logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕಾಮೆಂಟರಿ ಬಾಕ್ಸ್​ನಲ್ಲಿ ಕೂತಲ್ಲೇ ಎಬಿ ಡಿವಿಲಿಯರ್ಸ್ ಕಣ್ಣೀರು; ಆರ್​ಸಿಬಿ ಸೋಲಿನ ಬಳಿಕ ನೋವು ಹಂಚಿಕೊಂಡ ದಿಗ್ಗಜ

ಕಾಮೆಂಟರಿ ಬಾಕ್ಸ್​ನಲ್ಲಿ ಕೂತಲ್ಲೇ ಎಬಿ ಡಿವಿಲಿಯರ್ಸ್ ಕಣ್ಣೀರು; ಆರ್​ಸಿಬಿ ಸೋಲಿನ ಬಳಿಕ ನೋವು ಹಂಚಿಕೊಂಡ ದಿಗ್ಗಜ

Prasanna Kumar P N HT Kannada

May 23, 2024 12:42 PM IST

google News

ಕಾಮೆಂಟರಿ ಬಾಕ್ಸ್​ನಲ್ಲಿ ಕೂತಲ್ಲೇ ಎಬಿ ಡಿವಿಲಿಯರ್ಸ್ ಕಣ್ಣೀರು; ಆರ್​ಸಿಬಿ ಸೋಲಿನ ಬಳಿಕ ನೋವು ಹಂಚಿಕೊಂಡ ದಿಗ್ಗಜ

    • AB de Villiers : ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ ಸೋಲು ಕಾಣುತ್ತಿದ್ದಂತೆ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹತಾಶೆಗೆ ಒಳಗಾದರು. ಬಳಿಕ ಟ್ವೀಟ್ ಮಾಡಿ, ನೋವು ಹಂಚಿಕೊಂಡಿದ್ದಾರೆ.
ಕಾಮೆಂಟರಿ ಬಾಕ್ಸ್​ನಲ್ಲಿ ಕೂತಲ್ಲೇ ಎಬಿ ಡಿವಿಲಿಯರ್ಸ್ ಕಣ್ಣೀರು; ಆರ್​ಸಿಬಿ ಸೋಲಿನ ಬಳಿಕ ನೋವು ಹಂಚಿಕೊಂಡ ದಿಗ್ಗಜ
ಕಾಮೆಂಟರಿ ಬಾಕ್ಸ್​ನಲ್ಲಿ ಕೂತಲ್ಲೇ ಎಬಿ ಡಿವಿಲಿಯರ್ಸ್ ಕಣ್ಣೀರು; ಆರ್​ಸಿಬಿ ಸೋಲಿನ ಬಳಿಕ ನೋವು ಹಂಚಿಕೊಂಡ ದಿಗ್ಗಜ

ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) 4 ವಿಕೆಟ್​ಗಳಿಂದ ಶರಣಾಗುತ್ತಿದ್ದಂತೆ ಮಾಜಿ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಹತಾಶೆಗೊಳಗಾದರು. ಕಾಮೆಂಟರಿ ಬಾಕ್ಸ್​ನಲ್ಲಿದ್ದ ರೊವ್ಮನ್ ಪೊವೆಲ್ ಗೆಲುವಿನ ಸಿಕ್ಸರ್​ ಬಾರಿಸಿದ ಬೆನ್ನಲ್ಲೇ ಎಬಿಡಿ, ಕೂತಲ್ಲೇ ಮಮ್ಮಲ ಮರುಗಿದರು. ಕಣ್ಣೀರನ್ನು ಮರೆ ಮಾಡಿದರು. ಈ ವಿಡಿಯೋ ಜಿಯೋಸಿನಿಮಾ ಹಂಚಿಕೊಂಡಿದೆ. ಪಂದ್ಯ ಬಳಿಕ ಟ್ವೀಟ್​ ಕೂಡ ಮಾಡಿದ್ದು, ತನ್ನ ನೋವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಪ್ಲೇಆಫ್​ ಪ್ರವೇಶಿಸಿತ್ತು. ಮೊದಲ 8 ಪಂದ್ಯಗಳಲ್ಲಿ 7 ಸೋಲು ಕಂಡಿದ್ದ ತಂಡ, ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ನಾಲ್ಕರ ಘಟ್ಟಕ್ಕೆ ತಲುಪಿತ್ತು. ಹೀಗಾಗಿ ತಂಡವು ಚಾಂಪಿಯನ್ ಆಗಲು ಪ್ರಬಲ ಸ್ಪರ್ಧಿಯಾಗಿ ಕಂಡುಬಂದಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿಯೇ ಆರ್‌ಸಿಬಿ ಪಯಣ ಅಂತ್ಯ ಕಂಡಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ 4 ವಿಕೆಟ್​ಗಳಿಂದ ಆರ್​ಸಿಬಿ ಮಣಿಸಿತು.

ಆರ್​​ಸಿಬಿ ಸೋಲಿನ ನಂತರ ತಂಡದ ಮಾಜಿ ಅನುಭವಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಹತಾಶೆಗೊಳಗಾದರು, ಭಾವುಕರಾದರು. ಆರ್​ಆರ್​ ಮತ್ತು ಆರ್​ಸಿಬಿ ಪಂದ್ಯಕ್ಕೆ ಕಾಮೆಂಟರಿ ಮಾಡುತ್ತಿದ್ದ ಎಬಿಡಿ, ಸೋಲಿನ ಬಳಿಕ ಅವರ ಬಾಯಿಂದ ಮಾತುಗಳೇ ಹೊರಡಲಿಲ್ಲ. ಹಲ್ಲು ಕಚ್ಚುತ್ತಾ ಭಾವನೆಯನ್ನು ನಿಯಂತ್ರಣ ಮಾಡಿದ ದಿಗ್ಗಜ ಆಟಗಾರ, ತನ್ನ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಕಣ್ಣೀರನ್ನು ಮರೆ ಮಾಚಿದರು. ಅಭಿಮಾನಿಗಳು ಮಿಸ್​ ಯು ಎಬಿಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಡಿವಿಲಿಯರ್ಸ್ 2011 ರಿಂದ 2021 ರವರೆಗೆ ಆರ್‌ಸಿಬಿ ತಂಡದಲ್ಲಿದ್ದರು.

ಪಂದ್ಯದ ನಂತರ ಎಬಿಡಿ ಟ್ವೀಟ್

ಆರ್​ಸಿಬಿ ಸೋಲಿನ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ ಟ್ವೀಟ್ ಮಾಡಿದ್ದಾರೆ. ಕಳೆದುಕೊಳ್ಳುವುದು ಯಾವಾಗಲೂ ನೋವಿನ ಸಂಗತಿ. ಆದರೆ ಅಭಿಮಾನಿಯಾಗಿ, ಮೇ ತಿಂಗಳ ಆರಂಭದಲ್ಲಿ ಎಲ್ಲಾ ಭರವಸೆಗಳು ಕಳೆದುಹೋದಂತೆ ತೋರುತ್ತಿದ್ದರೂ ಸಹ, ನಮ್ಮನ್ನು ನಂಬುವಂತೆ ಮಾಡಿದ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ. ಮುಂದಿನ ವರ್ಷ ಆರ್​ಸಿಬಿ ಮತ್ತೆ ಬಲಿಷ್ಠವಾಗಿ ಕಂಬ್ಯಾಕ್ ಮಾಡಲಿದೆ. ಪದೆ ಪದೇ ತಪ್ಪಿಸಿಕೊಳ್ಳುತ್ತಿರುವ ಟ್ರೋಫಿಯನ್ನು ಆರ್​ಸಿಬಿ ಮನೆಗೆ ತರುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಟ್ವೀಟ್​ನಲ್ಲಿ ತನ್ನ ನೋವು ಹಂಚಿಕೊಂಡಿದ್ದಾರೆ.

ಆರ್​ಸಿಬಿ ಎಲ್ಲಾ ವಿಭಾಗಗಳಲ್ಲೂ ವಿಫಲ

ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಯಾವುದೇ ವಿಭಾಗದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಫೀಲ್ಡರ್ ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಬೌಲರ್‌ಗಳ ಲೈನ್ ಲೆಂಗ್ತ್ ಕೂಡ ಸರಿಯಾಗಿರಲಿಲ್ಲ. ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. 2008ರಿಂದ ಐಪಿಎಲ್ ಆಡುತ್ತಿರುವ ಆರ್​ಸಿಬಿ, ಮುಂದಿನ ವರ್ಷಕ್ಕೆ ಟ್ರೋಫಿ ಭರವಸೆಯನ್ನು ಮುಂದೂಡಿದೆ. ಅಭಿಮಾನಿಗಳ ಪ್ರೀತಿಗೆ ಋಣ ಸಂದಾಯ ಮಾಡುವ ದಿನ ಮತ್ತೆ ವಿಫಲವಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ