ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಸಂಜು ಸ್ಯಾಮ್ಸನ್; ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರ
Sanju Samson: ಜವಾಬ್ದಾರಿಯುತ ಆಟವಾಡಿದ ಸಂಜು ಸ್ಯಾಮ್ಸನ್ 110 ಎಸೆತಗಳಲ್ಲಿ ತಮ್ಮ ಚೊಚ್ಚಲ ಏಕದಿನ ಶತಕ ಸಿಡಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿ ಮಿಂಚಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಸಮರ್ಥ್ಯ ಪ್ರದರ್ಶಿಸುವ ಅವಕಾಶ ಕಳೆದುಕೊಂಡಿದ್ದ ಅವರು, ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಆಸರೆಯಾದರು.
ಡಿಸೆಂಬರ್ 21ರ ಗುರುವಾರ ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೇಲಿಂದ ಮೇಲೆ ಎರಡು ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾಗೆ ಸ್ಯಾಮ್ಸನ್ ಆಸರೆಯಾದರು. ಕ್ರೀಸ್‌ಕಚ್ಚಿ ಜವಾಬ್ದಾರಿಯುತ ಆಟವಾಡಿದ ಅವರು, ಭಾರತದ ಇನಿಂಗ್ಸ್‌ನ 44ನೇ ಓವರ್‌ನಲ್ಲಿ ಮೂರಂಕಿ ತಲುಪಿದರು. 110 ಎಸೆತಗಳಲ್ಲಿ ತಮ್ಮ ಚೊಚ್ಚಲ ಏಕದಿನ ಶತಕ ಬಾರಿಸಿದರು.
ಕಳೆದ ವರ್ಷ ಲಕ್ನೋದಲ್ಲಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 86 ರನ್ ಗಳಿಸಿದ್ದು, ಏಕದಿನ ಮಾದರಿಯಲ್ಲಿ ಅವರ ಹಿಂದಿನ ಗರಿಷ್ಠ ಮೊತ್ತವಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಸಾಧನೆ ಮಾಡಿ ಮಿಂಚಿದ್ದಾರೆ.
ಅಂತಿಮವಾಗಿ 114 ಎಸೆತಗಳಲ್ಲಿ 108 ರನ್ ಗಳಿಸಿದ್ದ ಸ್ಯಾಮ್ಸನ್ ಲಿಜಾಡ್ ವಿಲಿಯಮ್ಸ್ ಎಸೆತದಲ್ಲಿ ಔಟಾದರು. 94.74ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 6 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್ ಸಿಡಿಸಿದ್ದಾರೆ.
2021ರಲ್ಲಿ ಏಕದಿನ ಸ್ವರೂಪಕ್ಕೆ ಪದಾರ್ಪಣೆ ಮಾಡಿದ ಸ್ಯಾಮ್ಸನ್, ಈ ಸ್ವರೂಪದಲ್ಲಿ ಕೇವಲ 16 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಪ್ರತಿಬೆಯಿದ್ದರೂ ಸ್ಯಾಮ್ಸನ್‌ಗೆ ಅವಕಾಶ ನೀಡುತ್ತಿಲ್ಲ ಎಂಬುದಾಗಿ ಅಭಿಮಾನಿ ಬಳಗದಿಂದ ಆಗಾಗ ಅಪಸ್ವರ ಕೇಳಿಬರುತ್ತಿದೆ.
ಇದನ್ನೂ ಓದಿ | IND vs SA: ನಿರ್ಣಾಯಕ ಪಂದ್ಯದಲ್ಲಿ ಭಾರತ ಬ್ಯಾಟಿಂಗ್; ಏಕದಿನ ಕ್ರಿಕೆಟ್‌ಗೆ ರಜತ್ ಪಾಟೀದಾರ್ ಪದಾರ್ಪಣೆ
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೊಚ್ಚಲ ಏಕದಿನ ಪಂದ್ಯ ಆಡಿದ ರಜತ್ ಪಾಟೀದಾರ್ ಐದನೇ ಓವರ್‌ನಲ್ಲಿ ಔಟಾದರು. ಒಮ್ಮೆ ಸಾಯಿ ಸುದರ್ಶನ್ ಎಂಟನೇ ಓವರ್‌ನಲ್ಲಿ ನಾಶವಾದಾಗ, ಸ್ಯಾಮ್ಸನ್ ಮತ್ತು ರಾಹುಲ್ ವಿಕೆಟ್‌ಗಳ ಹರಿವನ್ನು ಕ್ರೋಢೀಕರಿಸಲು ಮತ್ತು ತಡೆಯಲು ಪ್ರಯತ್ನಿಸಿದರು.
ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ. ಎರಡನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಬೆರಳಿಗೆ ಗಾಯ ಮಾಡಿಕೊಂಡಿದ್ದ ರುತುರಾಜ್ ಗಾಯಕ್ವಾಡ್, ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಹೀಗಾಗಿ ಪಾಟೀದಾರ್ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ವೇಳೆ ಪ್ರಮುಖ ಸ್ಪಿನ್ನರ್ ವಿಶ್ರಾಂತಿ ಪಡೆದಿದ್ದು, ಅವರ ಬದಲಿಗೆ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಆಡುತ್ತಿದ್ದಾರೆ.
ಭಾರತ ಆಡುವ ಬಳಗ
ಸಂಜು ಸ್ಯಾಮ್ಸನ್, ಸಾಯಿ ಸುದರ್ಶನ್, ರಜತ್ ಪಾಟೀದಾರ್, ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ ಮತ್ತು ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.
ದಕ್ಷಿಣ ಆಫ್ರಿಕಾ ಆಡುವ ಬಳಗ
ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೋರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ಲಿಜಾದ್ ವಿಲಿಯಮ್ಸ್, ಬ್ಯೂರಾನ್ ಹೆಂಡ್ರಿಕ್ಸ್.