ಕನ್ನಡ ಸುದ್ದಿ  /  ಕ್ರೀಡೆ  /  Sports Politics: ಅಮಿತ್​ ಶಾ ಮಗ ಮೋದಿಗೆ ಗಿಫ್ಟ್​ ಕೊಟ್ಟ ಎಂದ ಕಾಂಗ್ರೆಸ್​.. ಆಟದಲ್ಲೂ ರಾಜಕೀಯ ಬೇಡ ಎಂದ ಬಿಜೆಪಿ

Sports Politics: ಅಮಿತ್​ ಶಾ ಮಗ ಮೋದಿಗೆ ಗಿಫ್ಟ್​ ಕೊಟ್ಟ ಎಂದ ಕಾಂಗ್ರೆಸ್​.. ಆಟದಲ್ಲೂ ರಾಜಕೀಯ ಬೇಡ ಎಂದ ಬಿಜೆಪಿ

Sports Politics: ಮೋದಿಗೆ ಜಯ್​​ ಶಾ ಕಾಣಿಕೆ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಕಾಂಗ್ರೆಸ್​​, ಅಮಿತ್​​ ಶಾ (Amit Shah) ಮಗ ಮೋದಿಗೆ ಉಡುಗೊರೆ ನೀಡಿದ್ದಾರೆ ಎಂದು ಬಿಂಬಿಸಿದೆ. ಆದರೆ ಇದಕ್ಕೆ ಬಿಜೆಪಿ (BJP) ತಿರುಗೇಟು ನೀಡಿದೆ. ಅವರು ಅಮಿತ್​ ಶಾ ಮಗನಲ್ಲ, ಬಿಸಿಸಿಐ ಕಾರ್ಯದರ್ಶಿ ಎಂದು ಉತ್ತರ ಕೊಟ್ಟಿದೆ.

ಮೋದಿಗೆ ಸ್ಮರಣಿಕೆ ನೀಡಿದ ಜಯ್​ ಶಾ
ಮೋದಿಗೆ ಸ್ಮರಣಿಕೆ ನೀಡಿದ ಜಯ್​ ಶಾ (Congress/Twitter)

ಅಹ್ಮದಾಬಾದ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India - Australia) ನಡುವೆ ನಡೆದ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಉಭಯ ದೇಶಗಳ ಪ್ರಧಾನಿಗಳು ಸ್ಟೇಡಿಯಂಗೆ ಭೇಟಿ ನೀಡಿದ್ದು ಗೊತ್ತೇ ಇದೆ. ಭಾರತದ ಪ್ರಧಾನಿ ಮೋದಿ (Narendra Modi) ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಆಲ್ಬನೀಸ್​​ (Anthony Albanese) ಪ್ರತಿಷ್ಠಿತ ಪಂದ್ಯವನ್ನು ವೀಕ್ಷಿಸಿದರು. ಉಭಯ ಪ್ರಧಾನಿಗಳು, ರಾಷ್ಟ್ರಗೀತೆಗೂ ಮುನ್ನ ಆಟಗಾರರೊಂದಿಗೆ ಹಸ್ತಲಾಘನ ಮಾಡಿ ಗಮನ ಸೆಳೆದರು.

ಟ್ರೆಂಡಿಂಗ್​ ಸುದ್ದಿ

30 ನಿಮಿಷಗಳ ಕಾಲ ಪಂದ್ಯ ವೀಕ್ಷಿಸಿದ ಪ್ರಧಾನಿಗಳು, ನಂತರ ಕಾರ್ಯ ನಿಮಿತ್ತ ಮತ್ತೊಂದು ಕಡೆ ಪ್ರಯಾಣ ಬೆಳೆಸಿದರು. ಆದರೆ ಉಭಯ ದೇಶಗಳ ನಡುವಿನ ಸರಣಿ ಆರಂಭವಾಗಿ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉಭಯ ಪ್ರಧಾನಿಗಳಿಗೆ ಬಿಸಿಸಿಐ ಸ್ಮರಣಿಕೆಗಳನ್ನು ನೀಡಿತು. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಅವರು ಆಸೀಸ್ ಪ್ರಧಾನಿಗೆ ಸ್ಮರಣಿಕೆ ನೀಡಿದರೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಮೋದಿಗೆ ಅವರ ಫೋಟೋವನ್ನೇ ಕಾಣಿಕೆಯಾಗಿ ನೀಡಿದರು.

ಆದರೆ, ಇದೇ ಫೋಟೋವನ್ನು ಕಾಂಗ್ರೆಸ್​​ (Congress) ಟೀಕಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಮೋದಿಗೆ ಜಯ್​​ ಶಾ ಕಾಣಿಕೆ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಕಾಂಗ್ರೆಸ್​​, ಅಮಿತ್​​ ಶಾ (Amit Shah) ಮಗ ಮೋದಿಗೆ ಉಡುಗೊರೆ ನೀಡಿದ್ದಾರೆ ಎಂದು ಬಿಂಬಿಸಿದೆ. ಆದರೆ ಇದಕ್ಕೆ ಬಿಜೆಪಿ (BJP) ತಿರುಗೇಟು ನೀಡಿದೆ. ಅವರು ಅಮಿತ್​ ಶಾ ಮಗನಲ್ಲ, ಬಿಸಿಸಿಐ ಕಾರ್ಯದರ್ಶಿ ಎಂದು ಉತ್ತರ ಕೊಟ್ಟಿದೆ.

ಮೋದಿಗೆ ಶಾ ಉಡುಗೊರೆ ನೀಡಿರುವ ಫೋಟೋವನ್ನು ಟ್ವಿಟರ್​​​ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, 'ನರೇಂದ್ರ ಮೋದಿ ಅವರ ಸ್ನೇಹಿತನ (ಅಮಿತ್ ಶಾ) ಮಗ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಮೋದಿ ಅವರ ಫೋಟೋವನ್ನು ನರೇಂದ್ರ ಮೋದಿಗೆ ಪ್ರಸ್ತುತಪಡಿಸುತ್ತಿದ್ದಾರೆ' ಎಂದು ಬರೆದುಕೊಂಡಿದೆ.

ಕಾಂಗ್ರೆಸ್‌ನ ಈ ಟ್ವೀಟ್‌ಗೆ ಬಿಜೆಪಿ ತೀವ್ರ ತಿರುಗೇಟು ನೀಡಿದೆ. ಆಟದಲ್ಲಿಯೂ ರಾಜಕೀಯ ನೋಡುವ ಅಭ್ಯಾಸ ಕಾಂಗ್ರೆಸ್​ ಪಕ್ಷದ್ದು. ಜಯ್ ಶಾ ಅವರಿಗೆ ಸ್ಮರಣಿಕೆ ನೀಡಿದ್ದು, ಅಮಿತ್ ಶಾ ಅವರ ಮಗನಲ್ಲ, ಬದಲಿಗೆ ಬಿಸಿಸಿಐ ಕಾರ್ಯದರ್ಶಿ ಎಂಬುದನ್ನು ತಿಳಿಯಬೇಕು. ಆಟದಲ್ಲಿ ಕೀಳುಮಟ್ಟದ ರಾಜಕೀಯ ಬಿಡಿ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

ಕೇಂದ್ರ ಸರ್ಕಾರದ ಮೂಲಗಳು ಕಾಂಗ್ರೆಸ್​​ ಪಕ್ಷದ ಈ ಹೇಳಿಕೆಯನ್ನು 'ಅಸಂಬದ್ಧ' ಎಂದು ಬಣ್ಣಿಸಿದೆ. ಭಾರತ - ಆಸ್ಟ್ರೇಲಿಯಾ ಸರಣಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ 75 ವರ್ಷಗಳಲ್ಲಿ ಉಭಯ ದೇಶಗಳನ್ನು ಪ್ರತಿನಿಧಿಸುವ ಆಟಗಾರರ ಫೋಟೋಗಳನ್ನು ಕೊಲಾಜ್ ಮಾಡಿರುವ ವಿಶೇಷ ಫೋಟೋವನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿರುವುದು ವಿಶೇಷವಾಗಿದೆ.

ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 480 ರನ್‌ಗಳ ಬೃಹತ್ ಸ್ಕೋರ್ ಗಳಿಸಿದೆ. ಉಸ್ಮಾನ್ ಖವಾಜಾ (180), ಕ್ಯಾಮರೂನ್ ಗ್ರೀನ್ (114) ಶತಕ ಸಿಡಿಸಿ ಮಿಂಚಿದರು. ಟೇಲೆಂಡರ್​​ ಬ್ಯಾಟ್ಸ್​​ಮನ್​​ಗಳಾದ ನಾಥನ್ ಲಿಯಾನ್ (34) ಮತ್ತು ಟಾಡ್ ಮರ್ಫಿ (41) ಕೂಡ ಭಾರತದ ಬೌಲರ್​​ಗಳನ್ನು ಕಂಗಾಲಾಗಿಸುವ ರೀತಿಯಲ್ಲಿ ಆಡಿದರು. ಸದ್ಯ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ, 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದ್ದು, ಇಂದು ಬೃಹತ್​ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದೆ.