ರಾಜಸ್ಥಾನ್ ರಾಯಲ್ಸ್-ಸನ್ರೈಸರ್ಸ್ ಹೈದರಾಬಾದ್ 2ನೇ ಕ್ವಾಲಿಫೈಯರ್ ಪಂದ್ಯ ಯಾವಾಗ, ಎಲ್ಲಿ; ಮಳೆ ಬಂದರೆ ಏನ್ ಕಥೆ?
Sunrisers Hyderabad vs Rajasthan Royals Qualifier 2: ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯ ಯಾವಾಗ? ಎಲ್ಲಿ? ಇಲ್ಲಿದೆ ಮಾಹಿತಿ
17ನೇ ಆವೃತ್ತಿಯ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ವಿಕೆಟ್ಗಳಿಂದ ಮಣಿಸಿದ ರಾಜಸ್ಥಾನ್ ರಾಯಲ್ಸ್ ಎರಡನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದಿದೆ. ಇದೀಗ ಎರಡನೇ ಸೆಮಿಫೈನಲ್ ಎಂದೇ ಕರೆಸಿಕೊಳ್ಳುವ ಈ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಸುನಾಮಿ ಸೃಷ್ಟಿಸುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಟಕ್ಕೆ ಖಡಕ್ ಬೌಲಿಂಗ್ ಪಡೆ ಹೊಂದಿರುವ ಆರ್ಆರ್ ಸಜ್ಜಾಗಿದೆ. ಈ ಮಹತ್ವದ ಪಂದ್ಯ ಎಲ್ಲಿ ಯಾವಾಗ? ಇಲ್ಲಿದೆ ವಿವರ.
ಎಲಿಮಿನೇಟರ್ನಲ್ಲಿ ರಾಜಸ್ಥಾನ್ಗೆ ಗೆಲುವು
ಐಪಿಎಲ್ನ ಆರಂಭಿಕ 8 ಪಂದ್ಯಗಳಲ್ಲಿ 1 ಸೋತು ಕೊನೆಯ ಆರು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಅದೃಷ್ಟದ ಆಟದೊಂದಿಗೆ ಪ್ಲೇಆಫ್ ಪ್ರವೇಶಿಸಿದ್ದ ಆರ್ಸಿಬಿ, ಎಲಿಮಿನೇಟರ್ ಪಂದ್ಯದಲ್ಲಿ ಸೋಲಿನೊಂದಿಗೆ ಎಲಿಮಿನೇಟ್ ಆಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ಗಳಿಂದ ಶರಣಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್ಆರ್ 19 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಸಂಜು ಪಡೆ, ಎರಡನೇ ಕ್ವಾಲಿಫೈಯರ್ಗೆ ಲಗ್ಗೆ ಇಟ್ಟಿದೆ. ಆರ್ಸಿಬಿ ಟ್ರೋಫಿ ಕನಸು ಮತ್ತೊಮ್ಮೆ ಭಗ್ನಗೊಂಡಿತು.
ಮೊದಲ ಕ್ವಾಲಿಫೈಯರ್ನಲ್ಲಿ ಎಸ್ಆರ್ಹೆಚ್ ಸೋಲು
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಸ್ಆರ್ಹೆಚ್ 8 ವಿಕೆಟ್ಗಳಿಂದ ಸೋಲನುಭವಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್, 19.3 ಓವರ್ಗಳಲ್ಲಿ ಗಳಿಸಿದ್ದು 159 ರನ್ ಅಷ್ಟೆ. ಟೂರ್ನಿಯುದ್ದಕ್ಕೂ ಸ್ಫೋಟಕ ಬ್ಯಾಟಿಂಗ್ ಮಾಡಿದವರು ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಇನ್ನೂ 38 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ನಗೆ ಬೀರಿತು. ಶ್ರೇಯಸ್ ಅಯ್ಯರ್ 58* ಮತ್ತು ವೆಂಕಟೇಶ್ ಅಯ್ಯರ್ 51* ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಎರಡನೇ ಕ್ವಾಲಿಫೈಯರ್ ಪಂದ್ಯ ಎಲ್ಲಿ, ಯಾವಾಗ?
ಎರಡನೇ ಕ್ವಾಲಿಫೈಯರ್ ಪಂದ್ಯವು ಮೊದಲ ಕ್ವಾಲಿಫೈಯರ್ ಸೋತ ಮತ್ತು ಎಲಿಮಿನೇಟರ್ ಪಂದ್ಯದ ಗೆದ್ದ ತಂಡಗಳ ನಡುವೆ ನಡೆಯಲಿದೆ. ಇದನ್ನು ಎರಡನೇ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದೆ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮೇ 24ರ ಶುಕ್ರವಾರ ನಡೆಯುವ ಕ್ವಾಲಿಫೈಯರ್-2ರಲ್ಲಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲು ಕಾದಾಟ ನಡೆಸಲಿವೆ. ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯವು ಸಂಜೆ 7.30 ಕ್ಕೆ ಪ್ರಾರಂಭವಾಗಲಿದೆ. ಟಾಸ್ ಸಮಯ 7.00 ಗಂಟೆಗೆ.
ಮಳೆ ಬಂದರೆ ರಿವರ್ಸ್ ಡೇ
2ನೇ ಕ್ವಾಲಿಫೈಯರ್ ಪಂದ್ಯವು ಮಳೆಯಿಂದ ರದ್ದಾದರೆ, ಮೀಸಲು ದಿನ ಇರಲಿದೆ. ಪಂದ್ಯಕ್ಕೆ 120 ನಿಮಿಷಗಳ ಕಾಲ ಹೆಚ್ಚುವರಿ ಸಮಯ ನೀಡಿದ್ದು ಐದು ಓವರ್ ಅಥವಾ ಸೂಪರ್ ಓವರ್ ಆಡಿಸಲು ಪ್ರಯತ್ನ ಮಾಡಲಾಗುತ್ತದೆ. ಒಂದು ವೇಳೆ ಮೀಸಲು ದಿನವೂ ಒಂದೂ ಎಸೆತ ಕಾಣದೆ ಪಂದ್ಯ ರದ್ದಾದರೆ ಲೀಗ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ತಂಡ ಫೈನಲ್ಗೆ ಲಗ್ಗೆ ಹಾಕಲಿದೆ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲಿದೆ. ಫೈನಲ್ ಪಂದ್ಯ ಮೇ 26ರಂದು ಭಾನುವಾರ ನಡೆಯಲಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)