MCC: ಫ್ರಾಂಚೈಸಿಗಳ ವ್ಯಾಮೋಹದಿಂದ ವಿನಾಶದತ್ತ ಟೆಸ್ಟ್ ಕ್ರಿಕೆಟ್, ಆದ್ರೆ, ‘IPL ಒಂದೇ’..!
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾನೂನು ರೂಪಿಸುವ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹೊಡಿಬಡಿ ಟಿ20 ಲೀಗ್ಗಳ ಕ್ರಿಕೆಟ್ ಕ್ರೇಜ್‌ನಲ್ಲಿ ಸಿಲುಕಿಕೊಳ್ಳಬೇಡಿ ಮತ್ತು ಕ್ರಿಕೆಟ್‌ಗೆ ಜೀವಾಳವಾಗಿರುವ ಟೆಸ್ಟ್ ಆಟದ ನಿರ್ಲಕ್ಷ್ಯ ಬೇಡ ಎಂದು ಐಸಿಸಿಗೆ ಮನವಿ ಮಾಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾನೂನು ರೂಪಿಸುವ ಹಾಗೂ ಕ್ರಿಕೆಟ್ ಆಡಳಿತ ಮಂಡಳಿಯಾದ ಮೆರಿಲ್‌ಬೋರ್ನ್ ಕ್ರಿಕೆಟ್ ಕ್ಲಬ್ (Marylebone Cricket Club) ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಫ್ರಾಂಚೈಸಿ ಲೀಗ್ಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ವಿವರಿಸಿದೆ. ಕ್ರಿಕೆಟ್‌ಗೆ ಜೀವಾಳವಾಗಿರುವ ಟೆಸ್ಟ್ ನಶಿಸುತ್ತಿರುವ ಕುರಿತೂ ಆತಂಕ ವ್ಯಕ್ತಪಡಿಸಿದೆ.
ಹಂತಹಂತವಾಗಿ ನಶಿಸುತ್ತಿದೆ ಟೆಸ್ಟ್ ಕ್ರಿಕೆಟ್.!
ಟೆಸ್ಟ್ ಕ್ರಿಕೆಟ್ ಎಂಬುದು ಕ್ರಿಕೆಟ್ನ ಹೃದಯ ಇದ್ದಂತೆ. ಅಂತಹ ಆಟ, ಹಂತ ಹಂತವಾಗಿ ವಿನಾಶದತ್ತ ಸಾಗುತ್ತಿದೆ. ಆಟಗಾರರು ಕೂಡ ಟೆಸ್ಟ್ ಕ್ರಿಕೆಟ್‌ಗೆ ಗಮನ ಹರಿಸುತ್ತಿಲ್ಲ. ಟೆಸ್ಟ್ ಕ್ರಿಕೆಟ್ ಮೇಲೆ ಈ ಮೊದಲಿದ್ದ ವ್ಯಾಮೋಹ ದಿನೆ ದಿನೇ ಕುಂಠಿತಗೊಳ್ಳುತ್ತಿದೆ. ಜನರ ದಿಕ್ಕೂ ಬದಲಾಗುತ್ತಿದೆ. ಇದಕ್ಕೆಲ್ಲಾ ಕಾರಣ, ಟಿ20 ಫ್ರಾಂಚೈಸಿ ಲೀಗ್ಗಳ ಸೃಷ್ಟಿಯಿಂದ.! ಪ್ರತಿಯೊಂದು ದೇಶಗಳಲ್ಲೂ ಅಣಬೆಗಳಂತೆ ತಲೆ ಎತ್ತಿರುವ ಟಿ20 ಫ್ರಾಂಚೈಸಿ ಲೀಗ್ಗಳ ಮೇಲಿನ ವ್ಯಾಮೋಹದಿಂದ ಟೆಸ್ಟ್ ಕ್ರಿಕೆಟ್ ವಿನಾಶದಂಚಿಗೆ ಬಂದು ನಿಂತಿದೆ.
ಇದೇ ಕಾರಣಕ್ಕೆ ಮೆರಿಲ್‌ಬೋರ್ನ್ ಕ್ರಿಕೆಟ್ ಕ್ಲಬ್ (MCC) ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಲು ಕಾರಣವಾಗಿದೆ. ದೀರ್ಘ ಸ್ವರೂಪದ ಟೆಸ್ಟ್ ಅನ್ನು ಸಂರಕ್ಷಿಸುವ, ಕಾಪಾಡುವ ಸಲುವಾಗಿ ಚುಟುಕು ಫಾರ್ಮೆಟ್ ಟಿ20 ಲೀಗ್ಗಳಿಗೆ ಕಡಿವಾಣ ಹಾಕುವ ಅಗತ್ಯ ಇದೆ. ಅದಕ್ಕಾಗಿ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ಗೂ ಮನವಿ ಮಾಡಿದೆ.
ಫ್ರಾಂಚೈಸಿ ಲೀಗ್ಗಳೇ ಟೆಸ್ಟ್ಗೆ ಮಾರಕ.!
ಕ್ರಿಕೆಟ್ ಆಡುವ ಪ್ರತಿಯೊಂದು ರಾಷ್ಟ್ರದಲ್ಲೂ ಫ್ರಾಂಚೈಸಿ ಲೀಗ್‌ಗಳು ಹುಟ್ಟಿಕೊಳ್ಳುತ್ತಿವೆ. ಅವುಗಳನ್ನು ನಿಯಂತ್ರಿಸುವ ಅಗತ್ಯ ಇದೆ. ಇದು ಮುಂದುವರೆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಅಸ್ತಿತ್ವವೇ ಪ್ರಶ್ನಾರ್ಹವಾಗಲಿದೆ ಎಂದು ಎಂಸಿಸಿ ಹೇಳಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (International Cricket Council) ಮನವಿ ಮಾಡಿದೆ.
ಮೆರಿಲ್‌ಬೋರ್ನ್ ಕ್ರಿಕೆಟ್ ಕ್ಲಬ್ ಸಮಿತಿಯು ಇತ್ತೀಚೆಗೆ ದುಬೈನಲ್ಲಿ ಕೊನೆಗೊಂಡ ಸಭೆಯಲ್ಲಿ ಪ್ರಮುಖ ಚರ್ಚೆಯನ್ನು ನಡೆಸಿತು. ಈ ಚರ್ಚೆಯಲ್ಲಿ ಭಾಗವಹಿಸಿದ್ದ ಸದಸ್ಯರು ಟೆಸ್ಟ್ ಕ್ರಿಕೆಟ್ ಸಂರಕ್ಷಣೆಗೆ ನಡೆಸಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಫ್ರಾಂಚೈಸಿ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಡುವೆ ಸಮತೋಲನ ಇರುವಂತೆ ವೇಳಾಪಟ್ಟಿ ರಚಿಸಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ.
ಯಾರೆಲ್ಲಾ ಸದಸ್ಯರಿದ್ದಾರೆ..?
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲೆಸ್ಟೈರ್ ಕುಕ್, ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ಈ ಸಮಿತಿಯ ಸದಸ್ಯರಾಗಿದ್ದಾರೆ. ಚರ್ಚೆಯ ವೇಳೆ ಮಾತನಾಡಿದ ಗಂಗೂಲಿ, ಯಾರು ಏನೇ ಹೇಳಲಿ, ಟೆಸ್ಟ್ ಕ್ರಿಕೆಟ್ ಇನ್ನೂ ಶ್ರೇಷ್ಠ. ಈ ಮಾದರಿಯಲ್ಲಿ ಶ್ರೇಷ್ಠ ಆಟಗಾರರನ್ನು ಕಾಣಬಹುದು ಎಂದು ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಆಟಗಾರರ ಆಟದ ಕೌಶಲಗಳ ಬೆಳವಣಿಗೆಗೆ ಸಹಾಯ ಆಗುತ್ತದೆ. ಎಲ್ಲಾ ದೇಶಗಳು ಕೂಡ ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಫ್ರಾಂಚೈಸಿ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್‌ಗೆ ದೇಶಗಳು ಸಮಾನ ಆದ್ಯತೆ ನೀಡುತ್ತವೆ ಎಂದು ನಾನು ಭಾವಿಸುತ್ತೇನೆ' ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಟೂರ್ನಿಯನ್ನು ಶ್ಲಾಘಿಸಿದ ಸದಸ್ಯರು
ಅಲ್ಲದೆ, ಚರ್ಚೆಯ ಸಂದರ್ಭದಲ್ಲಿ ಸದಸ್ಯರು ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಶ್ಲಾಘಿಸಿದರು. ವಿಶ್ವದ ವಿವಿಧ ಟಿ20 ಲೀಗ್‌ಗಳು ಅಂತಾರಾಷ್ಟ್ರೀಯ ಪಂದ್ಯಗಳ ಸಂದರ್ಭದಲ್ಲೇ ವೇಳಾಪಟ್ಟಿ ಹೊಂದಿದ್ದರೆ, ಐಪಿಎಲ್ ಮಾತ್ರ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿ, ಸರಣಿಗಳು ಇಲ್ಲದೇ ಇರುವಾಗ ವೇಳಾಪಟ್ಟಿ ಹೊಂದಿರುತ್ತದೆ ಎಂದು ಶ್ಲಾಘಿಸಿದರು.
ಕೆಲವು ದಿನಗಳ ಹಿಂದೆ ಐಸಿಸಿ ಬಿಡುಗಡೆ ಮಾಡಿದ ಫ್ಯೂಚರ್ ಟೂರ್ಸ್ ಪ್ರೋಗ್ರಾಂ (ಎಫ್‌ಟಿಪಿ) ಭಾಗವಾಗಿ ಬಿಡುಗಡೆಯಾದ ವೇಳಾಪಟ್ಟಿಯ ಬಗ್ಗೆ ಎಂಸಿಸಿ ತೃಪ್ತಿ ವ್ಯಕ್ತಪಡಿಸಿದೆ. ಈ ವರ್ಷ ಮತ್ತು ಮುಂದಿನ ನಾಲ್ಕು ವರ್ಷಗಳ ಕಾಲ ಪುರುಷರ ಕ್ರಿಕೆಟ್‌ನಲ್ಲಿ ದ್ವಿಪಕ್ಷೀಯ ಸರಣಿಗಳು, ಐಸಿಸಿ ಟೂರ್ನಿಗಳೊಂದಿಗೆ ಬಿಡುವಿಲ್ಲದ ವೇಳಾಪಟ್ಟಿ ಇದೆ. ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ODI ವಿಶ್ವಕಪ್ ನಡೆಯಲು ನಿರ್ಧರಿಸಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್, ದೇಶೀಯ ಟೂರ್ನಿಗಳಿಗೆ ಮತ್ತು ಟೂರ್ನಿಗಳಿಗೆ ಹೋಲಿಸಿದರೆ IPL ಮಾತ್ರ ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಗಳಿಂದ ದೂರವಿದೆ ಎಂದು ಹೇಳಿದೆ. ಆದರೆ ಐಸಿಸಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.