ಟಿ20 ವಿಶ್ವಕಪ್‌ಗೆ ಕೊನೆಗೂ ಭಾರತ ತಂಡ ಪ್ರಕಟ; ಹಾರ್ದಿಕ್-ಪಂತ್ ಇನ್, ಚಹಲ್ ರಿಟರ್ನ್, ಕನ್ನಡಿಗ ರಾಹುಲ್ಗೆೆ ಕೊಕ್
Team India squad Announced: ಟಿ20 ವಿಶ್ವಕಪ್ ಟೂರ್ನಿಗೆ ಕೊನೆಗೂ ಭಾರತ ಕ್ರಿಕೆಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಐಪಿಎಲ್ 2024ರಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಅಳೆದು ತೂಗಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಏಪ್ರಿಲ್ 30ರ ಮಂಗಳವಾರ ಬಿಸಿಸಿಐ ಪ್ರಕಟಿಸಿದೆ. ನಾಯಕ ರೋಹಿತ್ ಶರ್ಮಾ, ಹೆಡ್ಕೋಚ್ ರಾಹುಲ್ ದ್ರಾವಿಡ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿ ತಂಡವನ್ನು ಅಂತಿಮಗೊಳಿಸಿದರು. ಮಿನಿ ಸಮರದಲ್ಲಿ ಆಡಲು ಅಮೆರಿಕ ವಿಮಾನ ಏರಲಿರುವ 15 ಸದಸ್ಯರ ತಂಡವನ್ನು ಅಳೆದುತೂಗಿ ಆಯ್ಕೆ ಮಾಡಲಾಗಿದೆ.
2013ರಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿರುವ ಟೀಮ್ ಇಂಡಿಯಾ, ಈ ಬಾರಿ ಟ್ರೋಫಿ ಬರ ನೀಗಿಸಲು ಭರ್ಜರಿ ಸಿದ್ಧತೆ ನಡೆಸಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಇದು ಕೊನೆಯ ಟಿ20 ವಿಶ್ವಕಪ್ ಆಗಿರಲಿದೆ. ಕಳೆದ ದಶಕದಿಂದ ಐಸಿಸಿ ಟ್ರೋಫಿ ಜಯಿಸಲು ಸಾಕಷ್ಟು ಪ್ರಯತ್ನ ನಡೆಸಿದ ಈ ಇಬ್ಬರು, ಟಿ20 ವಿಶ್ವಕಪ್ ಗೆಲುವಿನೊಂದಿಗೆ ಟಿ20ಗೆ ಗುಡ್ಬೈ ಹೇಳಲು ನಿರ್ಧರಿಸಿದ್ದಾರೆ. ಗೆಲುವಿನ ವಿದಾಯ ನೀಡುವ ಸಲುವಾಗಿ ಇಬ್ಬರನ್ನೂ ಚುಟುಕು ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿದೆ.
ರಾಹುಲ್ಗೆ ಕೊಕ್, ಚಹಲ್ ರಿಟರ್ನ್, ಹಾರ್ದಿಕ್ ಉಪನಾಯಕ
ಏಕದಿನ ವಿಶ್ವಕಪ್ನಲ್ಲಿ ಮಿಂಚಿದ್ದ ಕನ್ನಡಿಗ ಕೆಎಲ್ ರಾಹುಲ್ಗೆ ಕೊಕ್ ನೀಡಲಾಗಿದೆ. 2022ರ ಟಿ20 ವಿಶ್ವಕಪ್ನಲ್ಲಿ ಅವರು ಅವಕಾಶ ಪಡೆದಿದ್ದರು. ಆದರೆ, ಟಿ20 ಕ್ರಿಕೆಟ್ನಲ್ಲಿ ಅವರ ಪ್ರದರ್ಶನ ತೀರಾ ಕಳಪೆಯಾಗಿರುವ ಕಾರಣ ತಂಡದಿಂದ ಕೈಬಿಡಲಾಗಿದೆ. 2021ರ ವಿಶ್ವಕಪ್ನಲ್ಲಿ ಅವಕಾಶ ಪಡೆಯದ ಮತ್ತು 2022ರ ಟಿ20 ವಿಶ್ವಕಪ್ನಲ್ಲಿ ಅವಕಾಶ ಪಡೆದರೂ ಆಡಲಿಳಿಯದ ಮತ್ತು ಭಾರತ ತಂಡದಲ್ಲಿ ನಿರಂತರ ಅವಕಾಶ ಪಡೆಯದ ಯುಜ್ವೇಂದ್ರ ಚಹಲ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಆಡುವ 11ರ ಬಳಗದಲ್ಲಿ ಚಾನ್ಸ್ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಉಪನಾಯಕತ್ವಕ್ಕಾಗಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಪೈಪೋಟಿ ನಡೆದಿತ್ತು. ಆದರೆ ಕೊನೆಗೆ ಹಾರ್ದಿಕ್ಗೆ ಮಣೆ ಹಾಕಲಾಗಿದೆ. ಇನ್ನು ಶುಭ್ಮನ್ ಗಿಲ್ ಮತ್ತು ರಿಂಕು ಸಿಂಗ್ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದು ಅಚ್ಚರಿ ಮೂಡಿಸಿದೆ. ಟಿ20 ತಂಡದಲ್ಲಿ ನಿರಂತರ ಅವಕಾಶ ಪಡೆಯದ ಸಂಜು ಸ್ಯಾಮ್ಸನ್ ಐಪಿಎಲ್ನಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿ ತಂಡದಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸಿಎಸ್ಕೆ ಪರ ಅಬ್ಬರಿಸಿದ ಶಿವಂ ದುಬೆಗೂ ಮಣೆ ಹಾಕಲಾಗಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು - ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್
ಜೂನ್ 1ರಂದು ಚುಟುಕು ವಿಶ್ವಸಮರಕ್ಕೆ ಚಾಲನೆ ಸಿಗಲಿದೆ. ಒಂದು ತಿಂಗಳ ಕಾಲ ನಡೆಯಲಿರುವ ಪಂದ್ಯಾವಳಿಯು ಮೇ 29ರಂದು ಅಂತ್ಯವಾಗಲಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ಭಾರತ ತಂಡವು ವಿಶ್ವಕಪ್ ಅಭಿಯಾನ ಆರಂಭಿಸಲಿದೆ. 2013ರಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಭಾರತ ತಂಡವು, ಆ ಬಳಿಕ ಮೊದಲ ಐಸಿಸಿ ಟ್ರೋಫಿ ಗೆಲ್ಲಲು ಯೋಜನೆ ರೂಪಿಸುತ್ತಿದೆ. ಕಳೆದ ವರ್ಷ ತವರಿನಲ್ಲೇ ನಡೆದ ಏಕದಿನ ವಿಶ್ವಕಪ್ ಟೂರ್ನಿ ಗೆಲ್ಲಲು ವಿಫಲವಾಗಿರುವ ರೋಹಿತ್ ಪಡೆ, ಈ ಬಾರಿ ಕಪ್ ಗೆಲ್ಲಲು ಶತಾಯ ಗತಾಯ ಪ್ರಯತ್ನ ನಡೆಸಲಿದೆ.
2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 20 ತಂಡಗಳು
ಭಾರತ, ಯುಎಸ್ಎ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ನೆದರ್ಲೆಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಪಪುವಾ ನ್ಯೂಜಿನಿಯಾ, ಕೆನಡಾ, ನೇಪಾಳ, ಓಮನ್, ನಮೀಬಿಯಾ ಮತ್ತು ಉಗಾಂಡಾ.
ಟಿ20 ವಿಶ್ವಕಪ್ನಲ್ಲಿ ಭಾರತದ ವೇಳಾಪಟ್ಟಿ
ಜೂನ್ 5, ಬುಧವಾರ: ಭಾರತ vs ಐರ್ಲೆಂಡ್ (ನ್ಯೂಯಾರ್ಕ್)
ಜೂನ್ 9, ಭಾನುವಾರ: ಭಾರತ vs ಪಾಕಿಸ್ತಾನ (ನ್ಯೂಯಾರ್ಕ್)
ಜೂನ್ 12, ಬುಧವಾರ: ಅಮೆರಿಕ vs ಭಾರತ (ನ್ಯೂಯಾರ್ಕ್)
ಜೂನ್ 15, ಶನಿವಾರ: ಭಾರತ vs ಕೆನಡಾ (ಫ್ಲೋರಿಡಾ)