ಮೂರನೇ ಟೆಸ್ಟ್ನಲ್ಲಿ 25 ರನ್ಗಳ ರೋಚಕ ಗೆಲುವು; ಟೀಮ್ ಇಂಡಿಯಾ ವಿರುದ್ಧ ವೈಟ್ವಾಶ್ ಸಾಧಿಸಿ ಇತಿಹಾಸ ಬರೆದ ನ್ಯೂಜಿಲೆಂಡ್
India vs New Zealand 3rd Test: ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂತಿಮ ಹಾಗೂ 3ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 25 ರನ್ಗಳಿಂದ ಸೋಲು ಕಂಡಿದೆ. ಸರಣಿಯನ್ನು ವೈಟ್ವಾಶ್ ಮಾಡಿಕೊಂಡ ಕಿವೀಸ್ ಹೊಸ ಇತಿಹಾಸ ನಿರ್ಮಿಸಿದೆ.
ಟೀಮ್ ಇಂಡಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ವೈಟ್ ವಾಶ್ ಮಾಡಿಕೊಂಡಿದ್ದು, ಐತಿಹಾಸಿಕ ದಾಖಲೆಯೊಂದನ್ನು ಬರೆದಿದೆ. ಅಂತಿಮ ಹಾಗೂ 3ನೇ ಟೆಸ್ಟ್ ಪಂದ್ಯದಲ್ಲಿ (India vs New Zealand 3rd Test) ಕೇವಲ 147 ರನ್ಗಳ ಗುರಿ ಪಡೆದರೂ ಬೆನ್ನಟ್ಟಲು ವಿಫಲವಾದ ಭಾರತ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ಸರಣಿ ವೈಟ್ ವಾಶ್ ಮುಖಭಂಗಕ್ಕೆ ಒಳಗಾಗಿದೆ. ಬೆಂಗಳೂರು ಮತ್ತು ಪುಣೆ ಟೆಸ್ಟ್ನಲ್ಲಿ ಸೋತಿದ್ದ ಭಾರತ ಮುಂಬೈ ಟೆಸ್ಟ್ನಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ಏಜಾಜ್ ಪಟೇಲ್ ಸ್ಪಿನ್ ದಾಳಿಗೆ ಬ್ಯಾಟರ್ಸ್ ಮತ್ತೆ ವೈಫಲ್ಯ ಅನುಭವಿಸಿದ ಕಾರಣ ಗೆಲ್ಲುವ ಪಂದ್ಯದಲ್ಲಿ ಭಾರತ 25 ರನ್ಗಳಿಂದ ಸೋಲಿಗೆ ಶರಣಾಯಿತು. ರೋಹಿತ್ ಪಡೆ ನೀಡಿದ ಅತ್ಯಂತ ಕೆಟ್ಟ ಪ್ರದರ್ಶನಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ನಡೆಸಿತು. ಅದರಂತೆ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಲು ಯತ್ನಿಸಿತು. ಆದರೆ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ದಾಳಿಗೆ ತತ್ತರಿಸಿತು. ಹೀಗಾಗಿ 235 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 263 ರನ್ ಪೇರಿಸಿತು. 28 ರನ್ಗಳ ಅಲ್ಪ ಮುನ್ನಡೆಯೂ ಪಡೆಯಿತು. ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕಿವೀಸ್, ಮತ್ತೆ ಜಡ್ಡು ದಾಳಿಗೆ ನಲುಗಿದ್ದಲ್ಲದೆ, 174 ರನ್ಗಳಿಗೆ ಆಲೌಟ್ ಆಗಿ 147 ರನ್ಗಳ ಸಾಧಾರಣ ಗುರಿ ನೀಡಿತು. ಆದರೆ ಭಾರತ ಈ ಗುರಿಯನ್ನೂ ಮುಟ್ಟಲು ತಿಣುಕಾಡಿತು. ಅಂತಿಮವಾಗಿ 121 ರನ್ಗಳಿಗೆ ಆಲೌಟ್ ಆಯಿತು. ಏಜಾಜ್ ಪಟೇಲ್ ಒಟ್ಟು 11 ವಿಕೆಟ್ ಪಡೆದು ಕಿವೀಸ್ ಐತಿಹಾಸಿಕ ದಾಖಲೆಗೆ ಪ್ರಮುಖ ಪಾತ್ರವಹಿಸಿದರು. ಭಾರತದ ಪರ ಜಡ್ಡು 10 ವಿಕೆಟ್ ಪಡೆದರು.
ಭಾರತ-ನ್ಯೂಜಿಲೆಂಡ್ 3ನೇ ಟೆಸ್ಟ್ ಸಂಕ್ಷಿಪ್ತ ಸ್ಕೋರ್
ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ - 235/10
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ - 263/10 (28 ರನ್ಗಳ ಮುನ್ನಡೆ)
ಎರಡನೇ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ - 174/10 (147 ರನ್ಗಳ ಗುರಿ)
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ - 121/10 (25 ರನ್ಗಳ ಸೋಲು)
ಪಂದ್ಯಶ್ರೇಷ್ಠ - ಏಜಾಜ್ ಪಟೇಲ್
ಸರಣಿ ಶ್ರೇಷ್ಠ - ವಿಲ್ ಯಂಗ್
ಭಾರತದ ಪರ ರಿಷಭ್ ಪಂತ್ ಏಕಾಂಗಿ ಹೋರಾಟ
147 ರನ್ಗಳ ಅಲ್ಪ ಗುರಿ ಪಡೆದರೂ ಬ್ಯಾಟರ್ಗಳು ಕೈಕೊಟ್ಟರು. ತವರಿನ ಪಿಚ್ನಲ್ಲೇ ಹೀನಾಯ ಪ್ರದರ್ಶನ ನೀಡಿದರು. ಯಶಸ್ವಿ ಜೈಸ್ವಾಲ್ 5, ರೋಹಿತ್ ಶರ್ಮಾ 11, ಶುಭ್ಮನ್ ಗಿಲ್ 1, ವಿರಾಟ್ ಕೊಹ್ಲಿ 1, ಸರ್ಫರಾಜ್ ಖಾನ್ 1 ರನ್ ಗಳಿಸಿ ಭಾರಿ ನಿರಾಸೆ ಮೂಡಿಸಿದರು. ಟಾಪ್-5 ಬ್ಯಾಟರ್ಸ್ ಕೇವಲ 29 ರನ್ಗಳಿಗೆ ಔಟಾದರು. ಆದರೆ ಈ ಹಂತದಲ್ಲಿ ರಿಷಭ್ ಪಂತ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಮೊದಲ ಇನ್ನಿಂಗ್ಸ್ನಲ್ಲಿ ವೇಗದ ಅರ್ಧಶತಕ ಬಾರಿಸಿದ್ದ ಪಂತ್, 2ನೇ ಇನ್ನಿಂಗ್ಸ್ನಲ್ಲೂ ಅದೇ ರೀತಿ ಬ್ಯಾಟಿಂಗ್ ನಡೆಸಿ ಮತ್ತೊಂದು ಸ್ಫೋಟಕ ಅರ್ಧಶಕತ ಸಿಡಿಸಿದರು. ಅಂತಿಮವಾಗಿ 57 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 64 ರನ್ ಚಚ್ಚಿದರು. ಆ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಜಡೇಜಾ 6, ಅಶ್ವಿನ್ 8, ಆಕಾಶ್ ದೀಪ್ ಸೊನ್ನೆ ಸುತ್ತಿ ಬೇಗನೇ ಪೆವಿಲಿಯನ್ ಸೇರಿದರು. ಆದರೆ ಸುಂದರ್ ಕ್ರೀಸ್ನಲ್ಲಿದ್ದ ಕಾರಣ ಗೆಲ್ಲುವ ಆಸೆ ಇನ್ನೂ ಇತ್ತು. ಆದರೆ ಅವರೂ 12 ರನ್ ಗಳಿಸಿ ಔಟಾದರು.
ಏಜಾಜ್ ಪಟೇಲ್ ಮಿಂಚು, ಭಾರತ ತಂಡ ಕಂಗಾಲು
ನ್ಯೂಜಿಲೆಂಡ್ ವಿರುದ್ಧ ಭಾರತ ಮೂಲದ ಏಜಾಜ್ ಪಟೇಲ್, ಭಾರತ ತಂಡಕ್ಕೆ ಕಾಟ ಕೊಟ್ಟು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಉರುಳಿಸಿದ್ದ ಪಟೇಲ್, ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಉರುಳಿಸಿದರು. ಆ ಮೂಲಕ ಅಲ್ಪಗುರಿಯನ್ನು ರಕ್ಷಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ಪಟೇಲ್ ಬೌಲಿಂಗ್ನಲ್ಲಿ ಸ್ಟಾರ್ ಆಟಗಾರರೇ ಔಟಾಗಿರುವುದು ಅಚ್ಚರಿ ಮೂಡಿಸಿದೆ. ವಿರಾಟ್ ಕೊಹ್ಲಿ, ಪಂತ್, ಸರ್ಫರಾಜ್ ಸೇರಿದಂತೆ ಪ್ರಮುಖರು ಔಟಾಗಿದ್ದಾರೆ. ಏಜಾಜ್ ಸ್ಪಿನ್ ವರ್ಕೌಟ್ ಆಗುತ್ತಿದೆ ಎಂದು ತಿಳಿದರೂ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಲು ವಿಫಲವಾದ ಭಾರತ, ರನ್ ಗಳಿಸಲು ಪರದಾಟ ನಡೆಸಿತು. ತವರಿನ ಪಿಚ್ನಲ್ಲಿ ಎದುರಾಳಿ ಬೌಲರ್ಗಳ ಎದುರು ರನ್ ಗಳಿಸಲು ಪರದಾಡಿದ್ದು ಅಚ್ಚರಿ ಮೂಡಿಸಿತು. ಭಾರತದ ಪರ ಶುಭ್ಮನ್ ಗಿಲ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿದರೂ ಉಳಿದವರು ಅತ್ಯಂತ ಕೆಟ್ಟ ಪ್ರದರ್ಶನ ನೀಡಿದರು.
ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್, ಸಂಕಷ್ಟದಲ್ಲಿ ಭಾರತ
ಅಂತಿಮ ಟೆಸ್ಟ್ನಲ್ಲಿ ಸೋಲಿನೊಂದಿಗೆ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೆ ಜಿಗಿದಿದೆ. ಭಾರತ ಈವರೆಗೂ ಆಡಿರುವ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲು, 1 ಡ್ರಾ ಸಾಧಿಸಿ 98 ಅಂಕ ಪಡೆದಿದೆ. ಗೆಲುವಿನ ಶೇಕಡವಾರು 58.33. ಆಸ್ಟ್ರೇಲಿಯಾ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು, 1 ಡ್ರಾ ಕಂಡಿದ್ದು, 90 ಅಂಕ ಪಡೆದಿದೆ. ಗೆಲುವಿನ ಶೇಕಡವಾರು 62.50. ಟೀಮ್ ಇಂಡಿಯಾ ವಿರುದ್ಧ ಸರಣಿ ಗೆದ್ದ ನ್ಯೂಜಿಲೆಂಡ್ ಗೆಲುವಿನ ಪ್ರಮಾಣ 54.55 ರೊಂದಿಗೆ 4ನೇ ಸ್ಥಾನದಲ್ಲಿದೆ. ಶ್ರೀಲಂಕಾ 3ನೇ ಸ್ಥಾನದಲ್ಲಿದ್ದು, 55.56ರಷ್ಟು ಗೆಲುವಿನ ಶೇಕಡವಾರು ಇದೆ. ಪ್ರಸ್ತುತ ಭಾರತ ತಂಡದ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸುವ ಹಾದಿ ದುರ್ಗಮವಾಗಿದೆ. ಉಳಿದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆಲ್ಲಲೇಬೇಕಿದೆ.