logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಸೋಲು ಕಂಡ ಭಾರತ ಎ ತಂಡ; ಏಷ್ಯಾಕಪ್ ಫೈನಲ್‌ನಲ್ಲಿ ಲಂಕಾ ಜೊತೆ ಅಫ್ಘನ್‌ ಫೈಟ್

ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಸೋಲು ಕಂಡ ಭಾರತ ಎ ತಂಡ; ಏಷ್ಯಾಕಪ್ ಫೈನಲ್‌ನಲ್ಲಿ ಲಂಕಾ ಜೊತೆ ಅಫ್ಘನ್‌ ಫೈಟ್

Jayaraj HT Kannada

Oct 26, 2024 06:54 AM IST

google News

ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಸೋಲು ಕಂಡ ಭಾರತ ಎ ತಂಡ; ಏಷ್ಯಾಕಪ್ ಫೈನಲ್‌ಗೆ ಅಫ್ಘನ್‌

    • ಉದಯೋನ್ಮುಖ ತಂಡಗಳ ಏಷ್ಯಾಕಪ್‌ ಟಿ20ಯ ಫೈನಲ್‌ ಪ್ರವೇಶಿಸುವ ಭಾರತ ಎ ತಂಡದ ಕನಸಿಗೆ ಅಫ್ಘಾನಿಸ್ತಾನದ ಉದಯೋನ್ಮುಖ ಆಟಗಾರರು ಕೊಳ್ಳಿ ಇಟ್ಟಿದ್ದಾರೆ. ಒಮಾನ್‌ನಲ್ಲಿ ನಡೆದ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ 20 ರನ್‌ಗಳಿಂದ ಸೋತ ಭಾರತ ಯುವ ತಂಡ, ಫೈನಲ್‌ ರೇಸ್‌ನಿಂದ ಹೊರಬಿದ್ದಿದೆ.
ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಸೋಲು ಕಂಡ ಭಾರತ ಎ ತಂಡ; ಏಷ್ಯಾಕಪ್ ಫೈನಲ್‌ಗೆ ಅಫ್ಘನ್‌
ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಸೋಲು ಕಂಡ ಭಾರತ ಎ ತಂಡ; ಏಷ್ಯಾಕಪ್ ಫೈನಲ್‌ಗೆ ಅಫ್ಘನ್‌

ಪುರುಷರ ಉದಯೋನ್ಮುಖ ತಂಡಗಳ ಏಷ್ಯಾಕಪ್‌ ಟಿ20 (Mens T20 Emerging Teams Asia Cup 2024) ಟೂರ್ನಿಯಿಂದ ಭಾರತ ಯುವ ತಂಡ ಹೊರಬಿದ್ದಿದೆ. ಅಫ್ಘಾನಿಸ್ತಾನ ಎ (India A vs Afghanistan) ವಿರುದ್ಧದ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ 20 ರನ್‌ಗಳ ಅಂತರದಿಂದ ಸೋತ ತಿಲಕ್‌ ವರ್ಮಾ ಪಡೆ, ಫೈನಲ್‌ ಪ್ರವೇಶಿಸುವಲ್ಲಿ ವಿಫಲವಾಗಿದೆ. ಒಮಾನ್‌ನ ಅಲ್ ಅಮೆರಾತ್‌ನಲ್ಲಿ ಅಕ್ಟೋಬರ್ 25ರ ಶುಕ್ರವಾರ ನಡೆದ ಸೆಮಿಫೈನಲ್‌ ಕದನದಲ್ಲಿ, ರಮಣ್ ದೀಪ್ ಸಿಂಗ್ ಅವರ ಆಕರ್ಷಕ ಅರ್ಧಶತಕದ ಹೊರತಾಗಿಯೂ ಗೆಲ್ಲುವಲ್ಲಿ ವಿಫಲವಾಯ್ತು. ಅಫ್ಘನ್ನರ ಪ್ರಬಲ ಬ್ಯಾಟಿಂಗ್‌ ಹಾಗೂ ಬಿಗಿ ಬೌಲಿಂಗ್‌ ದಾಳಿ ಮುಂದೆ ಭಾರತ ಎ ತಂಡದ ಉದಯೋನ್ಮುಖ ಆಟಗಾರರರು ಮಂಕಾದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 'ಎ' ತಂಡ, ಸೆದಿಕುಲ್ಲಾ ಅಟಲ್ (52 ಎಸೆತಗಳಲ್ಲಿ 83 ರನ್) ಮತ್ತು ಜುಬೈದ್ ಅಕ್ಬರಿ (41 ಎಸೆತಗಳಲ್ಲಿ 64 ರನ್) ನೆರವಿಂದ ಮೊದಲ ವಿಕೆಟ್‌ಗೆ 137 ರನ್‌ಗಳ ಆರಂಭಿಕ ಜೊತೆಯಾಟವಾಡಿತು. ಹೀಗಾಗಿ ತಂಡದ ಮೊತ್ತ 206/4ಕ್ಕೆ ಏರಿತು. ಇದು ಟೂರ್ನಿಯ ಈವರೆಗಿನ ಗರಿಷ್ಠ ಮೊತ್ತವಾಗಿದೆ.

ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಭಾರತ 'ಎ' ತಂಡ, 13ನೇ ಓವರ್ ವೇಳೆಗೆ 100 ರನ್‌ ಆಗುವಷ್ಟರಲ್ಲಿ ಅರ್ಧದಷ್ಟು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಐಪಿಎಲ್‌ ಸೇರಿದಂತೆ ದೇಶೀಯ ಕ್ರಿಕೆಟ್‌ ಹಾಗೂ ಭಾರತ ತಂಡದಲ್ಲೂ ಆಡಿ ಅನುಭವ ಹೊಂದಿರುವ ಆಟಗಾರರಿದ್ದರೂ, ಬೃಹತ್‌ ಮೊತ್ತ ಚೇಸ್‌ ಮಾಡಲು ಸಾಧ್ಯವಾಗಲಿಲ್ಲ. ರನೌಟ್‌ಗಳು ತಂಡಕ್ಕೆ ದುಬಾರಿಯಾದವು. ಕೊನೆಯಲ್ಲಿ ರಮಣ್‌ದೀಪ್ ಹಾಗೂ ನಿಶಾಂತ್ ಸಿಂಧು ಕೆಲಕಾಲ ಆಕರ್ಷಕ ಆಟವಾಡಿ, ಗುರಿತಲುಪುವ ಹೋರಾಟಕ್ಕಿಳಿದರು. ಈ ಇಬ್ಬರು 31 ಎಸೆತಗಳಲ್ಲಿ 68 ರನ್‌ಗಳ ರೋಚಕ ಜೊತೆಯಾಟವಾಡಿದರು.

ಗೆಲುವಿಗೆ ಕೊನೆಯ ಮೂರು ಓವರ್‌ಗಳಲ್ಲಿ ಭಾರತಕ್ಕೆ 53 ರನ್‌ಗಳ ಅಗತ್ಯವಿದ್ದಾಗ, ನಿಶಾಂತ್ (13 ಎಸೆತಗಳಲ್ಲಿ 23 ರನ್) ರನ್ ಔಟ್ ಆದರು. ಅಂತಿಮ ಓವರ್‌ನಲ್ಲಿ 30 ರನ್‌ ಗಳಿಸುವ ಜವಾಬ್ದಾರಿ ರಮಣ್‌ದೀಪ್ ತಲೆ ಮೇಲೆ ಬಂತು. ಈ ವೇಳೆ ಆಕರ್ಷಕ ಬೌಲಿಂಗ್‌ ಮಾಡಿದ ಅಬ್ದುಲ್ ರಹಮಾನ್ (2/32) ಕೊನೆಯ ಎಸೆತದಲ್ಲಿ ಅವರನ್ನು ಔಟ್ ಮಾಡುವ ಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ಸ್ಥಾನವನ್ನು ಭದ್ರಪಡಿಸಿದರು.

ಆರಂಭದಲ್ಲೇ ಬ್ಯಾಟಿಂಗ್‌ ಕುಸಿತ

ಪಂದ್ಯದಲ್ಲಿ ಅಫ್ಘಾನಿಸ್ತಾನದ ಬ್ಯಾಟಿಂಗ್‌ ಬಲಿಷ್ಠವಾಗಿತ್ತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ತಂಡಕ್ಕೆ ಆರಂಭದಲ್ಲೇ ವಿಶ್ವಾಸ ಮೂಡಿತು. 207 ರನ್‌ ಚೇಸಿಂಗ್‌ ಮಾಡುವುದು ಭಾರತಕ್ಕೆ ದೊಡ್ಡ ಸವಾಲಾಗಿರಲಿಲ್ಲ. ಆದರೆ, ತಿಲಕ್‌ ವರ್ಮಾ ಬಳಗವು ಪವರ್ಪ್ಲೇನಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್ ಶರ್ಮಾ (7) ಮತ್ತು ಪ್ರಭ್‌ಸಿಮ್ರನ್ ಸಿಂಗ್ (19) ಔಟಾಗುವುದರೊಂದಿಗೆ 5.4 ಓವರ್‌ಗಳಲ್ಲಿ ತಂಡ 3 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿ ಸಂಕಷ್ಟ ಅನುಭವಿಸಿತು.

ಆಯುಷ್ ಬದೋನಿ (3) ಮತ್ತು ನೇಹಾಲ್ ವಧೇರಾ (20) ಕೆಲಕಾಲ ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನಕ್ಕೆ ಕೈಹಾಕಿದರು. ನೆಹಾಲ್‌ ರನೌಟ್‌ ಆದರೆ, ಬದೋನಿ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟಾದರು.

ಶುಕ್ರವಾರವೇ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಶ್ರೀಲಂಕಾ 'ಎ' ತಂಡ ಸೆಮಿಫೈನಲ್‌ ತಲುಪಿದೆ. ಇದೀಗ ಅಕ್ಟೋಬರ್‌ 27ರ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ