ಭಾರತೀಯರು ನೆಲೆಸಿದ್ದಾರೆ. ಈ ಬಾರಿ ವಾಷಿಂಗ್ಟನ್‌ನಲ್ಲಿ ನರೇಂದ್ರ ಮೋದಿ ಅವರು ಭಾರತೀಯರನ್ನು ಉದ್ದೇಶಿಸಿ ಮಾತನಾಡುವರು. 2014ರಲ್ಲಿ ಚಿಕಾಗೋ ಹಾಗೂ 2019ರಲ್ಲಿ ಹ್ಯೂಸ್ಟನ್‌ನಲ್ಲಿ ಮೋದಿ ಅವರ ಸಮಾವೇಶವನ್ನು ಆಯೋಜಿಸಿದಾಗಲೂ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು

ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ವಾಷಿಂಗ್ಟನ್‌ನಲ್ಲಿ ನಿಗದಿಯಾಗಿದೆ.
ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ವಾಷಿಂಗ್ಟನ್‌ನಲ್ಲಿ ನಿಗದಿಯಾಗಿದೆ.

ವಾಷಿಂಗ್ಟನ್‌: ಮೂರು ದಿನ ಅಮೆರಿಕಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಜೂನ್‌ 23ರಂದು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಾಷಿಂಗ್ಟನ್‌ನಲ್ಲಿರುವ ಅಂತರಾಷ್ಟ್ರೀಯ ವಹಿವಾಟು ಕೇಂದ್ರದ ರೊನಾಲ್ಡ್ ರೇಗನ್‌ ಕಟ್ಟಡದಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಇಂಡಿಯನ್‌ ಕಮ್ಯುನಿಟಿ ಫೌಂಡೇಷನ್‌( ಯುಎಸ್‌ಐಸಿಎಫ್‌) ಆಯೋಜಿಸಿರುವ ಸಮಾವೇಶದಲ್ಲಿಒಂದು ಸಾವಿರ ಆಹ್ವಾನಿತ ಭಾರತೀಯರ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಒಂದು ಸಾವಿರ ಆಹ್ವಾನಿತರಿಗೆ ಸೀಮಿತವಾಗಿ ಆಹ್ವಾನಪತ್ರ ನೀಡಲಾಗಿದೆ. ಅವರು ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಮೋದಿ ಅವರು ಅಂದು ಸಂಜೆ 7ರಿಂದ 9 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಭಾರತದ ಪ್ರಗತಿಯ ಕಥೆ ಕುರಿತು ಮಾತನಾಡುವರು.

ಅಂದು ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಗಾಯಕಿ ಮೇರಿ ಮಿಲ್‌ಬೆನ್‌ ಅವರು ಮೋದಿ ಅವರಿಗೋಸ್ಕರ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮೋದಿ ಕಾರ್ಯಕ್ರಮ ಸಂಘಟನೆ ನೇತೃತ್ವ ವಹಿಸಿರುವ ಭಾರತೀಯ ಮೂಲದ ಡಾ.ಭರತ್‌ ಬರೈ ಅವರು, ಅಮೆರಿಕಾದಲ್ಲೂ ಮೋದಿ ಅತ್ಯಂತ ಜನಪ್ರಿಯ ನಾಯಕ. ಭಾರತ ಮಾತ್ರವಲ್ಲದೇ ಜಗತ್ತಿನ ಹಲವು ದೇಶಗಳು ಮೋದಿ ಅವರ ನಾಯಕತ್ವ ಮೆಚ್ಚಿಕೊಂಡಿವೆ. ಅವರ ಕಡಿಮೆ ಸಮಯದ ಕಾರ್ಯಕ್ರಮಗಳ ನಡುವೆಯು ಭಾರತೀಯರನ್ನು ಉದ್ದೇಶಿಸಿ ಮಾತನಾಡಲು ಮೋದಿ ಅವರು ಒಪ್ಪಿಕೊಂಡಿದ್ದಾರೆ. ಇದು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರಲ್ಲಿ ಉತ್ಸಾಹ ತಂದಿದೆ ಎಂದು ಹೇಳಿದ್ದಾರೆ.

ಅಮೆರಿಕಾದ ಪ್ರಮುಖ ನಗರಗಳೂ ಸೇರಿದಂತೆ ಇಡೀ ಉಪಖಂಡದಲ್ಲಿ ಒಟ್ಟು 4.5 ಮಿಲಿಯನ್‌ ಭಾರತೀಯರು ನೆಲೆಸಿದ್ದಾರೆ. ಹಿಂದೆಲ್ಲಾ ಬೇರೆ ನಗರಗಳಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಿದ್ದು, ಈ ಬಾರಿ ವಾಷಿಂಗ್ಟನ್‌ನಲ್ಲಿ ಕಾಯ್ರಕ್ರಮವಿದೆ. ಇದೇ ಸಂಘಟನೆಯು 2014ರಲ್ಲಿ ಚಿಕಾಗೋ ಹಾಗೂ 2019ರಲ್ಲಿ ಹ್ಯೂಸ್ಟನ್‌ನಲ್ಲಿ ಮೋದಿ ಅವರ ಸಮಾವೇಶವನ್ನು ಆಯೋಜಿಸಿತ್ತು. ಆಗಲೂ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಜೂನ್‌ 21ರಿಂದ ನಾಲ್ಕು ದಿನಗಳ ಪ್ರವಾಸವನ್ನು ಅಮೆರಿಕಾದಲ್ಲಿ ಕೈಗೊಂಡಿದ್ದಾರೆ. ಜೂನ್‌ 21ರಂದು ನ್ಯೂಯಾರ್ಕ್‌ನ ವಿಶ್ವ ಸಂಸ್ಥೆ ಆವರಣದಲ್ಲಿ ಯೋಗ ದಿನದಲ್ಲಿ ಪಾಲ್ಗೊಳ್ಳುವರು. ಜೂನ್‌ 22ರಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್‌ ಪತ್ನಿ ಆಯೋಜಿಸಿರುವ ಆತಿಥ್ಯ ಕಾರ್ಯಕ್ರಮದಲ್ಲಿ ಭಾಗಿಯಾವರು. ಜತೆಗೆ ಅಮೆರಿಕಾದ ಜಂಟಿ ಅಧಿವೇಶನದಲ್ಲಿ ಅಮೆರಿಕಾದ ಪ್ರತಿನಿಧಿಗಳನ್ನು ಉದ್ದೇಶಿಸಿ ಮೋದಿ ಮಾತನಾಡುವರು. ಅಂದು ಅಮೆರಿಕಾ ಅಧ್ಯಕ್ಷರು, ಪ್ರಮುಖರೊಂದಿಗೆ ಮಾತುಕತೆ ನಡೆಸಿ ಹಲವು ಒಪ್ಪಂದಗಳಿಗೂ ಸಹಿ ಹಾಕುವರು. ವಿಶೇಷವಾಗಿ ರಕ್ಷಣಾ ವಲಯದ ತಂತ್ರಜ್ಞಾನ ಹಾಗೂ ಉಪಕರಣ ಖರೀದಿ ವಿಚಾರವಾಗಿ ಮಹತ್ವದ ಘೋಷಣೆಗಳನ್ನು ಮೋದಿ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿರಿ..

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.