IND vs NZ: ಬಿಸಿಸಿಐಯಿಂದ ಸದ್ಯದಲ್ಲೇ ಮೇಜರ್ ಸರ್ಜರಿ; ಈ ಆಟಗಾರರ ಟೆಸ್ಟ್ ವೃತ್ತಿಜೀವನ ಬಹುತೇಕ ಅಂತ್ಯ!
Nov 04, 2024 09:56 AM IST
ಬಿಸಿಸಿಐಯಿಂದ ಸದ್ಯದಲ್ಲೇ ಮೇಜರ್ ಸರ್ಜರಿ; ಈ ಆಟಗಾರರ ಟೆಸ್ಟ್ ವೃತ್ತಿಜೀವನ ಬಹುತೇಕ ಅಂತ್ಯ (Photo by Anshuman Poyrekar/ Hindustan Times)
- IND vs NZ: ಆಸ್ಟ್ರೇಲಿಯಾ ಪ್ರವಾಸದ ನಂತರ ಕೆಲವು ಅನುಭವಿ ಆಟಗಾರರ ಟೆಸ್ಟ್ ವೃತ್ತಿಜೀವನವು ಅಂತ್ಯವಾಗಬಹುದು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಋತು ಪ್ರಾರಂಭವಾಗುವ ಮೊದಲು ತಂಡದಿಂದ ಅನುಭವಿ ಆಟಗಾರರನ್ನು ಕೈ ಬಿಡಲು ಬಿಸಿಸಿಐ ಯೋಜಿಸುತ್ತಿದೆ.
ನ್ಯೂಜಿಲೆಂಡ್ ವಿರುದ್ಧದ (IND vs NZ) ಮುಜುಗರದ ಸೋಲಿನ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ಕ್ರಮದತ್ತ ಚಿತ್ತ ನೆಟ್ಟಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಕೊನೆಗೆ 0-3 ಅಂತರದಲ್ಲಿ ವೈಟ್‌ವಾಶ್ ಎದುರಿಸಬೇಕಾಯಿತು. ಇದರ ನಡುವೆ ಭಾರತದ ಹಿರಿಯ ಆಟಗಾರರು ಸಂಪೂರ್ಣ ಪ್ಲಾಪ್ ಆಗಿರುವುದು ಕೂಡ ಆತಂಕದ ವಿಚಾರ. ಹೀಗಿರುವಾಗ ಇದೀಗ ಆಸ್ಟ್ರೇಲಿಯಾ ಸರಣಿ ಬಳಿಕ ಬಿಸಿಸಿಐ ದೊಡ್ಡ ಕ್ರಮ ಕೈಗೊಂಡು ಕೆಲವು ಹಿರಿಯ ಆಟಗಾರರನ್ನು ಟೆಸ್ಟ್ ತಂಡದಿಂದ ಕೈಬಿಡಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಮಾಧ್ಯಮ ವರದಿಗಳ ಪ್ರಕಾರ, ಆಸ್ಟ್ರೇಲಿಯಾ ಪ್ರವಾಸದ ನಂತರ ಕೆಲವು ಅನುಭವಿ ಆಟಗಾರರ ವೃತ್ತಿಜೀವನವು ಈ ಸ್ವರೂಪದಲ್ಲಿ ಕೊನೆಗೊಳ್ಳಬಹುದು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಋತು ಪ್ರಾರಂಭವಾಗುವ ಮೊದಲು ತಂಡದಿಂದ ಅನುಭವಿ ಆಟಗಾರರನ್ನು ಕೈ ಬಿಡಲು ಬಿಸಿಸಿಐ ಯೋಜಿಸುತ್ತಿದೆ.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಪೈಕಿ ಕನಿಷ್ಠ ಇಬ್ಬರಿಗೆ ಕೊನೆಯದಾಗುವ ಹೆಚ್ಚಿನ ಸಾಧ್ಯತೆಗಳಿವೆ. ಈ ನಾಲ್ವರು ಸ್ಟಾರ್ ಆಟಗಾರರ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತಿಮ ಹಂತದಲ್ಲಿದೆ. ವಿರಾಟ್, ರೋಹಿತ್ ಮತ್ತು ಜಡೇಜಾ ಈಗಾಗಲೇ ಟಿ20 ಮಾದರಿಯಿಂದ ನಿವೃತ್ತಿಯಾಗಿದ್ದಾರೆ.
ಬಿಸಿಸಿಐ ಶೀಘ್ರದಲ್ಲೇ ಸಭೆ
ಬಿಸಿಸಿಐ ದಿಗ್ಗಜರು ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಮುಖ್ಯ ಮುಖ್ಯಸ್ಥ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ನಡುವೆ ಹಿರಿಯ ಆಟಗಾರರೊಂದಿಗೆ ತಂಡದ ಪ್ರಗತಿಯ ಬಗ್ಗೆ ಅನೌಪಚಾರಿಕ ಚರ್ಚೆಗಳು ನಡೆಯಲಿದೆ. “ನವೆಂಬರ್ 10 ರಂದು ತಂಡವು ಆಸ್ಟ್ರೇಲಿಯಾಕ್ಕೆ ಹೊರಡಲಿರುವುದರಿಂದ ಈ ಸಭೆ ನಡೆಯಲಿದ್ದು, ಇದರಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ” ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಭಾರತ ತಂಡ ಅರ್ಹತೆ ಪಡೆಯದಿದ್ದರೆ, ಈ ನಾಲ್ಕು ಹೆಸರುಗಳಲ್ಲಿ ಕೆಲವರು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಿಂದ ಹೊರಬೀಳುವ ಬಲವಾದ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಈ ನಾಲ್ವರಿಗೆ ಬಹುಶಃ ತಮ್ಮ ಕೊನೆಯ ಟೆಸ್ಟ್ ಪಂದ್ಯ ತವರು ನೆಲದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಆಗಿರಬಹುದು ಎಂದಿದ್ದಾರೆ.
ಯುವ ಆಟಗಾರರಿಗೆ ಅವಕಾಶ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಆರ್ ಅಶ್ವಿನ್ ಆಟ ಗಣನೀಯವಾಗಿ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್ ಅವರಂತಹ ಆಟಗಾರರ ಹೆಸರನ್ನು ಒಳಗೊಂಡಿರುವ ಯುವ ಪ್ಲೇಯರ್ಸ್ ಅನ್ನು ಬಿಸಿಸಿಐ ಪರಿಗಣಿಸಬಹುದು. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಸರಣಿ ಮುಗಿದ ನಂತರ, ಅಶ್ವಿನ್ ಭವಿಷ್ಯದ ಬಗ್ಗೆ ಚರ್ಚೆಯಾಗಬಹುದು. ಅವರು ನ್ಯೂಜಿಲೆಂಡ್ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದರು.
ಮತ್ತೊಂದೆಡೆ, ವಾಷಿಂಗ್ಟನ್ ಸುಂದರ್ ಈ ಸರಣಿಯಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಅವರು ತಂಡಕ್ಕಾಗಿ ದೀರ್ಘಕಾಲ ಆಡಬಹುದು. ಆದರೆ, ಉತ್ತಮ ಫಿಟ್ನೆಸ್ ಹೊಂದಿರುವ ಹಾಗೂ ವಿದೇಶಿ ಪಿಚ್ ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಜಡೇಜಾ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತಾರ ಎಂಬ ಕುತೂಹಲ ಕೂಡ ಇದೆ.
ವರದಿ: ವಿನಯ್ ಭಟ್.