ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ಆಟಗಾರ ದಿಢೀರ್ ನಿವೃತ್ತಿ; ಸೋಲಿನ ಬೆನ್ನಲ್ಲೇ ಟೀಮ್‌ ಇಂಡಿಯಾಕ್ಕೆ ಕಹಿ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ಆಟಗಾರ ದಿಢೀರ್ ನಿವೃತ್ತಿ; ಸೋಲಿನ ಬೆನ್ನಲ್ಲೇ ಟೀಮ್‌ ಇಂಡಿಯಾಕ್ಕೆ ಕಹಿ ಸುದ್ದಿ

ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ಆಟಗಾರ ದಿಢೀರ್ ನಿವೃತ್ತಿ; ಸೋಲಿನ ಬೆನ್ನಲ್ಲೇ ಟೀಮ್‌ ಇಂಡಿಯಾಕ್ಕೆ ಕಹಿ ಸುದ್ದಿ

Wriddhiman Sahaವೃದ್ಧಿಮಾನ್ ಸಾಹ 17 ವರ್ಷಗಳ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 40 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ್ದಾರೆ. 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2010 ರಲ್ಲಿ ಟೀಮ್ ಇಂಡಿಯಾ ಪದಾರ್ಪಣೆ ಮಾಡಿದ ಅವರು, ಇದೀಗ ನಿವೃತ್ತಿ ಘೋಷಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ವೃದ್ಧಿಮಾನ್ ಸಾಹ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ
ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ವೃದ್ಧಿಮಾನ್ ಸಾಹ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ (Getty)

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿನ ಕೆಲವೇ ಗಂಟೆಗಳ ನಂತರ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಭಾರತೀಯ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ವೃದ್ಧಿಮಾನ್ ಸಾಹ ನಿವೃತ್ತಿ ಘೋಷಣೆ ಮಾಡಿದ್ದಾರೆ. 40 ವರ್ಷದ ಹಿರಿಯ ಕ್ರಿಕೆಟಿಗ ತಮ್ಮ 17 ವರ್ಷಗಳ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಪ್ರಸಕ್ತ ರಣಜಿ ಟ್ರೋಫಿಯ ನಂತರ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಅವರು ಹೇಳಿಕೊಂಡಿದ್ದಾರೆ.

ನನ್ನ ಕ್ರಿಕೆಟ್ ಪಯಣ ಅದ್ಭುತವಾಗಿತ್ತು ಎಂದು ಸಾಹ ಬಣ್ಣಿಸಿದ್ದಾರೆ. ಕಳೆದ ಎರಡು ರಣಜಿ ಋತುಗಳಲ್ಲಿ ತ್ರಿಪುರಾ ಪರ ಆಡಿದ್ದ ಸಾಹ ಈ ವರ್ಷದ ಆಗಸ್ಟ್‌ನಲ್ಲಿ ಮತ್ತೆ ಬಂಗಾಳಕ್ಕೆ ಮರಳಿದ್ದರು. ನಿವೃತ್ತಿ ಘೋಷಿಸುವ ವೇಳೆ ಸಾಹ ಅವರು, ಪ್ರಸಕ್ತ ರಣಜಿ ಋತು ನನ್ನ ಕೊನೆಯ ಪಂದ್ಯ. ಈ ಅದ್ಭುತ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳು. ಈ ಋತುವನ್ನು ಸ್ಮರಣೀಯವಾಗಿಸೋಣ ಎಂದು ಹೇಳಿದ್ದಾರೆ.

ವೃದ್ಧಿಮಾನ್ ಸಹಾ 2007ರಿಂದ ಬಂಗಾಳ ಪರ ಆಡುತ್ತಿದ್ದಾರೆ. ಅವರು 2022ರಲ್ಲಿ ತ್ರಿಪುರಾಕ್ಕೆ ತೆರಳಿದರು. ಎರಡು ವರ್ಷಗಳ ಕಾಲ ತ್ರಿಪುರವನ್ನು ಪ್ರತಿನಿಧಿಸಿದ ನಂತರ, 2024ರಲ್ಲಿ ಕೊನೆಯ ಬಾರಿಗೆ ಬಂಗಾಳದ ಪರವಾಗಿ ಆಡಲು ಮರಳಿದರು.

ಟೀಮ್ ಇಂಡಿಯಾ ಪರ 50ನೇ ಪಂದ್ಯ ಆಡಲಾಗಲಿಲ್ಲ!

ಸಾಹ 17 ವರ್ಷಗಳ ಒಟ್ಟಾರೆ ಕ್ರಿಕೆಟ್ ವೃತ್ತಿಜೀವನದ ನಡುವೆ 2010ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರು. ಅವರು 40 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2021ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊನೆಯ ಟೆಸ್ಟ್‌ ಆಡಿದ್ದರು. ಅಲ್ಲದೆ 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಟೀಮ್ ಇಂಡಿಯಾದ ಜೆರ್ಸಿಯಲ್ಲಿ ತಮ್ಮ ವೃತ್ತಿಜೀವನದ 50ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.

ವೃದ್ಧಿಮಾನ್ ಸಾಹ ವೃತ್ತಿಜೀವನ

ವೃದ್ಧಿಮಾನ್ ಸಾಹ ಭಾರತ ಪರ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 1353 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳೂ ಸೇರಿವೆ. ಇದಲ್ಲದೆ, 9 ಏಕದಿನ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ 41 ರನ್ ಬಂದವು. ಪ್ರಥಮ ದರ್ಜೆ ಕ್ರಿಕೆಟ್ ಕುರಿತು ಮಾತನಾಡುತ್ತಾ, ಅವರು 138 ಪಂದ್ಯಗಳಲ್ಲಿ 7013 ರನ್ ಮತ್ತು 116 ಪಂದ್ಯಗಳಲ್ಲಿ 3072 ರನ್​ಗಳನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಗಳಿಸಿದ್ದಾರೆ.

ಎಂಎಸ್ ಧೋನಿ ನಿವೃತ್ತಿಯ ನಂತರ ಇವರು ಸ್ವಲ್ಪ ಸಮಯದವರೆಗೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಆಯ್ಕೆಯ ಕೀಪರ್-ಬ್ಯಾಟರ್ ಆಗಿದ್ದರು. ಬಲಗೈ ಆಟಗಾರ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಕೀಪರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಧೋನಿ ಮತ್ತು ಪಂತ್ (ಜಂಟಿ ಪ್ರಥಮ) ನಂತರದ ಸ್ಥಾನದಲ್ಲಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಗ್ಲೋವ್‌ಮೆನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ಇವರು 2011 ಮತ್ತು 2022ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್‌ ಸಾಹ. 170 ಐಪಿಎಲ್ ಪಂದ್ಯಗಳಲ್ಲಿ 2934 ರನ್ ಗಳಿಸಿದ್ದಾರೆ. 2021ರಿಂದ ಟೀಮ್ ಇಂಡಿಯಾದಿಂದ ಹೊರಗಿದ್ದ ವೃದ್ಧಿಮಾನ್ ಸಾಹ ಐಪಿಎಲ್ 2025ರಲ್ಲಿ ಭಾಗವಹಿಸುವುದಿಲ್ಲ. ವರದಿಗಳ ಪ್ರಕಾರ, ಅವರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೀಡಿಲ್ಲ. ಸಾಹ ಮೂರು ವರ್ಷಗಳ ಹಿಂದೆ 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

Whats_app_banner