ಬೆಂಗಳೂರು ಕೈಲಾಗಲ್ಲ ಎಂದು ಆರ್ಸಿಬಿ ಸೋಲು ಸಂಭ್ರಮಿಸಿದ ಸಿಎಸ್ಕೆ ಆಟಗಾರ, ನೀನು ಕ್ರಿಕೆಟಿಗನೇ ಅಲ್ಲ ಎಂದ ನೆಟ್ಟಿಗರು
Tushar Deshpande : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೈಲಾಗಲ್ಲ ಎಂದು ಸಿಎಸ್ಕೆ ವೇಗಿ ತುಷಾರ್ ದೇಶಪಾಂಡೆ ಅಣಕಿಸುವ ಪೋಸ್ಟ್ ಹಾಕಿದ್ದಾರೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಉಳಿದಿರುವುದು ಎರಡೇ ಪಂದ್ಯಗಳು. ಎರಡು ತಿಂಗಳ ನಿರಂತರ ಮನರಂಜನೆಗೆ ಮೇ 26 ರಂದು ತೆರೆ ಬೀಳಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ಹೃದಯ ವಿದ್ರಾವಕ ಸೋಲಿನೊಂದಿಗೆ ತನ್ನ ಅಭಿಯಾನ ಮುಗಿಸಿದೆ. ಆದರೆ ಸೋಲಿನ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ತುಷಾರ್ ದೇಶಪಾಂಡೆ (Tushar Deshpande) ಸಂಭ್ರಮಿಸಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತೀವ್ರ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಆವೇಶ್ ಖಾನ್ 3 ಮತ್ತು ಅಶ್ವಿನ್ 2 ವಿಕೆಟ್ ಪಡೆದು ಮಿಂಚಿದರು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, 19 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿ ಜಯಭೇರಿ ಬಾರಿಸಿತು. ಇದರೊಂದಿಗೆ ಎರಡನೇ ಕ್ವಾಲಿಫೈಯರ್ಗೆ ಲಗ್ಗೆ ಹಾಕಿತು.
ಬೆಂಗಳೂರಿಗೆ ಸಾಧ್ಯವಿಲ್ಲ ಎಂದು ಪೋಸ್ಟ್
19ನೇ ಓವರ್ನ ಅಂತಿಮ ಎಸೆತದಲ್ಲಿ ಆರ್ಆರ್ ಬ್ಯಾಟರ್ ರೊವ್ಮನ್ ಪೊವೆಲ್ ಗೆಲುವಿನ ಸಿಕ್ಸರ್ ಬಾರಿಸಿದ ಬೆನ್ನಲ್ಲೇ ತುಷಾರ್ ದೇಶಪಾಂಡೆ, ಆರ್ಸಿಬಿ ತಂಡವನ್ನು ಅಣಕಿಸುವ ರೀತಿ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದಾರೆ. ಅದು ಕೂಡ ಬೆಂಗಳೂರು ದಂಡು ರೈಲ್ವೇ ಸ್ಟೇಷನ್ ಫೋಟೋ ಹಂಚಿಕೊಂಡಿದ್ದಾರೆ. ನಿಲ್ದಾಣದ ಬೋರ್ಡ್ನಲ್ಲಿ ಇಂಗ್ಲೀಷ್ನಲ್ಲಿ ಬರೆದಿರುವ ಬೆಂಗಳೂರು ಕಾಂಟ್ (Bengaluru Cant - ಬೆಂಗಳೂರಿಗೆ ಸಾಧ್ಯವಿಲ್ಲ) ಎಂದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಎಸ್ಕೆ ಫ್ಯಾನ್ಸ್ ಅಫಿಷಿಯಲ್ ಎಂಬ ಖಾತೆಯಲ್ಲಿ ಹಾಕಲಾಗಿದ್ದ ಪೋಸ್ಟ್ ಅನ್ನೇ ತನ್ನ ಸ್ಟೋರಿಗೆ ಹಾಕಿದ್ದರು. ಆದರೆ ಹಾಕಿದ ತಕ್ಷಣ ಡಿಲೀಟ್ ಮಾಡಿದ್ದಾರೆ. Bengaluru Can not ಎಂಬುದನ್ನು Bengaluru Can't ಎಂಬುದಾಗಿ ಬರೆಯುತ್ತೇವೆ. ಹೀಗಾಗಿ ಬೆಂಗಳೂರು ದಂಡು ನಿಲ್ದಾಣದ ಬೋರ್ಡ್ನಲ್ಲಿ Bengaluru Cant ಎಂಬುದನ್ನು ಶೇರ್ ಮಾಡಿದ್ದರು. ಸಿಎಸ್ಕೆ ಅಭಿಮಾನಿಗಳು ಈ ಪೋಸ್ಟ್ ಅನ್ನು ಆರ್ಸಿಬಿ ಸೋಲನ್ನು ಸಂಭ್ರಮಿಸುತ್ತಿದ್ದಾರೆ.
ತುಷಾರ್ಗೆ ನೆಟ್ಟಿಗರಿಂದ ತರಾಟೆ
ಒಬ್ಬ ಕ್ರಿಕೆಟಿಗನಾಗಿ, ಕ್ರೀಡಾಪಟುವಾಗಿ ಮತ್ತೊಂದು ತಂಡದ ಸೋಲು ಸಂಭ್ರಮಿಸುತ್ತೀಯಾ ಅಂದರೆ ನೀನೊಬ್ಬ ಆಟಗಾರನೇ ಅಲ್ಲ ಎಂದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಇವತ್ತು ಸಿಎಸ್ಕೆ ತಂಡದಲ್ಲಿ ಸ್ಥಾನ ಪಡೆದಿರಬಹುದು, ಮುಂದಿನ ವರ್ಷ ಹರಾಜಿನಲ್ಲಿ ಆರ್ಸಿಬಿ ಸೇರಬಹುದು, ಯಾರಿಗೊತ್ತು. ಆಟದ ಬಗ್ಗೆ ಎಲ್ಲವನ್ನೂ ಅರಿತ ಒಬ್ಬ ಕ್ರಿಕೆಟಿಗ ಮತ್ತೊಂದು ತಂಡದ ಸೋಲು ಸಂಭ್ರಮಿಸುವುದು ಅಂದರೆ ಅಸಹ್ಯ. ಅಭಿಮಾನಿಗಳಂತೆ ನೀನು ವರ್ತಿಸಿದರೆ, ನೀನ್ಯಾವ ಕ್ರಿಕೆಟಿಗ ಎನ್ನಬೇಕು. ಮೊದಲು ವೃತ್ತಿಪರ ಕ್ರಿಕೆಟಿಗನಂತೆ ವರ್ತಿಸು ಎಂದು ಸಿಎಸ್ಕೆ ಬೌಲರ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಸಿಎಸ್ಕೆ ಫ್ಯಾನ್ಸ್ vs ಆರ್ಸಿಬಿ ಫ್ಯಾನ್ಸ್
ಸಿಎಸ್ಕೆ vs ಆರ್ಸಿಬಿ ತಂಡಗಳ ನಡುವಿನ ಕಾಳಗ ಇವತ್ತಿನದ್ದಲ್ಲ. ಐಪಿಎಲ್ ಹುಟ್ಟಿದಾಗಿನಿಂದಲೂ ಇದೆ. ಆದರೆ ಆರ್ಸಿಬಿ ಎಲಿಮಿನೇಟರ್ ಸೋಲನ್ನು ಕೆಲ ಅಭಿಮಾನಿಗಳು ಅತಿಯಾಗಿ ಸಂಭ್ರಮಿಸಿದ್ದಾರೆ. ಸಿಎಸ್ಕೆ ವಿರುದ್ಧ ಗೆದ್ದಿದ್ದಕ್ಕೆ ಆರ್ಸಿಬಿ ಫ್ಯಾನ್ಸ್ಗೆ ನಿಂದಿಸಿದ್ದೂ ಇದೆ. ಕರ್ಮ ರಿಟರ್ನ್ಸ್ ಎಂದೆಲ್ಲಾ ಪೋಸ್ಟ್ ಹಾಕಿದ್ದಾರೆ. ಮತ್ತೊಂದೆಡೆ ಸುಮ್ಮನಿರದ ಆರ್ಸಿಬಿ ಫ್ಯಾನ್ಸ್, ಎರಡು ವರ್ಷ ಬ್ಯಾನ್ ಆಗಿದ್ದು ನಾವಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)