ಯಂಗ್ ಇಂಡಿಯಾ ವಿರುದ್ಧ ತವರಿನಲ್ಲೇ ಮುಗ್ಗರಿಸಿದ ಸೌತ್ ಆಫ್ರಿಕಾ; 2-1 ಅಂತರದಿಂದ ಭಾರತಕ್ಕೆ ಸರಣಿ ಜಯ
Dec 22, 2023 09:31 AM IST
ರಿಂಕು ಸಿಂಗ್ ಅವರೊಂದಿಗೆ ತಮ್ಮ ಶತಕ ಸಂಭ್ರಮಿಸಿದ ಸಂಜು ಸ್ಯಾಮ್ಸನ್
- South Africa vs India: ಸಂಜು ಸ್ಯಾಮ್ಸನ್ ಭರ್ಜರಿ ಶತಕದ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 78 ರನ್‌ಗಳಿಂದ ಮಣಿಸಿದೆ. ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.
ಆತಿಥೇಯ ದಕ್ಷಿಣ ಆಫ್ರಿಕಾ (South Africa vs India) ವಿರುದ್ಧ ಯುವ ಭಾರತ ತಂಡ ಸರಣಿ ಗೆದ್ದ ಸಾಧನೆ ಮಾಡಿದೆ. ಸಂಜು ಸ್ಯಾಮ್ಸನ್ (Sanju Samson) ಚೊಚ್ಚಲ ಅಂತಾರಾಷ್ಟ್ರೀಯ ಶತಕ ಮತ್ತು ಅರ್ಷದೀಪ್ ಸಿಂಗ್ ನೇತೃತ್ವದ ಭಾರತೀಯ ಯುವ ಬೌಲರ್‌ಗಳ ಚಾಣಾಕ್ಷ ಬೌಲಿಂಗ್ ನೆರವಿಂದ, ಗುರುವಾರ (ಡಿ.21) ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಹರಿಣಗಳ ವಿರುದ್ಧ ಟೀಮ್ ಇಂಡಿಯಾ 78 ರನ್‌ಗಳ ಐತಿಹಾಸಿಗ ಗೆಲುವು ತನ್ನದಾಗಿಸಿಕೊಂಡಿದೆ. ಆ ಮೂಲಕ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದು, ಸೌತ್ ಆಫ್ರಿಕಾ ನೆಲದಲ್ಲಿ ಎರಡನೇ ಸರಣಿ ಗೆದ್ದ ಸಾಧನೆ ಮಾಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಪಡೆ, ಸ್ಯಾಮ್ಸನ್ ಅವರ ಜವಾಬ್ದಾರಿಯುತ ಶತಕ (114 ಎಸೆತಗಳಲ್ಲಿ 108 ರನ್) ಮತ್ತು ತಿಲಕ್ ವರ್ಮಾ ಅವರ ತಾಳ್ಮೆಯ ಅರ್ಧಶತಕ (77 ಎಸೆತಗಳಿಂದ 52) ನೆರವಿಂದ 8 ವಿಕೆಟ್ ಕಳೆದುಕೊಂಡು 296 ರನ್ ಗಳಿಸಿತು. ಬೃಹತ್ ಗುರಿ ಪಡೆದ ಮರ್ಕ್ರಾಮ್ ಪಡೆ, ಟೋನಿ ಡಿ ಜೊರ್ಜಿ ಅರ್ಧಶತಕ (81 ರನ್) ಹೊರತಾಗಿಯೂ 45.5 ಓವರ್‌ಗಳಲ್ಲಿ ಕೇವಲ 218 ರನ್‌ಗಳಿಗೆ ಆಲೌಟ್ ಆಯಿತು. ಜೊರ್ಜಿ ಹೊರತಾಗಿ ಬೇರೆ ಯಾರಿಂದಲೂ ಜವಾಬ್ದಾರಿಯುತ ಆಟ ಬರಲಿಲ್ಲ. ಎಡಗೈ ವೇಗಿ ಅರ್ಷದೀಪ್ ಸಿಂಗ್ 30 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಬಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಇದನ್ನೂ ಓದಿ | 14 ವರ್ಷಗಳ ಬಳಿಕ ದಾಖಲೆ; ಧೋನಿ ಬಳಿಕ ಪ್ರಮುಖ ಮೈಲಿಗಲ್ಲು ತಲುಪಿದ ಎರಡನೇ ಆಟಗಾರ ಕೆಎಲ್ ರಾಹುಲ್
ಚೇಸಿಂಗ್‌ನಲ್ಲಿ ಹರಿಣಗಳ ಆರಂಭ ಉತ್ತಮವಾಗಿತ್ತು. ಒಂದು ಹಂತದಲ್ಲಿ 141 ರನ್ ವೇಳೆಗೆ ಕೇವಲ 2 ವಿಕೆಟ್ ಮಾತ್ರ ಕಳೆದುಕೊಂಡಿದ್ದ ತಂಡವು, ಮುಂದಿನ 77 ರನ್ ಒಳಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಪವರ್ ಪ್ಲೇನಲ್ಲಿ ಡಿ ಜೊರ್ಜಿ ಮತ್ತು ರೀಜಾ ಹೆಂಡ್ರಿಕ್ಸ್ (19) ಅಬ್ಬರಿಸಿದರು. ಇವರಿಬ್ಬರೂ ಸೇರಿ ಕೇವಲ 8.2 ಓವರ್‌ಗಳಲ್ಲಿ 59 ರನ್ ಕಲೆ ಹಾಕಿದರು. ಮೊದಲನೆಯವರಾಗಿ ಹೆಂಡ್ರಿಕ್ಸ್ ವಿಕೆಟ್ ಪಡೆದು ಅರ್ಷದೀಪ್ ಮಿಂಚಿದರು. ಬ್ಯಾಟ್ ಬೀಸಲು ಪರದಾಡುತ್ತಿದ್ದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 2 ರನ್ ಗಳಿಸಿದ್ದಾಗ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಎಸೆತಕ್ಕೆ ಕ್ಲೀನ್ ಬೋಲ್ಡ್ ಆದರು.
ನಾಯಕ ಐಡೆನ್ ಮಾರ್ಕ್ರಾಮ್ 36 ರನ್ ಗಳಿಸಿದರೆ, ಹೆನ್ರಿಚ್ ಕ್ಲಾಸೆನ್ 21 ರನ್ ಗಳಿಸಿ ಆವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಡೇವಿಡ್ ಮಿಲ್ಲರ್ ಕೂಡಾ ಗುರಿ ತಲುಪುವಲ್ಲಿ ಯಶಸ್ವಿಯಾಗಲಿಲ್ಲ. 192 ರನ್ ಆಗಿದ್ದಾಗ ಮಿಲ್ಲರ್ ಔಟಾದಾಗ ತಂಡದ ಗೆಲುವಿನ ಭರವಸೆಯೇ ಕುಸಿಯಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ರುತುರಾಜ್ ಗಾಯಕ್ವಾಡ್ ಬದಲಿಗೆ ಏಕದಿನ ಕ್ರಿಕೆಟ್‌ಗೆ ಪದರ್ಪಣೆ ಮಾಡಿದ ರಜತ್ ಪಾಟೀದಾರ್, 16 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು. ಸಾಯಿ ಸುದರ್ಶನ್ 10 ರನ್ ಗಳಿಸಿ ಔಟಾದರು. ಜವಾಬ್ದಾರಿಯುತ ಆಟವಾಡಿದ ಸ್ಯಾಮ್ಸನ್, ಆಕರ್ಷಕ ಶತಕ ಸಿಡಿಸಿದರು. ನಾಯಕ ಕೆಎಲ್ ರಾಹುಲ್ ಮೂರನೇ ವಿಕೆಟ್‌ಗೆ ಸ್ಯಾಮ್ಸನ್ ಜೊತೆಗೂಡಿ 52 ರನ್ ಸೇರಿಸಿದರು. ಸ್ಯಾಮ್ಸನ್‌ಗೆ ಉತ್ತಮ ಸಾಥ್ ನೀಡಿದ ಯುವ ಬ್ಯಾಟರ್ ತಿಲಕ್ ವರ್ಮಾ, 52 ರನ್ ಗಳಿಸಿದರು ಡೆತ್ ಓವರ್‌ಗಳಲ್ಲಿ ರಿಂಕು ಸಿಂಗ್ (27 ಎಸೆತಗಳಲ್ಲಿ 38) ರನ್ ಸಿಡಿಸಿ ಮಿಂಚಿದರು.
ಇದನ್ನೂ ಓದಿ | ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಸಂಜು ಸ್ಯಾಮ್ಸನ್; ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರ
ಕ್ರೀಸ್‌ಕಚ್ಚಿ ಜವಾಬ್ದಾರಿಯುತ ಆಟವಾಡಿದ ಸ್ಯಾಮ್ಸನ್, ಭಾರತದ ಇನಿಂಗ್ಸ್‌ನ 44ನೇ ಓವರ್‌ನಲ್ಲಿ ಮೂರಂಕಿ ತಲುಪಿದರು. 110 ಎಸೆತಗಳಲ್ಲಿ ತಮ್ಮ ಚೊಚ್ಚಲ ಏಕದಿನ ಶತಕ ಬಾರಿಸಿದರು. ಕಳೆದ ವರ್ಷ ಲಕ್ನೋದಲ್ಲಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 86 ರನ್ ಗಳಿಸಿದ್ದು, ಏಕದಿನ ಮಾದರಿಯಲ್ಲಿ ಅವರ ಹಿಂದಿನ ಗರಿಷ್ಠ ಮೊತ್ತವಾಗಿತ್ತು. 2021ರಲ್ಲಿ ಏಕದಿನ ಸ್ವರೂಪಕ್ಕೆ ಪದಾರ್ಪಣೆ ಮಾಡಿದ ಸ್ಯಾಮ್ಸನ್, ಈ ಸ್ವರೂಪದಲ್ಲಿ ಕೇವಲ 16 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.