logo
ಕನ್ನಡ ಸುದ್ದಿ  /  ಕ್ರಿಕೆಟ್  /  ಹೇಳಿದ ಮಾತು ಕೇಳದ ಇಶಾನ್​ ಕಿಶನ್​ಗೆ ಸರಿಯಾದ ಶಿಕ್ಷೆ; ಇನ್ಮುಂದೆ ಭಾರತ ತಂಡಕ್ಕೂ ಆಯ್ಕೆ ಅನುಮಾನ!

ಹೇಳಿದ ಮಾತು ಕೇಳದ ಇಶಾನ್​ ಕಿಶನ್​ಗೆ ಸರಿಯಾದ ಶಿಕ್ಷೆ; ಇನ್ಮುಂದೆ ಭಾರತ ತಂಡಕ್ಕೂ ಆಯ್ಕೆ ಅನುಮಾನ!

Prasanna Kumar P N HT Kannada

May 01, 2024 04:35 PM IST

google News

ಹೇಳಿದ ಮಾತು ಕೇಳದ ಇಶಾನ್​ ಕಿಶನ್​ಗೆ ಸರಿಯಾದ ಶಿಕ್ಷೆ; ಇನ್ಮುಂದೆ ಭಾರತ ತಂಡಕ್ಕೂ ಆಯ್ಕೆ ಅನುಮಾನ!

    • Ishan Kishan : ಬಿಸಿಸಿಐ, ಸೆಲೆಕ್ಟರ್​ಗಳು, ರಾಹುಲ್ ದ್ರಾವಿಡ್ ಹೇಳಿದ ಮಾತು ಕೇಳದ ಇಶಾನ್​ ಕಿಶನ್​ಗೆ (Ishan Kishan) ಬಿಸಿಸಿಐ ಸರಿಯಾದ ಶಿಕ್ಷೆ ನೀಡಿದೆ. ಇನ್ಮುಂದೆ ಭಾರತೀಯ ತಂಡಕ್ಕೆ ಆಯ್ಕೆ ಆಗುವುದೂ ಅನುಮಾನ.
ಹೇಳಿದ ಮಾತು ಕೇಳದ ಇಶಾನ್​ ಕಿಶನ್​ಗೆ ಸರಿಯಾದ ಶಿಕ್ಷೆ; ಇನ್ಮುಂದೆ ಭಾರತ ತಂಡಕ್ಕೂ ಆಯ್ಕೆ ಅನುಮಾನ!
ಹೇಳಿದ ಮಾತು ಕೇಳದ ಇಶಾನ್​ ಕಿಶನ್​ಗೆ ಸರಿಯಾದ ಶಿಕ್ಷೆ; ಇನ್ಮುಂದೆ ಭಾರತ ತಂಡಕ್ಕೂ ಆಯ್ಕೆ ಅನುಮಾನ!

ಐಸಿಸಿ ಟಿ20 ವಿಶ್ವಕಪ್​​ ಟೂರ್ನಿಗೆ (T20 World Cup 2024) 15 ಸದಸ್ಯರ ಟೀಮ್ ಇಂಡಿಯಾವನ್ನು (Team India) ಬಿಸಿಸಿಐ (BCCI) ಪ್ರಕಟಿಸಿದೆ. ಶುಭ್ಮನ್ ಗಿಲ್, ರಿಂಕು ಸಿಂಗ್ ಮತ್ತು ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡದ್ದಕ್ಕೆ ತೀವ್ರ ಚರ್ಚೆಯಾಗುತ್ತಿದೆ. ಗಿಲ್ ಮತ್ತು ರಿಂಕು ಮೀಸಲು ಆಟಗಾರರಾಗಿದ್ದರೆ, ಕೆಎಲ್ ರಾಹುಲ್​​ ಯಾವುದರ ಭಾಗವೂ ಆಗಿಲ್ಲ. ಈ ಎಲ್ಲದರ ಮಧ್ಯೆ ಹೇಳದ ಮಾತು ಕೇಳದ ಇಶಾನ್​ ಕಿಶನ್​ಗೆ (Ishan Kishan) ಬಿಸಿಸಿಐ ಸರಿಯಾದ ಶಿಕ್ಷೆ ನೀಡಿದೆ. ಇನ್ಮುಂದೆ ಭಾರತೀಯ ತಂಡಕ್ಕೆ ಆಯ್ಕೆ ಆಗುವುದೂ ಅನುಮಾನ.

ನಿಜ ಹೇಳಬೇಕೆಂದರೆ, ಇಶಾನ್ ಕಿಶನ್ ವಿಕೆಟ್ ಕೀಪರ್​ ಸ್ಥಾನಕ್ಕೆ ಸಂಜು ಸ್ಯಾಮ್ಸನ್​ಗಿಂತ ಮುಂಚೂಣಿಯಲ್ಲಿದ್ದರು. ಆದರೆ ಕಳೆದ 6 ತಿಂಗಳಲ್ಲಿ ಸಂಭವಿಸಿದ ಬೆಳವಣಿಗೆಗಳು ಆತನ ಕ್ರಿಕೆಟ್ ಭವಿಷ್ಯ ಕೊನೆಯ ಅಂಚಿಗೆ ತಲುಪಿಸಿವೆ. ಹಾಗಂತ ಬೇರೆ ಯಾರಿಂದಲೋ ಆದ ತಪ್ಪಲ್ಲ, ತನಗೆ ತಾನೇ ಮಾಡಿಕೊಂಡ ತಪ್ಪಿನಿಂದ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ 25 ವರ್ಷದ ಇಶಾನ್ ಕಿಶನ್. ಬಿಸಿ ರಕ್ತದ ಯುವ ಆಟಗಾರ ಯಾರ ಮಾತು ಕೇಳದೆ ತನ್ನ ವೃತ್ತಿಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.

ಸುಳ್ಳು ಹೇಳಿ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ಇಶಾನ್ ಕಿಶನ್

2023ರ ಏಕದಿನ ವಿಶ್ವಕಪ್​ನಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಇಶಾನ್, ಒಂದೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅನಾರೋಗ್ಯದಿಂದ ಚೇತರಿಸಿಕೊಂಡು ಶುಭ್ಮನ್ ಗಿಲ್ ತಂಡಕ್ಕೆ ಮರಳಿದ ಬೆನ್ನಲ್ಲೇ ಇಶಾನ್ ತನ್ನ ಸ್ಥಾನ ಬಿಟ್ಟುಕೊಡಬೇಕಾಯಿತು. ಈ ಕಾರಣಕ್ಕೆ ಸಿಟ್ಟಾದ ಕಿಶನ್​ಗೆ ಮಹತ್ವದ ಟೂರ್ನಿಯ ನಂತರ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ ಮಣೆ ಹಾಕಲಾಗಿತ್ತು. ಬಳಿಕ ಸೌತ್​ ಆಫ್ರಿಕಾ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡಲಾಯಿತು.

ಈ ಪ್ರವಾಸದಲ್ಲಿ ಟಿ20 ಮತ್ತು ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಚುಟುಕು ಸರಣಿಯಲ್ಲಿ ಇಶಾನ್ ಬದಲಿಗೆ ಜಿತೇಶ್ ಶರ್ಮಾಗೆ ಆಡುವ 11ರ ಬಳಗದಲ್ಲಿ ಚಾನ್ಸ್ ಸಿಕ್ಕಿತು. ಆಗ ಇದಕ್ಕೂ ಕೋಪಗೊಂಡ ಕಿಶಾನ್, ಟೆಸ್ಟ್​ ಸರಣಿಯಲ್ಲೂ ಬೆಂಚ್ ಕಾಯಬೇಕಾಗುತ್ತೆಂದು ಮೊದಲೇ ಅರಿತು ಮಾನಸಿಕ ವಿಶ್ರಾಂತಿ ಬೇಕೆಂದು ಹಿಂದೆ ಸರಿದರು. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಬೇಕೆಂದು ಹೇಳಿದ್ದ ಯಂಗ್ ಪ್ಲೇಯರ್​, ದುಬೈನಲ್ಲಿ ಪಾರ್ಟಿಯೊಂದಲ್ಲಿ ಕಾಣಿಸಿಕೊಂಡಿದ್ದರು.

ಇದರ ನಂತರ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ ಸ್ಮೃತಿ ಮಂಧಾನ ಅವರೊಂದಿಗೆ ಕಾಣಿಸಿಕೊಂಡರು. ಆ ಮೂಲಕ ಬಿಸಿಸಿಐಗೆ ಸುಳ್ಳು ಹೇಳಿದ್ದಾರೆಂಬುದು ಸ್ಪಷ್ಟವಾಯಿತು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಯಿತು. ಆದರೂ ಯುವ ಆಟಗಾರನ ಭವಿಷ್ಯ ಹಾಳು ಮಾಡಬಾರದೆಂಬ ದೃಷ್ಟಿಯಿಂದ ಮತ್ತೆ ಅವಕಾಶ ನೀಡಲು ಯತ್ನಿಸಿತು. ಅದಕ್ಕಾಗಿ ದೇಶೀಯ ಕ್ರಿಕೆಟ್​ ಆಡಿ, ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವಂತೆ ಬಿಸಿಸಿಐ ಸೂಚಿಸಿತ್ತು.

ರಣಜಿ ಆಡುವಂತೆ ಹೇಳಿದರೂ ಕೇಳದ ವಿಕೆಟ್ ಕೀಪರ್

ಬಿಸಿಸಿಐ, ಸೆಲೆಕ್ಟರ್​​ಗಳು, ಹೆಡ್ ಕೋಚ್ ರಾಹುಲ್ ದ್ರಾವಿಡ್ ರಣಜಿ ಆಡುವಂತೆ ಸಲಹೆ ನೀಡಿದರು. ಆದರೆ ಯಾರ ಮಾತಿಗೂ ಕ್ಯಾರೆ ಎನ್ನದ ಇಶಾನ್ ಜಾರ್ಖಾಂಡ್ ಪರ ಆಡಲು ಮನಸ್ಸು ಮಾಡಲಿಲ್ಲ. ಇದು ಬಿಸಿಸಿಐಗೆ ಇನ್ನಷ್ಟು ಕೋಪ ತರಿಸಲು ಕಾರಣವಾಯಿತು. ಹೀಗೆ ಹಠ ಸಾಧಿಸುವುದು ಒಳ್ಳೆಯದಲ್ಲ ಎಂದು ಮಾಜಿ ಕ್ರಿಕೆಟರ್ಸ್ ಹೇಳಿದ್ದರು. ಆದರೆ, ಡೋಂಟ್ ಕೇರ್​ ನಿಲುವು ತಳೆದ ವಿಕೆಟ್ ಕೀಪರ್, ಬಿಸಿಸಿಐ ಸಾಕಷ್ಟು ಅವಕಾಶ ಕೊಟ್ಟು ನೋಡಿದರೂ ಜಗ್ಗಲಿಲ್ಲ.

ಬಿಸಿಸಿಐ, ದ್ರಾವಿಡ್, ಸೆಲೆಕ್ಟರ್ಸ್ ರಣಜಿ ಆಡುವಂತೆ ಗೋಗರೆದರೂ ಮಾತು ಕೇಳದ ಇಶಾನ್​, ರಹಸ್ಯವಾಗಿ ನೂತನವಾಗಿ ನೇಮಕವಾದ ಎಂಐ ನಾಯಕ ಹಾರ್ದಿಕ್ ಪಾಂಡ್ಯ ಜೊತೆ ಐಪಿಎಲ್​ಗಾಗಿ ಅಭ್ಯಾಸ ಮಾಡುತ್ತಿದ್ದರು. ಒಂದು ವೇಳೆ ರಣಜಿ ಆಡಿದ್ದರೆ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಇಶಾನ್ ಆಯ್ಕೆಯಾಗುತ್ತಿದ್ದರು. ಅಹಂಕಾರ ಪ್ರದರ್ಶಶಿಸಿ ತನ್ನನ್ನು ತಾನೇ ಶಿಕ್ಷೆಗೊಳಪಡಿಸಿಕೊಂಡರು. ರಹಸ್ಯವಾಗಿ ಪ್ರಾಕ್ಟೀಸ್ ಮಾಡಿದ್ದು ಬಿಸಿಸಿಐಗೆ ಗೊತ್ತಾದ ಬೆನ್ನಲ್ಲೇ ಸರಿಯಾದ ಶಿಕ್ಷೆ ನೀಡಲು ನಿರ್ಧರಿಸಿತು.

ತಂಡಕ್ಕೆ ಆಯ್ಕೆ ಮಾಡದಿರುವುದರ ಜೊತೆಗೆ ವಾರ್ಷಿಕ ಗುತ್ತಿಗೆ ಪಟ್ಟಿಯಿಂದಲೂ ಅವಕಾಶ ಕಳೆದುಕೊಂಡರು. ಆದರೆ ಇಶಾನ್ ಬದಲಿಗೆ ತಂಡವನ್ನು ಸೇರಿದ ಧೃವ್ ಜುರೆಲ್, ತನ್ನನ್ನು ತಾನು ಸಾಬೀತುಪಡಿಸಿ ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆದರು. ಇದೀಗ ಇಶಾನ್​ಗೆ ಮತ್ತೊಂದು ಶಿಕ್ಷೆ ಎನ್ನುವಂತೆ ಟಿ20 ವಿಶ್ವಕಪ್​ಗೂ ಕೈಬಿಡಲಾಗಿದೆ. ಒಂದು ವೇಳೆ ಬಿಸಿಸಿಐ ಮಾತು ಕೇಳಿದ್ದರೆ, ಇಂದು ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್​ ವಿಕೆಟ್ ಕೀಪರ್ ಆಗಿ ಆಯ್ಕೆ ಆಗುತ್ತಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರುವುದಿಲ್ಲ ಎಂಬುದಕ್ಕೆ ತಾಜಾ ಉದಾಹರಣೆಯಂತಿರುವ ಇಶಾನ್​ ಕಿಶನ್ ಅವರ ಕ್ರಿಕೆಟ್​ ಭವಿಷ್ಯ ಕೂಡ ಅತಂತ್ರಕ್ಕೆ ಸಿಲುಕಿದೆ. ಇನ್ಮುಂದೆ ಭಾರತ ತಂಡಕ್ಕೆ ಆಯ್ಕೆ ಆಗುತ್ತಾರೆಯೇ ಎಂಬ ಅನುಮಾನವೂ ಮೂಡಿದೆ. ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಬಿಸಿಸಿಐ ಮಾತಿಗೆ ಕಿವಿಯಾಡಿಸಿದ್ದರೆ ವಿಶ್ವಕಪ್​ನಲ್ಲಿ ಇಶಾನ್ ಖಂಡಿತವಾಗಿಯೂ ಅವಕಾಶ ಪಡೆಯುತ್ತಿದ್ದರು. ಒಂದು ವೇಳೆ ಮಿಂಚಿದರೆ, ಸಂಜು ಹೆಸರು ಭಾರತೀಯ ಕ್ರಿಕೆಟ್​ನಲ್ಲಿ ಕೇಳಿ ಬರುವುದು ಬಹುತೇಕ ಕಷ್ಟ ಎಂದರೆ ತಪ್ಪೇನಿಲ್ಲ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ